ಹೊಸದಿಲ್ಲಿ: ಸುಮಾರು ಮೂರು ದಶಕಗಳಿಂದ ವಿಂಡೋಸ್ (Windows) ಬಳಕೆದಾರರು ಬಳಸುತ್ತ ಬಂದಿರುವ, ಬಳಕೆಸ್ನೇಹಿಯಾದ ವರ್ಡ್‌ಪ್ಯಾಡ್ (WordPad) ಅನ್ನು ಮೈಕ್ರೋಸಾಫ್ಟ್ (Microsoft windows) ತೆಗೆದುಹಾಕುತ್ತಿದೆ.
ವಿಂಡೋಸ್ ಆಪರೇಟಿಂಗ್ ಸಿಸ್ಟಂನ ಭವಿಷ್ಯದ ಆವೃತ್ತಿಗಳಲ್ಲಿ WordPad ಇರುವುದಿಲ್ಲ ಎಂದು ಮೈಕ್ರೋಸಾಫ್ಟ್ ಅಧಿಕೃತವಾಗಿ ದೃಢಪಡಿಸಿದೆ. ಉಚಿತ ಬೇಸಿಕ್ ವರ್ಡ್ ಪ್ರೊಸೆಸರ್ (Word processor) ಆಗಿರುವ ವರ್ಡ್‌ಪ್ಯಾಡ್, ಸುಮಾರು 30 ವರ್ಷಗಳಿಂದ ವಿಂಡೋಸ್ ಆಪರೇಟಿಂಗ್ ವ್ಯವಸ್ಥೆಯ ಭಾಗವಾಗಿದೆ. ಇದನ್ನು ಮೂಲತಃ 1995ರಲ್ಲಿ ವಿಂಡೋಸ್ 95 ಜೊತೆಗೆ ಪರಿಚಯಿಸಲಾಯಿತು.
WordPad ಅನ್ನು ಅಧಿಕೃತವಾಗಿ ತೆಗೆದುಹಾಕುವುದರ ಮೂಲಕ Microsoft ಪರ್ಯಾಯ ವರ್ಡ್ ಪ್ರೊಸೆಸರ್ ಆಗಿರುವ Microsoft Word ಅನ್ನು ಪ್ರಮೋಟ್ ಮಾಡಲಿದೆ. ಇದು ಪಾವತಿ ಫೀಚರ್ ಆಗಿದ್ದು, ವರ್ಡ್‌ಪ್ಯಾಡ್ ಹೊಂದಿರದ ಹಲವಾರು ವಿಶಿಷ್ಟ ಫೀಚರ್‌ಗಳನ್ನು ಹೊಂದಿದೆ. ಇದು Office 365 ಚಂದಾದಾರಿಕೆಯ ಭಾಗವಾಗಿದೆ.
Microsoftನ ಅಧಿಕೃತ ಪ್ರಕಟಣೆ ಹೀಗಿದೆ: “WordPad ಅನ್ನು ಇನ್ನು ಮುಂದೆ ನವೀಕರಿಸಲಾಗುವುದಿಲ್ಲ ಮತ್ತು ವಿಂಡೋಸ್‌ನ ಭವಿಷ್ಯದ ಆವೃತ್ತಿಯಲ್ಲಿ ಇದನ್ನು ತೆಗೆದುಹಾಕಲಾಗುತ್ತದೆ. .doc ಮತ್ತು .rtfನಂತಹ ಪಠ್ಯ ದಾಖಲೆಗಳನ್ನು ರಚಿಸಿ ಕಾಪಾಡಿಕೊಳ್ಳಲು Microsoft Word, Windows Notepad ಅಂತಹ ಸರಳ ಪ್ರೊಸೆಸರ್‌ಗಳನ್ನು ನಾವು ಶಿಫಾರಸು ಮಾಡುತ್ತೇವೆ.ʼʼ
ವಿಂಡೋಸ್ 7 ರಿಬ್ಬನ್ ಯುಐ ಆವೃತ್ತಿಯ ಬಳಿಕ ವರ್ಡ್‌ಪ್ಯಾಡ್ ಅನ್ನು ನವೀಕರಿಸಲಾಗಿಲ್ಲ. AI- ಚಾಲಿತ ವೈಶಿಷ್ಟ್ಯಗಳೊಂದಿಗೆ ಬರಲಿರುವ ಅತ್ಯಾಧುನಿಕ Windows 12 ಆವೃತ್ತಿ ಸದ್ಯದಲ್ಲೇ ಬರಲಿದೆ ಎಂದು ನಿರೀಕ್ಷಿಸಲಾಗಿದ್ದು, ಅದರಲ್ಲಿ ವರ್ಡ್‌ಪ್ಯಾಡ್ ತೆಗೆದುಹಾಕಲಿದೆ ಎನ್ನಲಾಗಿದೆ.
ಇದನ್ನೂ ಓದಿ: Google Bard: ಜಾಟ್‌ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ಬಾರ್ಡ್, ಮೈಕ್ರೋಸಾಫ್ಟ್‌ಗೆ ಠಕ್ಕರ್