ಈ ಬಾರಿಯ ಮಳೆಗಾಲ ಅಂತೂ ಎಲ್ಲೆಡೆ ಆರಂಭವಾಗಿದೆ. ಸಣ್ಣಗೆ ಸುರಿಯುತ್ತಿರುವ ಮಳೆಗೆ ಪೂರ್ತಿ ಧರ ಮೈಕೊಟ್ಟು ಹಸಿರಾಗಿ ಹೊಳೆಯಲಾರಂಭಿಸಿದೆ. ಸ್ವಚ್ಛ ಹಸಿರಿನಿಂದ ಎಲ್ಲೆಡೆ ನಿಸರ್ಗ ದೇವತೆ ಸೌಂದರ್ಯವತಿಯಾಗಿ ಕಾಣಲಾರಂಭಿಸಿದ್ದಾಳೆ. ಇಂತಹ ಸಮಯದಲ್ಲಿ ಸಕಲೇಶಪುರದಂತಹ ಸ್ಥಳಕ್ಕೆ ಪ್ರವಾಸ ಹೇಳಿ ಮಾಡಿಸಿದ್ದು ಎನ್ನಬಹುದು. ಹಾಗಾದರೆ ಸಕಲೇಶಪುರ ಹೋದಾಗ ಅಲ್ಲಿ ಏನೇನನ್ನು ನೋಡಬಹುದು? ಯಾವ ಯಾವ ಸ್ಥಳಗಳಿಗೆ ಭೇಟಿ ಕೊಡಬಹುದು? ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕಾಗಿಯೇ ಸಕಲೇಶಪುರ ( Sakleshpur Places To Visit ) ಸನಿಹದ ಎಲ್ಲ ಪ್ರವಾಸಿ ತಾಣಗಳ ಕುರಿತಾಗಿ ನಾವಿಲ್ಲಿ ಮಾಹಿತಿ ನೀಡಿದ್ದೇವೆ.
1. ಮಂಜರಾಬಾದ್ ಕೋಟೆ:
ಇದು ಕರ್ನಾಟಕದಲ್ಲಿರುವ ವಿಶೇಷವಾದ ಕೋಟೆ. ಅಷ್ಟಭುಜಾಕೃತಿಯ ನಕ್ಷತ್ರಾಕಾರದಲ್ಲಿರುವ ಈ ಕೋಟೆ ಸಕಲೇಶಪುರದ ಹೊರವಲಯದಿಂದ ಸುಮಾರು 3240 ಅಡಿ ಎತ್ತರದಲ್ಲಿದೆ. ಟಿಪ್ಪು ಸುಲ್ತಾನನು ತನ್ನ ಆಡಳಿತದ ಕಾಲದಲ್ಲಿ ತನ್ನ ರಕ್ಷಣೆಗಾಗಿ ರಚಿಸಿಕೊಂಡ ಕೋಟೆ ಇದಾಗಿದೆ. ಕೋಟೆ ಪೂರ್ತಿಯಾಗಿ ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪದಿಂದ ತುಂಬಿದೆ. ಇಲ್ಲಿಗೆ ಚಾರಣ ಹೋಗುವುದು ಸ್ವಲ್ಪ ಕಷ್ಟವಾದರೂ ಮೇಲೆ ನಿಂತು ಪಶ್ಚಿಮ ಘಟ್ಟಗಳತ್ತ ಕಣ್ಣಾಯಿಸಿದಾಗ ಚಾರಣದ ನೋವು ಮರೆತುಹೋಗಿಬಿಡುತ್ತದೆ. ಈ ಸ್ಥಳವು ಭಾರತದ ಪುರಾತತ್ತ್ವ ಶಾಸ್ತ್ರದ ಸರ್ವೇಕ್ಷಣಾ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ. ಈ ಸ್ಥಳವು ಸಕಲೇಶಪುರ ಪಟ್ಟಣದ ಬಸ್ ನಿಲ್ದಾಣದಿಂದ ಆರು ಕಿ.ಮೀ. ದೂರದಲ್ಲಿದೆ.
2. ಸಕಲೇಶ್ವರ ದೇವಸ್ಥಾನ:
ಸಕಲೇಶಪುರ ಬಸ್ ನಿಲ್ದಾಣದಿಂದ ಕೇವಲ 1.5ಕಿ.ಮೀ. ದೂರದಲ್ಲಿ ನಿಮಗೆ ಕಾಣಸಿಗುವುದು ಸಕಲೇಶ್ವರ ದೇವಸ್ಥಾನ. ರಾಜ್ಯದ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಇದೂ ಒಂದು. ಹೇಮಾವತಿ ನದಿ ದಡದಲ್ಲಿಯೇ ಈ ದೇವಸ್ಥಾನವಿದೆ. ಈ ದೇವಸ್ಥಾನವನ್ನು 11ರಿಂದ 14ನೇ ಶತಮಾನದಲ್ಲಿ ಹೊಯ್ಸಳ ಸಾಮಾಜ್ರ್ಯದಸ ಅವಧಿಯಲ್ಲಿ ನಿರ್ಮಿಸಲಾಯಿತು. ಚಿಕ್ಕದಾಗಿರುವ ಈ ದೇಗುಲ ಸಕಲೇಶಪುರ ದೇಗುಲದ ಪ್ರವೇಶದ್ವಾರದಲ್ಲಿಯೇ ಇದ್ದು, 600 ವರ್ಷಗಳಿಂದ ನಗರದ ಕಾವಲುಗಾರನಾಗಿ ಕಾಯುತ್ತಿದೆ. ಇಲ್ಲಿ ಭವ್ಯವಾದ ಬೃಹತ್ ಶಿವನ ಪ್ರತಿಮೆಯೂ ಇದ್ದು, ಅದು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿವರ್ಷ ಫೆಬ್ರವರಿಯಲ್ಲಿ ಇಲ್ಲಿ ವಾರ್ಷಿಕ ರಥಯಾತ್ರೆ ನಡೆಯುತ್ತದೆ.
3. ಬಿಸಲೆ ಮೀಸಲು ಅರಣ್ಯ:
ಸಕಲೇಶಪುರ ನಗರದಿಂದ ಸುಮಾರು 65ಕಿ.ಮೀ. ಕ್ರಮಿಸಿದರೆ ನಿಮಗೆ ಬಿಸಲೆ ಮೀಸಲು ಅರಣ್ಯ ಸಿಗುತ್ತದೆ. ಇದು ಅನೇಕ ಜೀವವೈವಿಧ್ಯಗಳ ನೆಲೆಯಾಗಿದೆ. ಇಲ್ಲಿ ವ್ಯೂವ್ ಪಾಯಿಂಟ್ ಕೂಡ ಇದ್ದು, ಅಲ್ಲಿಂದ ನಿಸರ್ಗ ದೇವತೆಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಯೇನಿಕಲ್ಲು ಬೆಟ್ಟ, ಪುಷ್ಪಗಿರಿ ಮತ್ತು ಕುಮಾರ ಪರ್ವತದ ವಿಹಂಗಮ ನೋಟವನ್ನು ಇಲ್ಲಿಂದ ಕಾಣಬಹುದು. ಬಿಸಲೆ ಘಾಟ್ ವ್ಯೂವ್ ಪಾಯಿಂಟ್ ಸಕಲೇಶಪುರದಿಂದ 55 ಕಿ.ಮೀ., ಬಿಸಲೆ ಗ್ರಾಮದಿಂದ 5ಕಿ.ಮೀ. ಮತ್ತು ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 20ಕಿ.ಮೀ. ದೂರದಲ್ಲಿದೆ. ಅರಣ್ಯ ಇಲಾಖೆಯು ಈ ಪ್ರದೇಶದ ನಿರ್ವಹಣೆ ನೋಡಿಕೊಳ್ಳುತ್ತಿದೆ.
4. ಅಗ್ನಿ ಗುಡ್ಡ:
ಅಗ್ನಿ ಗುಡ್ಡದ ತುದಿಯಿಂದ ನೀವು ನಿಸರ್ಗದ ಅದ್ಭುತ ಸೌಂದರ್ಯವನ್ನು ಕಾಣಬಹುದು. ಅಗ್ನಿ ಗ್ರಾಮದಿಂದ ಸುಮಾರು ಮೂರು ಕಿ.ಮೀ. ದೂರವನ್ನು ಟ್ರೆಕ್ಕಿಂಗ್ ಮಾಡಿಕೊಂಡು ಸಾಗಬಹುದು. ಇಲ್ಲಿ ನೀವು ಕ್ಯಾಂಪ್‌ಗಳನ್ನು ಹಾಕಿಕೊಂಡು ರಾತ್ರಿ ಕಳೆಯುವುದಕ್ಕೂ ಅವಕಾಶವಿದೆ. ಈ ಸ್ಥಳ ಸಕಲೇಶಪುರ ಬಸ್ ನಿಲ್ದಾಣದಿಂದ 25ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್ ಸೂಕ್ತ ಸಮಯ. ಇಲ್ಲಿ ಹತ್ತಿಳಿಯುವುದಕ್ಕೆ ನಿಮಗೆ ಒಟ್ಟಾರೆಯಾಗಿ ನಾಲ್ಕು ತಾಸು ಬೇಕಾಗಬಹುದು. ಇಲ್ಲಿಂದಲೇ ಮುಂಜರಾಬಾದ್ ಕೋಟೆಗೂ ಟ್ರೆಕ್ಕಿಂಗ್ ಮಾಡಬಹುದಾಗಿದೆ. ಈ ಅಗ್ನಿ ಬೆಟ್ಟದಲ್ಲಿ ಹಲವಾರು ಸಿನಿಮಾಗಳನ್ನು ಚಿತ್ರೀಕರಣ ಮಾಡಲಾಗಿದೆ.
5. ಮಂಜೇಹಳ್ಳಿ ಜಲಪಾತ:
ಮಂಜೇಹಳ್ಳಿ ಜಲಪಾತದಲ್ಲಿ 20 ಅಡಿ ಆಳಕ್ಕೆ ಧುಮುಕುವ ನೀರನ್ನು ನೀವು ಕಾಣಬಹುದು. ಸಕಲೇಶಪುರದಿಂದ ಕೇವಲ 8ಕಿ.ಮೀ. ದೂರದಲ್ಲಿ ಹಚ್ಚ ಹಸಿರಿನ ಬೆಟ್ಟಗಳ ನಡುವೆ ಈ ಜಲಪಾತವಿದೆ. ಈ ಜಲಪಾತದಲ್ಲಿ ಮೈ ಚಳಿ ಬಿಟ್ಟು ಆಟವಾಡಬಹುದು. ಜಲಪಾತದಿಂದ ಕೆಳಗೆ ಹೊಳೆಯಾಗುವ ನೀರಿನಲ್ಲಿ ಸ್ನಾನ ಮಾಡಬಹುದು. ಮಂಜೇಹಳ್ಳಿ ಗ್ರಾಮದಿಂದ ಒಂದು ಕಿ.ಮೀ. ಚಾರಣ ಮಾಡಿದರೆ ನಿಮಗೆ ಈ ಜಲಪಾತ ಸಿಗುತ್ತದೆ. ಮಾರ್ಗ ಮಧ್ಯೆ ಕಾಫಿ ತೋಟ ಮತ್ತು ಸ್ಥಳೀಯ ಸಸ್ಯವರ್ಗದ ಸೌಂದರ್ಯವನ್ನು ಸವಿಯಬಹುದು. ಮಳೆಗಾಲದಲ್ಲಿ ನೀರು ಹೆಚ್ಚಾಗಿರುವುದರಿಂದ ಜಲಪಾತದ ಸೌಂದರ್ಯ ಇನ್ನಷ್ಟು ಹೆಚ್ಚಿರುತ್ತದೆ. ಇಲ್ಲಿ ಭದ್ರತಾ ಸಿಬ್ಬಂದಿಗಳನ್ನೂ ನೇಮಿಸಲಾಗಿದೆ. ಕ್ಯಾಂಪಿಂಗ್‌ಗೂ ಅವಕಾಶವಿದೆ.
6. ಕುಕ್ಕೆ ಸುಬ್ರಹ್ಮಣ್ಯ ದೇವಾಲಯ:
ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಕರ್ನಾಟಕದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಎಲ್ಲಾ ಸರ್ಪಗಳ ಅಧಿಪತಿಯಾದ ಕಾರ್ತಿಕೇಯನನ್ನು ಇಲ್ಲಿ ಸುಬ್ರಹ್ಮಣ್ಯ ಎಂದು ಪೂಜಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದ ಹೃದಯ ಭಾಗದಲ್ಲಿರುವ ಈ ದೇಗುಲ ಸೊಂಪಾದ ಪ್ರಕೃತಿಯಿಂದ ಆವೃತವಾಗಿದೆ. ಭೌಗೋಳಿಕವಾಗಿ ನೋಡಿದರೆ, ಕುಮಾರ ಪರ್ವತದ ಪಕ್ಕದಲ್ಲಿರುವ ಆರು ತಲೆಯ ನಾಗರಹಾವಿನ ಆಕಾರದಲ್ಲಿರುವ ಶೇಷ ಪರ್ವತವು ದೇವಾಲಯವನ್ನು ರಕ್ಷಿಸುತ್ತಿರುವಂತೆ ಕಾಣುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ‘ನಾಗಗಳ’ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಇಲ್ಲಿರುವ ಕುಮಾರಧಾರ ತೀರ್ಥ ಮತ್ತು ಮಡೆಸ್ನಾನವು ಕುಷ್ಠರೋಗದಂತಹ ಭಯಾನಕ ರೋಗಗಳನ್ನೂ ನಿವಾರಿಸುತ್ತದೆ ಎಂದು ಭಕ್ತರು ನಂಬುತ್ತಾರೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಸಹ ಇಲ್ಲಿನ ಸ್ನಾನದಿಂದ ಗುಣವಾಗುತ್ತವೆ ಎನ್ನಲಾಗುತ್ತದೆ. ‘ನಾಗದೋಷ’ಗಳಿಂದ ಬಳಲುತ್ತಿರುವವರಿಗೆ ಮೋಕ್ಷವನ್ನು ಪಡೆಯಲು ಈ ದೇವಾಲಯವನ್ನು ಅಂತಿಮ ಸ್ಥಳ ಎಂದು ನಂಬಿಕೆ. ಸರ್ಪ ಸಂಸ್ಕಾರ ಪೂಜೆ, ಆಶ್ಲೇಷ ಪೂಜೆ ಮತ್ತು ಇತರ ಆಚರಣೆಗಳನ್ನು ಮಾಡುವ ಮೂಲಕ ಭಕ್ತರು ನಾಗದೋಷ ಪರಿಹಾರ ಮಾಡಿಕೊಳ್ಳುತ್ತಾರೆ.
7. ಜೇನುಕಲ್ಲು ಗುಡ್ಡ:
ಕರ್ನಾಟಕದ ಎರಡನೇ ಅತಿ ಎತ್ತರ ಗುಡ್ಡವೆಂದರೆ ಅದು ಜೇನುಕಲ್ಲು ಗುಡ್ಡ. ಪಾಂಡವರ ಗುಡ್ಡ ಅಥವಾ ಬೆಟ್ಟದ ಭೈರವೇಶ್ವರ ದೇವಸ್ಥಾನದಿಂದ ಜೇನುಕಲ್ಲು ಗುಡ್ಡಕ್ಕೆ ಚಾರಣ ಮಾಡಬಹುದು. ಇಲ್ಲಿ ನೀವು ಬರೋಬ್ಬರಿ 8ಕಿ.ಮೀ. ಟ್ರೆಕ್ಕಿಂಗ್ ಮಾಡಬೇಕಾಗುತ್ತದೆ. ಟ್ರೆಕ್ಕಿಂಗ್ ಮಾಡುವಾಗ ಕಾಫಿ ತೋಟದ ಸೌಂದರ್ಯ, ಅರಬ್ಬಿ ಸಮುದ್ರ, ಶೇಷಪರ್ವತ, ಕುಮಾರ ಪರ್ವತ ಮತ್ತು ಎತ್ತಿನ ಭುಜ ಬೆಟ್ಟಗಳನ್ನು ಕಾಣುತ್ತಾ ಸಾಗಬಹುದು. ಇದು ಸಕಲೇಶಪುರದಿಂದ 40ಕಿ.ಮೀ. ದೂರದಲ್ಲಿದೆ. ಬೆಟ್ಟದ ಭೈರವೇಶ್ವರ ದೇಗುಲದಿಂದ 4-5 ಗಂಟೆಗಳ ಕಾಲ ಟ್ರೆಕ್ಕಿಂಗ್ ಮಾಡಿದರೆ ಈ ಬೆಟ್ಟ ಸಿಗುತ್ತದೆ.
8. ಪಾಂಡವರ ಗುಡ್ಡ:
ಹಿಂದೂ ಪುರಾಣಗಳಲ್ಲಿ ನಮೂದಿಸಲಾಗಿರುವ ಒಂದು ತಾಣವೆಂದರೆ ಅದು ಪಾಂಡವರ ಗುಡ್ಡ. ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಗುಡ್ಡದಲ್ಲಿ ತಂಗಿದ್ದರು ಎಂದು ನಂಬಲಾಗುತ್ತದೆ. ಸಕಲೇಶಪುರದ ಸಮೀಪದಲ್ಲಿರುವ ಪ್ರಸಿದ್ಧ ಟ್ರೆಕ್ಕಿಂಗ್ ತಾಣ ಇದಾಗಿದೆ. ಬೆಟ್ಟದಲ್ಲಿ ಬೆಟ್ಟದ ಭೈರವೇಶ್ವರ ದೇವಸ್ಥಾನವಿದೆ. ಈ ದೇಗುಲ ಸುಮಾರು 1000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗುತ್ತದೆ. ಇದು ಜೇನುಕಲ್ ಗುಡ್ಡದ ಪಕ್ಕದಲ್ಲೇ ಇರುವ ಗುಡ್ಡವಾಗಿದೆ. ಇಲ್ಲಿಂದ ನೀವು ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ವಿಹಂಗಮ ನೋಟವನ್ನು ಕಾಣಬಹುದು.
9. ಒಂಬತ್ತು ಗುಡ್ಡ:
ಒಂಬತ್ತು ಗುಮ್ಮಟಗಳು ಇರುವ ಗುಡ್ಡವನ್ನು ಒಂಬತ್ತು ಗುಡ್ಡ ಎಂದು ಕರೆಯಲಾಗುತ್ತದೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಈ ಗುಡ್ಡವಿದೆ. ಈ ಗುಡ್ಡವು ಸಮುದ್ರ ಮಟ್ಟದಿಂದ 970 ಮೀಟರ್ ಎತ್ತರದಲ್ಲಿದೆ. ಕಬಿನಿಹೊಳೆ ಮೀಸಲು ಅರಣ್ಯ ಪ್ರದೇಶದಿಂದ ನೀವು ಈ ಗುಡ್ಡಕ್ಕೆ ಟ್ರೆಕ್ಕಿಂಗ್ ಹೋಗಬಹುದು. ಕಬಿನಿ ಹೊಳೆಯ ಸ್ವಚ್ಛ ನೀರಿನಲ್ಲಿ ಆಟವನ್ನೂ ಆಡಬಹುದು. ಹೊಸಕೆರೆ ಮತ್ತು ಗುಂಡಿಯಾದಿಂದ ನೀವು ಈ ಗುಡ್ಡಕ್ಕೆ ಚಾರಣ ಆರಂಭಿಸಬಹುದು. ಇಲ್ಲಿಗೆ ಗೈಡ್‌ಗಳೂ ಇದ್ದಾರೆ.
10. ಸಕಲೇಶಪುರ ಲೇಕ್ ಪಾರ್ಕ್:
ಸಕಲೇಶಪುರದ ಬೇಲೂರು ಪ್ರದೇಶದಲ್ಲಿ ಸಕಲೇಶಪುರ ಲೇಕ್ ಪಾರ್ಕ್ ಇದೆ. ಸಕಲೇಶಪುರದ ಅತ್ಯಂತ ಮಹತ್ವದ ದೇವಾಲಯಗಳಲ್ಲಿ ಒಂದಾದ ಅಯ್ಯಪ್ಪ ಸ್ವಾಮಿ ದೇವಾಲಯವು ಉದ್ಯಾನವನದ ಆವರಣದಲ್ಲಿದೆ. ಸಂಜೆಯ ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳ ಇದೆನ್ನಬಹುದು. ಇಲ್ಲಿ ದೇಗುಲವಿರುವುದರಿಂದ ಆಧ್ಯಾತ್ಮಿಕ ನೆಮ್ಮದಿಯನ್ನೂ ನೀವು ಕಂಡುಕೊಳ್ಳಬಹುದು.
11. ಬೇಲೂರು:
ಸಕಲೇಶಪುರದಿಂದ 37ಕಿ.ಮೀ. ದೂರದಲ್ಲಿ ನೀವು ಬೇಲೂರು ದೇಗುಲವನ್ನು ಕಾಣಬಹುದು. ಇದನ್ನು ದಕ್ಷಿಣ ವಾರಾಣಸಿ ಎಂದೂ ಕರೆಯಲಾಗುತ್ತದೆ. ಭಗವಾನ್ ವಿಷ್ಣುವಿನ ಅವತಾರವಾದ ಚೆನ್ನಕೇಶವನ ದೇಗುಲ ಇದಾಗಿದೆ. ಯಗಚಿ ನಇ ದಡದಲ್ಲಿರುವ ಈ ದೇಗುಲ ಹೊಯ್ಸಳ ವಾಸ್ತು ಶೈಲಿಯಲ್ಲಿದೆ. ಚೆನ್ನಕೇಶವ ದೇವಾಲಯವನ್ನು 1117ರ ಸಮಯದಲ್ಲಿ ನಿರ್ಮಿಸಲಾಯಿತು. ನಕ್ಷತ್ರಾಕಾರದ ವೇದಿಕೆಯ ಮೇಲೆ ದ್ರಾವಿಡ, ರಾಜಗೋಪುರ ಸೇರಿಸಂತೆ ಒಟ್ಟು ಮೂರು ಪ್ರವೇಶದ್ವಾರಗಳಿವೆ. ಇಲ್ಲಿ ಪುಷ್ಕರಣಿ, ಚೆನ್ನಕೇಶವನ ಪತ್ನಿ ರಾಗನಾಯಕಿ ಮತ್ತು ಸೌಮ್ಯನಾಯಕಿಯ ಎರಡು ದೇವಾಲಯಗಳನ್ನು ಕಾಣಬಹುದು.
12. ಹಳೇಬೀಡು:
ಸಕಲೇಶಪುರದಿಂದ 52ಕಿ.ಮೀ. ದೂರದಲ್ಲಿ ಹಳೇಬೀಡಿದ್ದು ಅಲ್ಲಿ ಹೊಯ್ಸಳೇಶ್ವರ ದೇವಸ್ಥಾನ ಮತ್ತು ಕೇದಾರೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವನ್ನು 1121ರ ಸಮಯದಲ್ಲಿ ನಿರ್ಮಾಣ ಮಾಡಲಾಯಿತು. ಸರೋವರದಿಂದ ಸುತ್ತುವರೆದಿರುವ ದೇವಾಲಯದ ಸಂಕೀರ್ಣವು ಪುರಾತತ್ತ್ವ ಶಾಸ್ತ್ರದ ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. ಹೊಯ್ಸಳೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿಯೇ ಸಂತಾಲೇಶ್ವರ, ಹೊಯ್ಸಳೇಶ್ವರ ಮತ್ತು ವಿಷ್ಣುವರ್ಧನನ ಮಂತ್ರಿ ಕೇತುಮಲ್ಲನಿಗೆ ಸಮರ್ಪಿತವಾದ ದೇವಾಲಯಗಳನ್ನು ಕಾಣಬಹುದು. ಇಲ್ಲಿನ ಕೆತ್ತನೆಯನ್ನು ನೋಡುವುದರಲ್ಲಿ ನೀವು ಮೈ ಮರೆತುಬಿಡುತ್ತೀರಿ.
13. ರಕ್ಸಿಡಿ ಎಸ್ಟೇಟ್:
ಸಕಲೇಶಪುರದಿಂದ 10ಕಿ.ಮೀ. ದೂರದಲ್ಲಿರುವುದು ರಕ್ಸಿಡಿ ಎಸ್ಟೇಟ್. ಇಲ್ಲಿ ಕಾಫಿ ಹಾಗೂ ವಿವಿಧ ಮಸಾಲೆಗಳನ್ನು ಬೆಳೆಯಲಾಗುತ್ತದೆ. ಇಲ್ಲಿಗೆ ನೀವು ಭೇಟಿ ನೀಡಿದರೆ ಅಲ್ಲಿ ಕೃಷಿ ಕೆಲಸ ಮಾಡುವ ರೈತರೊಂದಿಗೆ ಸಂವಹನ ನಡೆಸಬಹುದು. ನೀವು ಪ್ರತಿದಿನಿ ಸೇವಿಸುವ ಕಾಫಿ ಮತ್ತು ವಿವಿಧ ಮಸಾಲೆಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಇಲ್ಲಿನ ಕಾರ್ಖಾನೆಯಲ್ಲಿ ನೋಡಿ ತಿಳಿದುಕೊಳ್ಳಬಹುದು.
14. ಹೇಮಾವತಿ ಆಣೆಕಟ್ಟು:
ಕಾವೇರಿ ನದಿಯ ಉಪನದಿಯಾದ ಹೇಮಾವತಿ ನದಿ ಪೂರ್ವ ಸಕಲೇಶಪುರ ಭಾಗದಲ್ಲಿ ಹರಿಯುತ್ತದೆ. ಈ ನದಿಯಲ್ಲಿ ನೀವು ಕಯಾಕಿಂಗ್, ಬೋಟಿಂಗ್ ಸೇರಿ ಹಲವು ಸಾಹಸಮಯ ಕ್ರೀಡೆಗಳನ್ನು ಆಡಬಹುದು. ಸಕಲೇಶಪುರದ ಬಸ್ ನಿಲ್ದಾಣದಿಂದ 66ಕಿ.ಮೀ. ದೂರದಲ್ಲಿರುವ ಗೊರೂರು ಆಣೆಕಟ್ಟಿಗೆ ಕೂಡ ನೀವು ಭೇಟಿ ನೀಡಬಹುದು. ಈ ಆಣೆಕಟ್ಟನ್ನು 1979ರಲ್ಲಿ ನಿರ್ಮಿಸಲಾಗಿದೆ. ಈ ಆಣೆಕಟ್ಟು 4692 ಮೀಟರ್ ಉದ್ದ ಮತ್ತು 58 ಮೀಟರ್ ಎತ್ತರವಿದೆ. ಇಲ್ಲಿಂದ ನೀರನ್ನು ಹೊರಗೆ ಬಿಡಲು ಆರು ಗೇಟುಗಳಿವೆ.
15. ಶೆಟ್ಟಿಹಳ್ಳಿ ಚರ್ಚ್:
ಗೊರೂರು ಆಣೆಕಟ್ಟಿನ ಹಿನ್ನೀರಲ್ಲೇ ನೀವು ಶೆಟ್ಟಿಹಳ್ಳಿ ಚರ್ಚನ್ನು ಕಾಣಬಹುದು. 1860ರಲ್ಲಿ ಫ್ರೆಂಚ್ ಮಿಷನರಿ ಶ್ರೀಮಂತ ಮಾಲೀಕರು ನಿರ್ಮಿಸಿದ ಈ ಚರ್ಚ್ 1960ರಲ್ಲಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿತು. ಈಗ ಚರ್ಚಿನ ಬಹುತೇಕ ಭಾಗ ಉರುಳಿದ್ದು, ಅಳಿದುಳಿದ ಭಾಗವನ್ನು ನೀವು ನೋಡಬಹುದು. ಇದನ್ನು ತೇಲುವ ಚರ್ಚ್ ಎಂದೂ ಕರೆಯಲಾಗುತ್ತದೆ. ನವೆಂಬರ್‌ನಿಂದ ಮೇ ತಿಂಗಳವರೆಗೆ ಈ ಚರ್ಚ್ ಕಾಣಿಸಿಕೊಳ್ಳುತ್ತಿದೆ. ಜುಲೈನಿಂದ ಅಕ್ಟೋಬರ್‌ವರೆಗೆ ಇದು ಭಾಗಶಃ ಮುಳುಗಿರುತ್ತದೆ.
16. ದೋಣಿಗಾಲು ಜಲಪಾತ:
ಸಕಲೇಶಪುರದಿಂದ ಆರು ಕಿ.ಮೀ. ದೂರದಲ್ಲಿ ನೀವು ದೋಣಿಗಾಲು ಜಲಪಾತವನ್ನು ಕಾಣಬಹುದು. ಇಲ್ಲಿ ನೀರು ಬಂಡೆಗಳನ್ನು ಕೊರೆದುಕೊಂಡು ಕೆಳಗೆ ಬೀಳುತ್ತದೆ. ನೀರು ಬೀಳುವ ಸ್ಥಳದಲ್ಲಿ ಕೊಳವೊಂದನ್ನು ಸೃಷ್ಟಿಯಾಗಿದೆ. ಇಲ್ಲಿ ನೀವು ನೀರಿನಲ್ಲಿ ಆಟವಾಡಬಹುದಾಗಿದೆ.
FAQ
ಸಕಲೇಶಪುರಕ್ಕೆ ಭೇಟಿ ನೀಡಲು ಉತ್ತಮ ಸಮಯ ಯಾವುದು?
ಕರ್ನಾಟಕದ ಸಕಲೇಶಪುರಕ್ಕೆ ನವೆಂಬರ್ ನಿಂದ ಫೆಬ್ರವರಿ ತಿಂಗಳ ನಡುವೆ ಭೇಟಿ ನೀಡುವುದು ಉತ್ತಮ ಎಂದು ಹೇಳಬಹುದು.
ಸಕಲೇಶಪುರದ ವಿಶೇಷತೆ ಏನು?
ಇದು ಮನೋಲ್ಲಾಸಕರ ದೃಶ್ಯಗಳನ್ನು ಹೊಂದಿದೆ ಮತ್ತು ಇದು ಪಶ್ಚಿಮ ಘಟ್ಟಗಳ ತಳದಲ್ಲಿರುವ ಮಲೆನಾಡು ಪ್ರದೇಶದಲ್ಲಿದೆ. ಸದಾ ಹಸಿರಾಗಿರುವ ಬೆಟ್ಟ ಗುಡ್ಡದ ನಡುವೆ ಅಹ್ಲಾದಕರ ಗಾಳಿಯನ್ನು ಸೇವಿಸುತ್ತ ನಮ್ಮನ್ನು ನಾವೇ ಮರೆಯುವಂತೆ ಮಾಡುತ್ತದೆ.