ನವದೆಹಲಿ: ಸುಮಾರು 2 ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಬಳಕೆಯಲ್ಲಿ ಇಲ್ಲದ ಜಿಮೇಲ್ ಖಾತೆಗಳನ್ನು (Gmail Accounts) ಡಿಲೀಟ್ ಮಾಡಲು ಗೂಗಲ್ (Google) ಮುಂದಾಗಿದೆ. ಮುಂದಿನ ತಿಂಗಳೇ ಈ ಕ್ರಮ ಜಾರಿಗೆ ಬರಲಿದೆ. ವೈಯಕ್ತಿಕ ಖಾತೆಗಳಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ ಎಂದು ಎಂದು ಮೂಲಗಳು ತಿಳಿಸಿವೆ.
ಯಾಕಾಗಿ ಈ ನಿಯಮ?
ಗೂಗಲ್ ಕಂಪನಿ ತನ್ನ ಸುರಕ್ಷತಾ ನಿಯಮಗಳನ್ನು ಮೇಯಲ್ಲಿ ಅಪ್‌ಡೇಟ್ ಮಾಡಿದೆ. ಅದರ ಭಾಗವಾಗಿ ಬಳಕೆಯಲ್ಲಿಲ್ಲದ ಜಿಮೇಲ್ ಅಕೌಂಟ್‌ಗಳನ್ನು ಡಿಸೆಂಬರ್‌ನಲ್ಲಿ ಡಿಲೀಟ್ ಮಾಡಲಾಗುವುದು ಎಂದು ಅಂದೇ ಘೋಷಿಸಿತ್ತು. ಹೀಗಾಗಿ ಲಕ್ಷಾಂತರ ಜಿಮೇಲ್ ಖಾತೆಗಳು ಡಿಲೀಟ್ ಆಗುವ ಸಾಧ್ಯತೆ ಇದೆ. ಕಂಪನಿಯ ಉಪಾಧ್ಯಕ್ಷೆ ರೂತ್ ಕ್ರಿಚೇಲಿ ಈ ಬಗ್ಗೆ ಮಾಹಿತಿ ನೀಡಿ, ʼʼಮುಂಬರುವ ಡಿಸೆಂಬರ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಒಮ್ಮೆಯೂ ಲಾಗಿನ್ ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡಲು ಆರಂಭಿಸುತ್ತೇವೆ. ಇನ್ನು ಮುಂದೆ ಕನಿಷ್ಠ ಎರಡು ವರ್ಷಗಳಿಂದ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆʼʼ ಎಂದು ಹೇಳಿದ್ದರು. ಮರೆತ ಅಥವಾ ಬಳಸದ ಇಮೇಲ್ ಅಕೌಂಟ್‌ಗಳು ಗೂಗಲ್‌ಗೆ ಅಥವಾ ಖಾತೆದಾರರಿಗೆ ಅಪಾಯ ತಂದೊಡ್ಡಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗುವುದು ಎಂದು ಗೂಗಲ್ ಹೇಳಿಕೊಂಡಿದೆ.
ಯಾವೆಲ್ಲ ಖಾತೆಗಳು ರದ್ದು?
ಮೊದಲೇ ಹೇಳಿದಂತೆ ಈ ನಿಯಮ ವೈಯಕ್ತಿಕ ಖಾತೆಗಳಿಗಷ್ಟೇ ಅನ್ವಯವಾಗುತ್ತದೆ. ಕಂಪನಿಗಳು, ಸಂಘ-ಸಂಸ್ಥೆಗಳು, ಶಾಲೆಗಳು ಇತ್ಯಾದಿಗಳ ಗೂಗಲ್ ಖಾತೆಗಳು ಡಿಲೀಟ್ ಆಗುವುದಿಲ್ಲ. ಡಿಸೆಂಬರ್ ವೇಳೆಗೆ ಕನಿಷ್ಠ 2 ವರ್ಷಗಳವರೆಗೆ ಖಾತೆ ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದಿದ್ದರೆ ಜಿಮೇಲ್, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್ ಮತ್ತು ಗೂಗಲ್ ಫೋಟೋಗಳಲ್ಲಿನ ವಿಷಯ ಸೇರಿ ಎಲ್ಲವೂ ಡಿಲೀಟ್ ಆಗಲಿವೆ.
ಇದನ್ನೂ ಓದಿ: PM Modi: ನಟ ದಿಲೀಪ್ ಕುಮಾರ್ ಪತ್ನಿ ನಟಿ ಸಾಯಿರಾ ಬಾನು ಭೇಟಿ ಮಾಡಿದ ಪ್ರಧಾನಿ ಮೋದಿ!
ರದ್ದಾಗದಿರಲು ಏನು ಮಾಡಬೇಕು?
ಜಿಮೇಲ್ ರದ್ದಾಗದಂತೆ ನೋಡಿಕೊಳ್ಳುವುದು, ಗೂಗಲ್ ಖಾತೆಯನ್ನು ಸಕ್ರಿಯವಾಗಿಡುವುದು ಸುಲಭ. ಇದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ. ಜಿಮೇಲ್ ಅನ್ನು ಕನಿಷ್ಠ ಎರಡು ವರ್ಷಗಳಿಗೊಮ್ಮೆ ಸೈನ್ ಇನ್ ಮಾಡಬೇಕು. ಇಮೇಲ್ ಓದುವುದು ಅಥವಾ ಕಳುಹಿಸುವುದು, ಡ್ರೈವ್ ಬಳಸುವುದು, ಯೂ ಟ್ಯೂಬ್ ವಿಡಿಯೊವನ್ನು ವೀಕ್ಷಿಸುವುದು, ಪ್ಲೇಸ್ಟೋರ್ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು, ಗೂಗಲ್ ಹುಡುಕಾಟವನ್ನು ಬಳಸುವುದು ಇತ್ಯಾದಿ ಚಟುವಟಿಕೆ ನಡೆಸಿದರೂ ಸಾಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಯೂಟ್ಯೂಬ್ ವಿಡಿಯೊಗಳಿಗೆ ಸಂಬಂಧಿಸಿದ ಖಾತೆಗಳನ್ನು ಅಳಿಸುವ ಯಾವುದೇ ಉದ್ದೇಶವನ್ನು ಗೂಗಲ್ ಹೊಂದಿಲ್ಲ ಎಂದು ತಿಳಿದು ಬಂದಿದೆ.
ಕಡಿಮೆ ಇವೆ
“ನಮ್ಮ ಆಂತರಿಕ ವಿಶ್ಲೇಷಣೆಯ ಪ್ರಕಾರ ಬಳಸದೇ ಇರುವ ಖಾತೆಗಳು ಸಕ್ರಿಯ ಖಾತೆಗಳಿಗಿಂತ ಕನಿಷ್ಠ 10 ಪಟ್ಟು ಕಡಿಮೆ ಇವೆ. ಈ ಖಾತೆಗಳು ಆಗಾಗ್ಗೆ ದುರ್ಬಲವಾಗಿರುತ್ತವೆ. ಒಮ್ಮೆ ಖಾತೆಯನ್ನು ಹ್ಯಾಕ್ ಮಾಡಿದ ನಂತರ, ಇದನ್ನು ದುರುಪಯೋಗಪಡಿಸುವ ಅಪಾಯವಿದೆ. ಹೀಗಾಗಿ ಈ ಕ್ರಮ ಕೈಗೊಂಡಿದ್ದೇವೆʼʼ ಎಂದು ರೂತ್ ಕ್ರಿಚೇಲಿ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ