ನವ ದೆಹಲಿ : ಬಾಲಿವುಡ್ ಬಾದ್ಶಾ ಶಾರುಖ್ ಖಾನ್ (Shah Rukh Khan) ಪಠಾಣ್ ಸಿನಿಮಾ 1000 ಕೋಟಿ ರೂಪಾಯಿ ಕ್ಲಬ್ ಸೇರಿದ ಖುಷಿಯಲ್ಲಿದ್ದಾರೆ. ಅದೇ ರೀತಿ ಇನ್ನೆರಡು ಸಿನಿಮಾಗಳ ತಯಾರಿಯಲ್ಲೂ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಅವರು ಕೊರಿಯಾ ಮೂಲದ ಆಟೋಮೊಬೈಲ್ ಕಂಪನಿ ಹ್ಯುಂಡೈ ಜತೆಗಿನ 25 ವರ್ಷಗಳ ಒಪ್ಪಂದವನ್ನು ಪೂರ್ಣಗೊಳಿಸಿದ ಸಂಭ್ರಮದಲ್ಲಿಯೂ ಇದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ನಿಮ್ಮ ಬಳಿ ಐಷಾರಾಮಿ ಕಾರುಗಳು ಯಾವುದೆಲ್ಲ ಎಂಬ ಪ್ರಶ್ನೆಗೆ, ನನ್ನ ಬಳಿ ಅಂಥ ಕಾರುಗಳೇ ಇಲ್ಲ ಎಂಬುದಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಶಾರುಖ್ ಅಭಿಮಾನಿಯೊಬ್ಬರು ನಿಮ್ಮ ನೆಚ್ಚಿನ ಕಾರು ಯಾವುದು? ನೀವು ಇನ್ನೂ ಮಾರಾಟವೇ ಮಾಡದ ಕಾರು ಯಾವುದು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಶಾರುಖ್ ಖಾನ್, ನನ್ನ ಬಳಿ ಅಂಥ ಐಷಾರಾಮಿ ಕಾರುಗಳು ಯಾವುದೂ ಇಲ್ಲ. ಹ್ಯುಂಡೈನ ಹಲವು ಕೂಲ್ ಕಾರುಗಳು ನನ್ನಲ್ಲಿವೆ. ನನ್ನ ಬಳಿ ದುಬಾರಿ ಕಾರುಗಳು ಇವೆ ಎಂಬ ಸೋಶಿಯಲ್ ಮೀಡಿಯಾ ಲೇಖನಗಳು ಸುಳ್ಳು ಎಂಬುದಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Shah Rukh Khan: ʼಪಠಾಣ್ʼ ಕುರಿತು ಶಾರುಖ್ ಖಾನ್‌ಗೆ ಇಷ್ಟವಾಗದ ಅಂಶ ಯಾವುದು? ಅವರು ಹೇಳಿದ್ದೇನು?
ಶಾರುಖ್ ಖಾನ್ ಬಳಿ ಬುಗಾಟಿ, ರೋಲ್ಸ್ ರಾಯ್ಸ್ ಸೇರಿದಂತೆ ದುಬಾರಿ ಕಾರುಗಳಿವೆ ಎಂದ ಹೇಳಲಾಗುತ್ತಿತ್ತು. ಆದರೆ, ಯಾವುದೇ ಲೇಖಗಳು ಇದಕ್ಕೆ ಸೂಕ್ತ ದಾಖಲೆಗಳನ್ನು ಕೊಟ್ಟಿರಲಿಲ್ಲ. ಆದಾಗ್ಯೂ ಖಾನ್ ಕುಟುಂಬದಲ್ಲಿ ದೊಡ್ಡದೊಡ್ಡ ಕಾರುಗಳಿವೆ ಎಂದು ನಂಬಲಾಗುತ್ತಿದೆ.
ಅಚ್ಚರಿಯೆಂದರೆ ಶಾರುಖ್ ಖಾನ್ ಹ್ಯುಂಡೈ ಕಾರಿನ ಬ್ರಾಂಡ್ ಅಂಬಾಸಿಡರ್. ಆ ಬ್ರಾಂಡ್ನ ಹಲವಾರು ಕಾರುಗಳನ್ನು ಹೊಂದಿದ್ದಾರೆ. ಹಳೆಯ ಸ್ಯಾಂಟ್ರೊ ಕಾರು ಕೂಡ ಅವರ ಬಳಿಯಿದೆ. ಜತೆಗೊಂದು ಮಾರುತಿ ಓಮ್ನಿ ಕೂಡ ಇದೆ. ಅದೇ ರೀತಿ ಮಿತ್ಸುಬಿಷಿ ಪಜೇರೊ ಸೇರಿದಂತೆ ಹಲವಾರು ಹಳೆಯ ಕಾರುಗಳಿವೆ.