Site icon Vistara News

HUD Display | ಹೊಸ ಕಾರುಗಳಲ್ಲಿರುವ ಎಚ್​ಯುಡಿ ಡಿಸ್​ಪ್ಲೆ ಎಂದರೇನು? ಇಲ್ಲಿದೆ ವಿವರಣೆ

HUD display

ಬೆಂಗಳೂರು : ಮಾರುತಿ ಸುಜುಕಿ ಕಂಪನಿಯ ನೂತನ ಬಲೆನೊ ಕಾರುಗಳಲ್ಲಿ ಎಚ್​ಯುಡಿ ಡಿಸ್​ಪ್ಲೇ ಫೀಚರ್​ ಕೊಡಲಾಗಿದೆ. ಗ್ರಾಹಕರು ಈ ಫೀಚರ್​ ಬಗ್ಗೆ ಅತ್ಯಾಸಕ್ತಿ ತೋರಿಸುತ್ತಿದ್ದಾರೆ. ಹಿಂದೆಲ್ಲ ಈ ಫೀಚರ್​ಗಳು ಐಷಾರಾಮಿ ಕಾರುಗಳಲ್ಲಿ ಮಾತ್ರ ಲಭ್ಯವಿರುತ್ತಿತ್ತು. ಆದರೀಗ ಸಣ್ಣಪುಟ್ಟ ಕಾರುಗಳಲ್ಲೂ ಈ ಫೀಚರ್​ ಲಭ್ಯವಾಗುತ್ತಿದೆ. ಹಾಗಾದರೆ ಎಚ್​​ಯುಡಿ ಡಿಸ್​ಪ್ಲೇ ಎಂದರೇನ? ಅದು ಜನಪ್ರಿಯತೆ ಪಡೆಯಲು ಕಾರಣವೇನು ಎಂಬುದನ್ನು ನೋಡೋಣ.

ವಿಂಡ್​ಸ್ಟ್ರೀನ್​ ಅಥವಾ ಇನ್ಯಾವುದೇ ಪಾರದರ್ಶಕ ಡಿಸ್​ಪ್ಲೇ ಮೂಲಕ ಡ್ರೈವರ್​ಗೆ ಪ್ರಮುಖ ಮಾಹಿತಿಯನ್ನು ತೋರಿಸುವ ತಾಂತ್ರಿಕತೆಯನ್ನು ಎಚ್​ಯುಡಿ ಡಿಸ್​​ಪ್ಲೇ ಎಂದು ಕರೆಯಲಾಗುತ್ತದೆ. ಅಂದರೆ ಚಾಲಕರು ರಸ್ತೆಯಿಂದ ತಮ್ಮ ತಮ್ಮ ನೋಟವನ್ನು ಬದಲಿಸದೇ ಎದುರಿಗೆ ಇರುವ ಕನ್ನಡಿಯಲ್ಲೇ ಅಗತ್ಯ ಮಾಹಿತಿ ನೋಡುವುದಕ್ಕೆ ಸಾಧ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಅಗತ್ಯ ಸುರಕ್ಷತಾ ಫೀಚರ್​ ಎಂದೇ ಪರಿಗಣಿಸಲಾಗಿದೆ.

ಎಲ್ಲಿಂದ ಬಂತು ಟೆಕ್ನಾಲಜಿ?

ಎಚ್​ಯುಡಿ ಡಿಸ್​ಪ್ಲೆ ಆರಂಭದಲ್ಲಿ ಯುದ್ಧ ವಿಮಾನಗಳಲ್ಲಿ ಬಳಕೆಯಾಗುತ್ತಿತ್ತು. ಫೈಟರ್​ಜೆಟ್​ಗಳ ಪೈಲೆಟ್​ಗಳಿಗೆ ದೃಷ್ಟಿ ಬದಲಿಸಲು ಅವಕಾಶ ಇಲ್ಲದ ಕಾರಣ ಇದರ ಆವಿಷ್ಕಾರ ಅನಿವಾರ್ಯವಾಯಿತು. ಏವಿಯೇಷನ್​ ಹಾಗೂ ಆಟೋಮೊಬೈಲ್ ಕ್ಷೇತ್ರವು ಪರಸ್ಪರ ಸಂಬಂಧ ಹೊಂದಿರುವ ಕಾರಣ ಅಲ್ಲಿನ ತಾಂತ್ರಿಕತೆ ಬಹುಬೇಗ ವಾಹನಗಳಲ್ಲೂ ಕಾಣಿಸಿಕೊಳ್ಳುತ್ತವೆ. ಅಂತೆಯೇ ಎಚ್​​ಯುಡಿ ಡಿಸ್​ಪ್ಲೇ ಕೂಡ ಕಾರುಗಳಲ್ಲಿ ಕಾಣಿಸಿಕೊಂಡಿತು. ಮೊದಲಿಗೆ ಐಷಾರಾಮಿ ಕಾರುಗಳಲ್ಲಿ ಮಾತ್ರ ಎಚ್​ಯುಡಿ ಡಿಸ್​ಪ್ಲೇ ನೀಡಲಾಗುತ್ತಿತ್ತು. ಈ ತಂತ್ರಜ್ಞಾನ ಲಭ್ಯತೆ ಹೆಚ್ಚಾದ ಹಾಗೆ ಎಲ್ಲ ಸಣ್ಣಪುಟ್ಟ ಕಾರುಗಳಲ್ಲಿಯೂ ಲಭ್ಯವಾಗತೊಡಗಿತು.

1940ರಲ್ಲಿ ಮೊದಲ ಬಾರಿಗೆ ಬ್ರಿಟಿಷ್​ ರಾಯಲ್​ ಏರ್​ಫೋರ್ಸ್​ ಎಚ್​ಯುಡಿ ತಂತ್ರಜ್ಞಾನವನ್ನು ಮೊದಲ ಬಾರಿಗೆ ಜಾರಿಗೆ ತಂದಿತು. 1980 ಅವಧಿಯಲ್ಲಿ ಅದು ಇನ್ನಷ್ಟು ಜನಪ್ರಿಯವಾಯಿತು. ಓಲ್ಡ್ಸ್​ಮೊಬೈಲ್​ ಕಟ್ಲಾಸ್​ ಕಾರಿನಲ್ಲಿ ಮೊದಲ ಬಾರಿಗೆ ಎಚ್​ಯುಡಿ ಡಿಸ್​ಪ್ಲೇ ಬಳಸಲಾಯಿತು. ಇಲ್ಲಿ ಕೇವಲ ಸ್ಪೀಡೋ ಮೀಟರ್​ ಮಾತ್ರ ನೋಡುವ ಅವಕಾಶ ಇತ್ತು. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದ ಬಳಿಕ ಜನರಲ್​ ಮೋಟಾರ್ಸ್​ ತನ್ನ ಕಾರುಗಳಲ್ಲಿ ಈ ತಂತ್ರಜ್ಞಾನ ಬಳಸಿಕೊಂಡಿತು. 1989ರಲ್ಲಿ ಜಪಾನ್ ಮೂಲದ ನಿಸ್ಸಾನ್ ಕಂಪನಿ ಎಚ್​ಯುಡಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತು. ಅಲ್ಲಿಂದ ಐಷಾರಾಮಿ ಹಾಗೂ ಮಧ್ಯಮ ಬಜೆಟ್​ನ ಕಾರುಗಳಲ್ಲಿ ಇದು ಲಭ್ಯವಾಯಿತು.

ಎಚ್​ಯುಡಿ ಬಗೆಗಳು

ಎರಡು ಬಗೆಯ ಎಚ್​ಯುಡಿ ಡಿಸ್​ಪ್ಲೇ ಪ್ರಸ್ತುತ ಲಭ್ಯವಿದೆ. ಒಂದು ಪ್ರೊಜೆಕ್ಷನ್ ಆಧಾರಿತ ಡಿಸ್​ಪ್ಲೇ ಹಾಗೂ ಇನ್ನೊಂದು ರಿಫ್ಲೆಕ್ಷನ್ ಆಧಾರಿತ ಡಿಸ್​ಪ್ಲೇ. ಪ್ರೊಜೆಕ್ಷನ್​ನಲ್ಲಿ ಎಲ್​ಇಡಿ ಅಥವಾ ಲೇಸರ್ ಲೇಸರ್​ ಲೈಟ್​​ಗಳನ್ನು ಬಳಸಿಕೊಂಡು ಡ್ರೈವಿಂಗ್​ ಮಾಹಿತಿಯನ್ನು ನೀಡಲಾಗುತ್ತದೆ. ಇದರಿಂದ ಡಿಸ್​ಪ್ಲೇ ಹೆಚ್ಚು ಬ್ರೈಟ್​ ಆಗಿರುತ್ತದೆ ಹಾಗೂ ಚಾಲಕನಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇದು ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ರಿಪ್ಲೆಕ್ಷನ್​ ಆಧರಿತ ಎಚ್​ಯುಡಿ ಇನ್ನೊಂದು ತಂತ್ರಜ್ಞಾನ. ಇದನ್ನು ಪಾರದರ್ಶಕ ಕನ್ನಡಿಯಲ್ಲಿ ಮಾಡಲಾಗುತ್ತದೆ. ಇದು ಪ್ರೊಜೆಕ್ಷನ್​ ಆಧಾರಿತ ಎಚ್​ಯುಡಿಯಷ್ಟು ಪರಿಣಾಮಕಾರಿಯಲ್ಲ. ಇದು ಹೆಚ್ಚುವರಿಗೆ ಲೈಟ್​ ಬಿಡುಗಡೆ ಮಾಡುವ ಕಾರಣ ಚಾಲಕರ ಕಣ್ಣಿಗೆ ಕೊಂಚ ಅಡಚಣೆ ಉಂಟು ಮಾಡುತ್ತವೆ. ಆದರೆ ಇದು ಅಗ್ಗದ ದರದಲ್ಲಿ ಲಭ್ಯವಿರುವ ತಂತ್ರಜ್ಞಾನ ಆಗಿರುವ ಕಾರಣ ಮಧ್ಯಮ ಗಾತ್ರದ ಕಾರುಗಳಿಗೂ ಅಳವಡಿಸಲು ಸಾಧ್ಯವಾಗುತ್ತಿತ್ತು. ಇದನ್ನು ಪ್ಲಗ್​ ಆಂಡ್​ ಪ್ಲೇ ಮೂಲಕ ಅಳವಡಿಸಲು ಸಾಧ್ಯವಿರುವ ಕಾರಣ ಹೆಚ್ಚಿನ ಕ್ಯಾಲಿಬರೇಷನ್​ಬೇಕಾಗಿಲ್ಲ.

ಲಾಭವೇನು?

ಇದು ಕಾರಿನಲ್ಲಿ ಬರುವ ಸುರಕ್ಷತಾ ಫೀಚರ್​. ಚಾಲಕ ತನ್ನ ಕಣ್ಣನ್ನು ರಸ್ತೆಯಿಂದ ಹೊರಗೆ ಸರಿಸದೇ ಮಾಹಿತಿಯನ್ನು ನೋಡಲು ಈ ಡಿಸ್​ಪ್ಲೇಯಿಂದ ಸಾಧ್ಯವಿದೆ. ಇದರಿಂದ ಸಂಭಾವ್ಯ ಅವಘಡಗಳನ್ನು ತಪ್ಪಿಸಬಹುದು ಎನ್ನಲಾಗುತ್ತದೆ. ಸುಧಾರಿತ ಎಚ್​ಯುಡಿಯಲ್ಲಿ ನ್ಯಾವಿಗೇಷನ್​, ವಾರ್ನಿಂಗ್ ಲೈಟ್​, ಎಂಜಿನ್​ ಸೇರಿದಂತೆ ಎಲ್ಲ ಮಾಹಿತಿಯನ್ನೂ ಇಲ್ಲಿ ನೋಡುವುದಕ್ಕೆ ಸಾಧ್ಯವಿದೆ.

ಭಾರತದಲ್ಲಿ ಎಚ್​​ಯುಡಿ ಇರುವ ಕಾರುಗಳು

ಭಾರತದಲ್ಲಿ 35ಕ್ಕೂ ಅಧಿಕ ಕಾರು ಬ್ರಾಂಡ್​ಗಳಲ್ಲಿ ಎಚ್​ಯುಡಿ ಫೀಚರ್​ ಇದೆ. ಮರ್ಸಿಡೀಸ್​ ಬೆಂಜ್​, ಬಿಎಂಡಬ್ಲ್ಯು, ಔಡಿ, ಲೆಕ್ಸಸ್​, ಜಾಗ್ವರ್​, ಲ್ಯಾಂಡ್​ ರೋವರ್​, ವೋಲ್ವೊ ಮತ್ತು ಮಿನಿಯಂಥ ಐಷಾರಾಮಿ ಕಾರುಗಳಲ್ಲಿ ಇದು ಕಡ್ಡಾಯವಾಗಿದೆ. ಕಿಯಾ ಸೆಲ್ಟೋಸ್​, ಟೊಯೊಟಾ ಕ್ಯಾಮ್ರಿ, ಮಾರುತಿ ಸುಜುಕಿ ಬಲೆನೊದಲ್ಲೂ ನೀಡಲಾಗಿದೆ.

ಇದನ್ನೂ ಓದಿ| Compact SUV’s | ಎಸ್​ಯುವಿ ಅಭಿಮಾನಿಗಳಿಗೆ ಸಿಹಿ ಸುದ್ದಿ; ಶೀಘ್ರವೇ ಈ ಎಲ್ಲ ಕಾರುಗಳು ಬೆಲೆ ಇಳಿಕೆ?

Exit mobile version