Site icon Vistara News

ISRO SSLV Launch | ಎಸ್​ಎಸ್​ಎಲ್​ವಿ ವಾಹಕ ಎಡವಿದ್ದೆಲ್ಲಿ? ಇಲ್ಲಿದೆ ನಿಖರ ಮಾಹಿತಿ

ISRO
ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ನೂತನವಾಗಿ ನಿರ್ಮಾಣವಾದ ಸಣ್ಣ ಉಪಗ್ರಹ ಉಡಾವಣಾ ರಾಕೆಟ್ (ಎಸ್ಎಸ್ಎಲ್‌ವಿ) ಭಾನುವಾರ ಬೆಳಗ್ಗೆ ತನ್ನ ಪ್ರಥಮ ಉಡಾವಣೆಯ ಸಂದರ್ಭದಲ್ಲಿ ಒಂದಷ್ಟು ಮಾಹಿತಿ ನಷ್ಟದ ಸಮಸ್ಯೆಯನ್ನು ಎದುರಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಕುರಿತು ಮಾಹಿತಿ ನೀಡಿ, ಇಂದು ಉಡಾವಣೆಯಾದ ಉಪಗ್ರಹಗಳನ್ನು ಉಡಾವಣಾ ರಾಕೆಟ್ ಎಸ್ಎಸ್ಎಲ್‌ವಿ ಡಿ1 356 ಕಿಲೋಮೀಟರ್‌ನ ವೃತ್ತಾಕಾರದ ಕಕ್ಷೆಗೆ ಸೇರಿಸುವ ಬದಲು, 365 ಕಿಲೋಮೀಟರ್ – 76 ಕಿಲೋಮೀಟರ್‌ನ ದೀರ್ಘವೃತ್ತದ ಕಕ್ಷೆಗೆ ಸೇರಿಸಿರುವುದರಿಂದ ಈ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ ಎಂದಿದೆ.

ಈ ನೂತನ ರಾಕೆಟ್ 145 ಕೆ.ಜಿ ತೂಕವುಳ್ಳ ಭೂ ವೀಕ್ಷಣಾ ಉಪಗ್ರಹ, ಇಒಎಸ್ – 02 ಮತ್ತು ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭಕ್ಕಾಗಿ 750 ಶಾಲಾ ವಿದ್ಯಾರ್ಥಿನಿಯರು ನಿರ್ಮಿಸಿರುವ, ಅಂದಾಜು 8 ಕೆ.ಜಿ ತೂಕದ ಆಜಾದಿಸ್ಯಾಟ್ ಉಪಗ್ರಹವನ್ನು ಸ್ಪೇಸ್‌ಕಿಡ್ಸ್ ಇಂಡಿಯಾ ಯೋಜನೆಯಡಿ ಕೊಂಡೊಯ್ದಿತ್ತು.

ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಲು ಎಸ್ಎಸ್ಎಲ್‌ವಿ ಡಿ1 ಬಳಿ ಮೂರು ಘನ ಇಂಧನ ಆಧಾರಿತ ಹಂತಗಳು ಮತ್ತು ಒಂದು ದ್ರವ ಇಂಧನ ಆಧಾರಿತ ವೆಲೋಸಿಟಿ ಟ್ರಿಮ್ಮಿಂಗ್ ಮಾಡ್ಯೂಲ್ (ವಿಟಿಎಂ) ವ್ಯವಸ್ಥೆ ಇದ್ದು, ಇದರ ವಾಣಿಜ್ಯ ಉಡಾವಣಾ ಉದ್ದೇಶಕ್ಕಾಗಿ ಬೇಕಾಗುವ ಕ್ಷಿಪ್ರ ಟರ್ನ್ ಅರೌಂಡ್ ಅವಧಿಯನ್ನೂ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿತ್ತು. ಈ ರಾಕೆಟ್ 120 ಟನ್‌ಗಿಂತಲೂ ಕೊಂಚ ಹೆಚ್ಚಿನ ತೂಕ ಹೊಂದಿದ್ದು, 34 ಮೀಟರ್ ಎತ್ತರವಾಗಿದೆ.

ಎಸ್‌ಎಸ್ಎಲ್‌ವಿಯ ಉಡಾವಣೆಯ ಅಂತಿಮ ಹಂತದಲ್ಲಿ, ವೆಲೋಸಿಟಿ ಟರ್ಮಿನಲ್ ಮಾಡ್ಯೂಲ್‌ನಲ್ಲಿ (ವಿಟಿಎಂ) ಸಮಸ್ಯೆ ಎದುರಾಗಿತ್ತು. ಉಡಾವಣಾ ಪ್ರೊಫೈಲ್ ಪ್ರಕಾರ, ಉಡಾವಣೆಗೊಂಡ 653 ಸೆಕೆಂಡುಗಳ ಬಳಿಕ, ವಿಟಿಎಂ 20 ಸೆಕೆಂಡುಗಳ ಕಾಲ ಉರಿಯಬೇಕಾಗಿತ್ತು. ಆದರೆ ಅದು ಕೇವಲ 0.1 ಸೆಕೆಂಡುಗಳ ಕಾಲ ಉರಿದಿತ್ತು. ಇದರಿಂದಾಗಿ ರಾಕೆಟ್‌ಗೆ ಮೇಲಕ್ಕೇರಲು ಅಗತ್ಯವಿದ್ದ ಎತ್ತರದ ವರ್ಧನೆ ದೊರೆಯಲಿಲ್ಲ.

ರಾಕೆಟ್ ಹೊತ್ತೊಯ್ದಿದ್ದ ಎರಡು ಉಪಗ್ರಹಗಳು, ಮೊದಲನೆಯದಾಗಿ ಭೂ ವೀಕ್ಷಣಾ ಉಪಗ್ರಹ ಇಒಎಸ್-2 ಹಾಗೂ ವಿದ್ಯಾರ್ಥಿಗಳು ನಿರ್ಮಿಸಿರುವ ಆಜಾದಿಸ್ಯಾಟ್ ಉಪಗ್ರಹಗಳು ವಿಟಿಎಂ ಉರಿದ ಬಳಿಕ ರಾಕೆಟ್‌ನಿಂದ ಬೇರ್ಪಟ್ಟಿವೆ. ಇದರ ಪ್ರಕಾರ, ಈ ಎರಡೂ ಉಪಗ್ರಹಗಳು ಅವುಗಳ ಉದ್ದೇಶಿತ ಕಕ್ಷೆಯನ್ನು ತಪ್ಪಿಸಿಕೊಂಡು, ದೀರ್ಘ ವೃತ್ತಾಕಾರದ ಕಕ್ಷೆಗೆ ಸೇರ್ಪಡೆಗೊಂಡಿರುವ ಸಾಧ್ಯತೆಗಳು ದಟ್ಟವಾಗಿವೆ.

ಹಾಗೆಂದ ಮಾತ್ರಕ್ಕೆ ಇಸ್ರೊ ತನ್ನ ರಾಕೆಟ್ ಮಾದರಿಯ ಮೊದಲ ಉಡಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಇದೇನೂ ಮೊದಲನೆಯ ಸಲವಲ್ಲ. ಇಸ್ರೋದ ಅತ್ಯಂತ ನಂಬಿಕಸ್ಥ ಹಾಗೂ ಸಮರ್ಥ ಉಪಗ್ರಹ ಉಡಾವಣಾ ರಾಕೆಟ್ ಎನಿಸಿಕೊಂಡಿರುವ ಪಿಎಸ್ಎಲ್‌ವಿ ಸಹ ತನ್ನ ಚೊಚ್ಚಲ ಉಡಾವಣೆಯ ಸಂದರ್ಭದಲ್ಲಿ, ಅಂದರೆ, ಸೆಪ್ಟೆಂಬರ್20, 1993ರಲ್ಲಿ ವೈಫಲ್ಯ ಅನುಭವಿಸಿತ್ತು.

ಇದನ್ನೂ ಓದಿ: ಎಸ್​ಎಸ್​ಎಲ್​ವಿಯಿಂದ ಉಡಾವಣೆಗೊಂಡಿದ್ದ ಉಪಗ್ರಹಗಳು ಇನ್ನು ಬಳಕೆಗೆ ಬರುವುದಿಲ್ಲವೆಂದ ಇಸ್ರೋ

Exit mobile version