Site icon Vistara News

Jio: 2026ರ ಹೊತ್ತಿಗೆ 50 ಕೋಟಿ ದಾಟಲಿದೆ ಜಿಯೋ ಚಂದಾದಾರರ ಸಂಖ್ಯೆ!

Jio may have 50 crore subscribers at 2026 Says Report

ಮುಂಬೈ, ಮಹಾರಾಷ್ಟ್ರ: 2026ರ ಹೊತ್ತಿಗೆ 50 ಕೋಟಿ ಚಂದಾದಾರರ ಸಂಖ್ಯೆಯನ್ನು ದಾಟುವ ಗುರಿ ಹಾಕಿಕೊಂಡಿರುವ ಟೆಲಿಕಾಂ ವಲಯದ ಟಾಪ್ ಒನ್ ಆಪರೇಟರ್ ಜಿಯೋ ಟೆಲಿಕಾಂ (Jio) ಆ ಹಾದಿಯಲ್ಲೇ ಸಾಗಿದೆ. ಆ ಹೊತ್ತಿಗೆ ಜಿಯೋದ ಆದಾಯದ ಮಾರುಕಟ್ಟೆ ಪಾಲು ಶೇಕಡಾ 47ಕ್ಕೆ ವಿಸ್ತರಣೆ ಆಗಲಿದೆ ಎಂದು ವರದಿಯಲ್ಲಿ ಸ್ಯಾನ್ ಫೋರ್ಡ್ ಸಿ. ಬರ್ನ್ ಸ್ಟೀನ್ ತಿಳಿಸಿದ್ದಾರೆ.

ಜಾಗತಿಕ ಬ್ರೋಕರೇಜ್ ಸಂಸ್ಥೆಯ ಅಂದಾಜಿನ ಪ್ರಕಾರ, ಮಾರುಕಟ್ಟೆ ಪಾಲು ತನ್ನದಾಗಿಸಿಕೊಳ್ಳುವುದನ್ನು ಜಿಯೋ ಮುಂದುವರಿಸಲಿದ್ದು, ಹಣಕಾಸು ವರ್ಷ 25ರ ಹೊತ್ತಿಗೆ ಜಿಯೋ 49ರಿಂದ 50 ಕೋಟಿ ಚಂದಾದಾರರನ್ನು ಹೊಂದಿರಲಿದೆ. ಇನ್ನು ಹಣಕಾಸು ವರ್ಷ 26ರ ಹೊತ್ತಿಗೆ 50.60 ಕೋಟಿ ಚಂದಾದಾರರು ಇರಲಿದ್ದಾರೆ. ಕಳೆದ ಹಣಕಾಸು ವರ್ಷ ನಾಲ್ಕನೇ

ತ್ರೈಮಾಸಿಕದಲ್ಲಿ 64 ಲಕ್ಷ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿರುವ ಜಿಯೋ, 2023ರ ಮಾರ್ಚ್ ಕೊನೆ ಹೊತ್ತಿಗೆ 43.93 ಕೋಟಿ ಚಂದಾದಾರರನ್ನು ಹೊಂದಿದೆ.

“ಒಂದು ವೇಳೆ ರಿಲಯನ್ಸ್ ಸಮೂಹದಿಂದ ಪ್ರತ್ಯೇಕವಾಗಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದ್ದೇ ಆದಲ್ಲಿ ಜಿಯೋ ವ್ಯಾಪ್ತಿ ಹಾಗೂ ಬೆಳವಣಿಗೆಯಲ್ಲಿ ಜಾಗತಿಕವಾಗಿ ಅತ್ಯಾಕರ್ಷಕವಾದ ಕಂಪನಿ ಆಗಲಿದೆ,” ಎಂದು ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಭಾಗವಾಗಿಯೇ ಇರುವ ಟೆಲಿಕಾಂ ಹಾಗೂ ಡಿಜಿಟಲ್ ಸ್ವತ್ತು ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ ಹೂಡಿಕೆ ಮಾಡಿರುವಂಥ ಕೆಲವು ಖಾಸಗಿ ಈಕ್ವಿಟಿ ಹೂಡಿಕೆದಾರರು ಇದರಿಂದ ಹೊರಗೆ ಹೋಗುವ ಸಾಧ್ಯತೆಗಳು ಇವೆ.

“ಅಂತಾರಾಷ್ಟ್ರೀಯ ಹೂಡಿಕೆದಾರರು ಜಿಯೋ ಪ್ಲಾಟ್ ಫಾರ್ಮ್ಸ್ ನ ಶೇಕಡಾ 33ರಷ್ಟು ಪಾಲಿಗಾಗಿ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಕಾರ್ಯತಂತ್ರ ಹೂಡಿಕೆದಾರರಾಗಿ ಮೆಟಾ ಹಾಗೂ ಗೂಗಲ್ ಶೇಕಡಾ 18ರಷ್ಟು ಪಾಲು ಹೊಂದಿವೆ. ಇನ್ನು ಖಾಸಗಿ ಈಕ್ವಿಟಿ ಹೂಡಿಕೆದಾರರಾದ ವಿಸ್ಟಾ, ಕೆಕೆಆರ್, ಸಿಲ್ವರ್ ಲೇಕ್, ಪಿಐಎಫ್ ಮುಂತಾದವು ಶೇಕಡಾ ಹದಿನೈದರಷ್ಟು ಪಾಲು ಪಡೆದಿವೆ. ಸಾಮಾನ್ಯವಾಗಿ ಖಾಸಗಿ ಈಕ್ವಿಟಿಯ ಹೋಲ್ಡಿಂಗ್ ನಾಲ್ಕು ವರ್ಷಗಳ ಅವಧಿಯದ್ದಾಗಿರುತ್ತದೆ. ಜೂನ್/ಜುಲೈನಲ್ಲಿ ನಡೆಯಲಿರುವ ಕಂಪನಿಯ ವಾರ್ಷಿಕ ಮಹಾಸಭೆಯ ವೇಳೆಗೆ ಯಾರು ಹೊರ ಹೋಗಬಹುದು ಎಂಬ ಬಗ್ಗೆ ಮಾಹಿತಿ ದೊರೆಯುವ ನಿರೀಕ್ಷೆ ಇದೆ,” ಎನ್ನಲಾಗಿದೆ.

ಇದನ್ನೂ ಓದಿ: Jio BP Diesel: ಜಿಯೋ ಬಿಪಿಯಿಂದ ಹೊಸ ಡೀಸೆಲ್ ಲಾಂಚ್, ಪ್ರತಿ ಟ್ರಕ್‌ಗೆ ವರ್ಷಕ್ಕೆ 1.1 ಲಕ್ಷ ರೂ. ಉಳಿತಾಯ!

ಬರ್ನ್ ಸ್ಟೀನ್ ಇನ್ನೂ ಮುಂದುವರಿದು, ಜಿಯೋವನ್ನು ಡಿಜಿಟಲ್ ಸೇವೆಗಾಗಿ 112 ಬಿಲಿಯನ್ ಅಮೆರಿಕನ್ ಡಾಲರ್ (ಸಗಟು) ಅಥವಾ ರಿಲಯನ್ಸ್ ಗೆ ನಿವ್ವಳ 79 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯಮಾಪನ ಮಾಡುವುದಾಗಿ ಹೇಳಿದ್ದಾರೆ.

Exit mobile version