ಪುಣೆ: ಟಾಟಾ ಮೋಟಾರ್ಸ್ (Tata Motors) ತನ್ನ ಪುಣೆ ಘಟಕದಲ್ಲಿ 2 ಲಕ್ಷ ಪಂಚ್ ಪಂಚ್ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಬಿಡುಗಡೆ ಮಾಡಿರುವ ಸಾಧನೆ ಮಾಡಿದೆ. ಅಕ್ಟೋಬರ್ 2021 ರಲ್ಲಿ ಕಾರು ತಯಾರಕರು ಪಂಚ್ ಭಾರತೀಯ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಅದಾಗಿ 20 ತಿಂಗಳಲ್ಲಿ 2 ಲಕ್ಷದ ಗಡಿ ದಾಟುವ ಮೂಲಕ ಸಾಧನೆ ಮಾಡಿದೆ. ಬಿಡುಗಡೆಯಾದ ದಿನದಿಂದ ಹಿಡಿದು ಮಾರ್ಚ್ 2023 ರವರೆಗೆ, ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 1,86,535 ಪಂಚ್ ಕಾರುಗಳು ಮಾರಾಟವಾಗಿದ್ದವು. ಏಪ್ರಿಲ್ 2023 ರ ಅಂದಾಜು ಮಾರಾಟವು 10,930 ಯೂನಿಟ್ಗಳನ್ನು ತಲುಪಿತ್ತು. ಇದೀಗ 2 ಲಕ್ಷದ ಗಡಿ ದಾಟಿದೆ.
2023ರ ಜನವರಿಯಿಂದ ಏಪ್ರಿಲ್ ತನಕ ಪಂಚ್ ಕಾಂಪಾಕ್ಟ್ ಎಸ್ಯುವಿ ಮಾಸಿಕ 11,249 ಯೂನಿಟ್ಗಳಷ್ಟು ಮಾರಾಟವಾಗಿದ್ದವು. ಅಂತೆಯೇ ಮೇ ಮೊದಲ ವಾರಕ್ಕೆ 2 ಲಕ್ಷದ ಗಡಿಯನ್ನು ದಾಟಿದೆ. ಪಂಚ್ ಕಾರು 2023 ರ ಆರ್ಥಿಕ ವರ್ಷದಲ್ಲಿ 1,33,819 ಯೂನಿಟ್ಗಳಷ್ಟು ಮಾರಾಟವಾಗಿತ್ತು. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಅದು ಶೇಕಡಾ 153ರಷ್ಟು ಬೆಳವಣಿಕೆ ಕಂಡಿತ್ತು. ಅಲ್ಲದೆ, ಕಳೆದ ಹಣಕಾಸು ವರ್ಷದಲ್ಲಿ ಭಾರತದ ಟಾಪ್ 30 ಯುಟಿಲಿಟಿ ವಾಹನಗಳ ಮಾರಾಟದ ಪಟ್ಟಿಯಲ್ಲಿ ಅಗ್ರ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು.
ಟಾಟಾ ಪಂಚ್ ಕೇವಲ 10 ತಿಂಗಳ ಅವಧಿಯಲ್ಲಿ 1,00,000 ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದ ಭಾರತದ ಮೊದಲ ಎಸ್ಯವಿ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದೆ ಸಣ್ಣ ಗಾತ್ರದ ವಿನ್ಯಾಸ ಮತ್ತು ಅತ್ಯುತ್ತಮ ದರ್ಜೆಯ 5-ಸ್ಟಾರ್ ಸುರಕ್ಷತೆ ರೇಟಿಂಗ್ ಈ ಸಾಧನೆಯ ಹಿಂದಿನ ಗುಟ್ಟು. ಅಕ್ಟೋಬರ್ 14, 2021ರಂದು, ಟಾಟಾ ಪಂಚ್ ಗ್ಲೋಬಲ್ ಎನ್ಕ್ಯಾಪ್ ಕ್ರ್ಯಾಶ್ ಟೆಸ್ಟ್ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿತ್ತು.
ಟಾಟಾ ಪಂಚ್ ಸಿಎನ್ ಜಿ ಮತ್ತು ಇವಿ ಯೋಜನೆ ಪ್ರಗತಿಯಲ್ಲಿ
ಟಾಟಾ ಮೋಟಾರ್ಸ್ ಸಿಎನ್ಜಿ ಮತ್ತು ಇವಿ ಆವೃತ್ತಿಗಳನ್ನು ಬಿಡುಗಡೆ ಯೋಜನೆ ಮಾಡಿಕೊಂಡಿದೆ. ಇದು ಸಾಧ್ಯವಾದ ಬಳಿಕ ಪಂಚ್ ಕಾರಿನ ಮಾರುಕಟ್ಟೆ ಹಿಗ್ಗಲಿದೆ. ಜನವರಿಯಲ್ಲಿ ಗ್ರೇಟರ್ ನೊಯ್ಡಾದಲ್ಲಿ ನಡೆದ ಆಟೋ ಎಕ್ಸ್ ಪೋ 2023ರಲ್ಲಿ ಟಾಟಾ ಮೋಟಾರ್ಸ್ ಸಿಎನ್ಜಿ ಪಂಚ್ ಅನಾವರಣ ಮಾಡಿತ್ತು. ಇದು ಟಾಟಾ ಸರಣಿಯಲ್ಲಿ ಫ್ಯಾಕ್ಟರಿ ಫಿಟೆಡ್ ಸಿಎನ್ಜಿ ಕಿಟ್ ಪಡೆದ ನಾಲ್ಕನೇ ಮಾದರಿ (ಟಿಗೋರ್, ಟಿಯಾಗೊ ಮತ್ತು ಆಲ್ಟ್ರೋಜ್ ಮೊದಲ ಮೂರು ಕಾರುಗಳು).
ಪಂಚ್ ನ ಸಿಎನ್ಜಿ ಆವೃತ್ತಿಯು 1.2-ಲೀಟರ್ ಮೂರು ಸಿಲಿಂಡರ್ ಎಂಜಿನ್ ಹೊಂದಿದೆ. ಇದರಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದೆ. ಈ ಎಂಜಿನ್ ಪೆಟ್ರೋಲ್ ಮೋಡ್ನಲ್ಲಿ 86 ಬಿಹೆಚ್ ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಸಿಎನ್ಜಿ ಮೋಡ್ನಲ್ಲಿ 77 ಬಿಹೆಚ್ಪಿ ಮತ್ತು 97 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಾಟಾದ ಕಂಪನಿಯು ಸಿಎನ್ಜಿಗಾಗಿ ಹೊಸ ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಪಂಚ್ನಲ್ಲೂ ಇದು ಲಭ್ಯವಾಗಲಿದೆ.
ಪಂಚ್ ಎಸ್ಯವಿ ಕಾರಿನ ಎಲೆಕ್ಟ್ರಿಕ್ ಆವೃತ್ತಿಯ ಪರೀಕ್ಷೆ ನಡೆಯುತ್ತಿದೆ ಎಂಬುದಾಗಿ ವರದಿಯಾಗಿತ್ತು . ಪಂಚ್ ಇವಿ ಕಾರಿನಲ್ಲಿ ಡಿಸ್ಕ್ ಬ್ರೇಕ್ ನೀಡಲಾಗಿದ್ದು. ಈ ಫೀಚರ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರಿಗೂ ಲಭ್ಯವಾಗುವ ಸಾಧ್ಯತೆಗಳಿವೆ. ಪಂಚ್ ಇವಿಯಲ್ಲಿ 7.0-ಇಂಚಿನ ಟಚ್ಸ್ಕ್ರೀನ್ ಇದೆ. ಅದೇ ರೀತಿ ನೆಕ್ಸಾಣ್ ಮ್ಯಾಕ್ಸ್ನ ಡ್ರೈವರ್ ಸೆಲೆಕ್ಟ್ ಹಾಗೂ ನೂತನ ಪಾರ್ಕಿಂಗ್ ಅಸಿಸ್ಟ್ ಫೀಚರ್ ಕೂಡ ಲಭ್ಯವಿರುತ್ತದೆ. ಅಂದಾಜಿನ ಪ್ರಕಾರ 2023ರ ಹಬ್ಬದ ಋತುವಿನಲ್ಲಿ ಪಂಚ್ ಇವಿ ಬಿಡುಗಡೆಯಾಗಬಹುದು.