ನವ ದೆಹಲಿ: ಟೊಯೋಟಾ ಕಿರ್ಲೋಸ್ಕರ್ ಕಂಪನಿಯು ಈ ವರ್ಷದ ಸೆಪ್ಟೆಂಬರ್ ನಲ್ಲಿ ಭಾರತದದ ಕಾರು ಮಾರುಕಟ್ಟೆಗೆ ಮಾರುತಿ ಎರ್ಟಿಗಾ ಆಧಾರಿತ ರೂಮಿಯನ್ ಎಂಪಿವಿಯನ್ನು ಪರಿಚಯಿಸಲಿದೆ. ಕಾರು ತಯಾರಕರು ಈಗಾಗಲೇ ದಕ್ಷಿಣ ಆಫ್ರಿಕಾದಂತಹ ಮಾರುಕಟ್ಟೆಗಳಲ್ಲಿ ರೂಮಿಯನ್ ಕಾರನ್ನು ಮಾರಾಟ ಮಾಡುತ್ತಿದೆ. ಇದೀಗ ಭಾರತದಲ್ಲೂ ಮಾರುಕಟ್ಟೆ ಕಂಡುಕೊಳ್ಳುವುದಕ್ಕೆ ಪ್ರಯತ್ನ ಮಾಡಲಿದ್ದು, ಮಾರುತಿ ಜತೆ ಒಪ್ಪಂದ ಮಾಡಿಕೊಂಡಿದೆ. ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಈ ಕಾರನ್ನು ಉತ್ಪಾದಿಸಿ ಟೋಯೋಟಾ ಕಂಪನಿಗೆ ಪೂರೈಕೆ ಮಾಡಲಿದೆ.
ರೂಮಿಯನ್ 2021 ರ ಅಕ್ಟೋಬರ್ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮಾರಾಟಕ್ಕೆ ಇಳಿದಿತ್ತು. ತಯಾರಕರು ಅದೇ ತಿಂಗಳಲ್ಲಿ ಭಾರತದಲ್ಲಿ ಆ ಹೆಸರಿಗೆ ಟ್ರೇಡ್ಮಾರ್ಕ್ ಸಹ ಸಲ್ಲಿಸಿದ್ದಾರೆ. ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಕ್ರಾಸ್ ಮತ್ತು ವೆಲ್ಫೈರ್ ಕಾರುಗಳನ್ನು ಒಳಗೊಂಡಿರುವ ಟೋಯೋಟಾ ಕಂಪನಿಯ ಪಾಲಿಗೆ ರೂಮಿಯಾನ್ ಭಾರತದಲ್ಲಿ ನಾಲ್ಕನೇ ಎಂಪಿವಿಯಾಗಿದೆ. ಇದೇ ವೇಳೆ ವೆಲ್ಫೈರ್ ಎಂಪಿವಿ ಶೀಘ್ರದಲ್ಲೇ ಸಂಪೂರ್ಣ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಇಳಿಯುವುದಕ್ಕೆ ಸಜ್ಜಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾಗುತ್ತಿರುವ ರೂಮಿಯನ್ ಎಂಪಿವಿ ಭಾರತದಲ್ಲಿ ಮಾರಾಟವಾಗುವ ಎರ್ಟಿಗಾವನ್ನೇ ಹೋಲುತ್ತದೆ. ಸುಜುಕಿಯ ಬದಲಿಗೆ ವಿಭಿನ್ನ ಗ್ರಿಲ್, ವಿಶಿಷ್ಟ ಅಲಾಯ್ ವ್ಹೀಲ್ ವಿನ್ಯಾಸ ಮತ್ತು ಟೊಯೊಟಾ ಲೋಗೊಗಳನ್ನು ಹೊರತುಪಡಿಸಿದರೆ, ಒಳಭಾಗದಲ್ಲಿ ಸಹ ಎರಡೂ ಎಂಪಿವಿಗಳು ಒಂದೇ ರೀತಿಯ ಡ್ಯಾಶ್ಬೋರ್ಡ್ ಲೇಔಟ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪ್ಲೇಟ್ಗಳನ್ನು ಹೊಂದಿವೆ. ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾಗುವ ರೂಮಿಯನ್ ಎರ್ಟಿಗಾದ ಬೀಜ್ ಇಂಟಿರಿಯರ್ ಗೆ ಹೋಲಿಸಿದರೆ ಆಲ್-ಬ್ಲ್ಯಾಕ್ ಇಂಟೀರಿಯರ್ ನೊಂದಿಗೆ ಪ್ರತ್ಯೇಕವಾಗಿದೆ. ಭಾರತೀಯ ಮಾದರಿಯು ಎರ್ಟಿಗಾಗೆ ಹೋಲುವ ಇಂಟೀರಿಯರ್ ಅನ್ನು ಹೊಂದಿದೆ.
ಯಾಂತ್ರಿಕವಾಗಿಯೂ, ರೂಮಿಯಾನ್ ಭಾರತದ ಎರ್ಟಿಗಾದ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದೆ. ಇದು 103 ಬಿಹೆಚ್ ಪಿ, 137 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಎಂಜಿನ್ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಅಥವಾ 6 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಸ್ವಲ್ಪ ಸಮಯದ ನಂತರ ಸಿಎನ್ಜಿ ಪವರ್ ಟ್ರೇನ್ ಆಯ್ಕೆಯನ್ನು ಪರಿಚಯಿಸುವ ಸಾಧ್ಯತೆಗಳಿವೆ. ಎರ್ಟಿಗಾದಂತೆ, ರೂಮಿಯಾನ್ ಕೂಡ ಮೂರು ಸಾಲಿನ ಎಂಟು ಆಸನಗಳ ಕಾನ್ಫಿಗರೇಶನ್ನಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ : Harley-Davidson : ಐಷಾರಾಮಿ ಹಾರ್ಲೆ ಡೇವಿಡ್ಸನ್ ಬೈಕ್ ಕೇವಲ 2.29 ಲಕ್ಷ ರೂಪಾಯಿಗೆ ಭಾರತದಲ್ಲಿ ಬಿಡುಗಡೆ
ಟೊಯೊಟಾ ಮತ್ತು ಸುಜುಕಿ ಭಾರತದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಅದರ ಭಾಗವಾಗಿ ಸುಜುಕಿ ಕಂಪನಿಯು ರೂಮಿಯಾನ್ ಕಾರನ್ನು ಭಾರತದಲ್ಲಿ ಟೊಯೊಟಾಗೆ ಸರಬರಾಜು ಮಾಡಲಿದೆ. ಇದು ಟೋಯೋಟಾ ಪಡೆಯಲಿರುವ ಮಾರುತಿಯ ಎರಡನೇ ಉತ್ಪನ್ನವಾಗಿದೆ. ಈ ಹಿಂದೆ ಮಾರುತಿಯ ಬಲೆನೊವನ್ನು ಆಧರಿಸಿ ಗ್ಲಾನ್ಜಾ ಕಾರನ್ನು ನೀಡಲಾಗಿತ್ತು. ಆದರೆ ವಿದೇಶಗಳಲ್ಲಿ ಟೋಯೊಟಾ ಮಾರುತಿಯ ಸಿಯಾಜ್ ಕಾರನ್ನು ಬೆಲ್ಟಾ, ಸೆಲೆರಿಯೊವನ್ನು ಆದರಿಸಿ ವಿಟ್ಜ್ ಮತ್ತು ಬಲೆನೊವನ್ನು ಸ್ಟಾರ್ಲೆಟ್ ಆಗಿ ಮಾರಾಟ ಮಾಡುತ್ತಿದೆ. ಮಾರುತಿ ಉತ್ಪನ್ನವಾಗಿರುವ ಗ್ರ್ಯಾಂಡ್ ವಿಟಾರಾವನ್ನು ಕರ್ನಾಟಕದ ಬಿಡದಿಯಲ್ಲಿರುವ ತನ್ನ ಘಟಕದಲ್ಲಿ ಟೋಯೋಟಾ ನಿರ್ಮಾಣ ಮಾಡುತ್ತಿದೆ.
ಟೊಯೊಟಾದಿಂದ ಮಾರುತಿಯಾಗಿ ಭಾರತದಲ್ಲಿ ಮಾರಾಟವಾಗುವ ಎರಡನೇ ಉತ್ಪನ್ನವೆಂದರೆ ಇತ್ತೀಚೆಗೆ ಬಿಡುಗಡೆಯಾದ ಇನ್ವಿಕ್ಟೋ ಎಂಪಿವಿ. ಇದು ಇನ್ನೋವಾ ಹೈಕ್ರಾಸ್ ಅನ್ನು ಆಧರಿಸಿದೆ. ಹೆಚ್ಚುವರಿಯಾಗಿ, ಯುಕೆಯಂತಹ ಮಾರುಕಟ್ಟೆಗಳಲ್ಲಿ, ಟೊಯೋಟಾ ಆರ್ರವಿ 4ಎಸ್ ಯುವಿಯನ್ನು ಸುಜುಕಿಗೆ ಎ-ಕ್ರಾಸ್ ಎಸ್ ಯುವಿಯಾಗಿ ಮತ್ತು ಕರೊಲಾ ವ್ಯಾಗನ್ ಅನ್ನು ಸುಜುಕಿ ಸ್ವಾಸ್ ಆಗಿ ಮಾರಾಟ ಮಾಡಲಾಗುತ್ತದೆ.