ಬೆಂಗಳೂರು: ರಾಯಲ್ ಎನ್ಫೀಲ್ಡ್ ಕಂಪನಿಯ ಆಫ್ರೋಡಿಂಗ್ ಬೈಕ್ (Royal Enfield) ಹಿಮಾಲಯನ್ನ ಬ್ರೇಕ್ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ 2017ರಿಂದ 2021ರ ನಡುವೆ ಮಾರಾಟ ಮಾಡಿರುವ ಬೈಕ್ಗಳನ್ನು ವಾಪಸ್ ಪಡೆಯಲು ಕಂಪನಿ ನಿರ್ಧರಿಸಿದೆ. ಈ ಬೈಕ್ಗಳಲ್ಲಿ ಉಂಟಾಗಿರುವ ತಾಂತ್ರಿಕ ದೋಷ ಸರಿಪಡಿಸಿ ವಾಪಸ್ ನೀಡಲಿದೆ. ಆದರೆ, ವಾಪಸ್ ಪಡೆಯುವ ಪ್ರಕ್ರಿಯೆ ನಡೆಯುತ್ತಿರುವುದು ಭಾರತದಲ್ಲಿ ಅಲ್ಲ, ಅಮೆರಿಕದಲ್ಲಿ. ಅಲ್ಲಿನ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟೇಷನ್ ಸೂಚನೆ ಮೇರೆಗೆ ಕಂಪನಿಯು 4,891 ಬೈಕ್ಗಳನ್ನು ವಾಪಸ್ ಪಡೆಯಲಿದೆ.
ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕ್ನ ಬ್ರೇಕ್ನಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿದ ಬಗ್ಗೆ ದೂರುಗಳು ದಾಖಲಾಗಿದ್ದವು. ಹೀಗಾಗಿ 2017ರ ಮಾರ್ಚ್ 1ರಿಂದ 2021ರ ಫೆಬ್ರವರಿ 28ರ ತನಕದ ಬೈಕ್ಗಳನ್ನು ಕಂಪನಿಯು ವಾಪಸ್ ಪಡೆಯಲಿದೆ. ಈ ಬೈಕ್ಗಳೆಲ್ಲವನ್ನೂ ದುರಸ್ತಿ ಮಾಡಿಕೊಂಡು ಬಳಿಕ ಮಾಲೀಕರಿಗೆ ವಾಪಸ್ ನೀಡಲಿದೆ.
ಏನಿದು ಬ್ರೇಕ್ ಸಮಸ್ಯೆ?
ಚಳಿಗಾಲದಲ್ಲಿ ಅಮೆರಿಕದ ರಸ್ತೆಗಳಲ್ಲಿ ಹಿಮ ಆವರಿಸಿಕೊಳ್ಳುತ್ತದೆ. ಅದನ್ನು ತೆರವು ಮಾಡಲು ಅಲ್ಲಿ ಉಪ್ಪು ಸುರಿಯಲಾಗುತ್ತದೆ. ಈ ಉಪ್ಪಿನಂಶ ತಾಗಿ ರಾಯಲ್ ಎನ್ಫೀಲ್ಡ್ನ ಬ್ರೇಕ್ ಕಾಲಿಪ್ ತುಕ್ಕು ಹಿಡಿದಿತ್ತು. ಇದರಿಂದಾಗಿ ಬ್ರೇಕ್ ವೈಫಲ್ಯ ಎದುರಾಗುತ್ತಿತ್ತು ಹಾಗೂ ಕೆಲವೊಂದು ಬಾರಿ ಬ್ರೇಕ್ ಹಿಡಿದಾಗ ಕರ್ಕಶ ಸದ್ದು ಹೊರಹೊಮ್ಮುತ್ತಿತ್ತು. ಜತೆಗೆ ಸುಟ್ಟವಾಸನೆಯೂ ಬರುತ್ತಿತ್ತು. ಈ ಸಮಸ್ಯೆಯ ಪರಿಹಾರಕ್ಕಾಗಿ ರಾಯಲ್ ಎನ್ಫೀಲ್ಡ್ ಬೈಕ್ಗಳನ್ನು ವಾಪಸ್ ಪಡೆಯಲಿದೆ.
ರಾಯಲ್ ಎನ್ಫೀಲ್ಡ್ ಕಂಪನಿಗೆ ಬಾಷ್ ಕಂಪನಿ ಬ್ರೇಕ್ನ ಬಿಡಿಭಾಗಗಳನ್ನು ಸರಬರಾಜು ಮಾಡುತ್ತದೆ. ಅದೇ ರೀತಿ ಬ್ರೆಂಬೊ ಕಂಪನಿ ಬ್ರೇಕ್ ಕಲಿಪರ್ ಸರಬರಾಜು ಮಾಡುತ್ತದೆ. ಇದೀಗ ಈ ಎರಡು ಕಂಪನಿಗಳು ಅನೋಡೈಸ್ಡ್ ಬ್ರೇಕ್ ಕಲಿಪರ್ ಹಾಕುವ ಪರಿಹಾರವನ್ನು ಹೇಳಿದೆ. ಅದರಿಂದ ತುಕ್ಕು ತಡೆಯಬಹುದು ಎನ್ನಲಾಗಿದೆ. ಹೀಗಾಗಿ ಮೊದಲು ಅಮೆರಿಕ ಬಳಿಕ ಯುಕೆ ಹಾಗೂ ಯುರೋಪ್, ದಕ್ಷಿಣ ಕೊರಿಯಾ ಹಾಗೂ ಜಪಾನ್ನಲ್ಲೂ ಬೈಕ್ಗಳನ್ನು ಸರಿಪಡಿಸಿ ಕೊಡಲು ಕಂಪನಿ ಮುಂದಾಗಿದೆ.