Site icon Vistara News

Apple iPhones: ಆ್ಯಪಲ್‌ ಬ್ರ್ಯಾಂಡ್‌ ಪ್ರಿಯರಿಗೆ ಗುಡ್‌ನ್ಯೂಸ್;‌ ಐಫೋನ್‌ಗಳ ಬೆಲೆಯಲ್ಲಿ ಗಣನೀಯ ಇಳಿಕೆ

Apple iPhones

ನವದೆಹಲಿ: ಆ್ಯಪಲ್‌ ತನ್ನ ಎಲ್ಲ ಮಾದರಿಗಳ ಐಫೋನ್‌ಗಳ (Apple iPhones) ಬೆಲೆಗಳನ್ನು ಶೇ. 3- 4ರಷ್ಟು ಕಡಿತಗೊಳಿಸಿದೆ. ಇದರಿಂದ ಗ್ರಾಹಕರು ಪ್ರೊ ಅಥವಾ ಪ್ರೊ ಮ್ಯಾಕ್ಸ್ ಮಾದರಿ ಮೇಲೆ 5,100 ರಿಂದ 6,000 ರೂ. ವರೆಗೆ (Apple cut prices) ಉಳಿಸಬಹುದಾಗಿದೆ. ಐಫೋನ್ 13, 14 ಮತ್ತು 15 ಸೇರಿದಂತೆ ಇನ್ನು ಕೆಲವು ಮಾದರಿಯ ಐಫೋನ್‌ಗಳು ಮೇಲೆ 300 ರೂ. ಮತ್ತು ಐಫೋನ್ ಎಸ್‌ಇ 2,300 ರೂ. ಕಡಿತ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಇದೇ ಮೊದಲ ಬಾರಿಗೆ ಆ್ಯಪಲ್‌ ತನ್ನ ಪ್ರೊ ಮಾದರಿಗಳಿಗೆ (Pro models) ಬೆಲೆಗಳನ್ನು ಕಡಿಮೆ ಮಾಡಿದೆ. ಹೊಸ ಪ್ರೊ ಮಾದರಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಅನಂತರ ಕಂಪೆನಿಯು ಹಳೆಯ ಪ್ರೊ ಮಾದರಿಗಳನ್ನು ನಿಲ್ಲಿಸುತ್ತದೆ. ಹಳೆಯ ಪ್ರೊ ಮಾಡೆಲ್‌ಗಳ ದಾಸ್ತಾನುಗಳನ್ನು ಮಾತ್ರ ವಿತರಕರು ಮತ್ತು ಮರುಮಾರಾಟಗಾರರ ಮೂಲಕ ರಿಯಾಯಿತಿ ದರದಲ್ಲಿ ತೆರವು ಮಾಡಲಾಗುತ್ತದೆ. ಹೀಗಾಗಿ ಪ್ರೊ ಮಾದರಿಗಳ ಗರಿಷ್ಠ ಚಿಲ್ಲರೆ ಮಾರಾಟದ ಬೆಲೆಯನ್ನು (MRP) ಇಲ್ಲಿ ಕಡಿಮೆ ಮಾಡಲಾಗಿಲ್ಲ.

ಜುಲೈ 23 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2024 ರಲ್ಲಿ ಮೊಬೈಲ್ ಫೋನ್‌ಗಳ ಮೂಲ ಕಸ್ಟಮ್ಸ್ ಸುಂಕವನ್ನು ಶೇ.20 ರಿಂದ 15ರಷ್ಟು ಇಳಿಕೆ ಮಾಡಿರುವುದಾಗಿ ಘೋಷಣೆ ಮಾಡಿದ ಬಳಿಕ ಆ್ಯಪಲ್‌ ಈ ಬಾರಿ ಪ್ರೊ ಮಾಡೆಲ್‌ಗಳ ಬೆಲೆಗಳನ್ನು ಕಡಿಮೆ ಮಾಡಿದೆ. ಮೊಬೈಲ್ ಫೋನ್‌ಗಳ ಹೊರತಾಗಿ ಮೊಬೈಲ್ ಫೋನ್ ಚಾರ್ಜರ್‌ಗಳಿಗೆ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಜೋಡಣೆ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಲಾಗಿದೆ.

Apple iPhones


ಪ್ರಸ್ತುತ, ಭಾರತದಲ್ಲಿ ಮಾರಾಟವಾಗುವ ಆಮದು ಮಾಡಿದ ಸ್ಮಾರ್ಟ್‌ಫೋನ್‌ಗಳು ಶೇ. 18ರಷ್ಟು ಜಿಎಸ್‌ಟಿ ಮತ್ತು ಶೇ. 22ರಷ್ಟು ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ ಹೆಚ್ಚುವರಿ ಶುಲ್ಕ, ಮೂಲ ಕಸ್ಟಮ್ಸ್ ಸುಂಕ ಕಳೆದು ಶೇ. 10ರಷ್ಟುಉಳಿಯುತ್ತದೆ. ಬಜೆಟ್ ಕಡಿತದ ಅನಂತರ ಒಟ್ಟು ಕಸ್ಟಮ್ಸ್ ಸುಂಕವು ಶೇ. 16.5ರಷ್ಟಾಗಿರುತ್ತದೆ. ಇದರಲ್ಲಿ ಶೇ. 15% ಮೂಲ ಮತ್ತು ಶೇ. 1.5 ಹೆಚ್ಚುವರಿ ಶುಲ್ಕ ಸೇರಿದೆ. ಭಾರತದಲ್ಲಿ ತಯಾರಿಸಿದ ಫೋನ್‌ಗಳಿಗೆ ಕೇವಲ ಶೇ. 18ರಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ.

ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಪ್ರಸ್ತುತ ಭಾರತದಲ್ಲಿ ಮಾರಾಟವಾಗುವ ಶೇ.99ರಷ್ಟು ಆ್ಯಪಲ್‌ನ ಮೊಬೈಲ್ ಫೋನ್‌ಗಳನ್ನು ಸ್ಥಳೀಯವಾಗಿ ತಯಾರಿಸಲಾಗುತ್ತದೆ. ಆದರೆ ಆಯ್ದ ಉನ್ನತ ಮಟ್ಟದ ಮಾದರಿಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ.

Exit mobile version