ಮುಂಬಯಿ: ಭಾರತ ಸರಕಾರ ವಾಹನಗಳು ಪಾಲಿಸಬೇಕಾದ ಪರಿಸರ ಮಾಲಿನ್ಯ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿವೆ. ಬಿಎಸ್6 ಎರಡನೇಹಂತದ ಮಾನದಂಡದ ಮೂಲಕ ವಾಹನಗಳು ಉಗುಳುವ ಹೊಗೆಯ ನಿಯಂತ್ರಣಕ್ಕೆ ಮುಂದಾಗಿದೆ. ಇದಕ್ಕಾಗಿ ಭಾರತದ ಕಾರುಗಳ ಉತ್ಪಾದಕರು ಎಂಜಿನ್ನಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಿದ್ದಾರೆ. ಆದಾಗ್ಯೂ ಕೆಲವೊಂದು ಮಾಡೆಲ್ಗಳನ್ನು ಹೊಸ ಮಾನದಂಡಕ್ಕೆ ಪೂರಕವಾಗಿ ಅಪ್ಗ್ರೇಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಇಂಥ ಕಾರುಗಳು ಏಪ್ರಿಲ್ 1ರಿಂದ ಭಾರತದ ಮಾರುಕಟ್ಟೆಯಿಂದ ಕಣ್ಮರೆಯಾಗಲಿವೆ. ಅಂಥ ಕೆಲವು ಕಾರುಗಳ ವಿವರ ಇಲ್ಲಿದೆ.
ಟಾಟಾ ಆಲ್ಟ್ರೊಜ್ (ಡೀಸೆಲ್) – Tata Alatroz
ಟಾಟಾ ಮೋಟಾರ್ಸ್ನ ಆಲ್ಟ್ರೊಜ್ ಪ್ರೀಮಿಯಮ್ ಹ್ಯಾಚ್ಬ್ಯಾಕ್. ಆದರೆ, ಇದರ 1497 ಸಿಸಿಯ ಡೀಸೆಲ್ ಎಂಜಿನ್ ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಪೂರೈಸುತ್ತಿಲ್ಲ. ಹೀಗಾಗಿ ಏಪ್ರಿಲ್ ಒಂದರಿಂದ ಮಾರುಕಟ್ಟೆಗೆ ಇಳಿಯುವ ಸಾಧ್ಯತೆಗಳು ಇಲ್ಲ. ಈ ಕಾರಿನ ಎಂಜಿನ್ 88.77 ಬಿಎಚ್ಪಿ ಪವರ್ ಹಾಗೂ 200 ಎನ್ಎಮ್ ಟಾರ್ಕ್ ಬಿಡಗಡೆ ಮಾಡುತ್ತಿತ್ತು.
ರಿನೋ ಕ್ವಿಡ್ – Renault Kwid
ರಿನೋ ಕಂಪನಿ ತನ್ನೆಲ್ಲ ಕಾರುಗಳನ್ನು ಬಿಎಸ್6 ಎರಡನೇ ಹಂತದ ಮಾನದಂಡಗಳಿಗೆ ಪೂರಕವಾಗಿ ಮೊದಲಾಗಿ ಅಪ್ಗ್ರೇಡ್ ಮಾಡಿದೆ. ಆದರೆ, ರಿನೋ ಕ್ವಿಡ್ ಕುರಿತು ಮಾಹಿತಿ ಇಲ್ಲ. ಕ್ವಿಡ್ನಲ್ಲಿ 1 ಲೀಟರ್ನ 3 ಸಿಲಿಂಡರ್ ಎಂಜಿನ್ ಇದ್ದು, ಇದು 68 ಬಿಎಚ್ಪಿ ಪವರ್ ಹಾಗೂ 91 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಕಾರು ಮುಂದುವರಿಯುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ.
ಹೋಂಡಾ ಅಮೇಜ್ (ಡೀಸೆಲ್)- Honda Amaze
ಹೋಂಡಾ ಕಂಪನಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅಮೇಜ್ ಕಾರಿನ ಡೀಸೆಲ್ ಮಾಡೆಲ್ ತೆಗೆದು ಹಾಕಿದೆ. ಕಂಪನಿ ಪ್ರಕಾರ ಅದರ 1.5 ಲೀಟರ್ ಡೀಸೆಲ್ ಎಂಜಿನ್ ಬಿಎಸ್6 ಮಾನದಂಡಗಳನ್ನು ಪೂರೈಸಲು ಪೂರಕವಾಗಿಲ್ಲ. ಅದೇ ರೀತಿ ಡೀಸೆಲ್ ವೇರಿಯೆಂಟ್ಗೆ ಡಿಮ್ಯಾಂಡ್ ಕೂಡ ಕಡಿಮೆಯಾಗಿದೆ ಎಂದು ಹೇಳಿದೆ. ಹೀಗಾಗಿ ಈ ಮಾಡೆಲ್ ಏಪ್ರಿಲ್ 1ರಿಂದ ಇರುವುದಿಲ್ಲ.
ಹೋಂಡಾ ಡಬ್ಲ್ಯುಆರ್ವಿ- Honda WRV
ಹೋಂಡಾ ಕಂಪನಿಯು ತನ್ನ ಕ್ರಾಸ್ ಓವರ್ ಹ್ಯಾಚ್ಬ್ಯಾಕ್ ಡಬ್ಲ್ಯುಆರ್ವಿ ಉತ್ಪಾದನೆ ಕೂಡ ನಿಲ್ಲಿಸಲಿದೆ. ಇದು 1.2 ಲೀಟರ್ನ ಪೆಟ್ರೋಲ್ ಹಾಗೂ 1.5 ಲೀಟರ್ನ ಡೀಸೆಲ್ ಎಂಜಿನ್ ಹೊಂದಿತ್ತು. ಈ ಕಾರು ಇನ್ನು ಮುಂದೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯ ಇರುವುದಿಲ್ಲ.
ಹೋಂಡಾ ಜಾಜ್- Honda Jazz
ಹೋಂಡಾ ಜಾಜ್ ಕಾರು ಕೂಡ ಏಪ್ರಿಲ್ 2023ರಿಂದ ಸಿಗುವುದಿಲ್ಲ. ಇದು 1.2 ಲೀಟರ್ ಐವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರು 88.7 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ.
ಮಹೀಂದ್ರಾ ಮೊರಾಜೊ- Mahindra Marazzo
ಮಹೀಂದ್ರಾ ಕಂಪನಿಯು ತನ್ನ ಮೊರೊಜಾ ಎಮ್ಪಿವಿ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಏಪ್ರಿಲ್ 2023ರಿಂದ ಮಾರುವ ಸಾಧ್ಯತೆಗಳಿಲ್ಲ. ಈ ಕಾರು 1.5 ಲೀಟರ್ನ ಡೀಸೆಲ್ ಎಂಜಿನ್ ಹೊಂದಿದ್ದು 121 ಬಿಎಚ್ಪಿ ಪವರ್ ಹಾಗೂ 300 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ.