ಚೆನ್ನೈ: ಭಾರತ ಅತ್ಯಂತ ಜನಪ್ರಿಯ ಕಾಂಪಾಕ್ಟ್ ಎಸ್ಯುವಿ ಹ್ಯುಂಡೈ ಕ್ರೆಟಾ (Hyundai Creta) ತನ್ನ 1.4 ಲೀಟರ್ ಟರ್ಬೊ ಚಾರ್ಜ್ಡ್ ವೇರಿಯೆಂಟ್ ಮಾರಾಟವನ್ನು ನಿಲ್ಲಿಸಿದೆ. ಕಂಪನಿಯು ತನ್ನ ವೆಬ್ಸೈಟ್ ಹಾಗೂ ಮಾರಾಟದ ಪಟ್ಟಿಯಿಂದ ತೆಗೆದು ಹಾಕಿದೆ. ಆದರೆ ಅದಕ್ಕೆ ನಿಖರ ಕಾರಣ ನೀಡಿಲ್ಲ. ಡಿಸಿಟಿ ಗೇರ್ಬಾಕ್ಸ್ನೊಂದಿಗೆ ಬರುತ್ತಿದ್ದ ಈ ವೇರಿಯೆಂಟ್ನ ಉತ್ಪಾದನೆಗೆ ಅಧಿಕ ವೆಚ್ಚವಾಗುತ್ತಿತ್ತು. ಇದರಿಂದ ಮಾರುಕಟ್ಟೆ ದರ ಹೆಚ್ಚು ಎನಿಸುತ್ತಿತ್ತು. ಈ ಕಾರಣಕ್ಕೆ ಮಾರಾಟವನ್ನೇ ನಿಲ್ಲಿಸಿರಬಹುದು ಎಂದು ಹೇಳಲಾಗಿದೆ.
ಹ್ಯುಂಡೈ ಕಂಪನಿಯು ಇತ್ತೀಚೆಗೆ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಕ್ರೆಟಾದಲ್ಲಿ ಪರಿಚಯ ಮಾಡಿತ್ತು. ಈ ಕಾರು 6,300 ಆರ್ಪಿಎಮ್ನಲ್ಲಿ 113 ಬಿಎಚ್ಪಿ ಪವರ್ ಹಾಗೂ 143.8 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಆರು ಸ್ಪೀಡ್ನ ಐವಿಟಿ ಗೇರ್ ಬಾಕ್ಸ್ ಇದೆ. ಡೀಸೆಲ್ ಎಂಜಿನ್ ಹೊಂದಿರುವ ಕಾರು 4,000 ಆರ್ಪಿಎಮ್ನಲ್ಲಿ 114 ಬಿಎಚ್ಪಿ ಪವರ್ ಹಾಗೂ 250 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಎರಡು ಕಾರುಗಳು ಬಿಎಸ್6 ನ ಸುಧಾರಿತ ಮಾನದಂಡಗಳನ್ನು ಹೊಂದಿರುವ ಎಂಜಿನ್ ಹೊಂದಿದೆ. ಇ20 ಪೆಟ್ರೋಲ್ಗೆ ಸೂಕ್ತವಾಗಿದೆ. ಜತೆಗೆ ಮೈಲ್ಡ್ ಹೈಬ್ರಿಡ್ ತಾಂತ್ರಿಕತೆಯನ್ನೂ ಹೊಂದಿದೆ.
ಇದನ್ನೂ ಓದಿ : Tata Motors | ಜೆಟ್ ಆವೃತ್ತಿಯ ಎಸ್ಯುವಿ ಕಾರುಗಳನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
ಇದೀಗ ನಿಲ್ಲಿಸಲಾಗಿರುವ 1.4 ಲೀಟರ್ನ ಟರ್ಬೊ ಚಾರ್ಜ್ಡ್ ಪೆಟ್ರೊಲ್ ಎಂಜಿನ್ 138 ಬಿಎಚ್ಪಿ ಪವರ್ ಹಾಗೂ 242 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತಿತ್ತು. ಇದರ ದರವೇ ಮಾರಾಟಕ್ಕೆ ಅಡಚಣೆಯಾಗಿತ್ತು. ಹೀಗಾಗಿ ಮಾರಾಟದ ಪಟ್ಟಿಯಿಂದಲೇ ತೆಗೆದುಹಾಕಲಾಗಿದೆ. ಕ್ರೆಟಾ ಕಾರು ಹ್ಯುಂಡೈ ಪಾಲಿಗೆ ಹೆಚ್ಚು ಆದಾಯ ತಂದುಕೊಡುವ ಕಾರಾಗಿದೆ.