ಮುಂಬಯಿ: ಫ್ರೆಂಚ್ ಮೂಲಕ ಕಾರು ತಯಾರಿಕಾ ಕಂಪನಿ ಸಿಟ್ರಾನ್ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಕಾರು ಸಿಟ್ರಾನ್ಇ-ಸಿ3 ಭಾರತೀಯ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಿದೆ. ನಾಲ್ಕು ವೇರಿಯೆಂಟ್ಗಳಲ್ಲಿ ಲಭ್ಯವಾಗುವ ಈ ಕಾರಿನ ಆರಂಭಿಕ ಬೆಲೆ 11.50 ಲಕ್ಷ ರೂಪಾಯಿಗಳು. ಏತನ್ಮಧ್ಯೆ, 2022ರಲ್ಲಿ ಭಾರತ ಮೂಲದ ಕಾರು ಕಂಪನಿ ಟಾಟಾ ಮೋಟಾರ್ಸ್ (Tata Motors) ತನ್ನ ಸೆಡಾನ್ ಎಲೆಕ್ಟ್ರಿಕ್ ಕಾರು ಟಾಟಾ ಟಿಗೋರ್ ಇವಿಯ ಹೊಸ ಆವೃತ್ತಿಯನ್ನೂ ರಸ್ತೆಗಿಳಿಸಿದೆ. ಇದು ಬೇರೆ ಬೇರೆ ಸೆಗ್ಮೆಂಟ್ನ ಕಾರಾಗಿದ್ದರೂ ಬೆಲೆಯ ವಿಚಾರಕ್ಕೆ ಬಂದಾಗ ಪರಸ್ಪರ ಪೈಪೋಟಿ ನೀಡಬಲ್ಲದು. ಹಾಗಾದರೆ ಈ ಎರಡು ಕಾರುಗಳ ನಡುವಿನ ವ್ಯತ್ಯಾಸ ಏನೆಂಬುದನ್ನು ನೋಡೋಣ.
ಫೀಚರ್ಗಳೇನು?
ಸಿಟ್ರಾನ್ ಕಾರನ್ನು ಮೈಕ್ರೊ ಎಸ್ಯುವಿ ಎಂದು ಕಂಪನಿ ಕರೆದುಕೊಂಡಿದೆ. ಆದರೆ, ಫೀಚರ್ಗಳ ವಿಚಾರಕ್ಕೆ ಬಂದಾಗ ಟಾಟಾ ಮೋಟಾರ್ಸ್ನ ಟಿಗೋರ್ ಇವಿ ಒಂದು ಹೆಜ್ಜೆ ಮುಂದಕ್ಕೆ ನಿಲ್ಲುತ್ತದೆ. ಸಿಟ್ರಾನ್ನಲ್ಲಿ 10.25 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದ್ದು ವೈರ್ಲೆಸ್ ಆ್ಯಪಲ್ ಕಾರ್ಪ್ಲೇ ಆಂಡ್ರಾಯ್ಡ್ ಆಟೋ ಸೇರಿದಂತೆ ಹಲವು ಫೀಚರ್ಗಳನ್ನು ನೀಡಲಾಗಿದೆ. ಇದರಲ್ಲಿ ಫ್ರಂಟ್ ಡ್ಯಾಶ್ ಕ್ಯಾಮೆರಾ. ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಏರ್ಫ್ಯೂರಿಫೈರ್, ಫಾಗ್ಲ್ಯಾಂಪ್ ಮತ್ತಿತ್ತರ ಫೀಚರ್ಗಳಿವೆ. ಆದರೆ, ಟಿಗೋರ್ನಲ್ಲಿ ಟೈರ್ಪ್ರೆಶರ್ ಮಾನಿಟರಿಂಗ್, ಆಟೋ ಡಿಮ್ಮಿಂಗ್, ಆಟೋ ಫೋಲ್ಡಿಂಗ್ ಒಆರ್ವಿಎಮ್, ಆಟೋಮ್ಯಾಟಿಕ್ ಕ್ಲೆಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಪ್ರಾಜೆಕ್ಟರ್ ಹೆಡ್ಲ್ಯಾಂಪ್, ರೇನ್ ಸೆನ್ಸಿಂಗ್ ವೈಪರ್, ರಿಯರ್ ಆರ್ಮ್ ರೆಸ್ಟ್ ಹಾಗೂ ಲೆದರ್ ಸೀಟ್ನ ಆಯ್ಕೆಯಿದೆ. ಇದ್ಯಾವುದೂ ಸಿಟ್ರಾನ್ನಲ್ಲಿ ಇಲ್ಲ.
ಎರಡೂ ಕಾರುಗಳು ರೇಂಜ್ ಎಷ್ಟು?
ಸಿಟ್ರಾನ್ ಇ-ಸಿ3 ಕಾರು ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 320 ಕಿಲೋ ಮೀಟರ್ ಸಾಗುತ್ತದೆ ಎಂದು ಕಂಪನಿ ಕ್ಲೇಮ್ ಮಾಡಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 57 ಪಿಎಸ್ ಪವರ್ ಹಾಗೂ 143 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇಸಿ3 ಕಾರು 6.8 ಸೆಕೆಂಡ್ಗಳಲ್ಲಿ ಸೊನ್ನೆಯಿಂದ 60 ಕಿಲೋ ಮೀಟರ್ ವೇಗ ಪಡೆಯುತ್ತದೆ. ಇದರ ಗರಿಷ್ಠ ವೇಗ 107 ಕಿಲೋ ಮೀಟರ್.
ಇಲ್ಲೂ ಟಾಟಾ ಟಿಗೋರ್ ಇವಿಯ ಮೋಟಾರ್ ಪವರ್ಫುಲ್. ಇದು 74 ಎಚ್ಪಿ ಪವರ್ ಹಾಗೂ 170 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಕೇವಲ 5.7 ಸೆಕೆಂಡ್ಗಳಲ್ಲಿ ಈ ಕಾರು ಸೊನ್ನೆಯಿಂದ 60 ಕಿ.ಮೀ ವೇಗ ಪಡೆಯುತ್ತದೆ. ಆದರೆ, ಒಟ್ಟು ರೇಂಜ್ ಸ್ವಲ್ಪ ಕಡಿಮೆ ಅಂದರೆ 306 ಕಿಲೋ ಮೀಟರ್ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: Tata Motors : 50 ಲಕ್ಷ ಕಾರು ಮಾರಾಟದ ಮೈಲುಗಲ್ಲು ದಾಟಿದ ಟಾಟಾ ಮೋಟಾರ್ಸ್
ಬ್ಯಾಟರಿ ಮತ್ತು ಚಾರ್ಜಿಂಗ್
ಸಿಟ್ರಾನ್ ಇಸಿ3 ಕಾರಿನಲ್ಲಿ ಸ್ವಲ್ಪ ದೊಡ್ಡ ಗಾತ್ರದ ಬ್ಯಾಟರಿಯಿದೆ. ಈ ಕಾರಿನ ಬ್ಯಾಟರಿ 29.2 ಕಿಲೋ ವ್ಯಾಟ್ ಸಾಮರ್ಥ್ಯ ಹೊಂದಿದೆ. ಆದರೆ, ಟಿಗೋರ್ನ ಬ್ಯಾಟರಿ 26 ಕಿಲೋ ವ್ಯಾಟ್ ಮಾತ್ರ ಇದೆ. ಸಿಟ್ರಾನ್ ಇ-ಸಿ3 ಕಾರಿನ ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿದೆ. 57 ನಿಮಿಷಗಳಲ್ಲಿ 10ರಿಂದ ಶೇಕಡಾ 80ರಷ್ಟು ಬ್ಯಾಟರಿ ಫುಲ್ ಆಗುತ್ತದೆ. ಟಾಟಾ ಟಿಗೋರ್ ಕೂಡ ಚಾರ್ಜಿಂಗ್ ವಿಚಾರದಲ್ಲಿ ಇಷ್ಟೇ ಸಾಮರ್ಥ್ಯ ಹೊಂದಿದೆ.
ಬೆಲೆ ಎಷ್ಟು?
ಸಿಟ್ರಾನ್ ಇ ಸಿ3 ಕಾರಿನ ಆರಂಭಿಕ ಬೆಲೆ 11.50 ಲಕ್ಷ ರೂಪಾಯಿಗಳು. ಟಾಪ್ ವೇರಿಯೆಂಟ್ ಕಾರಿನ ಬೆಲೆ 12.43 ಲಕ್ಷ ರೂಪಾಯಿಗಳು. ಟಿಗೋರ್ ಸೆಡಾನ್ ಕಾರಿನ ಆರಂಭಿಕ ಬೆಲೆ 12.49 ಲಕ್ಷ ರೂಪಾಯಿಗಳಾಗಿದ್ದು, ಟಾಪ್ ಎಂಡ್ ಕಾರಿಗೆ 13.75 ಲಕ್ಷ ರೂಪಾಯಿಗಳು.