Site icon Vistara News

Bajaj Pulsar P150 | ಹೊಸ ಪಲ್ಸರ್‌ನಲ್ಲಿರುವ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ

ಬೆಂಗಳೂರು : ಬಜಾಜ್‌ ಕಂಪನಿಯ ಪಲ್ಸರ್‌ ಬೈಕ್‌ಗೂ ಭಾರತೀಯ ಕ್ರಿಕೆಟ್‌ ಪ್ರೇಮಿಗಳಿಗೂ ಬಿಡಿಸಲಾಗದ ಅನುಬಂಧ. 2001ರಲ್ಲಿ ಈ ಬೈಕ್‌ ಮಾರುಕಟ್ಟೆಗೆ ಬಿಡುಗಡೆಗೊಂಡ ಬಳಿಕ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು ಎಲ್ಲರ ಪ್ರೀತಿಯ ಪಲ್ಸರ್‌ . ಅದುವರೆಗೆ ೧೦೦ ಸಿಸಿಯ ಬೈಕ್‌ಗಳ ಸವಾರಿಯಲ್ಲಿ ಸುಖ ಕಾಣುತ್ತಿದ್ದ ಮಂದಿಗೆ ಹೊಸ ೧೫೦ ಸಿಸಿ ಸಾಮರ್ಥ್ಯದ ಪಲ್ಸರ್‌ ಪರಮಾನಂದ ಕೊಟ್ಟಿತ್ತು. ಹೀಗೆ ೨೦೦೧ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆದ ಬಜಾಜ್‌ ಪಲ್ಸರ್‌ ಆ ಬಳಿಕ ಹಲವು ಬಾರಿ ಬದಲಾವಣೆಗಳನ್ನು ಕಂಡಿದೆ. ಅಂತೆಯೇ ಕೆಲವು ದಿನಗಳ ಹಿಂದೆ ಬಜಾಜ್‌ ಕಂಪನಿಯು ಪಲ್ಸರ್‌ ಪಿ೧೫೦ (Bajaj Pulsar P150) ಎಂಬ ಸುಧಾರಿತ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಬೈಕ್‌ನಲ್ಲಿರುವ ಕೆಲವು ವಿಶೇಷತೆಗಳ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

ಹೊಸ ಫ್ಲಾಟ್‌ಫಾರ್ಮ್‌ ಮೇಲೆ ನಿರ್ಮಾಣ

ನೂತನ Bajaj Pulsar P150 ಬೈಕ್‌ ಅನ್ನು ಬಜಾಜ್‌ ಪಲ್ಸರ್‌ ಎನ್‌೨೫೦, ಎಫ್‌೨೫೦, ಎನ್‌೧೬೦ ಫ್ಲಾಟ್‌ಫಾರ್ಮ್‌ ಮೇಲೆ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಬೈಕ್‌ನ ಒಟ್ಟು ತೂಕವನ್ನು ೧೦ ಕೆ.ಜಿ ಇಳಿಸಲಾಗಿದ್ದು ಪವರ್‌ ಹಾಗೂ ತೂಕದ ಅನುಪಾತವನ್ನು ಹೊಂದಿಕೆ ಮಾಡಲು ಸಹಕಾರಿಯಾಗಿದೆ. ಇದರಿಂದ ವೇಗ ವೃದ್ಧಿ ಹಾಗೂ ಹೆಚ್ಚು ಪವರ್‌ ಪಡೆಯಲು ಸಾಧ್ಯವಾಗಿದೆ.

ಹೊಸ ಎಂಜಿನ್‌

ನೂತನ Bajaj Pulsar P150 ಬೈಕ್‌ನಲ್ಲಿ ಹೊಚ್ಚ ಹೊಸ ೧೪೯ ಸಿಸಿಯ ಎಂಜಿನ್ ಬಳಸಲಾಗಿದೆ. ಇದು ಏರ್‌ ಕೂಲ್ಡ್‌ ಎಂಜಿನ್ ಆಗಿದೆ. ಇದು ೮೫೦೦ ಆರ್‌ಪಿಎಮ್‌ನಲ್ಲಿ ೧೪.೫ ಎಚ್‌ಪಿ ಪವರ್‌ ಬಿಡುಗಡೆ ಮಾಡುತ್ತದೆ ಹಾಗೂ ೬೦೦೦ ಆರ್‌ಪಿಎಮ್‌ನಲ್ಲಿ ೧೩.೫ ಎನ್‌ಎಮ್‌ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಇದು ೫ ಸ್ಪೀಡ್‌ ಗೇರ್‌ ಬಾಕ್ಸ್ ಹೊಂದಿದೆ. ಎಲೆಕ್ಟ್ರಿಕ್‌ ಹಾಗೂ ಕಿಕ್‌ ಸ್ಟಾರ್ಟ್‌ ಆಯ್ಕೆಯೂ ನೀಡಲಾಗಿದೆ. ದೂರದ ಪ್ರಯಾಣ ಹಾಗೂ ಸಿಟಿ ರೈಡ್‌ಗೆ ಸೂಕ್ತವಾಗಿದೆ.

ವೇರಿಯೆಂಟ್‌ಗಳು ಯಾವುವು?

ಸಿಂಗಲ್‌ ಡಿಸ್ಕ್‌ ಬ್ರೇಕ್ ಹಾಗೂ ಡ್ಯುಯಲ್‌ ಡಿಸ್ಕ್‌ ಬ್ರೇಕ್‌ ಎಂಬ ಎರಡು ಆಯ್ಕೆಯಲ್ಲಿ ಬೈಕ್‌ ಲಭ್ಯವಿದೆ. ಸಿಂಗಲ್‌ ಡಿಸ್ಕ್ ವೇರಿಯೆಟ್‌ನಲ್ಲಿ ಒಂದೇ ಸೀಟ್‌ ಹಾಗೂ ಒಂದೇ ಹ್ಯಾಂಡಲ್‌ ಬಾರ್ ಇದೆ. ಆದರೆ, ಡ್ಯುಯಲ್‌ ಡಿಸ್ಕ್‌ ಹೊಂದಿರುವ Bajaj Pulsar P150 ಬೈಕ್‌ನಲ್ಲಿ ಸ್ಪ್ಲಿಟ್‌ ಸೀಟ್‌ ಹಾಗೂ ಕ್ಲಿಪ್‌ ಆನ್ ಹ್ಯಾಂಡಲ್‌ಬಾರ್‌ ಬರುತ್ತದೆ. ಹೀಗಾಗಿ ಬೈಕ್‌ ಅತ್ಯಾಕರ್ಷಕ ನೋಟ ಪಡೆಯುತ್ತದೆ. ಎರಡರ ದರವೂ ಭಿನ್ನವಾಗಿದೆ.

ಏನೆಲ್ಲ ಫೀಚರ್‌ಗಳಿವೆ?

ಆಧುನಿಕ ಪೀಳಿಗೆಯ ಪಲ್ಸರ್‌ ಬೈಕ್‌ಗಳಲ್ಲಿ ಬರುವ ಇನ್ಫಿನಿಟಿ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್ ಅನ್ನು ಹೊಸ Bajaj Pulsar P150 ಬೈಕ್‌ನಲ್ಲೂ ನೀಡಲಾಗಿದೆ. ಇದು ಸೆಮಿ ಡಿಜಿಟಲ್‌ ಮೀಟರ್ ಆಗಿದ್ದು, ಟ್ಯಾಕೊ ಮೀಟರ್‌ ಮಧ್ಯದಲ್ಲಿದೆ. ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ನಲ್ಲಿ ಗೇರ್‌ ಪೊಸಿಷನ್‌, ಇಂಡಿಕೇಟರ್‌ ಹಾಗೂ ಕ್ರಮಿಸಿದ ದೂರವನ್ನು ನೋಡಬಹುದು. ಹೆಚ್ಚುವರಿಯಾಗಿ ಇದರಲ್ಲಿ ಯುಎಸ್‌ಬಿ ಸಾಕೆಟ್‌ ನೀಡಲಾಗಿದ್ದು ಮೊಬೈಲ್‌ ಚಾರ್ಜ್‌ ಮಾಡಬಹುದಾಗಿದೆ. ಈ ಬೈಕ್‌ನಲ್ಲಿ ಎಲ್‌ಇಡಿ ಹೆಡ್‌ಲೈಟ್‌ ಹಾಗೂ ಟೇಲ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಜತೆಗೆ ಸಿಂಗಲ್‌ ಚಾನೆಲ್‌ ಎಬಿಎಸ್‌ ಕೂಡ ಇದೆ.

ನಿರ್ಮಾಣ ಹೇಗಿದೆ?

ಮುಂಬದಿಯಲ್ಲಿ ೩೧ ಎಮ್‌ಎಮ್‌ ಟೆಲಿಸ್ಕೋಪಿಕ್‌ ಫೋರ್ಕ್‌ ನೀಡಲಾಗಿದ್ದು, ಹಿಂದೆ ಮೋನೊಕಾಕ್‌ ಸಸ್ಪೆನ್ಷನ್‌ ಕೊಡಲಾಗಿದೆ. ಮುಂಬದಿಯಲ್ಲಿ ೨೬೦ ಎಮ್‌ಎಮ್ ಡಿಸ್ಕ್‌ ಬ್ರೇಕ್‌ ಹಾಗೂ ಹಿಂಬದಿಯಲ್ಲಿ ೨೬೦ ಎಮ್‌ಎಮ್ ಡಿಸ್ಕ್‌ ಅಥವಾ ೧೬೦ ಎಮ್‌ಎಮ್‌ ಗಾತ್ರದ ಡ್ರಮ್‌ ಬ್ರೇಕ್‌ ನೀಡಲಾಗಿದೆ. ಸಿಂಗಲ್‌ ಡಿಸ್ಕ್‌ ಬೈಕ್‌ನಲ್ಲಿ ಮುಂಬದಿಯಲ್ಲಿ ೮೦/೧೦೦-೧೭ ಗಾತ್ರದ ಟಯರ್‌ ಹಾಗೂ ಹಿಂಬದಿಯಲ್ಲಿ ೧೦೦/೯೦-೧೭ ಇಂಚಿನ ಟೈರ್‌ ಕೊಟ್ಟಿದ್ದಾರೆ. ಡ್ಯುಯಲ್‌ ಡಿಸ್ಕ್‌ ಹೊಂದಿರುವ ಬೈಕ್‌ನಲ್ಲಿ ೯೦/೯೦/ ೧೭ ಹಾಗೂ ೧೧೦/೯೦-೧೭ ಇಂಚಿನ ಟೈರ್‌ ನೀಡಲಾಗಿದೆ.

ಬೆಲೆ ಎಷ್ಟು?

ಸಿಂಗಲ್‌ ಡಿಸ್ಕ್‌ Bajaj Pulsar P150 ಬೈಕ್‌ಗೆ ೧.೩೩, ೮೫೬ ರೂಪಾಯಿ (ಡೆಲ್ಲಿ ಎಕ್ಸ್‌ಶೋರೂಮ್‌) ಹಾಗೂ ಟ್ವಿನ್ ಡಿಸ್ಕ್‌ ಬೈಕ್‌ಗೆ ೧.೩೭, ೧೬೬ ರೂಪಾಯಿ (ಡೆಲ್ಲಿ ಎಕ್ಸ್‌ಶೋರೂಮ್‌) ಬೆಲೆಯಿದೆ.

ಇದನ್ನೂ ಓದಿ | Harley- Davidson | ಭಾರತಕ್ಕೆ ಮರಳಲಿದೆ ಅಮೆರಿಕದ ಬೈಕ್ ಬ್ರಾಂಡ್ ಹಾರ್ಲೆ- ಡೇವಿಡ್ಸನ್‌; ಹೀಗಿದೆ ಯೋಜನೆ?

Exit mobile version