Site icon Vistara News

National Technology Day ಪೋಖ್ರಾನ್‌ ಅಣು ಪರೀಕ್ಷೆ ಯಶಸ್ವಿಯಾಗಿ ನಡೆದ ಹೆಮ್ಮೆಯ ದಿನ

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅದ್ವಿತೀಯ ಸಾಧನೆಯ ಮಹತ್ವದ ಮೈಲುಗಲ್ಲು ಎಂದು ಗುರುತಿಸಲ್ಪಟ್ಟಿರುವುದು 1998ರ ಮೇ 11ರಂದು ನಡೆದ ಪೋಖ್ರಾನ್‌-2 ಪರಮಾಣು ಸ್ಫೋಟ. ಇದು ಜಗತ್ತಿನ ಬಲಿಷ್ಠ ರಾಷ್ಟ್ರಗಳ ಮುಂದೆ ತಲೆ ಎತ್ತಿ ನಿಲ್ಲುವಂತೆ ಮಾಡಿದ ಮತ್ತು ಭವಿಷ್ಯದಲ್ಲಿ ಭಾರತ ಸೂಪರ್‌ ಪವರ್‌ ರಾಷ್ಟ್ರವಾಗಿ ಎದ್ದು ನಿಲ್ಲಲಿದೆ ಎಂಬ ಭರವಸೆ ಮೂಡಿಸಿದ ದಿನ.

ಆ ದಿನವನ್ನು ರಾಷ್ಟ್ರೀಯ ತಂತ್ರಜ್ಞಾನ ದಿನ-National Technology Day ಎಂದು ಹೆಮ್ಮೆಯಿಂದ ಆಚರಿಸಲಾಗುತ್ತಿದೆ. ಪೋಖ್ರಾನ್‌ ಅಣು ಸ್ಫೋಟ ನಡೆದಾಗ ಪ್ರಧಾನ ಮಂತ್ರಿಗಳಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಅಧಿಕೃತವಾಗಿ ಈ ದಿನವನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಘೋಷಿಸಿದ್ದರು.

1974ರ ಮೇ 18ರಂದು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ಪೋಖ್ರಾನ್‌ನಲ್ಲಿ ಮೊದಲ ಪರಮಾಣು ಪರೀಕ್ಷೆ ನಡೆದಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೂ ಒಂದು ದೊಡ್ಡ ಹೆಜ್ಜೆ. ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಪ್ರಗತಿಯನ್ನು ಕಾಣುತ್ತಿರುವ ಹೊತ್ತಿನಲ್ಲಿ ಇದಕ್ಕೆಲ್ಲ ಕಾರಣರಾದ ವಿಜ್ಞಾನಿಗಳು, ಎಂಜಿನಿಯರ್‌ಗಳು, ತಂತ್ರಜ್ಞರನ್ನು ನೆನಪಿಸಿಕೊಂಡು ಭಾರತದ ಪ್ರಗತಿಗೆ ಹೆಮ್ಮೆ ಪಡುವ ದಿನ ಮೇ 11.

ಪೋಖ್ರಾನ್‌ನಲ್ಲಿ ಅಂದು ಏನಾಗಿತ್ತು?
ಅದು ಪರಮಾಣು ಪರೀಕ್ಷೆಗೆ ಜಗತ್ತಿನ ಬಲಿಷ್ಠ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ದಿನಗಳು. ಕೆಲವೇ ರಾಷ್ಟ್ರಗಳು ಅಣ್ವಸ್ತ್ರ ಹಿಡಿದು ಬೆದರಿಸುತ್ತಿದ್ದ ಕಾಲ. ಇಂಥ ಹೊತ್ತಿನಲ್ಲಿ ಭಾರತ ತಾನೂ ಪರಮಾಣು ಪರೀಕ್ಷೆ ನಡೆಸಬೇಕೆಂದು ನಿರ್ಧರಿಸಿತು. ಆದರೆ, ಈ ಪ್ಲ್ಯಾನ್‌ ಬಹಿರಂಗಗೊಂಡರೆ ತೀವ್ರ ವಿರೋಧ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಇದನ್ನು ಅತ್ಯಂತ ಗೌಪ್ಯವಾಗಿ ನಡೆಸಲು ನಿರ್ಧರಿಸಲಾಯಿತು. ಅದಕ್ಕಾಗಿ ನಿಗದಿಯಾಗಿದ್ದು 1974ರಲ್ಲಿ ಪರಮಾಣು ಪರೀಕ್ಷೆ ನಡೆದಿದ್ದ ರಾಜಸ್ಥಾನದ ಅದೇ ಪೋಖ್ರಾನ್‌ನ್ನು. ನೇತೃತ್ವ ವಹಿಸಿದವರು ಮುಂದೆ ಭಾರತದ ರಾಷ್ಟ್ರಪತಿಗಳಾಗಿ ಅಧಿಕಾರ ನಿರ್ವಹಿಸಿದ ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ʻಮಿಸೈಲ್‌ ಮ್ಯಾನ್‌ʼ ಡಾ. ಎಪಿಜೆ ಅಬ್ದುಲ್‌ ಕಲಾಂ.

ಈ ಕಾರ್ಯಾಚರಣೆ ಎಷ್ಟೊಂದು ನಿಗೂಢವಾಗಿ ನಡೆಯಿತು ಎಂದರೆ ಆವತ್ತು ಬೆಳಗ್ಗೆ ಪರೀಕ್ಷೆ ನಡೆಯುವವರೆಗೆ ಜಾಗತಿಕ ಪರಮಾಣು ಶಕ್ತ ರಾಷ್ಟ್ರಗಳಿಗೆ ಅದರ ಸಣ್ಣ ಸುಳಿವೇ ಇರಲಿಲ್ಲ. ಹೆಚ್ಚೇನು ತಂಡದಲ್ಲಿದ್ದ ಕೆಲವು ಸಿಬ್ಬಂದಿಗಳಿಗೂ ನಿಜಕ್ಕೂ ಇಲ್ಲಿ ನಡೆಯುತ್ತಿರುವುದೇನು ಎನ್ನುವುದರ ಅರಿವು ಇರಲಿಲ್ಲ. ಆವತ್ತು ಒಂದರ ಬೆನ್ನಿಗೆ ಒಂದರಂತೆ ಐದು ಪರೀಕ್ಷೆಗಳು ನಡೆದು ಅಟಲ್‌ ಬಿಹಾರಿ ವಾಜಪೇಯಿ ಅವರು ಭಾರತವನ್ನು ಪರಮಾಣು ಶಕ್ತ ರಾಷ್ಟ್ರವಾಗಿ ಘೋಷಿಸಿದರು.

2022ರ ಥೀಮ್‌ ಏನು?
ಸಹನೀಯ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಯೋಜಿತ ಪರಿಕ್ರಮ- ಇದು 2022ರ ರಾಷ್ಟ್ರೀಯ ತಂತ್ರಜ್ಞಾನ ದಿನದ ಧ್ಯೇಯ ವಾಕ್ಯ. ಅಂದರೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ದೇಶದ ಅಭಿವೃದ್ಧಿಗೆ ಅದ್ಭುತವಾಗಿ ಬಳಸಿಕೊಳ್ಳುವಂತೆಯೇ ಅದು ಸಹನೀಯವಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಈ ಧ್ಯೇಯವಾಕ್ಯ ನೆನಪಿಸುತ್ತದೆ.

ಪ್ರಧಾನಿ ಮೋದಿ ಅಭಿನಂದನೆ
ʻʻಇವತ್ತು ರಾಷ್ಟ್ರೀಯ ತಂತ್ರಜ್ಞಾನ ದಿನ. 1998ರ ಪೋಖ್ರಾನ್‌ ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ನಮ್ಮ ಶಕ್ತಿಶಾಲಿ, ಬುದ್ಧಿವಂತ ವಿಜ್ಞಾನಿಗಳು ಮತ್ತು ಅವರ ಪ್ರಯತ್ನಗಳಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಿದ್ದೇವೆ. ಅತ್ಯದ್ಭುತ ರಾಜಕೀಯ ಧೈರ್ಯ ಮತ್ತು ಮುತ್ಸದ್ದಿತನ ತೋರಿದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಸಾಮಾನ್ಯ ನಾಯಕತ್ವವನ್ನು ನಾವು ಇಂದು ಹೆಮ್ಮೆಯಿಂದ ನೆನೆಯುತ್ತೇವೆ,ʼʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ತಂತ್ರಜ್ಞಾನದಲ್ಲಿ ಭಾರತದ ಸ್ಥಾನಮಾನ
-ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುನ್ನುಗ್ಗುತ್ತಿದೆ. ಆದರೂ ಸಾಗಬೇಕಾದ ಹಾದಿ ಬಹಳಷ್ಟು ಇದೆ. ಚಂದ್ರಯಾನ, ಉಪಗ್ರಹಗಳ ಉಡಾವಣೆ ವಿಷಯದಲ್ಲಿ ಭಾರತ ಜಗತ್ತಿನ ಐದು ಅತ್ಯುನ್ನತ ರಾಷ್ಟ್ರಗಳಲ್ಲಿ ಒಂದಾಗಿದೆ.
– ತಂತ್ರಜ್ಞಾನ ಹೂಡಿಕೆ ತಾಣವಾಗಿ ಭಾರತ ಬೆಳೆಯುತ್ತಿದ್ದು, ಒಟ್ಟಾರೆ ಹೂಡಿಕೆಯಲ್ಲಿ ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿದೆ.
– ಜಾಗತಿಕ ಅನ್ವೇಷಣಾ ಸೂಚ್ಯಂಕದಲ್ಲಿ ಭಾರತದ ಈಗಿನ ರಾಂಕಿಂಗ್‌ 48ನೆಯದು.
– ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕ್ಷೇತ್ರದಲ್ಲಿನಲ್ಲಿ ಹೊಸ ಅನ್ವೇಷಣೆಗಳನ್ನು ನಡೆಸುತ್ತಿರುವ ಅಗ್ರ ದೇಶಗಳ ಪೈಕಿ ಭಾರತ 15ನೇ ಸ್ಥಾನದಲ್ಲಿದೆ.

Exit mobile version