ಬೆಂಗಳೂರು : ಓಲಾ ಎಲೆಕ್ಟ್ರಿಕ್ (Ola Car) ತನ್ನ ಮೊಟ್ಟ ಮೊದಲ ಬ್ಯಾಟರಿ ಚಾಲಿತ ಕಾರಿನ ಬಿಡುಗಡೆಯನ್ನು ಈಗಾಗಲೇ ಘೋಷಿಸಿದ್ದು, ಒಂದೊಂದೇ ಲಕ್ಷಣಗಳನ್ನು ಅನಾವರಣ ಮಾಡುತ್ತಿದೆ. ಅಂತೆಯೇ ಎರಡನೇ ಬಾರಿ ತಮ್ಮ ಕಾರು ಹೇಗಿರಲಿದೆ ಎಂಬುದರ ಟೀಸರ್ ಬಿಡುಗಡೆ ಮಾಡಿದ್ದು, ಕಾರು ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ. ಈ ಬಾರಿ ಕಾರಿನ ಇಂಟೀರಿಯರ್ ಕುರಿತು ಮಾಹಿತಿಗಳು ಲಭ್ಯವಾಗಿವೆ.
ಈ ಬಾರಿ ಕಾರಿನ ಡ್ಯಾಶ್‌ಬೋರ್ಡ್ ಕುರಿತು ವಿವರಣೆ ನೀಡಿದೆ. ದೊಡ್ಡ ಗಾತ್ರದ ಫ್ಲೋಟಿಂಗ್ ಡಿಜಿಟಲ್ ಇನ್ಫೋಟೈನ್ ಸ್ಕ್ರೀನ್ ಅನ್ನು ಕಾರು ಹೊಂದಿರಲಿದೆ. ಅದೇ ರೀತಿ ಸುಂದರ ಆಂಬಿಯೆಂಟ್ ಲೈಟ್‌ಗಳನ್ನು ನೀಡುವ ಸೂಚನೆ ಕೊಟ್ಟಿದೆ. ಎಂಟು ಕೋನಗಳನ್ನು (ಆಕ್ಟಾಗನಲ್) ಹೊಂದಿರುವ ಸ್ಟೀರಿಂಗ್ ವೀಲ್ ಕಾರಿನ ವಿಶೇಷ ಫೀಚರ್ ಎನಿಸಿಕೊಳ್ಳಲಿದೆ ಅಲ್ಲದೆ,ಈ ಮಾದರಿಯ ಸ್ಟೀರಿಂಗ್ ವೀಲ್ ಹೊಂದಿರುವ ಭಾರತದ ಮೊದಲ ಕಾರು ಎನಿಸಿಕೊಳ್ಳಲಿದೆ. ಓಲಾ ಲೋಗೊ ಸ್ಟೀರಿಂಗ್ ಮಧ್ಯದಲ್ಲಿದ್ದು, ಮೌಂಟೆಡ್ ಕಂಟ್ರೋಲ್‌ಗಳನ್ನು ನೀಡುವ ಸೂಚನೆ ಕೊಟ್ಟಿದೆ.
ಅತಿ ವೇಗದ ಕಾರು?
ಓಲಾ ಸದ್ಯಕ್ಕೆ ನೀಡಿರುವ ಮಾಹಿತಿ ಪ್ರಕಾರ ಕೇವಲ ೪ ಸೆಕೆಂಡ್‌ಗಳ ಒಳಗೆ ಕಾರು ೧೦೦ ಕಿ.ಮೀ ವೇಗವನ್ನು ಪಡೆದುಕೊಳ್ಳಲಿದೆ. ಈ ಮೂಲಕ ಭಾರತದ ಮಾರುಕಟ್ಟೆಯ ಅತ್ಯಂತ ವೇಗದ ಎಲೆಕ್ಟ್ರಿಕ್ ಕಾರು ಎನಿಸಿಕೊಳ್ಳಲಿದೆ. ರೇಂಜ್ ವಿಚಾರಕ್ಕೆ ಬಂದಾಗಲೂ ಒಂದು ಬಾರಿ ಚಾರ್ಜ್ ಮಾಡಿದರೆ ೫೦೦ ಕಿ.ಲೋ ಮೀಟರ್ ದೂರ ಸಾಗಲಿದ್ದು, ದೂರ ಪ್ರಯಾಣದ ಆತಂಕವನ್ನೂ ಕಡಿಮೆಗೊಳಿಸುವ ಉದ್ದೇಶ ಹೊಂದಿದಂತಿದೆ.
ಗಾಜಿನಿಂದಲೇ ತಯಾರಿಸಿರುವ ರೂಫ್, ಸುಧಾರಿತ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ (ಎಡಿಎಎಸ್) ಕಾರಿನ ವಿಶೇಷ ಫೀಚರ್ ಎನಿಸಿಕೊಳ್ಳಲಿದೆ. ಕಂಪನಿಯು ವರ್ಷಕ್ಕೆ ೧೦ ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ | Bhavish Aggarwal | ಭವೀಶ್ ಅಗ್ರವಾಲ್‌ರ ಓಲಾದಿಂದ ಅಗ್ಗದ ಎಲೆಕ್ಟ್ರಿಕ್ ಕಾರು ಉತ್ಪಾದನೆ? ಟೆಸ್ಲಾಗೆ ಸವಾಲು?