Site icon Vistara News

Royal Enfield | ಟ್ಯೂಬ್‌ಲೆಸ್‌ ಸ್ಪೋಕ್ಡ್‌ ರಿಮ್‌ನೊಂದಿಗೆ ಬರಲಿದೆ ಹಿಮಾಲಯನ್‌ 450

Royal Enfield

ನವ ದೆಹಲಿ : ರಾಯಲ್‌ ಎನ್‌ಫೀಲ್ಡ್‌ ಕಂಪನಿಯು (Royal Enfield) ಬೈಕ್‌ ತನ್ನ ಹಿಮಾಲಯನ್‌ ಮೋಟಾರ್‌ಸೈಕಲ್ ಅನ್ನು ಇನ್ನಷ್ಟು ಶಕ್ತಿಶಾಲಿ ಹಾಗೂ ಅತ್ಯಾಕರ್ಷಕವಾಗಿ ಮಾರುಕಟ್ಟೆಗೆ ಬಿಡಲು ಮುಂದಾಗಿದೆ. ೨೦೨೩ರ ಪ್ರಥಮ ತ್ರೈಮಾಸಿಕದಲ್ಲಿ ಈ ಬೈಕ್‌ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಪ್ರಮುಖವಾಗಿ ಟ್ಯೂಬ್‌ಲೆಸ್‌ ಸ್ಪೋಕ್ಡ್‌ ರಿಮ್‌ಗಳನ್ನು ಅಳವಡಿಸಲು ರಾಯಲ್ ಎನ್‌ಫೀಲ್ಡ್‌ ಕಂಪನಿಯು ಮುಂದಾಗಿದೆ. ಅದಕ್ಕಾಗಿ ಸಿಯೆಟ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಿಮಾಲಯನ್ ೪೧೧ ಹಾಗೂ ಸ್ಕ್ರಾಮ್‌ ೪೧೧ ಬೈಕ್‌ಗಳು ಸ್ಪೋಕ್ಡ್‌ ವೀಲ್‌ಗಳು ಬರತ್ತವೆ ಹಾಗೂ ಟ್ಯೂಬ್‌ ಟಯರ್‌ಗಳನ್ನು ಅಳವಡಿಸಲಾಗಿದೆ. ಮುಂದಿನ ಟಯರ್‌ನ ರಿಮ್‌ ೨೧ ಇಂಚುಗಳಿದ್ದರೆ, ಹಿಂದಿನ ಟಯರ್‌ ರಿಮ್ ೧೭ ಇಂಚು ಇದೆ. ಹಿಮಾಲಯನ್‌ ೪೫೦ ಅದೇ ಗಾತ್ರದ ರಿಮ್‌ನೊಂದಿಗೆ ಬರುವ ಹೊರತಾಗಿಯೂ ಟ್ಯೂಬ್‌ಲೆಸ್‌ ಟಯರ್‌ ಬಳಸುವ ಯೋಜನೆಯಿದೆ.

ಆಫ್‌ರೋಡಿಂಗ್ ವೇಳೆ ಸ್ಪೋಕ್ಡ್‌ ವೀಲ್‌ಗಳು ಹೆಚ್ಚು ಸಹಕಾರಿ. ಅಲಾಯ್‌ ವೀಲ್‌ಗಳು ಒತ್ತಡದ ಸಂದರ್ಭದಲ್ಲಿ ಮುರಿಯುವ ಸಾಧ್ಯತೆಗಳಿರುತ್ತವೆ. ಹೀಗಾಗಿ ರಾಯಲ್‌ ಎನ್‌ಫೀಲ್ಡ್‌ ಸ್ಪೋಕ್ಡ್‌ ವೀಲ್‌ಗಳನ್ನು ಬಳಸುತ್ತಿತ್ತು. ಆದರೆ, ಅದಕ್ಕೆ ಟ್ಯೂಬ್‌ಲೆಸ್‌ ಟಯರ್‌ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಟ್ಯೂಬ್‌ಲೆಸ್‌ ಟಯರ್‌ನಿಂದ ಹೆಚ್ಚು ಪ್ರಯೋಜನವಿದ್ದು, ಪಂಕ್ಚರ್‌ ಆದಾಗ ಸರಿಪಡಿಸುವುದು ಸುಲಭ. ಹೀಗಾಗಿ ಸ್ಪೋಕ್ಡ್‌ ವೀಲ್‌ಗೆ ಟ್ಯೂಬ್‌ಲೆಸ್‌ ಟಯರ್ ಬಳಸುವುದು ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಉದ್ದೇಶವಾಗಿದೆ.

ಹಿಮಾಲಯನ್‌ ಬೈಕ್‌ಗೆ ಏನಾದರೂ ಟ್ಯೂಬ್‌ಲೆಸ್‌ ಸ್ಪೋಕ್ಡ್‌ ವೀಲ್‌ಗಳು ಬಂದರೆ ಅದು ತನ್ನೆಲ್ಲ ಬೈಕ್‌ಗಳಿಗೆ ಅದೇ ಮಾದರಿಯ ರಿಮ್‌ಗಳನ್ನು ಬಳಸುವ ಸಾಧ್ಯತೆಗಳಿವೆ.

ಹಿಮಾಲಯನ್‌ ಬೈಕ್‌ ೨೦೦ ಕೆ.ಜಿ ಭಾರವಿದೆ. ಹೀಗಾಗಿ ಪಂಕ್ಚರ್ ಆದಾಗ ತಳ್ಳಿಕೊಂಡು ಹೋಗುವುದು ದೊಡ್ಡ ಸಮಸ್ಯೆ ಅನಿಸುತ್ತಿತ್ತು. ಹೀಗಾಗಿ ಸುಲಭವಾಗಿ ರಿಪೇರಿ ಮಾಡಬಹುದಾದ ಟ್ಯೂಬ್‌ಲೆಸ್ ಟಯರ್ ಅನಿವಾರ್ಯವಾಗಿತ್ತು. ಆ ಯೋಜನೆಯನ್ನು ರಾಯಲ್‌ ಎನ್‌ಫೀಲ್ಡ್‌ ಕೈಗೆತ್ತಿಕೊಂಡಿದೆ.

ಇದನ್ನೂ ಓದಿ | Royal Enfield | ಹಂಟರ್‌ ಮೇನಿಯಾ; ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಮಾರಾಟದಲ್ಲಿ ಭರ್ಜರಿ ಏರಿಕೆ

Exit mobile version