Site icon Vistara News

International Tiger Day: ಭಾರತದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಿವು

10 prominent tiger reserves in India

ಇಂದು ಅಂತಾರಾಷ್ಟ್ರೀಯ ಹುಲಿಗಳ ದಿನ (International Tiger Day). ಹುಲಿಗಳ ರಕ್ಷಣೆ ಮನುಷ್ಯರಾದವರ ಹೊಣೆ. ಕಾಡನ್ನು ಕಡಿದು ಕಾಂಕ್ರೀಟ್‌ ನಾಡನ್ನು ಮಾಡಿಕೊಳ್ಳುತ್ತ ಬಂದಿರುವ ಮನುಷ್ಯ ಕೆಲವು ಪ್ರದೇಶಗಳನ್ನು ಹುಲಿಗಳಿಗೆಂದೇ ಮೀಸಲಿಟ್ಟಿದ್ದಾನೆ. ಭಾರತದಲ್ಲಿ ಈ ರೀತಿಯಲ್ಲಿ ಹುಲಿಗಳಿಗೆಂದು ಮೀಸಲಿಡಲಾಗಿರುವ 10 ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳ ಬಗ್ಗೆ ಇಲ್ಲಿದೆ ಮಾಹಿತಿ.

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ


ಉತ್ತರಾಖಂಡದಲ್ಲಿರುವ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಭಾರತದ ಅತ್ಯಂತ ಹಳೆಯ ಹಾಗೂ ಜನಪ್ರಿಯ ರಾಷ್ಟ್ರೀಯ ಉದ್ಯಾನವನವಾಗಿದೆ. ಈ ಉದ್ಯಾನವನವು ರಾಯಲ್ ಬೆಂಗಾಲ್ ಹುಲಿ ಸೇರಿದಂತೆ 230ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಮತ್ತು 50 ಜಾತಿಯ ಸಸ್ತನಿಗಳಿಗೆ ನೆಲೆಯಾಗಿದೆ. ಹಿಮಾಲಯದ ತಪ್ಪಲಿನಲ್ಲಿರುವ ಈ ಉದ್ಯಾನವನವು ರಾಮಗಂಗಾ ನದಿಯ ಆಕರ್ಷಕ ನೋಟವನ್ನು ನೀಡುತ್ತದೆ.

ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ

ಈ ಉದ್ಯಾನವನವು ಬಾಂಗ್ಲಾದೇಶದೊಂದಿಗಿನ ಭಾರತದ ಗಡಿ ಭಾಗವಾಗಿರುವ ಬಂಗಾಳದ ಡೆಲ್ಟಾದಲ್ಲಿದೆ. ಇಲ್ಲಿ 300 ರಾಯಲ್‌ ಬೆಂಗಾಲ್‌ ಹುಲಿಗಳು ಸೇರಿದಂತೆ ವಿವಿಧ ವನ್ಯಜೀವಿ ಪ್ರಭೇದಗಳಿವೆ. ಇದು ಸೊಂಪಾದ ಮ್ಯಾಂಗ್ರೋವ್‌ ಕಾಡಿನ ಪ್ರದೇಶವಾಗಿದ್ದು ಸಣ್ಣ ಸಣ್ಣ ದ್ವೀಪಗಳೂ ಇಲ್ಲಿವೆ.

ಕನ್ಹಾ ರಾಷ್ಟ್ರೀಯ ಉದ್ಯಾನವನ

ಮಧ್ಯಪ್ರದೇಶದಲ್ಲಿ ಕನ್ಹಾ ರಾಷ್ಟ್ರೀಯ ಉದ್ಯಾನವನವಿದೆ. ಈ ಉದ್ಯಾನವನ 940 ಚದರ ಕಿ.ಮೀ.ಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿ ಹರಡಿದೆ. ಇಲ್ಲಿ ಚಿರತೆಗಳು, ಕರಡಿಗಳು, ಕಾಡು ನಾಯಿಗಳು ಸೇರಿ ಅನೇಕ ಜಾತಿಯ ವನ್ಯಜೀವಿಗಗಳಿವೆ. ಇಲ್ಲಿ ಪ್ರವಾಸಿಗರಿಗೆ ಆನೆ ಸವಾರಿ ಮಾಡುವುದಕ್ಕೂ ಅವಕಾಶವಿದೆ. ಹಾಗೆಯೇ ಬಂಜಾರ್‌ ನದಿಯಲ್ಲಿ ದೋಣಿ ವಿಹಾರವನ್ನೂ ಮಾಡಬಹುದಾಗಿದೆ.

ಬಾಂಧವಗಢ ರಾಷ್ಟ್ರೀಯ ಉದ್ಯಾನವನ


ಈ ಉದ್ಯಾನವನವೂ ಕೂಡ ಮಧ್ಯಪ್ರದೇಶದಲ್ಲಿಯೇ ಇದೆ. ಇಲ್ಲಿ ಹೆಚ್ಚು ಸಂಖ್ಯೆಯ ಹುಲಿಗಳಿದ್ದು, ಅವುಗಳ ಜತೆ ವಿಶೇಷ ಜಾತಿಯ ಚಿರತೆಗಳು ಮತ್ತು ಕಾಡು ನಾಯಿಗಳೂ ಇವೆ. ಅನೇಕ ಐತಿಹಾಸಿಕ ಸ್ಥಳಗಳನ್ನೂ ಹೊಂದಿರುವ ಈ ಸ್ಥಳದಲ್ಲಿ ಆಗಾಗ ಪರಿಶೋಧನೆಗಳನ್ನು ನಡೆಸಲಾಗುತ್ತಿರುತ್ತದೆ.

ರಣಥಂಬೋರ್ ರಾಷ್ಟ್ರೀಯ ಉದ್ಯಾನವನ

ರಾಜಸ್ಥಾನದಲ್ಲಿರುವ ಈ ಉದ್ಯಾನವನವು ಸುಮಾರು 400 ಚದರ ಕಿ.ಮೀ.ಗಳಿಗೆ ಹಬ್ಬಿದೆ. ಇದು ಭಾರತದ ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಪುರಾತನ ಕೋಟೆ ಮತ್ತು ಸರೋವರವೂ ಇದೆ. ಇಲ್ಲಿ ಸಫಾರಿ, ಪಕ್ಷಿವೀಕ್ಷಣೆಯನ್ನು ಮಾಡಬಹುದು.

ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ

ಈ ಉದ್ಯಾನವನವು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿದೆ. ಇಲ್ಲಿ 80ಕ್ಕೂ ಹೆಚ್ಚು ಹುಲಿಗಳಿವೆ. ಸೊಂಪಾದ ರೀತಿಯಲ್ಲಿ ಬೆಳೆದುಕೊಂಡಿರುವ ಈ ಕಾಡಿನಲ್ಲಿ ಸಾಕಷ್ಟು ಜಾತಿಯ ಪಕ್ಷಿಗಳು, ಕರಡಿಗಳು, ಜಿಂಕೆ, ಕಾಡುಹಂಚಿ ಸೇರಿ ವಿವಿಧ ಪ್ರಭೇದದ ವನ್ಯಜೀವಿಗಳನ್ನು ನೀವು ಕಾಣಬಹುದು.

ನವೆಗಾಂವ್-ನಾಗ್ಜಿರಾ ವನ್ಯಜೀವಿ ಅಭಯಾರಣ್ಯ:

ಈ ಅಭಯಾರಣ್ಯವು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿದೆ. ಇದು ದಟ್ಟವಾದ ಕಾಡು ಮತ್ತು ವನ್ಯಜೀವಿ-ಸಮೃದ್ಧ ಪರಿಸರ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇದು ಗೌರ್, ಸೋಮಾರಿ ಕರಡಿ, ನೀಲ್ಗೈ ಹುಲ್ಲೆ, ಚಿಂಕಾರ ಗಸೆಲ್, ನಾಲ್ಕು ಕೊಂಬಿನ ಹುಲ್ಲೆ, ಇತ್ಯಾದಿ ಅಪರೂಪದ ಪ್ರಭೇದಗಳಿಗೆ ನೆಲೆಯಾಗಿದೆ.

ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶ


ಪೆರಿಯಾರ್‌ ಹುಲಿ ಸಂರಕ್ಷಿತ ಪ್ರದೇಶವು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ. ಇದು ಸುಮಾರು 925 ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ 50ಕ್ಕೂ ಹೆಚ್ಚು ಹುಲಿಗಳಿವೆ. ಇಲ್ಲಿ ಆನೆ, ಜಿಂಕೆ ಸೇರಿದಂತೆ ಅನೇಕ ಪ್ರಭೇದದ ವನ್ಯಜೀವಿಗಳನ್ನು ಕಾಣಬಹುದಾಗಿದೆ. ಈ ಪ್ರದೇಶದಲ್ಲಿ ಹಲವಾರು ಜಲಪಾತಗಳೂ ಇರುವುದರಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ

ಈ ಹುಲಿ ಸಂರಕ್ಷಿತ ಪ್ರದೇಶವು ರಾಜಸ್ಥಾನದ ಅಲ್ವಾರ್‌ ನಗರದ ಸಮೀಪದಲ್ಲಿದೆ. ಸುಮಾರು 866 ಚ.ಕಿ.ಮೀ.ಗೆ ಹಬ್ಬಿರುವ ಈ ಅರಣ್ಯ ಪ್ರದೇಶದಲ್ಲಿ ಹುಲಿಗಳಷ್ಟೇ ಅಲ್ಲದೆ ಚಿರತೆಗಳು, ಕತ್ತೆಕಿರುಬಗಳೂ ಇವೆ. ಹಾಗೆಯೇ ನವಿಲು ಸೇರಿದಂತೆ ವಿವಿಧ ಜಾತಿಯ ಪಕ್ಷಿ ಪ್ರಭೇದವನ್ನು ನಾವಿಲ್ಲಿ ಕಾಣಬಹುದಾಗಿದೆ. ಇದು ಪಕ್ಷಿ ವೀಕ್ಷಣೆಗೆ ಹೆಸರುವಾಸಿಯಾದ ಸ್ಥಳವಾಗಿದೆ.

ಭದ್ರಾ ವನ್ಯಜೀವಿ ಅಭಯಾರಣ್ಯ


ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯವಿದೆ. ಇದು 500 ಚ.ಕಿ.ಮೀ.ಗೂ ಹೆಚ್ಚು ವಿಸ್ತೀರಣಕ್ಕೆ ಹಬ್ಬಿಕೊಂಡಿದೆ. ಇಲ್ಲಿ ಹುಲಿಗಳು ಮಾತ್ರವಲ್ಲದೆ ಚಿರತೆಗಳು, ನರಿಗಳು ಸೇರಿದಂತೆ ವಿವಿಧ ಜಾತಿಯ ವನ್ಯಜೀವಿಗಳು ನೆಲೆಸಿವೆ. ಹಾಗೆಯೇ ನವಿಲುಗಳು, ಗಿಳಿಗಳು ಸೇರಿದಂತೆ ಹಲವಾರು ಪ್ರಭೇದದ ಪಕ್ಷಿಗಳೂ ಇಲ್ಲಿವೆ.

Exit mobile version