ನವ ದೆಹಲಿ: ಕೃತಕ ಬುದ್ಧಿಮತ್ತೆಯಾಗಿರುವ ಚಾಟ್ಬಾಟ್ ಚಾಟ್ಜಿಟಿಪಿ (Chatbot ChatGPT) ಬಿಡುಗಡೆಯಾದ ದಿನದಿಂದಲೂ ಚರ್ಚೆಯಲ್ಲಿದೆ. ಅದು ಮನುಷ್ಯನ ಬುದ್ಧಿವಂತಿಕೆಯನ್ನು ಮೀರಿಸಬಲ್ಲದು. ಹೀಗೆ ಮುಂದುವರಿದರೆ ಮನುಷ್ಯ ತನ್ನೆಲ್ಲ ಉದ್ಯೋಗ ಕಳೆದುಕೊಳ್ಳುತ್ತಾನೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಪ್ರಬಂಧ ಬರೆಯುವುದು ಸೇರಿದಂತೆ ನಾನಾ ಸವಾಲುಗಳನ್ನು ಸುಲಭವಾಗಿ ಪರಿಹರಿಸಿದೆ. ಇಷ್ಟೆಲ್ಲ ತಾಕತ್ತು ಹೊಂದಿರುವ ಚಾಟ್ಜಿಪಿಟಿ ಭಾರತೀಯ ಲೋಕಸೇವಾ ಆಯೋಗ (UPSC) ನಡೆಸುವ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಫೇಲ್ ಆಗಿದೆ. 100ರಲ್ಲಿ ಅದು ಗಳಿಸಿರುವ ಅಂಕ ಕೇವಲ 54. ಹೀಗಾಗಿ ಅದು ಮನುಷ್ಯನ ಬುದ್ಧಿಗೆ ಸಮಾನಾಗಿಲ್ಲ ಎಂದೂ ವಾದಿಸಬಹುದು.
ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ ಜಾಟ್ಜಿಪಿಟಿ ಮೇಲೆ ನಾನಾ ಪ್ರಯೋಗಗಳನ್ನು ಮಾಡುತ್ತಿದೆ. ಅಂತೆಯೇ 2022ರ ಯುಪಿಎಸ್ಸಿ ಎಕ್ಸಾಮ್ನ ಮೊದಲ ಪೇಪರ್ನ ಸೆಟ್ ಎ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯುವಂತೆ ಕೋರಿದೆ. ಆದರೆ, ಚಾಟ್ಜಿಪಿಟಿ ಕಟ್ಆಫ್ ಅಂಕ ಶೇಕಡಾ 87.54 ಪಡೆಯಲು ವಿಫಲವಾಗಿದೆ. ಪ್ರಶ್ನಾ ಪತ್ರಿಕೆಯಲ್ಲಿ ಭೂಗೋಳ ಶಾಸ್ತ್ರ, ಅರ್ಥ ಶಾಸ್ತ್ರ, ಇತಿಹಾಸ, ವಿಜ್ಞಾನ, ಸಾಮಾಜಿಕ ಬೆಳವಣಿಗೆ ಹಾಗೂ ಪ್ರಚಲಿತ ವಿದ್ಯಾಮಾನದ ಪ್ರಶ್ನೆಗಳಿದ್ದವು.
ಇದನ್ನೂ ಓದಿ : ವಾಕಿಂಗ್ ಚಿತ್ರಗಳು: ಚಾಟ್ ಜಿಪಿಟಿ- ರೋಬಾಟ್ ಪರ್‌ಫೆಕ್ಟು, ಹಲವು ಎಡವಟ್ಟು
ಚಾಟ್ ಜಿಪಿಟಿಗೆ ಉತ್ತರ ಕೊಡುವ ಸಾಮರ್ಥ್ಯ ಇದೆಯೇ ಹೊರತು, ಕ್ಲಿಷ್ಟಕರ ಪ್ರಶ್ನೆಗೆ ಸಮರ್ಪಕ ಉತ್ತರ ಕೊಡುವ ಸಾಮರ್ಥ್ಯ ಇಲ್ಲ. ಅಲ್ಲದೆ, ಯುಪಿಎಸ್ಸಿ ಪರೀಕ್ಷೆ ಬರೆಯಲು ಬೇಕಾಗುವ ಸಮರ್ಥ ಭಾಷೆಯ ಬಳಕೆಯೂ ಗೊತ್ತಿಲ್ಲ. ಚಾಟ್ಜಿಪಿಟಿಗೆ ಕೇವಲ ಮಾಹಿತಿ ಮಾತ್ರ ಇದೆ. ಹೀಗಾಗಿ ಯುಪಿಎಸ್ ಪರೀಕ್ಷೆಯನ್ನು ಬರೆಯಲು ಬೇಕಾಗುವ ಸಮಯಪ್ರಜ್ಞೆ ಇಲ್ಲ ಎಂದು ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ ಹೇಳಿದೆ.
ಚಾಟ್ಜಿಟಿಪಿಯ ಬಳಿಕ 2021ರ ಸೆಪ್ಟೆಂಬರ್ ತನಕದ ಮಾಹಿತಿ ಮಾತ್ರ ಇದೆ. ಹೀಗಾಗಿ ಅದಕ್ಕೆ ಪ್ರಚಲಿತ ವಿದ್ಯಮಾನದ ಕುರಿತು ಉತ್ತರ ಹೇಳಲು ಸಾಧ್ಯವಾಗಿಲ್ಲ. ಆರ್ಥಿಕತೆ ಹಾಗೂ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗಿಲ್ಲ ಎಂದು ಅನಾಲಿಟಿಕ್ಸ್ ಹೇಳಿದೆ.