ಸೋಲೋ ಟ್ರಾವೆಲ್ ಈಗ ಟ್ರೆಂಡ್. ಅದರಲ್ಲೂ ಮಹಿಳೆಯರು ಸೋಲೋ ಕಡೆ ಈಗ ನಿಧಾನವಾಗಿ ತೆರೆದುಕೊಳ್ಳುತ್ತಿದ್ದಾರೆ. ಪ್ರವಾಸಕ್ಕೊಂದು ಬೇರೆಯೇ ಅರ್ಥ ಕೊಡುವ ನಮ್ಮನ್ನು ನಾವು ಸಂಪೂರ್ಣವಾಗಿ ಅರಿಯುವ, ಆತ್ಮವಿಶ್ವಾಸವನ್ನು ಹೆಚ್ಚಿಸುವ, ನಮ್ಮದೇ ಕಂಫರ್ಟ್ ಝೋನ್‌ನಿಂದ ನಮ್ಮನ್ನು ಹೊರತಂದು ಪ್ರಪಂಚ ತೋರಿಸುವ, ಬದುಕನ್ನು ಸರಳವಾಗಿ ಅರಿತುಕೊಳ್ಳುವ ಪ್ರಯತ್ನ ಮಾಡಿಸುವ ಈ ಸೋಲೋ ತೆರೆದಿಡುವ ಪ್ರಪಂಚವೇ ಅದ್ಭುತ. ಹಾಗಾಗಿ ಪ್ರವಾಸ ಲೋಕದಲ್ಲಿ ಸೋಲೋಗೆ ಅದರದ್ದೇ ಆದ ಸ್ಥಾನವಿದೆ.
ಆದರೆ, ಮೊದಲು ಸೋಲೋಗೆ ಹೊರಡುವವರಿಗೆ ಗೊಂದಲಗಳಿರುತ್ತವೆ. ಹೊರಡುವ ತಯಾರಿಯಿಂದ ಹಿಡಿದು ಒಬ್ಬರೇ ಉಳಿದುಕೊಳ್ಳುವವರೆಗೆ ಅನೇಕರಿಗೆ ಹಲವಾರು ಪ್ರಶ್ನೆಗಳಿರುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಹೋಗಲು ಆಸೆಯಿದ್ದರೂ ತಾನು ಒಬ್ಬಳೇ ಹೋದಾಗ ಸುರಕ್ಷಿತವಾಗಿ ಉಳಿದುಕೊಳ್ಳುವುದು ಹೇಗೆ ಎಂಬುದೂ ಸಮಸ್ಯೆಯಾಗಿ ಕಾಡುತ್ತದೆ. ಹಾಗಾಗಿ, ಸೋಲೋ ಟ್ರಾವೆಲ್ ಮಾಡುವವರು ಮಾಡಬೇಕಾದ ತಯಾರಿ ಹಾಗೂ ಅನುಸರಿಸಬೇಕಾದ ಸರಳ ಸೂತ್ರಗಳು (solo travel tips) ಇಲ್ಲಿವೆ.
೧. ಸೋಲೋಗೆ ಮುಂಗಡ ಬುಕ್ಕಿಂಗ್ ಅತ್ಯಗತ್ಯ. ಮೊದಲ ಬಾರಿ ಸೋಲೋ ಹೊರಡುತ್ತಿದ್ದರೆ ಉಳಿದುಕೊಳ್ಳುವ ವ್ಯವಸ್ಥೆ ಮೊದಲೇ ಮಾಡಿಕೊಂಡರೆ, ಚಿಂತೆಯಿರುವುದಿಲ್ಲ.
೨. ಎಷ್ಟೇ ದಿನಗಳ ಟ್ರಿಪ್ ಇರಲಿ, ಆದಷ್ಟು ಕಡಿಮೆ ಲಗ್ಗೇಜು ಪ್ಯಾಕು ಮಾಡಿಕೊಳ್ಳೋದು ಒಳ್ಳೇದು.
೩. ಹೊಸ ಊರಿಗೆ ತಡರಾತ್ರಿ ತಲುಪುವಂತಹ ರೈಲು, ವಿಮಾನಗಳನ್ನು ಬುಕ್ ಮಾಡದಿರುವುದೇ ಒಳ್ಳೆಯದು. ಆದಷ್ಟೂ, ಹಗಲು ಹೊತ್ತಿನಲ್ಲಿ ತಲುಪುವಂತಿದ್ದರೆ ಒಳ್ಳೆಯದು.
೪. ನಿಮ್ಮ ಕಂಫರ್ಟ್ ಝೋನ್‌ನಿಂದ ಹೊರ ಬನ್ನಿ. ಹೊಸಬರ ಜೊತೆ ಮಾತಾಡಿ. ಇಂತಹ ಪ್ರಯಾಣಗಳೇ ಜೀವನ ಪರ್ಯಂತ ಮರೆಯದ ಅನುಬಂಧಗಳನ್ನು ಸೃಷ್ಟಿಸುತ್ತದೆ.
೫. ಸುತ್ತಮುತ್ತಲ ಪ್ರಪಂಚವನ್ನು ತೆರೆದ ಕಣ್ಣು ಮನಸ್ಸಿನಿಂದ ಗಮನಿಸಿ. ಹೊಸ ಜನರು, ಅವರ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಯಿರಿ. ಸಾಧ್ಯವಾದರೆ ಅವುಗಳಲ್ಲಿ ಭಾಗಿಯಾಗಿ.
೬. ಒಬ್ಬರೇ ಊಟ ಮಾಡುವುದು, ಒಬ್ಬರೇ ಶಾಪಿಂಗ್ ಮಾಡೋದು, ಒಬ್ಬರೇ ಬೀದಿ ಬೀದಿ ಅಲೆಯೋದು, ಒಬ್ಬರೇ ರೂಮಿಗೆ ಬಂದು ಮಲಗೋದು ಎಲ್ಲವೂ ತೆರೆದಿಡುವ ಪ್ರಪಂಚ ಬದುಕಿಗೆ ಬಹುದೊಡ್ಡ ಪಾಠ. ಇವೆಲ್ಲವನ್ನು ಸಂಪೂರ್ಣ ಮನಸ್ಸಿನಿಂದ ಅನುಭವಿಸಿ.
೭. ಎಲ್ಲರೂ ಹೋಗುವ ಪ್ರವಾಸಿ ತಾಣಗಳಿಗಿಂತ, ಆಯಾ ಪ್ರದೇಶದ ಹೊಸ ಜಾಗಗಳನ್ನು ಶೋಧಿಸಿ. ಈ ಹುಡುಕಾಟಗಳು ನಿಮ್ಮನ್ನು ಎಲ್ಲಿಗೋ ಕೊಂಡೊಯ್ಯುತ್ತದೆ.
ಇದನ್ನೂ ಓದಿ: World Motorcycle Day | ಬೈಕೆಂಬ ಭಾವಗೀತೆ! ನೆನಪುಗಳ ಗಂಟು, ಅಳಿಸಲಾಗದ ಪ್ರೀತಿ ನಂಟು
೮. ಬೇಸಿಕ್ ಔಷಧಿಗಳಿಂದ ಹಿಡಿದು ಐಡಿ ಕಾರ್ಡ್‌ವರೆಗೆ ಎಲ್ಲವನ್ನೂ ಜಾಗರೂಕತೆಯಿಂದ ಕಾಪಾಡಿಕೊಳ್ಳುವುದೂ ಕೂಡಾ ಅಷ್ಟೇ ಮುಖ್ಯ. ಒಂದೇ ಜಾಗದಲ್ಲಿ ಹಣ ಇಟ್ಟುಕೊಳ್ಳುವ ಬದಲು ಬೇರೆ ಬೇರೆ ಜಾಗಗಳಲ್ಲಿ ಇಟ್ಟುಕೊಳ್ಳಿ.
೯. ಮುಖದಲ್ಲಿ ಮಂದಹಾಸವಿರಲಿ. ನಗು ನಮ್ಮ ಆತ್ಮವಿಶ್ವಾಸವನ್ನು ತೋರುವುದಲ್ಲದೆ, ಎಂಥ ಜಾಗದಲ್ಲೂ ನಮಗೆ ಒಳ್ಳೆಯದನ್ನೇ ಮಾಡುತ್ತದೆ. ದೇಶ, ಭಾಷೆ, ಗಡಿಗಳ ಹಂಗನ್ನು ಮೀರಿ ನಿಲ್ಲುವುದು ಇದೇ ನಗು.
೧೦. ಮ್ಯಾಪ್ ಬಳಕೆ, ನಾವೆಲ್ಲಿದ್ದೇವೆಂಬ ಜ್ಞಾನ, ಹೋಗಲಿರುವ ಜಾಗಗಳ ದೂರ, ತಲುಪಲು ಬೇಕಾದ ಗಂಟೆಗಳು ಇತ್ಯಾದಿಗಳ ಬಗ್ಗೆ ಅರಿವಿರುವುದು ಅತೀ ಮುಖ್ಯ.
೧೧. ಹೋದ ಹಾಗು ಇರುವ ಜಾಗಗಳ ಬಗ್ಗೆ ನಿಮ್ಮ ಆಪ್ತರಿಗೆ, ಮನೆಯವರಿಗೆ ಮಾಹಿತಿಯಿರಲಿ. ಆಗಾಗ ಅಪ್‌ಡೇಟ್ ಮಾಡುತ್ತಿರಿ.
೧೨. ಸಾರ್ವಜನಿಕ ಸಾರಿಗೆಗಳನ್ನು ಆದಷ್ಟು ಬಳಸಿ. ನಿಮ್ಮದು ಬಜೆಟ್ ಟ್ರಿಪ್ ಆಗಿದ್ದಲ್ಲಿ ಇದರಿಂದ ಹಣವೂ ಉಳಿತಾಯವಾಗುತ್ತದೆ.
೧೩. ಸರಳವಾಗಿರಿ. ಶಿಸ್ತು ಕೂಡಾ ಅಷ್ಟೇ ಮುಖ್ಯ. ಇತರರೊಂದಿಗೆ ನಿಮ್ಮ ನಡತೆಯೂ ಅಷ್ಟೇ ಮುಖ್ಯವಾಗುತ್ತದೆ.
೧೪. ಹೊಸ ಊರಿನಲ್ಲಿ ನಾವು ಸಭ್ಯತೆಯಿಂದ ನಡೆದುಕೊಳ್ಳುವುದು ಅತ್ಯಗತ್ಯ. ನಾವು ಧರಿಸುವ ದಿರಿಸಿನಲ್ಲೂ ಸಭ್ಯತೆಯಿರಲಿ. ಆಯಾ ಜಾಗಗಳ ನಿಯಮಗಳ ಪಾಲನೆಯೂ ಬಹಳ ಮುಖ್ಯ.
೧೫. ಸಂಶಯಗಳಿದ್ದಲ್ಲಿ, ಸರಿಯಲ್ಲ ಎನಿಸಿದಲ್ಲಿ ಧಾರಾಳವಾಗಿ ಪ್ರಶ್ನೆ ಮಾಡಿ. ಹೇಳಿದ್ದನ್ನು ಕೂಡಲೇ, ಒಪ್ಪಿ ತಲೆಯಾಡಿಸುವುದು ಮೂರ್ಖತನದ ಪರಮಾವಧಿ. ಪ್ರಶ್ನೆ ಮಾಡುವುದೂ ಕೂಡಾ ಆತ್ಮವಿಶ್ವಾಸದ ಇನ್ನೊಂದು ಮುಖ. ಎಲ್ಲಿ ಹೇಗೆ ಪ್ರಶ್ನಿಸಬೇಕೆಂಬ ಸಾಮಾನ್ಯ ಜ್ಞಾನದ ಅರಿಯೂ ಇರಲಿ. ಇದು ಅಪರಿಚಿತ ಊರಲ್ಲಿ ಮೋಸ ಹೋಗುವುದನ್ನೂ ತಪ್ಪಿಸುತ್ತದೆ.
ಇದನ್ನೂ ಓದಿ| ಜಲಪಾತ ನೋಡುವಾಗ ಎಚ್ಚರ ತಪ್ಪಿದರೆ ಪ್ರಪಾತ: ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಪ್ರವಾಸಿಗರು!