ಮುಂಬಯಿ: ದಕ್ಷಿಣ ಕೊರಿಯಾ ಮೂಲದ ಕಾರು ತಯಾರಿಕಾ ಕಂಪನಿಯ ಹ್ಯುಂಡೈ ಮೋಟಾರ್ ಕಂಪನಿ ತನ್ನ ಜನಪ್ರಿಯ ಲಕ್ಸುರಿ ಹ್ಯಾಚ್ಬ್ಯಾಕ್ Hyundai i20 ಕಾರಿನ ಬೆಲೆ ಏರಿಕೆ ಮಾಡಲು ನಿರ್ಧರಿಸಿದೆ. ಫೆಬ್ರವರಿ 1ರಿಂದ ಈ ಬೆಲೆ ಏರಿಕೆ ಅನ್ವಯವಾಗಲಿದೆ. ಈ ಮೂಲಕ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಎರಡು ಬಾರಿ Hyundai i20 ಕಾರಿನ ಬೆಲೆ ಏರಿಕೆ ಮಾಡಿದಂತಾಗಿದೆ. ಈ ಹಿಂದೆ ಹಬ್ಬಗಳ ಋತು ಆರಂಭವಾಗುವ ಮೊದಲು ಅಂದರೆ ಸೆಪ್ಟೆಂಬರ್ನಲ್ಲಿ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು.
Hyundai i20 ಕಾರಿನ ಟರ್ಬೊ ಆವೃತ್ತಿಗೆ ಗರಿಷ್ಠ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದ್ದು, 21,50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಇನ್ನು ಮುಂದಿ Hyundai i20 ಕಾರಿನ ಬೆಲೆ 7.18 ಲಕ್ಷ ರೂಪಾಯಿಯಿಂದ ಆರಂಭಗೊಂಡು, ಟಾಪ್ ಎಂಡ್ ಕಾರಿನ ಬೆಲೆ 11.68 ಲಕ್ಷ ರೂಪಾಯಿಯಾಗಿದೆ. ಇದೇ ವೇಳೆ Hyundai i20 ಎನ್ ಸೀರಿಸ್ನ ಕಾರಿನ ಬೆಲೆಯನ್ನೂ ಹೆಚ್ಚಳ ಮಾಡಲಾಗಿದೆ. ಎನ್6, ಎನ್8 ಐಎಮ್ಟಿ ಡಿಸಿಟಿ ಗೇರ್ ಬಾಕ್ಸ್ ಹೊಂದಿರುವ ಕಾರಿನ ಬೆಲೆಯೂ ಅಧಿಕವಾಗಿದೆ. ಈ ಸೀರಿಸ್ನಲ್ಲಿ ಗರಿಷ್ಠ 16,500 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ಎನ್ ಸೀರಿನ Hyundai i20 ಕಾರುಗಳ ಬೆಲೆ 10.16 ಲಕ್ಷ ರೂಪಾಯಿಯಿಂದ ಆರಂಭಗೊಂಡು 12.12 ಲಕ್ಷ ರೂಪಾಯಿ ತನಕವಿದೆ (ಎಲ್ಲವೂ ಎಕ್ಸ್ ಶೋರೂಮ್ ಬೆಲೆ).
ಇದನ್ನೂ ಓದಿ : ಹತ್ತು ಸಾವಿರ ಬುಕಿಂಗ್ ದಾಖಲಿಸಿದ Mahindra XUV 400; ಡೆಲಿವರಿ ಯಾವಾಗ ಆರಂಭ?
ಬೆಲೆ ಏರಿಕೆ ಜತೆಗೆ ದಕ್ಷಿಣ ಕೊರಿಯಾದ ಕಂಪನಿಯು ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರಿನಲ್ಲಿ ಐಎಮ್ಟಿ ಗೇರ್ ಬಾಕ್ಸ್ ಬಳಕೆಯನ್ನು ನಿಲ್ಲಿಸಿದೆ. ಈ ಕಾರನ್ನು ಎರಡು ವರ್ಷಗಳ ಹಿಂದೆ ಗ್ರಾಹಕರಿಗೆ ಪರಿಚಯ ಮಾಡಲಾಗಿತ್ತು. ಇನ್ನು ಮುಂದೆ ಕಾರುಗಳು ಡಿಸಿಟಿ ಗೇರ್ಬಾಕ್ಸ್ಗಳೊಂದಿಗೆ ರಸ್ತೆಗೆ ಇಳಿಯಲಿವೆ. ಆದರೆ, ಐಎಮ್ಟಿ ಗೇರ್ ಬಾಕ್ಸ್ ಎನ್ ಲೈನ್ ವೇರಿಯೆಂಟ್ಗಳಲ್ಲಿ ಲಭ್ಯವಿರಲಿದೆ.