Site icon Vistara News

SIM Swapping Scam: ಎಚ್ಚರ! ಒಟಿಪಿ ಇಲ್ಲದೆಯೂ ನಿಮ್ಮ ಖಾತೆಯಿಂದ ಹಣ ಎಗರಿಸುತ್ತಾರೆ; ಹೇಗಿದು?

sim

sim

ನವ ದೆಹಲಿ: ತಂತ್ರಜ್ಞಾನ (Technology) ಮುಂದುವರಿದಂತೆ ಅದನ್ನು ಬಳಸಿ ವಂಚಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇತ್ತೀಚೆಗೆ ದೆಹಲಿ ಮೂಲದ ಲಾಯರ್‌ ಒಬ್ಬರು ಸಿಮ್‌ ಸ್ವ್ಯಾಪಿಂಗ್‌ ವಂಚನೆಯಿಂದ (SIM Swapping Scam) ಸುಮಾರು 50 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹಾಗಾದರೆ ಸಿಮ್‌ ಸ್ವ್ಯಾಪಿಂಗ್‌ ವಂಚನೆ ಎಂದರೇನು? ವಂಚಕರು ಸಿಮ್‌ ಬಳಸಿಕೊಂಡು ಹೇಗೆಲ್ಲ ಮೋಸ ಮಾಡುತ್ತಾರೆ? ಇದರಿಂದ ಪಾರಾಗುವುದು ಹೇಗೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

50 ಲಕ್ಷ ರೂ. ಕಳಕೊಂಡ ಮಹಿಳೆ

ದೆಹಲಿ ಮೂಲದ 35 ವರ್ಷದ ಲಾಯರ್‌ ತಮಗೆ ಕೊರಿಯರ್‌ ಹೆಸರಿನಲ್ಲಿ ಬಂದ ಕರೆಯಿಂದ ಹೇಗೆ 50 ಲಕ್ಷ ರೂ. ಕಳೆದುಕೊಂಡರು ಎನ್ನುವುದನ್ನು ತಿಳಿಸಿದ್ದಾರೆ. ಅಪರಿಚಿತ ನಂಬರ್‌ನಿಂದ 3 ಮಿಸ್ಡ್‌ ಕಾಲ್‌ ಬಂದಿತ್ತು. ಬಳಿಕ ಆ ನಂಬರ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದವರು, ತಾವು ಕೊರಿಯರ್‌ ಸರ್ವಿಸ್‌ನವರು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಲಾಯರ್‌ ತಮ್ಮ ಮನೆ ವಿಳಾಸ ನೀಡಿದ್ದರು. ಅದಾದ ನಂತರ ಅಕೌಂಟ್‌ನಿಂದ ಹಣ ವರ್ಗಾವಣೆಯಾದ ಕುರಿತು 2 ಸಂದೇಶ ಬಂದಿತ್ತು ಎಂದು ಮಹಿಳೆ ದೆಹಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆ ಯಾವುದೇ ರೀತಿಯ ಒಟಿಪಿ (OTP) ಹಂಚಿಕೊಳ್ಳದಿದ್ದರೂ ವಂಚಕರು ಹಣ ಲಪಟಾಯಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಿಂದೆಲ್ಲ ವಂಚಕರು ಒಟಿಪಿ ಪಡೆದು ವಂಚಿಸುತ್ತಿದ್ದರು. ಇದೀಗ ಸಿಮ್‌ ಸ್ವ್ಯಾಪಿಂಗ್‌ ಎಂಬ ಮೋಸದ ಹೊಸ ವಿಧಾನ ಕಂಡುಕೊಂಡಿದ್ದಾರೆ ಎಂದು ಸೈಬರ್‌ ಪೊಲೀಸರು ಎಚ್ಚರಿಸಿದ್ದಾರೆ.

ಏನಿದು ಸಿಮ್‌ ಸ್ವ್ಯಾಪಿಂಗ್‌ ವಂಚನೆ?

ಬೇರೆ ಡಿವೈಸ್‌ನಿಂದ ನೀವು ಬಳಸುವ ಫೋನ ನಂಬರ್‌ ಅನ್ನು ನಿಮಗೇ ತಿಳಿಯದೇ ಬಳಸುವಂಥ ಕುತಂತ್ರವೇ ಸಿಮ್‌ ಸ್ವ್ಯಾಪಿಂಗ್‌. ನಿಮ್ಮ ನೆಟ್‌ವರ್ಕ್‌ ಪೂರೈಕೆದಾರರನ್ನು ಮೋಸಗೊಳಿಸಿ ವಂಚಕರು ಅವರ ಸಿಮ್ ಕಾರ್ಡ್‌ಗೆ ನಿಮ್ಮ ಸಂಖ್ಯೆಯನ್ನು ಲಿಂಕ್ ಮಾಡುತ್ತಾರೆ. ವಂಚಕರು ನಿಮ್ಮ ಫೋನ್ ನಂಬರ್‌ ಬಳಸಲು ಆರಂಭಿಸಿದ ಬಳಿಕ ನಿಮಗೆ ಬರುವ ಕರೆ ಮಾಡುವ ಅಥವಾ ಸಂದೇಶವನ್ನು ಅವರೇ ನಿಯಂತ್ರಿಸುತ್ತಾರೆ. ಹೀಗಾಗಿ ಬ್ಯಾಂಕ್‌ನಿಂದ ಬರುವ ಒಟಿಪಿಯನ್ನೂ ಅವರು ಬೇಕಾದ ರೀತಿ ಬಳಸಿಕೊಳ್ಳುತ್ತಾರೆ.

ಇದನ್ನು ಗಮನಿಸಿ

ವ್ಯಾಲಿಡಿಟಿ ಇದ್ದು, ನೆಟ್‌ವರ್ಕ್‌ ಇದ್ದೂ ಕರೆ ಮಾಡಲು, ಸಂದೇಶ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಆಗ ನಿಮ್ಮ ಸಿಮ್ ಡಿ-ಆ್ಯಕ್ಟಿವೇಟ್ ಆಗಿದ್ದು, ಇದನ್ನು ಸೈಬರ್ ಅಪರಾಧಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರ್ಥ. ಒಂದುವೇಳೆ ತಕ್ಷಣ ನೆಟ್‌ವರ್ಕ್‌ ಕಡಿತಗೊಂಡರೆ ಬೇರೆ ಫೋನ್‌ನಿಂದ ಅಧಿಕೃತ ಕಸ್ಟಮರ್ ಕೇರ್‌ ಸಂಪರ್ಕಿಸಿ ಅವರಿಂದ ವಿವರ ಪಡೆದುಕೊಳ್ಳಿ. ಸಮಸ್ಯೆಯಾಗಿದೆ ಎಂದು ಗೊತ್ತಾದರೆ, ತಕ್ಷಣ ಸಿಮ್ ಬ್ಲಾಕ್ ಮಾಡಿಸಿ, ಪೊಲೀಸ್ ದೂರು ನೀಡುವುದನ್ನು ಮರೆಯಬೇಡಿ.

ವಂಚಕರ ಜಾಲದಿಂದ ಹೀಗೆ ಪಾರಾಗಿ

ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ವಂಚಕರ ಕೈಗೆ ಸಿಗದೆ ಪಾರಾಗಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ.

ಪಾಸ್‌ವರ್ಡ್‌ ಎಂಬ ʼಸೆಕ್ಯುರಿಟಿʼ

ಪಾಸ್‌ವರ್ಡ್‌ ನಮ್ಮ ವ್ಯವಹಾರಗಳ ರಕ್ಷಕನಾಗಿ ಕೆಲ ಮಾಡುತ್ತದೆ. ಇದಕ್ಕಾಗಿಯೇ ಸುಲಭದ ಪಾಸ್‌ವರ್ಡ್‌ ಬಳಸಬೇಡಿ ಎಂದು ತಜ್ಞರು ಎಚ್ಚರಿಸುತ್ತಾರೆ. ಇತ್ತೀಚೆಗೆ ಪೇಟಿಎಂ ಸ್ಥಾಪಕ, ಸಿಇಒ ವಿಜಯ್‌ ಶೇಖರ್‌ ಶರ್ಮಾ ಪಾಸ್‌ವರ್ಡ್‌ ಬಗ್ಗೆ ಹಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಪಾಸ್‌ವರ್ಡ್‌ ಅನ್ನು ಹ್ಯಾಕ್‌ ಮಾಡಲು ವಂಚಕರಿಗೆ ಸಾಮಾನ್ಯವಾಗಿ ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ವಿವರಿಸಿದ್ದಾರೆ. ಪಾಸ್‌ವರ್ಡ್‌ ದೊಡ್ಡದಾಗಿದ್ದಷ್ಟೂ ಸುರಕ್ಷತೆ ಹೆಚ್ಚು ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿವರವಾದ ಚಾರ್ಟ್‌ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: Cyber Crime: ಬೆಂಗಳೂರಿನಲ್ಲಿ ಖತರ್ನಾಕ್ ಹ್ಯಾಕರ್ ಬಂಧನ; 4.16 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ

Exit mobile version