Site icon Vistara News

Mansoon 2023 : ಮಳೆಗಾಲದ ಸೇಫ್​ ಜರ್ನಿಗೆ ನಿಮ್ಮ ವಾಹನಗಳನ್ನು ಈ ರೀತಿ ಮೇಂಟೇನ್​ ಮಾಡಿ

Car Service Before Mansoon

#image_title

ಬೆಂಗಳೂರು: ಮಾನ್ಸೂನ್ ಶೀಘ್ರದಲ್ಲೇ ಭಾರತದಾದ್ಯಂತ ಆವರಿಸಲಿದೆ. ಬಳಿಕ ಎಲ್ಲಿ ನೋಡಿದರೂ ಮುಂಗಾರು ಮಳೆಯ ಹನಿಯ ಲೀಲೆ ಕಾಣಲಿದೆ. ನೀವೇನಾದರೂ ಕಾರು ಅಥವಾ ಇನ್ಯಾವುದಾದರೂ ವಾಹನದ ಮಾಲೀಕ ಅಥವಾ ಚಾಲಕರಾಗಿದ್ದರೆ ಮಳೆಗಾಲದಲ್ಲಿ ಕಾರಿನ ನಿರ್ವಹಣೆ ಹೇಗೆ ಎಂಬ ಚಿಂತೆ ಶುರುವಾಗಿರುತ್ತದೆ. ದೂರದ ಪ್ರಯಾಣವೇ ಆಗಲಿ ಸಿಟಿಯೊಳಗಿನ ಜರ್ನಿಯೇ ಆಗಿರಲಿ ಮಳೆಗಾಲದಲ್ಲಿ ವಾಹನ ಓಡಿಸುವಾಗ ಅಪಾಯ ಹೆಚ್ಚು. ಇಂಥ ಪರಿಸ್ಥಿತಿಗಳನ್ನು ತಪ್ಪಿಸಲು ಕೆಲವೊಂದು ಕನಿಷ್ಠ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಮೊದಲನೆಯದ್ದು ಮಳೆಗಾಲಕ್ಕೆ ಮೊದಲು ವಾಹನವನ್ನು ಪೂರ್ತಿಯಾಗಿ ಸರ್ವಿಸ್​ ಮಾಡಿಸುವುದು. ಹಾಗಾದರೆ ಮಾನ್ಸೂನ್ ಪ್ರಾರಂಭವಾಗುವ ಮೊದಲು ನೀವು ಪರಿಶೀಲಿಸಬೇಕಾದ ಅಥವಾ ಸರಿಪಡಿಸಬೇಕಾದ ಕೆಲವು ಪ್ರಮುಖ ಸಂಗತಿಗಳು ಈ ಕೆಳಗಿನಂತಿವೆ.

ಟೈರ್​ಗಳನ್ನು ಪರೀಕ್ಷಿಸಿ

ಟೈರ್​ಗಳ ಬಗ್ಗೆ ಕಾರಿನ ಮಾಲೀಕರು ನಿರ್ಲಕ್ಷ್ಯ ತಾಳುತ್ತಾರೆ. ಆದರೂ ಅವು ಬಹಳ ಮುಖ್ಯ ಮತ್ತು ಕಾರು ಚಾಲನೆ ಮಾಡುವ ವಿಧಾನದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ. ಮಳೆಗಾಲದಲ್ಲಿ ಸವಾರಿ ಮಾಡುವಾಗ ಸೂಕ್ತ ಪ್ರಮಾಣದಲ್ಲಿ ಥ್ರೆಡ್​ ಹೊಂದಿರುವ ಟೈರ್​​ಗಳು ಇರಲೇಬೇಕು. ಒಣಗಿರುವ ರಸ್ತೆಗಳಿಗೆ ಹೋಲಿಸಿದರೆ ಒದ್ದೆಯಾದ ರಸ್ತೆಗಳಲ್ಲಿ ಜಾರುವಿಕೆ ಜಾಸ್ತಿ. ಸರಿಯಾದ ಥ್ರೆಡ್​ ಇಲ್ಲದಿದ್ದರೆ ಬ್ರೇಕ್​ ಹಿಡಿಯವ ವೇಳೆ ಜೋರಾಗಿ ತಿರುಗಿಸಿದಾಗ ಕಾರು ಜಾರಿಕೊಂಡು ಹೋಗಿ ಅಪಘಾತಕ್ಕೆ ಒಳಗಾಗಬಹುದು. ಉತ್ತಮ ಥ್ರೆಡ್​ ಇದ್ದರೆ ರಸ್ತೆಯ ಮೇಲೆ ನಿಮ್ಮ ಕಾರಿನ ಹಿಡಿತ ಹೆಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಟೈರ್​​ಗಳಲ್ಲಿ ಥ್ರೆಡ್​​ವೇರ್ ಇಂಡಿಕೇಟರ್ ಇರುತ್ತದೆ. ಥ್ರೆಡ್​ಗಳ ನಡುವೆ ಒಂದು ಸಣ್ಣ ರಬ್ಬರ್ ಬಾರ್ ಇಟ್ಟಿರುತ್ತಾರೆ . ಟೈರ್ ರಬ್ಬರ್ ಸವೆದು ಹೋದ ಬಳಿಕ ಇಂಡಿಕೇಟರ್ ಕೂಡ ತೆಳುವಾಗುತ್ತದೆ. ಇದು ಟೈರ್​ಗಳನ್ನು ಬದಲಾಯಿಸುವ ಸಮಯ. ಹೀಗಾಗಿ ಮಳೆಗಾಲಕ್ಕೆ ಮೊದಲು ಸವೆದ ಟೈರ್​ಗಳನ್ನು ಬದಲಾಯಿಸಲೇಬೇಕು.

ಬ್ಯಾಟರಿ ಚಾರ್ಜ್​ ಸರಿಯಾಗಿದೆಯಾ ಚೆಕ್​ ಮಾಡಿ

ಸರಿಯಾಗಿ ಕೆಲಸ ಮಾಡುವ ಬ್ಯಾಟರಿಯನ್ನು ಹೊಂದಿರುವುದು ವರ್ಷದುದ್ದಕ್ಕೂ ಅಗತ್ಯವೇ ಆಗಿರುತ್ತದೆ. ಆದರೂ ಇದು ಮಳೆಗಾಲದಲ್ಲಿ ಇನ್ನಷ್ಟು ಹೆಚ್ಚಿನ ಆದ್ಯತೆ ಪಡೆಯುತ್ತದೆ. ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಚಾಲಕನ ಗೋಚರತೆ ಕಡಿಮೆಯಾಗುತ್ತದೆ. ಹೀಗಾಗಿ ಇತರ ಸಮಯಕ್ಕಿಂಗ ಹೆಚ್ಚಾಗಿ ವೈಪರ್​ ಹಾಗೂ ಹೆಡ್​ಲೈಟ್​ ಸೇರಿದಂತೆ ಇತರ ಲೈಟ್​​ಗಳನ್ನು ಬಳಬೇಕಾಗುತ್ತದೆ. ಇದು ಬ್ಯಾಟರಿಯ ಮೇಲಿನ ಒತ್ತಡ ಹೆಚ್ಚಿಸುತ್ತದೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಬ್ಯಾಟರಿ ಚಾರ್ಜಿಂಗ್​ ಸಾಮರ್ಥ್ಯ ಹಾಗೂ ಬಾಳಿಕೆಯನ್ನು ಪರೀಕ್ಷೆ ಮಾಡಿಕೊಳ್ಳಲೇಬೇಕು. ಸರಿಯಾಗಿರದಿದ್ದರೆ ಕಡ್ಡಾಯವಾಗಿ ಬದಲಾಯಿಸಬೇಕು.

ವೈರಿಂಗ್​ಗಳ ಪರೀಕ್ಷೆ ಮಾಡಿಸಿಕೊಳ್ಳಿ

ಮಳೆಗಾದಲ್ಲಿ ನಿಮ್ಮ ವಾಹದ ವೈರಿಂಗ್​​ಗಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಅಸಮರ್ಪಕ ವೈರಿಂಗ್ ಅಥವಾ ಇನ್ಸುಲೇಷನ್ ಟೇಪ್​ ಜಾರಿ ಹೋಗಿರುವ ಸಾಧ್ಯತೆಗಳು ಇದ್ದರೆ ತಕ್ಷಣ ರಿಪೇರಿ ಮಾಡಿಸಬೇಕು. ವೈರ್​ಗಳ ತೆರೆದ ಭಾಗವು ನೀರಿನ ಸಂಪರ್ಕಕ್ಕೆ ಬಂದಾಗ ಶಾರ್ಟ್​ ಸರ್ಕೀಟ್​, ಶಾಕ್​ ಸೇರಿದಂತೆ ನಾನಾ ರೀತಿಯ ಅಪಾಯಗಳು ಉಂಟಾಗಬಹುದು. ಆದ್ದರಿಂದ ಎದ್ದು ಕಾಣುತ್ತಿರುವ ಕೇಬಲ್​ಗಳನ್ನು ರಿಪೇರಿ ಮಾಡಿಸಬೇಕು. ಆಫ್ಟರ್​ ಮಾರ್ಕೆಟ್​ ಫಿಟ್​ಮೆಂಟ್​​ಗಳಿದ್ದರೆ ವೈರ್​​ಗಳು ಹೊರಗೆ ಕಾಣಿಸದಂತೆ ಸರಿಪಡಿಸಿಕೊಳ್ಳಬೇಕು.

ಲೈಟ್​ಗಳ ರಿಪೇರಿ ಕಡ್ಡಾಯ ಮಾಡಿಸಿ

ಹೆಡ್ ಲೈಟ್ ಗಳು, ಟೈಲ್​ಲೈಟ್​​ಗಳು ಫಾಗ್ ಲೈಟ್​​​ಗಳು ಮತ್ತು ಟರ್ನ್ ಇಂಡಿಕೇಟರ್​​ಗಳು ಸೇರಿದಂತೆ ನಿಮ್ಮ ವಾಹನದ ಎಲ್ಲ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಮಳೆಗಾಲಕ್ಕೆ ಮೊದಲು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದು ಹವಾಮನಕ್ಕೆ ಸಂಬಂಧಿಸದ ವಿಚಾರವಾಗಿದ್ದರೂ ಮಳೆಗಾಲದಲ್ಲಿ ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಭಾರಿ ಮಳೆ ಮತ್ತು ಮೋಡ ಕವಿದ ವಾತಾವರಣವು ಗೋಚರತೆಗೆ ತೊಂದರೆ ಮಾಡಿದರೆ, ಇತರ ವಾಹನಗಳ ಸವಾರರಿಗೆ ನಿಮ್ಮ ಇರುವಿಕ ಕಾಣಿಸಲು ದೀಪಗಳು ಸರಿಯಾಗಿ ಕೆಲಸ ಮಾಡಬೇಕಾಗುತ್ತದೆ.

ಇದನ್ನೂ ಓದಿ : Coastal Karnataka travel: ಮಳೆ ಬಂದಾಗ ಈ ಕರಾವಳಿ ತೀರದ ತಾಣಗಳಿಗೆ ನೀವು ಒಂದು ಟ್ರಿಪ್‌ ಹೋಗ್ಲೇಬೇಕು!

ಮಳೆಗಾಲಕ್ಕೆ ಮೊದಲು ಎಲ್ಲ ಲೈಟ್​ಗಳನ್ನು ಒಟ್ಟಿಗೆ ಆನ್​ ಮಾಡಿ. ಹೆಡ್​ಲೈಟ್​ ಸೇರಿದಂತೆ ಯಾವುದಾದರೂ ಲೈಟ್​​ಗಳು ಮಸುಕಾಗಿದೆ ಎಂದು ಅನಿಸಿದರೆ ಬಲ್ಟ್​ ಅಥವಾ ಲೈಟ್​ ಅನ್ನೇ ಬದಲಿಸಿ. ಲೈಟ್​​ಗಳನ್ನು ಏಕಕಾಲಕ್ಕೆ ಚಾಲನೆ ಮಾಡುವ ಮೂಲಕ ಬ್ಯಾಟರಿ ಲೈಫ್​ ಅನ್ನೂ ಪರೀಕ್ಷಿಸಬಹುದು. ಕೆಲವೊಂದು ಬಾರಿ ಲೈಟ್​​ನೊಳಗೆ ನೀರು ತುಂಬಿಕೊಳ್ಳುತ್ತದೆ. ಅಳವಡಿಕೆ ವೇಳೆ ಬಿರುಕ ಉಂಟಾಗಿದ್ದರೆ ಅಥವಾ ಕ್ಯಾಪ್​ ಸರಿಯಾಗಿ ಕೂತಿರದಿದ್ದರೆ ಇಂಥ ಸಮಸ್ಯೆ ಇರುತ್ತದೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಇವೆಲ್ಲವೂ ರಿಪೇರಿ ಆಗಲೇಬೇಕು.

ಬ್ರೇಕ್​​​ ಪ್ಯಾಡ್​ಗಳು ಬದಲಿಸಿ

ಒದ್ದೆಯಾದ ರಸ್ತೆಗಳು ಕಾರಿನ ಬ್ರೇಕಿಂಗ್ ಅಂತರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಬ್ರೇಕ್​ಗಳು ಎಲ್ಲ ಋತುವಿನಲ್ಲಿಯೂ ಚೆನ್ನಾಗಿರಬೇಕು ಎಂಬುದು ನಿಯಮ. ಆದರೆ, ಮಳೆಗಾದಲ್ಲಿ ಇದರ ಅಗತ್ಯ ಇನ್ನಷ್ಟು ಹೆಚ್ಚು. ಬ್ರೇಕ್​ ಪ್ಯಾಡ್​​ಗಳು ಅಥವಾ ಶೂಗಳು ಸವೆದು ಹೋಗಿದ್ದರೆ ನಿರೀಕ್ಷಿತ ಅಂತರದಲ್ಲಿ ವಾಹನವನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದೇ ರೀತಿ ಚಲನೆ ಏರುಪೇರಾಗಿ ಸ್ಕಿಡ್​ ಆಗುವ ಸಾಧ್ಯತೆಗಳೂ ಇರುತ್ತವೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಬ್ರೇಕ್​ ಚೆನ್ನಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಖಾಲಿ ರಸ್ತೆಯಲ್ಲಿ ಒಂದು ಬಾರಿ ವೇಗವಾಗಿ ಕಾರು ಚಲಾಯಿಸಿ ಜೋರಾಗಿ ಬ್ರೇಕ್​ ಒತ್ತಿ ನೋಡಿ. ಬ್ರೇಕ್​ ಪೆಡಲ್​ ಒಳಕ್ಕೆ ಹೋಗುತ್ತಿದೆ ಎಂದಾದರೆ ಸಮಸ್ಯೆ ಇದೆ ಎಂದರ್ಥ. ನಿಮ್ಮ ವಾಹನದ ಬ್ರೇಕಿಂಗ್ ಸಿಸ್ಟಮ್ ಅನ್ನು ವೃತ್ತಿಪರರ ಬಳಿ ಮಳೆಗಾಲಕ್ಕೆ ಮೊದಲು ಪರಿಶೀಲಿಸಿ. ಬೇಗ ಹಾಳಾದ ಭಾಗಗಳನ್ನು ಬದಲಿಸಿ.

ವೈಪರ್​ಗಳು, ವಾಷರ್​​ಗಳು ಸರಿಯಾಗಿರಲಿ

ಮಾನ್ಸೂನ್​ ಬರುವ ಮೊದಲ ವಾಹನದ ವೈಪರ್​​ಗಳು ಮತ್ತು ವಾಷರ್ ವ್ಯವಸ್ಥೆಯನ್ನು ಪರೀಕ್ಷಿಸಬೇಕು. ಇವೆರಡನ್ನೂ ಮಳೆಗಾಲದಲ್ಲಿ ಆಗಾಗ ಬದಲಿಸಬೇಕಾಗುತ್ತದೆ. ಕನ್ನಡಿಗೆ ಸ್ವಲ್ಪ ನೀರು ಹಾಕಿ ವೈಪರ್​ ಚಾಲನೆ ಮಾಡಿ ನೋಡಿ. ವಿಂಡ್ ಸ್ಕ್ರೀನ್ ಮೇಲೆ ಯಾವುದೇ ಕೆಸರು ಅಥವಾ ನೀರಿನ ಸಾಲುಗಳನ್ನು ಒರೆಸುತ್ತಿಲ್ಲ ಎಂದಾದರೆ ವೈಪರ್​ ಬ್ಲೇಡ್​ ಕೆಟ್ಟು ಹೋಗಿದೆ ಎಂದರ್ಥ. ತಕ್ಷಣವೇ ಬದಲಿಸಿ. ಬೇಸಿಗೆಯ ಬಿಸಿಗೆ ವೈಪರ್​ ಬ್ಲೇಡ್​ನ ರಬ್ಬರ್​​ನಲ್ಲಿ ಬಿರುಕು ಬಿಟ್ಟಿರುತ್ತದೆ. ಇಂಥ ಬ್ಲೇಡ್​ಗಳು ಮಳೆಗಾಲದಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ.

ವಾಷರ್​ಗಳು ವಿಂಡ್​ಶೀಲ್ಡ್​ ಗೆ ನೀರನ್ನು ಸರಿಯಾಗಿ ಸಿಂಪಡಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಿ. ಈ ವಾಷರ್​ಗಳ ತೂತಿನಲ್ಲಿ ಕೊಳೆ ನಿಂತು ಕಟ್ಟಿಕೊಂಡಿರುವ ಸಾಧ್ಯತೆಗಳಿರುತ್ತದೆ. ಹಾಗಿದ್ದರೆ ನೀರು ಸರಿಯಾಗಿ ಪಂಪ್ ಆಗುವುದಿಲ್ಲ. ಮಳೆಗಾಲಕ್ಕೆ ಮೊದಲು ಇದನ್ನೂ ಬದಲಿಸಬೇಕು ಹಾಗೂ ವಾಷರ್​ನ ನೀರಿನ ಮಟ್ಟವೂ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಿ..

ವಾಹನದಲ್ಲಿ ಸೋರಿಕೆ ಇದೆಯಾ ಪರೀಕ್ಷಿಸಿ

ಸನ್​​​ರೂಫ್ ಗಳು, ಕಿಟಕಿಗಳು ಅಥವಾ ವಿಂಡ್​​ಶೀಲ್ಡ್​​ನಂತಹ ಗಾಜಿನ ಭಾಗಗಳನ್ನು ವಾಹನಗಳಿಗೆ ಅಳವಡಿಸಲು ಸುತ್ತಲೂ ರಬ್ಬರ್​​ಗಳನ್ನು ಹಾಕಿರುತ್ತಾರೆ. ಬೇಸಿಗೆಯ ಬಿಸಿಗೆ ಇದು ಒಡೆದು ಹೋಗಿ ಮಳೆಗಾಲದಲ್ಲಿ ಸೋರಿಕೆಯಾಗಲು ಪ್ರಾರಂಭಿಸುವುದು ಅಸಾಮಾನ್ಯವೇನಲ್ಲ. ಹೀಗಾಗಿ ಮಳೆಗಾಲಕ್ಕೆ ಮೊದಲು ಸರ್ವಿಸ್​ ಮಾಡುವಾಗ ಈ ಭಾಗಗಳ ಬಗ್ಗೆ ಗಮನ ಇಡಿ.

ವಾಹನದ ಸುತ್ತಲೂ ಇರುವ ಡ್ರೈನೇಜ್​ ರಂಧ್ರಗಳು ಮುಚ್ಚಿಹೋಗಿರಬಹುದು. ಈ ಜಾಗದಲ್ಲಿ ನೀರು ಸಂಗ್ರಹವಾದರೆ ತುಕ್ಕು ಹಿಡಿಯಲು ಕಾರಣವಾಗಬಹುದು. ಸರ್ವಿಸ್ ಮಾಡಿಸುವ ಸಮಯದಲ್ಲಿ ಸೋರಿಕೆಯ ಮೂಲವನ್ನು ಆದಷ್ಟು ಬೇಗ ಗುರುತಿಸಿ ಅವುಗಳನ್ನು ಸರಿಪಡಿಸುವುದು ಒಳ್ಳೆಯದು.

ಕಿತ್ತು ಹೋಗಿದ್ದರೆ ಪೇಂಟಿಂಗ್ ಮಾಡಿ

ವಾಹನದ ಮೇಲೆ ನಿರಂತರವಾಗಿ ತೇವಾಂಶ ನಿಂತಿದ್ದರೆ ತುಕ್ಕು ಹಿಡಿಯಲು ಕಾರಣವಾಗುತ್ತದೆ. ಕಾರಿನ ಸುತ್ತಲಿನ ರಬ್ಬರ್ ಸೀಲ್​​ಗಲ್ಲಿ ಉಂಟಾಗುವ ಸೋರಿಕೆ ತುಕ್ಕು ಹಿಡಿಯುವ ಮೂಲ. ಪೇಂಟ್ ಕೋಟ್ ಹಾನಿಗೊಳಗಾದ ಸ್ಥಳಗಳಲ್ಲೂ ತುಕ್ಕು ಹಿಡಿಯಬಹುದು. ಇಂಥ ಜಾಗಗಳು ಇದ್ದರೆ ಮಳೆಗಾಲಕ್ಕೆ ಮೊದಲು ಬೇಗ ದುರಸ್ತಿ ಮಾಡುವುದು ಉತ್ತಮ. ನಿಮ್ಮ ಕಾರಿನ ಕೆಳಭಾಗವನ್ನು ಸ್ವಚ್ಛವಾಗಿ ಮತ್ತು ರಸ್ತೆಯ ಧೂಳು ಮತ್ತು ಧೂಳಿನಿಂದ ಮುಕ್ತವಾಗಿಡಬೇಕು. ಏಕೆಂದರೆ ಇವು ಚಾಸಿಸ್ ಸವೆತಕ್ಕೆ ಕಾರಣವಾಗಬಹುದು. ಕಾರು ತೊಳೆದ ನಂತ ಪಾಲಿಶ್ ಹಾಕಬೇಕು. ಇದು ನಿಮ್ಮ ಕಾರನ್ನು ಹೊಳೆಯುವ ಮತ್ತು ಹೊಸದಾಗಿ ಕಾಣುವಂತೆ ಮಾಡುತ್ತದೆ ಹಾಗೂ ತುಕ್ಕು ಹಿಡಿಯಂತೆ ನೋಡಿಕೊಳ್ಳುತ್ತದೆ.

ನಿಯಮಿತ ಕಡ್ಡಾಯ ಸರ್ವಿಸ್ ಮಾಡಿಸಿ

ನಿಮ್ಮ ಕಾರನ್ನು ಮಳೆಗಾಲಕ್ಕೆ ಮೊದಲು ಕಡ್ಡಾಯ ಸರ್ವಿಸ್ ಮಾಡಿಸಿ. ಮೇಲೆ ಪಟ್ಟಿ ಮಾಡಿರುವ ಸಮಸ್ಯೆಗಳನ್ನು ಸರ್ವಿಸ್​ ಸ್ಟೇಷನ್​ನಲ್ಲಿ ಪತ್ತೆ ಮಾಡಬಹುದು. ನಿಮ್ಮ ಕಣ್ಣಿಗೆ ಬೀಳದ ಅಥವಾ ಗುರುತಿಸಲ ಸಾಧ್ಯವಾಗದ ಸಮಸ್ಯೆಗಳು ಇಲ್ಲಿ ಗೋಚರವಾಗುತ್ತವೆ. ವೃತ್ತಿಪರವಾಗಿ ಕಾರನ್ನು ಮಳೆಗಾಲಕ್ಕೆ ಸಿದ್ಧಪಡಿಸಿಕೊಳ್ಳಬಹುದು. ಅಂತಿಮವಾಗಿ ಉತ್ತಮ ಗುಣಮಟ್ಟದ ಪಾಲಿಶ್​ ಹಾಗೂ ಅಂಡರ್​ಕೋಟ್​​ಗಳೂ ಸಿಗಬಹುದು.

ಈ ಎಲ್ಲ ಸ್ಪೇರ್​ಗಳನ್ನು ಜತೆಗಿಟ್ಟುಕೊಳ್ಳಿ

ಮಾನ್ಸೂನ್​ ಸಂದರ್ಭದಲ್ಲಿ ಜೋರು ಮಳೆ ಏಕಾಏಕಿ ಬಿಸಿಲು ಇಂಥ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಮಳೆಗಾಲದ ಪ್ರಯಾಣದ ವೇಳೆ ಕೆಲವೊಂದು ಸ್ಪೇರ್​ ಪಾರ್ಟ್​​ಗಳನ್ನು ಜತೆಗಿಟ್ಟುಕೊಳ್ಳುವುದು ಉತ್ತಮ. ವೈಪರ್ ಬ್ಲೇಡ್​ಗಳು ಮತ್ತು ಫ್ಯೂಸ್​ನಂಥ ಭಾಗಗಳು ಇಟ್ಟುಕೊಳ್ಳಿ. ರಸ್ತೆ ಬದಿ ನಿಲ್ಲಿಸುವಾಗ ರಿಫ್ಲೆಕ್ಟರ್​ಗಳನ್ನು ಇಡಲು ಅದನ್ನೂ ತೆಗೆದುಕೊಂಡು ಹೋಗಿ. ವಾಹನಕ್ಕೆ ಸಂಬಂಧಿಸಿದ್ದು ಅಲ್ಲವಾದರೂ ಬಟ್ಟೆಗಳು, ಹೆಚ್ಚುವರಿ ಶೂಗಳು, ಛತ್ರಿ / ರೇನ್ ಕೋಟ್ ಮತ್ತು ಟವೆಲ್​ಗಳನ್ನು ಜತೆಗಿಟ್ಟುಕೊಳ್ಳಿ.

Exit mobile version