Site icon Vistara News

SUV Cars : ಭಾರತದ ಮಾರುಕಟ್ಟೆಯಲ್ಲಿರುವ 1.5 ಲೀಟರ್​ ಡೀಸೆಲ್​ ಎಂಜಿನ್ ಇರುವ ಎಸ್​ಯುವಿ ಕಾರುಗಳು

suv-cars-with-1-5-liter-diesel-engine-in-the-indian-market

SUV cars

ಬೆಂಗಳೂರು: ಭಾರತದ ಕಾರು ಮಾರುಕಟ್ಟೆಯಲ್ಲಿ ಈಗ ಎಸ್​ಯುವಿಗಳದ್ದೇ ಅಬ್ಬರ. ನೋಡಲು ದೊಡ್ಡದಾಗಿರುವ ಹಾಗೂ ಉತ್ತಮ ಸವಾರಿ ಅನುಭವ ನೀಡುವ ಸ್ಪೋರ್ಟ್ಸ್​​ ಯುಟಿಲಿಟಿ ವೆಹಿಕಲ್​ ಬಗ್ಗೆ ಜನರ ಆಸಕ್ತಿಯೂ ಹೆಚ್ಚಾಗಿದೆ. ಹೀಗಾಗಿ ವಾಹನ ತಯಾರಿಕಾ ಕಂಪನಿಗಳು ಕೂಡ ಎಸ್​ಯುವಿ ಕಾರುಗಳನ್ನು ಮಾರುಕಟ್ಟೆಗೆ ಇಳಿಸುತ್ತಿವೆ. ಹೀಗಾಗಿ ಈ ಸೆಗ್ಮೆಂಟ್​ನಲ್ಲಿ ದರ ಪೈಪೋಟಿ ಶುರುವಾಗಿದೆ. ಅದಕ್ಕಾಗಿ ಕಾಂಪಾಕ್ಟ್​ ಎಸ್​ಯುವಿ, ಮಿಡ್​ ಸೈಜ್ ಎಸ್​​ಯುವಿ ಎಂದೆಲ್ಲ ವರ್ಗೀಕರಣ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಶುರುವಾಗಿದೆ. ಇಲ್ಲೂ ಡೀಸೆಲ್​ ಕಾರುಗಳಿಗೆ ಡಿಮ್ಯಾಂಡ್​ ಜಾಸ್ತಿ. ಹಾಗಾದರೆ ಎಸ್​​ಯುವಿಗಳ ಪಟ್ಟಿಯಲ್ಲಿ ಡಿಮ್ಯಾಂಡ್​ ಜಾಸ್ತಿ ಇರುವ 1.5 ಲೀಟರ್​ ಎಂಜಿನ್​ ಇರುವ ಡೀಸೆಲ್​ ಕಾರುಗಳು ಯಾವುದೆಲ್ಲ ಎಂದು ನೋಡೋಣ.

ಟಾಟಾ ನೆಕ್ಸಾನ್​

ಟಾಟಾ ನೆಕ್ಸಾನ್​ ಡೀಸೆಲ್​ ಕಾರಿನಲ್ಲಿ 1.5 ಲೀಟರ್​ನ ಟರ್ಬೊ ಚಾರ್ಜ್ಡ್​​ ಎಂಜಿನ್​ ಇದೆ. ಇದು 115 ಬಿಎಚ್​​ಪಿ ಪವರ್​ ಹಾಗೂ 260 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಆರು ಸ್ಪೀಡ್​ನ ಮ್ಯಾನುಯಲ್​ ಹಾಗೂ ಆಟೋಮ್ಯಾಟಿಕ್​ ಗೇರ್ ಬಾಕ್ಸ್​ ಆಯ್ಕೆಯಿದೆ. ಬೆಲೆ 10 ಲಕ್ಷದಿಂದ ಆರಂಭಗೊಂಡು 13.70 ಲಕ್ಷ ರೂಪಾಯಿ (ಎಕ್ಸ್​ ಶೋರೂಮ್​) ತನಕ ಇದೆ.

ಕಿಯಾ ಸೋನೆಟ್​

ಕಿಯಾ ಕಂಪನಿಯ ಈ ಕಾಂಪ್ಯಾಕ್ಟ್​ ಎಸ್​​ಯುವಿ ಸೋನೆಟ್​ 1.5 ಲೀಟರ್​ನ ಎಂಜಿನ್ ಹೊಂದಿದೆ. ಇದು 100 ಪಿಎಸ್​ ಪವರ್​ ಹಾಗೂ 240 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಆರು ಸ್ಪೀಡ್​ನ ಮ್ಯಾನುಯಲ್ ಗೇರ್​ ಬಾಕ್ಸ್​ ಆಯ್ಕೆಯಿದೆ. ಅದೇ ರೀತಿ ಆಟೊಮ್ಯಾಟಿಕ್​ ಗೇರ್ ಬಾಕ್ಸ್​ ಹೊಂದಿರುವ ಸೋನೆಟ್​ 115 ಪಿಎಸ್​ ಪವರ್​ ಹಾಗೂ 250 ಎನ್​ಎಮ್ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರ ಬೆಲೆ 9.45 ಲಕ್ಷ ರೂಪಾಯಿಂದ ಆರಂಭಗೊಂಡು 14.39 ಲಕ್ಷ ರೂಪಾಯಿ ತನಕ ಇದೆ.

ಹ್ಯುಂಡೈ ವೆನ್ಯು

ಹ್ಯುಂಡೈ ವೆನ್ಯು ಡೀಸೆಲ್​ ಕಾರಿನ ಬೆಲೆ 10.46 ಲಕ್ಷ ರೂಪಾಯಿಂದ 13.14 ಲಕ್ಷ ರೂಪಾಯಿ ತನಕ ಇದೆ. (ಎಕ್ಸ್​ಶೋರೂಮ್​). ಈ ಕಾಂಪಾಕ್ಟ್​ ಎಸ್​ಯುವಿಯಲ್ಲಿ 1.5 ಲೀಟರ್​​ನ ಟರ್ಬೊ ಡೀಸೆಲ್​ ಎಂಜಿನ್​ ಇದೆ. ವೆನ್ಯು ಕಾರು 116 ಬಿಎಚ್​ಪಿ ಪವರ್ ಹಾಗೂ 250 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ.

ಕಿಯಾ ಸೆಲ್ಟೋಸ್​

ಕಿಯಾ ಸೆಲ್ಟೋಸ್​ ಡೀಸೆಲ್​ ಕಾರಿನ ಬೆಲೆ 12.39 ಲಕ್ಷ ರೂಪಾಯಿಗೆ ಆರಂಭಗೊಳ್ಳುತ್ತದೆ. ಗರಿಷ್ಠ ಬೆಲೆ 19.65 ಲಕ್ಷ ರೂಪಾಯಿ. ಇದರಲ್ಲಿ ನಾಲ್ಕು ಸಿಲಿಂಡರ್​ನ ಟರ್ಬೊ ಡೀಸೆಲ್​ ಎಂಜಿನ್ ಇದ್ದು 116 ಬಿಎಚ್​ಪಿ ಪವರ್​ ಹಾಗೂ 250 ಎನ್​ಎಮ್​ ಟಾರ್ಕ್ ಬಿಡುಗಡೆ ಮಾಡುತ್ತದೆ. 6 ಸ್ಪೀಡ್​​ನ ಮ್ಯಾನುಯಲ್​ ಹಾಗೂ 6 ಸ್ಪೀಡ್​ನ ಐಎಮ್​ಟಿ ಗೇರ್​ಬಾಕ್ಸ್​ ಇದರಲ್ಲಿದೆ.

ಮಹೀಂದ್ರಾ ಎಕ್ಸ್​ಯುವಿ 300

ಮಹೀಂದ್ರಾ ಕಂಪನಿಯ ಎಕ್ಸ್​ಯುವಿ 300 ಡೀಸೆಲ್​ ಕಾರಿನ ಬೆಲೆ 9.90 ಲಕ್ಷ ರೂಪಾಯಿಯಿಂದ ಆರಂಭಗೊಂಡು 14.60 ಲಕ್ಷ ರೂಪಾಯಿವರೆಗೆ ಇದೆ. ಇದರಲ್ಲೂ 1.5 ಲೀಟರ್​ನ ಟರ್ಬೊ ಎಂಜಿನ್ ಇದೆ. 117 ಬಿಎಚ್​ಪಿ ಪವರ್​ ಹಾಗೂ 300 ಎನ್​ಎಮ್​ ಟಾರ್ಕ್ ಬಿಡುಗಡೆ ಮಾಡುತ್ತದೆ ಈ ಎಂಜಿನ್​. 6 ಸ್ಪೀಡ್​ನ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್​ ಗೇರ್​ ಬಾಕ್ಸ್​ ಆಯ್ಕೆ ಇಲ್ಲಿದೆ.

ಮಹೀಂದ್ರಾ ಥಾರ್​

ಮಹಿಂದ್ರಾ ಕಂಪನಿಯ ಥಾರ್​ ಡೀಸೆಲ್ ಕಾರುಗಳು 10.55 ಲಕ್ಷ ರೂಪಾಯಿಂದ ಆರಂಭಗೊಂಡು 16.78 ಲಕ್ಷ ರೂಪಾಯಿ ತನಕ ಬೆಲೆ ಹೊಂದಿದೆ. ಇದರಲ್ಲೂ 1.5 ಲೀಟರ್​ನ ಟರ್ಬೊ ಎಂಜಿನ್ ಇದ್ದು, 118 ಬಿಎಚ್​ಪಿ ಪವರ್​ ಹಾಗೂ 300 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಸಿಕ್ಸ್​ ಸ್ಪೀಡ್​ನ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್​ ಗೇರ್​ಬಾಕ್ಸ್ ಆಯ್ಕೆಗಳಿವೆ.

ಹ್ಯುಂಡೈ ಕ್ರೆಟಾ

ಇದರಲ್ಲಿಯೂ 1.5 ಲೀಟರ್​ನ ಡೀಸೆಲ್​ ಎಂಜಿನ್ ಆಯ್ಕೆಯಿದೆ. ಈ ಟರ್ಬೊ ಎಂಜಿನ್​ 116 ಬಿಎಚ್​​ಪಿ ಪವರ್​ ಹಾಗೂ 250 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಕಾರಿನ ಬೆಲೆ 11.96 ಲಕ್ಷ ರೂಪಾಯಿಯಿಂದ ಆರಂಭಗೊಂಡು 19.20 ಲಕ್ಷ ರೂಪಾಯಿ ತನಕ ಇದೆ.

ಮಹಿಂದ್ರಾ ಬೊಲೆರೊ

ಮಹೀಂದ್ರಾ ಬೊಲೆರೊ ಕಾರು 9.78 ಲಕ್ಷ ರೂಪಾಯಿಂದ ಆರಂಭಗೊಂಡು 10.78 ಲಕ್ಷ ರೂಪಾಯಿ ತನಕ ಇದೆ. ಇದರಲ್ಲಿ 1.5 ಲೀಟರ್​ನ ಡೀಸೆಲ್​ ಎಂಜಿನ್​ ಇದೆ. ಇದು 76 ಬಿಎಚ್​ಪಿ ಪವರ್​ ಹಾಗೂ 210 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ.

Exit mobile version