Site icon Vistara News

Smart Necklace: ಧೂಮಪಾನ ತ್ಯಜಿಸಲು ಸಹಾಯ ಮಾಡುವ ಸ್ಮಾರ್ಟ್​ ನೆಕ್ಲೆಸ್​; ಸಿಗರೇಟ್​ ಹೆಚ್ಚಾದಂತೆ ಬಣ್ಣವೂ ಬದಲಾಗುತ್ತದೆ!

This Smart Necklace Can Help you Stop Smoking

ಸ್ಮಾರ್ಟ್​ ಫೋನ್​ ಆಯ್ತು, ಸ್ಮಾರ್ಟ್ ವಾಚ್​ ಆಯ್ತು..ಈಗೊಂದು ಸ್ಮಾರ್ಟ್​ ನೆಕ್ಲೆಸ್ (Smart Necklace)​ ರೆಡಿ ಆಗಿದೆ. ಈ ಸ್ಮಾರ್ಟ್​ ನೆಕ್ಲೆಸ್​ನ್ನು ಯುಎಸ್​​ನ ನಾರ್ತ್​ ವೆಸ್ಟರ್ನ್​ ಯೂನಿವರ್ಸಿಟಿಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಏನುಪಯೋಗ ಎಂದು ಕೇಳುತ್ತಿದ್ದೀರಾ? ಇಲ್ನೋಡಿ, ಈ ಸ್ಮಾರ್ಟ್ ನೆಕ್ಲೆಸ್​​ ಸಿಗರೇಟ್​ ಚಟ ಬಿಡಲು ಸಹಾಯ ಮಾಡುತ್ತದೆಯಂತೆ..!

ಧೂಮಪಾನ ಮಾಡುವ ಒಬ್ಬ ವ್ಯಕ್ತಿ ದಿನವೊಂದಕ್ಕೆ ಎಷ್ಟು ಪ್ರಮಾಣದಲ್ಲಿ ಸಿಗರೇಟ್​ ಸೇದುತ್ತಾನೆ ಎಂಬುದನ್ನು ಪತ್ತೆ ಹಚ್ಚುವ ಸಾಧನಗಳು ಈಗಾಗಲೇ ಕೆಲವು ಇದ್ದರೂ, ಸದ್ಯ ಅಭಿವೃದ್ಧಿಯಾಗಿರುವ ನೆಕ್ಲೆಸ್​ ಇನ್ನಷ್ಟು ಪರಿಣಾಮಕಾರಿಯಾಗಿದೆಯಂತೆ. ಅತ್ಯಂತ ಪ್ರಕಾಶಮಾನವಾದ ನೀಲಿ ಬಣ್ಣದ ಪೆಂಡಲ್​​ ಇರುತ್ತದೆಯಲ್ಲ, ಅದನ್ನೇ ಹೋಲುವ ಉಪಕರಣವುಳ್ಳ ನೆಕ್ಲೆಸ್​ ಇದು. ಸಿಗರೇಟ್​ ಚಟ ಅಂಟಿಸಿಕೊಂಡವರು ಈ ನೆಕ್ಲೆಸ್​ನ್ನು ಕುತ್ತಿಗೆಗೆ ಹಾಕಿಕೊಂಡಿದ್ದರೆ, ತಾವು ದಿನಕ್ಕೆ ಯಾವ ಪ್ರಮಾಣದಲ್ಲಿ ಸಿಗರೇಟ್​ ಸೇವನೆ ಮಾಡಿದ್ದೇವೆ ಎಂಬುದನ್ನು ತಿಳಿಯಬಹುದು. ನೆಕ್ಲೆಸ್​​ನಲ್ಲಿರುವ ನೀಲಿ ಬಣ್ಣದ ಉಪಕರಣ ಒಂದು ಥರ್ಮಲ್​ ಸೆನ್ಸಾರ್​​ನಂತೆ ಕೆಲಸ ಮಾಡುತ್ತದೆ. ಮೊದಲು ಕಡುನೀಲಿಯಾಗಿ ಇರುವ ಇದು, ಸಿಗರೇಟ್​ನಿಂದ ದೇಹದಲ್ಲಿ ಬಿಸಿಯಾದಾಗ ಹಸಿರು ಮಿಶ್ರಿತ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇನ್ನೂ ಹೀಟ್​ ಹೆಚ್ಚಾದಾಗ ನೇರಳೆ ಮಿಶ್ರಿತ ನೀಲಿಯಾಗುತ್ತದೆ. ಹೀಗೆ ಸೇದಿದ ಸಿಗರೇಟ್​ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಉಪಕರಣದ ಬಣ್ಣ ಬದಲಾಗಿ, ಮಿತಿಮೀರಿದಾಗ ಮಂದ ನೀಲಿಬಣ್ಣವಾಗಿ ತಿರುಗುತ್ತದೆ ಎಂದು ಹೇಳಲಾಗಿದೆ.

ಸಿಗರೇಟ್​ ಚಟ ಅಂಟಿಸಿಕೊಂಡವರಿಗೆ ತಾವು ದಿನಕ್ಕೆ ಎಷ್ಟು ಸಿಗರೇಟ್​ ಸೇದಿದ್ದೇವೆ. ವಿಷಯುಕ್ತ ಹೊಗೆ ಯಾವ ಪ್ರಮಾಣದಲ್ಲಿ ಶರೀರದ ಒಳಗೆ ಹೋಯಿತು? ಬಾಯಿಂದ ಹೊರಗೆ ಬಿಟ್ಟ ಹೊಗೆಯ ಪ್ರಮಾಣ ಏನು ಎಂಬಿತ್ಯಾದಿ ಯಾವುದರ ಅರಿವೂ ಇರುವುದಿಲ್ಲ. ಆದರೆ ಈ ನೆಕ್ಲೆಸ್​ ನೋಡೋಕೆ ಒಂದು ಆಭರಣದ ರೀತಿಯಲ್ಲಿಯೇ ಇದ್ದರೂ, ಈ ಎಲ್ಲವನ್ನೂ ಟ್ರ್ಯಾಕ್​ ಮಾಡುತ್ತದೆ. ಒಬ್ಬ ವ್ಯಕ್ತಿ ಸಿಗರೇಟ್​ ಹಚ್ಚಿ, ಹೊಗೆಯನ್ನು ಬಾಯಿಯಲ್ಲಿ ಇಟ್ಟುಕೊಂಡ ಸಂದರ್ಭದಲ್ಲಿ ಉಸಿರಾಟ ಮಾಡಿದಾಗ ಎಷ್ಟು ಧೂಮ ಒಳಗೆ ಹೋಯಿತು ಎಂಬುದನ್ನು ಪೆಂಡಾಲ್​ನಂಥ ಉಪಕರಣ ಪತ್ತೆ ಹಚ್ಚುತ್ತದೆ. ಹೀಗೆ ಒಳಗೆ ಹೋದ ಹೊಗೆಯ ಮಟ್ಟ ಹೆಚ್ಚಾದಂತೆ, ಅದರ ಬಣ್ಣವೂ ಬದಲಾಗುತ್ತದೆ. ಹೀಗೆ ರಿಯಲ್​ ಟೈಮ್​​ನಲ್ಲಿ ತನ್ನ ಶರೀರದೊಳಗೆ ಧೂಮ ಹೋಗುತ್ತಿರುವುದನ್ನು ನೋಡಿದರೆ, ಸಹಜವಾಗಿಯೇ ಆ ವ್ಯಕ್ತಿಯಲ್ಲಿ ಸ್ವಲ್ಪ ಅಳುಕು ಮೂಡಬಹುದು. ತಾನಿನ್ನು ಕಡಿಮೆ ಸೇದಬೇಕು ಎಂದು ಅನ್ನಿಸಲು ಶುರುವಾಗಿ, ಸಿಗರೇಟ್​ ಬಿಟ್ಟುಬಿಡಬೇಕು ಎಂದು ಆತನ ಮನಸಿಗೇ ಅನ್ನಿಸುತ್ತದೆ.

ಇದನ್ನೂ ಓದಿ: Swami Koragajja : ಕಾಫಿನಾಡಲ್ಲಿ ಕೊರಗಜ್ಜನ ಪವಾಡ; ಕುಡಿತ, ಧೂಮಪಾನದಿಂದ ಮುಕ್ತಿ ನೀಡುವ ದೈವವಾಗಿ ಪ್ರಸಿದ್ಧಿ!

ಅಷ್ಟೇ ಅಲ್ಲ, ಸಿಗರೇಟ್​ ಬಿಡಬೇಕು ಎಂದು ಚಿಕಿತ್ಸೆ ಪಡೆಯುತ್ತಿರುವವರಿಗೂ ಇದು ಸಹಾಯ ಮಾಡುತ್ತದೆ. ಆತ ಒಳಗೆ ತೆಗೆದುಕೊಳ್ಳುವ ಹೊಗೆಯುಕ್ತ ಉಸಿರಿನ ಮಟ್ಟವನ್ನು ಆಧರಿಸಿ, ಅದಕ್ಕೆ ತಕ್ಕ ಚಿಕಿತ್ಸೆ ನೀಡಿ ಸಿಗರೇಟ್​ ಚಟದಿಂದ ಅವನನ್ನು ಮುಕ್ತಗೊಳಿಸಬಹುದು ಎನ್ನುತ್ತಾರೆ ತಜ್ಞರು.

Exit mobile version