ನವ ದೆಹಲಿ: ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂಗಳಲ್ಲಿ ಒಂದು ಬಾರಿ ನೀವೇನಾದರೂ ಪೋಸ್ಟ್ ಮಾಡಿದರೆ ಅದನ್ನು ಮತ್ತೆ ಎಡಿಟ್ ಮಾಡಬಹುದು. ಆದರೆ ಈ ಸೌಲಭ್ಯ ವಾಟ್ಸ್ ಆ್ಯಪ್ (WhatsApp)ನಲ್ಲಾಗಲೀ, ಟ್ವಿಟರ್‌ನಲ್ಲಾಗಲಿ ಇಲ್ಲ. ಟ್ವಿಟರ್‌ನಲ್ಲಿ ಮಾಡಿದ ಟ್ವೀಟ್‌ನಲ್ಲಿ ಏನಾದರೂ ತಪ್ಪಾದರೆ ನೀವದನ್ನು ಡಿಲೀಟ್ ಮಾಡಬೇಕೇ ಹೊರತು, ತಪ್ಪಾಗಿದ್ದಷ್ಟನ್ನೇ ಸರಿಪಡಿಸಲು ಸಾಧ್ಯವಿಲ್ಲ. ಅಂತೆಯೇ ವಾಟ್ಸ್ ಆ್ಯಪ್‌ನಲ್ಲೂ ನೀವ್ಯಾರಿಗಾದರೂ ಸಂದೇಶ ಕಳಿಸಿದರೆ, ಅದು ಸರಿಯಾಗಿಲ್ಲ, ತಪ್ಪಾಗಿದೆ ಎಂದಾದರೆ ಡಿಲೀಟ್ ಮಾಡಿ ಬೇರೆ ಸಂದೇಶವನ್ನೇ ಕಳಿಸಬೇಕು ವಿನಃ ಅದನ್ನು ಎಡಿಟ್ ಮಾಡಲಾಗದು. ಟ್ವಿಟರ್‌ನಲ್ಲಿ ಎಡಿಟ್ ಆಯ್ಕೆ ಕೊಡಬೇಕು ಎಂಬ ಚರ್ಚೆ 2020ರಿಂದಲೂ ಇದೆ. ಅದರಲ್ಲೂ ಈ ಬಾರಿ ಗಂಭೀರವಾಗಿ ಪರ-ವಿರೋಧ ಚರ್ಚೆಗಳಾಗಿವೆ. ಈಗಂತೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡಿದ ಮೇಲೆ ಎಡಿಟ್ ಆಯ್ಕೆ ಖಂಡಿತ ಕೊಡಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಅದೇನೇ ಆಗಲಿ, ಈಗ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ ಆ್ಯಪ್ ಈ ಎಡಿಟ್ ಆಪ್ಷನ್ ಕೊಡಲು ಮುಂದಾಗಿದ್ದು, ಬಳಕೆದಾರರಿಗೆ ಇದು ಗುಡ್‌ನ್ಯೂಸ್.
ವಾಟ್ಸ್ ಆ್ಯಪ್ ಈ ಎಡಿಟ್ ಆಯ್ಕೆಯನ್ನು ತನ್ನ ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸುತ್ತಿದ್ದು, ಕೆಲವೇ ದಿನಗಳಲ್ಲಿ ಬೀಟಾ ವರ್ಷನ್ ಬಳಕೆದಾರರು ಇದನ್ನು ಪಡೆಯಲಿದ್ದಾರೆ ಎಂದು ಮೆಸೇಜಿಂಗ್ ಆ್ಯಪ್‌ನ WABetaInfo ವೆಬ್‌ಸೈಟ್ ಮಾಹಿತಿ ನೀಡಿದೆ. ಇದು ಲಾಂಚ್ ಆಗುತ್ತಿದ್ದಂತೆ, ಆ್ಯಂಡ್ರಾಯ್ಡ್, ಐಒಎಸ್ (iOs) ಜತೆಗೆ ಡೆಸ್ಕ್‌ಟಾಪ್‌ನಲ್ಲೂ ಆಪ್ಷನ್ ಸಿಗಲಿದೆ. ಈ ವೈಶಿಷ್ಟವನ್ನು ಅಳವಡಿಸಲು ವಾಟ್ಸ್ ಆ್ಯಪ್ ಐದು ವರ್ಷಗಳ ಹಿಂದೆಯೂ ಒಮ್ಮೆ ಕೆಲಸ ಶುರು ಮಾಡಿತ್ತು. ಟೆಸ್ಟಿಂಗ್‌ಗಳನ್ನೂ ನಡೆಸಿತ್ತು. ಆದರೆ ಕೆಲವು ದಿನಗಳ ಬಳಿಕ ಅದು ಅಲ್ಲಿಗೇ ನಿಂತುಹೋಗಿತ್ತು. ಈಗ ಮತ್ತೆ ವಾಟ್ಸ್‌ಆ್ಯಪ್ ಈ ಪ್ರಯತ್ನ ಜಾರಿಯಲ್ಲಿಟ್ಟಿದ್ದು, ಅದಕ್ಕೆ ತಕ್ಕಂತೆ ತ್ವರಿತವಾಗಿ ಪರೀಕ್ಷೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 19ರ ವಯಸ್ಸಿನಲ್ಲೇ ಕಾಲೇಜ್ ಡ್ರಾಪ್ ಔಟ್ ಆಗಿದ್ದ ಅಲೆಕ್ಸಾಂಡರ್ ವಾಂಗ್, ಈಗ ಜಗತ್ತಿನ ಕಿರಿಯ ಬಿಲಿಯನೇರ್ ಉದ್ಯಮಿ!
ವಾಟ್ಸ್ ಆ್ಯಪ್ ಎಡಿಟ್ ಆಯ್ಕೆಯನ್ನು ಅಳವಡಿಸಿ, ಟೆಸ್ಟಿಂಗ್ ನಡೆಸುತ್ತಿರುವ ಸ್ಕ್ರೀನ್‌ಶಾಟ್‌ನ್ನು ಕೂಡ WABetaInfo ಶೇರ್ ಮಾಡಿಕೊಂಡಿದೆ. ಕಳಿಸಲಾದ ಸಂದೇಶವನ್ನು ಸೆಲೆಕ್ಟ್ ಮಾಡಿದಾಗ ಅಲ್ಲಿ ಫಾರ್ವರ್ಡ್, ಡಿಲೀಟ್, ಸ್ಟಾರ್ ಮಾಡುವ ಆಪ್ಷನ್‌ಗಳ ಜತೆ ಅಲ್ಲೊಂದು ಮೆನು ಐಕಾನ್ (ಬಲಭಾಗದಲ್ಲಿ ಇರುವ ಮೂರು ಡಾಟ್ಸ್‌ಗಳು) ಕಾಣಿಸುತ್ತದೆ. ನೀವದನ್ನು ಕ್ಲಿಕ್ ಮಾಡಿದರೆ Copy, Info ಎಂಬ ಆಯ್ಕೆಗಳನ್ನು ನೋಡಬಹುದು. ಇದರ ಜತೆಗೇ ಎಡಿಟ್ (Edit) ಎಂಬ ಹೊಸ ಆಯ್ಕೆಯೂ ಸೇರ್ಪಡೆಗೊಳ್ಳಲಿದೆ ಎಂದು WABetaInfo ವಿವರಿಸಿದೆ. ಆದರೆ ಇದೇ ಅಂತಿಮವಲ್ಲ. ಟೆಸ್ಟ್ ಹಂತ ಮುಗಿದು ಅಂತಿಮವಾಗಿ ಈ ಫೀಚರ್ ಬರುವ ಹೊತ್ತಿಗೆ ಕೆಲವು ಬದಲಾವಣೆಗಳು ಆಗಬಹುದು ಎಂದೂ ತಿಳಿಸಿದೆ.
ಇದನ್ನೂ ಓದಿ: ಡಿಜಿ ಲಾಕರ್ ಈಗ ವಾಟ್ಸ್ ಆಪ್‌ನಲ್ಲಿ ಲಭ್ಯ, ದಾಖಲೆಗಳನ್ನು ಇಡಲು ಡಿಜಿಟಲ್ ಸೇವೆ