ನವದೆಹಲಿ : ರಾಯಲ್ ಎನ್‌ಫೀಲ್ಡ್ ಕಂಪನಿ ಬಹುನೀರಿಕ್ಷಿತ ಸೂಪರ್ ಮೀಟಿಯೋರ್ ೬೫೦ (Super Meteor 650) ಬೈಕ್ ಅನಾವರಣ ಮಾಡಿದೆ. ಇಟಲಿಯ ಮಿಲಾನ್‌ನಲ್ಲಿ ನಡೆದ ಇಐಸಿಎಮ್‌ಎ ಬೈಕ್‌ಗಳ ಪ್ರದರ್ಶನದಲ್ಲಿ ನೂತನ ಮೋಟಾರ್‌ಸೈಕಲ್ ಅನಾವರಣ ಮಾಡಲಾಯಿತು. ಇದು ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಮೂರನೇ ೬೫೦ ಸಿಸಿಯ ಬೈಕ್ ಆಗಿದ್ದು, ಈ ಹಿಂದೆ ಇಂಟರ್‌ಸೆಪ್ಟರ್ ಹಾಗೂ ಕಾಂಟಿನೆಂಟಲ್ ಜಿಟಿ ಬೈಕ್ ರಸ್ತೆಗಿಳಿಸಿತ್ತು.
ನೂತನ ಬೈಕ್ ಈಗಾಗಲೇ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿರುವ ಮೀಟಿಯೋರ್ ೩೫೦ ಬೈಕ್‌ನ ವಿನ್ಯಾಸವನ್ನೇ ಹೋಲುತ್ತಿದೆ. ಆದರೆ, ಗಾತ್ರ ಹಾಗೂ ತೂಕವನ್ನು ಹಿಗ್ಗಿಸಲಾಗಿದೆ. ಹೆಚ್ಚುವರಿಯಾಗಿ ಡ್ಯುಯಲ್ ಎಗ್ಸಾಸ್ಟ್ ಹಾಗೂ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಸೂಪರ್ ಮೀಟಿಯೋರ್ ೬೫೦ ಬೈಕ್ ಸ್ಟಾಂಡರ್ಡ್ ಹಾಗೂ ಟೂರರ್ ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಸೋಲೋ ಟೂರರ್ ಎಂದು ಕರೆಯಲಾಗುವ ಸ್ಟಾಂಡರ್ಡ್ ಆವೃತ್ತಿ ಆಸ್ಟ್ರಾಲ್ ಬ್ಲ್ಯಾಕ್, ಆಸ್ಟ್ರಾಲ್ ಬ್ಲೂ, ಆಸ್ಟ್ರಾಲ್ ಗ್ರೀನ್, ಇಂಟರ್‌ಸ್ಟೆಲ್ಲರ್ ಗ್ರೇ ಹಾಗೂ ಇಂಟರ್‌ಸ್ಟೆಲ್ಲರ್ ಗ್ರೀನ್ ಎಂಬ ಐದು ಬಣ್ಣಗಳಲ್ಲಿ ಲಭ್ಯವಿದೆ.
ಇದೇ ವೇಳೆ ಟೂರರ್ ಆವೃತ್ತಿಯು ಸೆಲೆಸ್ಟಿಯಲ್ ರೆಡ್ ಹಾಗೂ ಸೆಲೆಸ್ಟಿಯಲ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಆದರೆ, ಇದರಲ್ಲಿ ಸಾಕಷ್ಟು ಆಕ್ಸೆಸರಿಗಳ ಆಯ್ಕೆಯಿದೆ. ಬಾರ್ ಎಂಡ್ ಮಿರರ್, ಫೂಟ್‌ಪೆಗ್, ಎಲ್‌ಇಡಿ ಇಂಡಿಕೇಟರ್ಸ್, ಟೂರಿಂಗ್ ವಿಂಡ್‌ಸ್ಕ್ರೀನ್, ಪ್ಯಾಸೆಂಜರ್ ಬ್ಯಾಕ್‌ರೆಸ್ಟ್, ಟೂರಿಂಗ್ ಹ್ಯಾಂಡಲ್‌ಬಾರ್‌ಗಳು ಲಭ್ಯವಿದೆ.
ಎಂಜಿನ್ ಸಾಮರ್ಥ್ಯವೇನು?
ಹೊಸ ಸೂಪರ್ ಮೀಟಿಯೋರ್ ೬೫೦ ಬೈಕ್‌ನಲ್ಲಿ ೬೪೮ ಸಿಸಿಯ ಪ್ಯಾರೆಲಲ್ ಟ್ವಿನ್ ಎಂಜಿನ್ ಇದೆ. ಇದ ೪೭ ಪಿಎಸ್ ಪವರ್ ಹಾಗೂ ೫೨.೩ ಎನ್‌ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಅಂತೆಯೇ ಆರು ಸ್ಪೀಡ್‌ನ ಗೇರ್‌ಬಾಕ್ಸ್ ನೀಡಲಾಗಿದೆ.
ಮುಂದಿನ ಬ್ರೇಕ್ ೩೨೦ ಎಮ್‌ಎಮ್ ಡಿಸ್ಕ್ ಹೊಂದಿದ್ದು, ಹಿಂಬದಿ ಬ್ರೇಕ್ ೩೦೦ ಎಮ್‌ಎಮ್ ಡಿಸ್ಕ್ ಹೊಂದಿದೆ. ಒಂದ ಬಾರಿಗೆ ೧೫.೭ ಲೀಟರ್ ಪೆಟ್ರೋಲ್ ತುಂಬಿಸಲು ಸಾಧ್ಯವಿದೆ. ಈ ಬೈಕ್ ಇಂಧನ ಹಾಗೂ ಆಯಲ್ ಸೇರಿದಂತೆ ಒಟ್ಟಾರೆ ೨೪೧ ಕೆ. ಜಿ ಭಾರ ಹೊಂದಿದ್ದು, ರಾಯಲ್ ಎನ್‌ಫೀಲ್ಡ್ ಫ್ಯಾಮಿಲಿಯ ಅತಿ ಹೆಚ್ಚು ತೂಕದ ಬೈಕ್ ಎನಿಸಿಕೊಂಡಿದೆ.
ಬೆಲೆ ಎಷ್ಟು?
ಸೂಪರ್ ಮೀಟಿಯೋರ್ ೬೫೦ ಬೈಕ್‌ನ ಬೆಲೆ ಎಷ್ಟು ಎಂಬುದನ್ನು ರಾಯಲ್ ಎನ್‌ಫೀಲ್ಡ್ ಕಂಪನಿ ಇನ್ನೂ ಹೇಳಿಲ್ಲ. ಆದರೆ, ೩ರಿಂದ ೩.೩೫ ಲಕ್ಷ ರೂಪಾಯಿ ಎಕ್ಸ್‌ಶೋರೂಮ್ ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ. ನವೆಂಬರ್ ತಿಂಗಳಾಂತ್ಯದಲ್ಲಿ ರಾಯಲ್ ಎನ್‌ಫೀಲ್ಡ್ ಮೇನಿಯಾ-೨೦೨೨ ನಡೆಯಲಿದ್ದು ಈ ವೇಳೆ ದರ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.
ಇದನ್ನೂ ಓದಿ | Royal Enfield | ಸೂಪರ್ ಮೀಟಿಯೋರ್ 650 ಬೈಕ್‌ನ ಟೀಸರ್ ಬಿಡುಗಡೆ, ಡಿಸೆಂಬರ್‌ನಲ್ಲಿ ರಸ್ತೆಗಿಳಿಯುವ ಸೂಚನೆ