ನವ ದಹಲಿ : ಭಾರತದಲ್ಲಿ ಸ್ಮಾರ್ಟ್ ಫೋನ್ ಮಾರಾಟದಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಚೀನಾ ಮೂಲದ ರೆಡ್ಮಿಯ (Redmi) ಮಾತೃ ಕಂಪನಿಯಾಗಿರುವ ಶವೊಮಿ (Xiaomi) ಇದೀಗ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಿದೆ. ಮೊಬೈಲ್ ಕಂಪನಿಯ ಮೊದಲ ಕಾರು ಎಮ್ಎಸ್11 ನ ಪ್ರೊಟೊಟೈಪ್ನ (Xiaomi Car) ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮೂಲಗಳು ಪ್ರಕಾರ ಕಾರು 2024ರಲ್ಲಿ ರಸ್ತೆಗಳಿಯಲಿದೆ.
ಚೀನಾ ಮೂಲದ ಶವೊಮಿ ಆರಂಭದಲ್ಲಿ ಸ್ಮಾರ್ಟ್ಫೋನ್ಗಳನ್ನು ತಯಾರಿಸುತ್ತಿತ್ತು. ಬಳಿಕ ಟಿವಿಯನ್ನು ತಯಾರಿಸಿತ್ತು. ಬಳಿಕ ವಾಕ್ಯೂಮ್ ಕ್ಲೀನರ್ ತಯಾರಿಸಿತ್ತು. ಎಲೆಕ್ಟ್ರಿಕ್ ಕಾರುಗಳು ಜನಪ್ರಿಯತೆ ಪಡೆಯುತ್ತಿರುವ ಕಾರಣ ಆ ಉದ್ಯಮದ ಕಡೆಗೂ ಗಮನ ಹರಿಸಿದೆ. ಇದೀಗ ಶವೊಮಿಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆದಿದೆ.
ನಾಲ್ಕು ಡೋರ್ಗಳ ಶವೊಮಿ ಎಲೆಕ್ಟ್ರಿಕ್ ಕಾರು ಸೆಡಾನ್ ಮಾದರಿಯಲ್ಲಿದೆ. ಎಲ್ಇಡಿ ಲೈಟ್ಗಳನ್ನು ಹೊಂದಿರುವ ಕಾರಿನ ಮುಂಭಾಗ ಅತ್ಯಾಕರ್ಷಕವಾಗಿದೆ. ಎಮ್ಎಸ್11 ಕಾರು ದೊಡ್ಡ ಗಾತ್ರದ ವಿಂಡ್ಶೀಲ್ಡ್ ಹೊಂದಿದ್ದು, ಪನೋರಮಿಕ್ ಸನ್ರೂಫ್ ಕೂಡ ಹೊಂದಿದೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಕಾರಿನ ತಾಂತ್ರಿಕತೆಯ ಮಾಹಿತಿ ಹೊಂದಿಲ್ಲ. ಆದರೆ ಚೀನಾದ ರಸ್ತೆಗಳಲ್ಲಿ ಕಾರಿನ ಪರೀಕ್ಷಾರ್ಥ ಓಡಾಟ ನಡೆಯುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : Mahindra & Mahindra | ಪುಣೆಯಲ್ಲಿ ಹೊಸ ಇವಿ ಕಾರು ಉತ್ಪಾದನಾ ಘಟಕ ಸ್ಥಾಪಿಸಲಿದೆ ಮಹೀಂದ್ರಾ
ಕಾರಿನ ಮೋಟಾರ್ ಅನ್ನು ಶವೋಮಿ ಕಂಪನಿಯೇ ತಯಾರಿಸಿದೆ ಎನ್ನಲಾಗಿದೆ. ಬ್ಯಾಟರಿಯನ್ನು ಬಿವೈಡಿ ಕಂಪನಿಯಿಂದ ಪಡೆದಿದೆ. ಬಿವೈಡಿ ಬ್ಯಾಟರಿ ಒಂದು ಬಾರಿ ಚಾರ್ಜ್ ಮಾಡಿದರೆ 1000 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ. ಅದೇ ಸಾಮರ್ಥ್ಯವನ್ನು ಶವೊಮಿ ಕಾರು ಕೂಡ ಹೊಂದಿರಬಹುದು ಎನ್ನಲಾಗಿದೆ.