ಬೆಂಗಳೂರು: ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ (Tata Nexon EV) ಫೇಸ್ ಲಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ (Ex Showroom) ದರದಂತೆ 14.74 ಲಕ್ಷ ರೂಪಾಯಿಗಳ ಈ ಪರಿಚಯಾತ್ಮಕ ಬೆಲೆಗಳು ಸೀಮಿತ ಅವಧಿಗೆ ಮಾತ್ರ ಇರುತ್ತದೆ. ನಿರ್ದಿಷ್ಟ ಸಂಖ್ಯೆಯ ಬುಕ್ಕಿಂಗ್ ಆದ ಬಳಿಕ ಬೆಲೆಯೇ ಏರಿಕೆಯಾಗಲಿದೆ ಎಂಬ ಸೂಚನೆಯನ್ನು ಕಂಪನಿ ನೀಡಿದೆ. ಹೊಸ ವಿನ್ಯಾಸ, ಹಲವಾರು ಹೊಸ ಫೀಚರ್ಗಳೊಂದಿಗೆ ಹೊಸ ನೆಕ್ಸಾನ್ ಇವಿ ಫೇಸ್ಲಿಫ್ಟ್ ಬಂದಿದೆ.
ಟಾಟಾ ನೆಕ್ಸಾನ್ ಭಾರತದ ಮಾರುಕಟ್ಟೆಯ ಜನಪ್ರಿಯ ಕಾಂಪ್ಯಾಕ್ಟ್ ಎಸ್ ಯುವಿ (Compact SUV) . ಇದರ ಎಲೆಕ್ಟ್ರಿಕ್ ರೂಪಾಂತರವು ನವೀಕರಿಸಿದ ವಿನ್ಯಾಸ, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಎಲೆಕ್ಟ್ರಿಕ್ ಪವರ್ ಟ್ರೇನ್ ಸೇರಿದಂತೆ ಹಲವು ಹೊಸತನಗಳೊಂದಿಗೆ ಬಂದಿದೆ.
ಹೊಸ ವಿನ್ಯಾಸ
ಈ ಎಲೆಕ್ಟ್ರಿಕ್ ಎಸ್ ಯುವಿಯು ಹೊಸ ಬಾಹ್ಯ ವಿನ್ಯಾಸ, ನವೀಕರಿಸಿದ ಒಳಾಂಗಣ ಮತ್ತು ಹೊಸ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿರುವ ಪೂರ್ತಿ ಮೇಕ್ ಓವರ್ ಗೆ ಒಳಗಾಗಿದೆ. ಟಾಟಾ ಮೋಟಾರ್ಸ್ ಈಗಾಗಲೇ ನೆಕ್ಸಾನ್ ಇವಿಯ 53,000ಕ್ಕೂ ಹೆಚ್ಚು ಯುನಿಟ್ ಗಳ ಮಾರಾಟ ಮಾಡಿದೆ. ಹೀಗಾಗಿ ಫೇಸ್ ಲಿಫ್ಟ್ ಮೂಲಕ ಯಶಸ್ಸನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ.
2023ರ ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ತನ್ನ ಆಂತರಿಕ ದಹನಕಾರಿ ಎಂಜಿನ್ (ಐಸಿಇ ಎಂಜಿನ್) ಪ್ರತಿರೂಪದೊಂದಿಗೆ ಪಾದಾರ್ಪಣೆ ಮಾಡಿದೆ. ಪೆಟ್ರೋಲ್ ಕಾರು ಬೆಲೆ 8.10 ಲಕ್ಷಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಐಸಿಇ ಚಾಲಿತ ನೆಕ್ಸಾನ್ ಫೇಸ್ ಲಿಫ್ಟ್ ನಂತೆಯೇ, ಇವಿ ರೂಪಾಂತರವು ಟಾಟಾದ ಕರ್ವ್ ಪರಿಕಲ್ಪನೆಯಿಂದ ವಿನ್ಯಾಸ ಸ್ಫೂರ್ತಿ ಪಡೆದಿದೆ. ಆದಾಗ್ಯೂ, ವಿಭಿನ್ನ ಏರ್ ಡ್ಯಾಮ್ ಮತ್ತು ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಸೇರಿದಂತೆ ವಿಶಿಷ್ಟ ವೈಶಿಷ್ಟ್ಯಗಳಿವೆ. ಇದು ಏಳು ವಿಭಿನ್ನ ಪೇಂಟ್ ಆಯ್ಕೆಯನ್ನು ನೀಡುತ್ತದೆ: ಎಂಪವರ್ಡ್ ಆಕ್ಸೈಡ್, ಪ್ರಿಸ್ಟೈನ್ ವೈಟ್, ಇಂಟೆನ್ಸಿ ಟೀಲ್, ಫ್ಲೇಮ್ ರೆಡ್, ಡೇಟೋನಾ ಗ್ರೇ, ಫಿಯರ್ಲೆಸ್ ಪರ್ಪಲ್ ಮತ್ತು ಕ್ರಿಯೇಟಿವ್ ಓಷನ್ ಎಂಬ ಬಣ್ಣಗಳಿವೆ.
12. ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್
ನೆಕ್ಸಾನ್ ಇವಿ ಫೇಸ್ ಲಿಫ್ಟ್ ನ ಕ್ಯಾಬಿನ್ ನಲ್ಲಿ, ಹೊಸ ಫೀಚರ್ಗಳನ್ನು ನೀಡಲಾಗಿದೆ. ವಿಶೇಷವೆಂದರೆ, ಎರಡು ದೊಡ್ಡ ಟಚ್ಸ್ಕ್ರಿನ್ ಸಿಸ್ಟಮ್ಗಳಿವೆ. 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದರಲ್ಲಿದೆ. ಇದು ಕ್ಯಾಬಿನ್ ನ ಪ್ರೀಮಿಯಂ ಅನುಭವವನ್ನು ಹೆಚ್ಚಿಸುತ್ತದೆ.
ಹೊಸ ಸ್ಟೀರಿಂಗ್-ಮೌಂಟೆಡ್ ಪ್ಯಾಡಲ್ ಶಿಫ್ಟರ್, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ವೈರ್ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ವಾಯ್ಸ್ ಕಮಾಂಡ್ ಫಂಕ್ಷನಾಲಿಟಿ, ಎತ್ತರ-ಸರಿಹೊಂದಿಸಬಹುದಾದ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಏರ್ ಪ್ಯೂರಿಫೈಯರ್, ಸಬ್ ವೂಫರ್ ಹೊಂದಿರುವ ಜೆಬಿಎಲ್ ಆಡಿಯೊ ಸಿಸ್ಟಮ್ ಮತ್ತು ಸನ್ ರೂಫ್ ನೀಡಲಾಗಿದೆ.
ಆರು ಏರ್ಬ್ಯಾಗ್ಗಳು
ಸುರಕ್ಷತಾ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ 2023 ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ಈಗ ಆರು ಏರ್ ಬ್ಯಾಗ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಹೆಚ್ಚುವರಿಯಾಗಿ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಆರೋಹಣ ಮತ್ತು ಇಳಿಯುವಿಕೆ ನಿಯಂತ್ರಣ, ಜೊತೆಗೆ ಹಿಂಭಾಗದ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ.
ಇದನ್ನೂ ಓದಿ :
ಪವರ್ಟ್ರೇನ್ ಹೇಗಿದೆ?
ಪವರ್ ಟ್ರೇನ್ ಗೆ ಹೋಗುವುದಾದರೆ, ಎಲೆಕ್ಟ್ರಿಕ್ ಎಸ್ ಯುವಿ ಈಗ ಹೊಸ ಜೆನ್ 2 ಮೋಟರ್ ಹೊಂದಿದೆ, ಇದು ಅದರ ಹಿಂದಿನದಕ್ಕಿಂತ 20 ಕೆ.ಜಿ ಹಗುರವಾಗಿದೆ. ಈ ನವೀಕರಿಸಿದ ಎಲೆಕ್ಟ್ರಿಕ್ ವಾಹನವು ಒಂದು ಬಾರಿ ಚಾರ್ಜ್ ಮಾಡಿದರೆ 465 ಕಿ.ಮೀ ವರೆಗೆ ರೇಂಜ್ ನೀಡುತ್ತದೆ. ಲಾಂಗ್ ರೇಂಜ್ ವೇರಿಯೆಂಟ್ನಲ್ಲಿ ಇವಿ 143 ಬಿಹೆಚ್ ಪಿ ಗರಿಷ್ಠ ಶಕ್ತಿ ಮತ್ತು 215 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪವರ್ ಔಟ್ ಪುಟ್ ಸಣ್ಣ ಹೆಚ್ಚಳವನ್ನು ಕಂಡಿದೆ. ಅದೇ ರೀತಿ ಹೊಸ ಮಾಡೆಲ್ನಲ್ಲಿ ಟಾರ್ಕ್ ಸ್ವಲ್ಪ ಕಡಿಮೆ ಮಾಡಲಾಗಿದೆ. ಇದು ಕೇವಲ 8.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಸಿಟಿ, ಇಕೋ ಮತ್ತು ಸ್ಪೋರ್ಟ್ ಎಂಬ ಮೂರು ವಿಭಿನ್ನ ಚಾಲನಾ ಮೋಡ್ ಗಳನ್ನು ನೀಡಲಾಗಿದೆ.
ಕಾರ್ಯಕ್ಷಮತೆ ಹೆಚ್ಚಳ
ನೆಕ್ಸಾನ್ ಇವಿ ಸುಧಾರಿತ ವಾಯುಬಲವಿಜ್ಞಾನವನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ ವರ್ಧಿತ ಕಾರ್ಯಕ್ಷಮತೆ ಉಂಟಾಗುತ್ತದೆ ಎಂದು ವಾಹನ ತಯಾರಕರು ಪ್ರತಿಪಾದಿಸುತ್ತಾರೆ. ಲಾಂಗ್ ರೇಂಜ್ ಫೇಸ್ ಲಿಫ್ಟ್ ಮಾದರಿಯು ನೆಕ್ಸಾನ್ ಇವಿ ಮ್ಯಾಕ್ಸ್ನಂತೆಯೆ 40.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಉಳಿಸಿಕೊಂಡಿದೆ. ಆದರೆ ಇದು ಹಿಂದಿನ 437 ಕಿ.ಮೀ ನಿಂದ ಈಗ 465 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.
ಟಾಟಾ ಹೊಸ ನೆಕ್ಸಾನ್ ಇವಿಯ ಬ್ಯಾಟರಿ ಮತ್ತು ಮೋಟರ್ ಎರಡಕ್ಕೂ ಎಂಟು ವರ್ಷಗಳ ಅಥವಾ 160,000 ಕಿ.ಮೀ ವಾರಂಟಿಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ನೆಕ್ಸಾನ್ ಇವಿ ಫೇಸ್ ಲಿಫ್ಟ್ ವಿ2 ಎಲ್ (ವೆಹಿಕಲ್-ಟು-ಲೋಡ್) ಮತ್ತು ವಿ 2 ವಿ (ವೆಹಿಕಲ್-ಟು-ವೆಹಿಕಲ್) ತಂತ್ರಜ್ಞಾನಗಳನ್ನು ಹೊಂದಿದೆ, ಇದು ವಿದ್ಯುತ್ ಉಪಕರಣಗಳಿಗೆ ಶಕ್ತಿ ನೀಡಲು ಮತ್ತು ಇತರ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಕಾರಿಗೆ ಅನುವು ಮಾಡಿಕೊಡುತ್ತದೆ.