ವಿಮಾನ ಪ್ರಯಾಣ (Air Travel Tips) ಬಹಳಷ್ಟು ಮಂದಿಯ ಜೀವನದಲ್ಲಿ ಸಾಮಾನ್ಯ. ಕೆಲಸದ ನಿಮಿತ್ತವೋ, ಸಮಯದ ಅಭಾವದಿಂದ ಈಗ ವಿಮಾನದಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋಗುವುದು, ಅದೇ ದಿನ ಮೀಟಿಂಗ್ ಮುಗಿಸಿ ವಾಪಾಸು ಬರುವುದು, ಮತ್ತೆ ಎಂದಿನಂತೆ ಕೆಲಸ ಮಾಡುವುದು ಎಲ್ಲವೂ ಇಂದಿನ ಒತ್ತಡದ ಜೀವನಶೈಲಿಯಲ್ಲಿ ಸಹಜ. ಹಲವರ ನಿತ್ಯದ ಬದುಕು. ಒಂದು ಗಂಟೆಯ ವಿಮಾನ ಪ್ರಯಾಣವಾದರೂ, ಬಂದ ಮೇಲೆ ಕಾರಿನಲ್ಲಿ ಕಚೇರಿಗೆ ವಾಹನದಟ್ಟಣೆಯಲ್ಲಿ ಚಲಾಯಿಸಿಕೊಂಡು ಹೋಗಿದ್ದಕ್ಕಿಂತ ಹೆಚ್ಚು ಸುಸ್ತಿನ ಅನುಭವವೂ ಇದರಿಂದ ಆಗಬಹುದು.
ಯಾಕೆಂದರೆ ವಿಮಾನ ಪ್ರಯಾಣದಲ್ಲಿ ನಾವು ಒಂದು ಮಟ್ಟದಿಂದ ಎತ್ತರದಲ್ಲಿ ಪ್ರಯಾಣ ಬೆಳೆಸುವುದರಿಂದ ವಾತಾವರಣದಲ್ಲಿ ಗಾಳಿಯ ಒತ್ತಡವೂ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ವಿಮಾನ ಪ್ರಯಾಣದ ಸಂದರ್ಭ ಸುಸ್ತು, ತಲೆಸುತ್ತಿನಂತಹ ಅನುಭವಗಳು ಅನುಭವಕ್ಕೆ ಬಾರದಿರಲು ನಾವು ನಮ್ಮ ಆಹಾರಕ್ರಮದ ಬಗ್ಗೆಯೂ ಕೊಂಚ ಗಮನ ಹರಿಸಬೇಕು. ಯಾವೆಲ್ಲ ಆಹಾರಗಳ್ನು ವಿಮಾನ ಪ್ರಯಾಣಕ್ಕೂ ಮೊದಲು ಸೇವಿಸದೆ ಇದ್ದರೆ ಇಂತಹ ಸಮಸ್ಯೆಗಳಿಂದ ದೂರ ಇರಬಹುದು ಎಂಬುದನ್ನು ನೋಡೋಣ.
1. ಸೇಬು: ಸೇಬು ಹಣ್ಣು ಅಥವಾ ಆಪಲ್ ತಿಂದರೇನು ತೊಂದರೆ ಎಂದು ನಮಗೆ ಅನಿಸಬಹುದು. ಹಣ್ಣಿನಷ್ಟು ಒಳ್ಳೆಯ ಆಹಾರ ಇನ್ನೆಲ್ಲಿದೆ ಎಂದೂ ಅನಿಸಬಹುದು. ಆದರೆ, ಸೇಬು ಹಣ್ಣನ್ನು ವಿಮಾನ ಪ್ರಯಾಣಕ್ಕೆ ಮೊದಲು ತಿನ್ನುವುದರಿಂದ ಹೊಟ್ಟೆ ಉಬ್ಬರಿಸಿದಂತಾಗುವುದು, ಎದೆಯುರಿಯಂತಹ ಅನುಭವಗಳೂ ಆಗಬಹುದು. ಹಾಗಾಗಿ ಪ್ರಯಾಣಕ್ಕೆ ಮೊದಲು ಹಣ್ಣು ಸೇವಿಸುತ್ತಿದ್ದರೆ, ಹೊಟ್ಟೆಗೆ ಲಘುವಾಗಿರುವ ಹಣ್ಣುಗಳ ಆಯ್ಕೆ ಮಾಡಿ. ಪಪ್ಪಾಯಿ, ಬಾಳೆಹಣ್ಣು ಇತ್ಯಾದಿಗಳಿಂದ ತೊಂದರೆಯಾಗುವುದಿಲ್ಲ.
2. ಬ್ರೊಕೋಲಿ: ಸೇಬಿನ ಹಾಗೆಯೇ ಬ್ರೊಕೋಲಿ, ಕ್ಯಾಬೇಜ್ ಹಾಗೂ ಹೂಕೋಸಿನಂತಹ ತರಕಾರಿಗಳು ಕೂಡಾ, ಹೊಟ್ಟೆಯಲ್ಲಿ ಕೊಂಚ ತಳಮಳ ಉಂಟು ಮಾಡಬಲ್ಲವು. ಕಡಿಮೆ ಕ್ಯಾಲರಿಯ, ತೂಕ ಇಳಿಕೆಗೆ ಹೇಳಿ ಮಾಡಿಸಿದಂತಹ ಈ ತರಕಾರಿಗಳು ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಗೆ ಪ್ರಚೋದನೆ ಮಾಡುವುದರಿಂದ ವಿಮಾನ ಪ್ರಯಾಣದ ಸಂದರ್ಭ ಎದೆಯುರಿ, ಹೊಟ್ಟೆಯುಬ್ಬರದ ಅನುಭವ ನೀಡಬಲ್ಲುದು. ಅಷ್ಟೇ ಅಲ್ಲ, ಸಲಾಡ್‌ಗಳೆಂಬ ಹೆಸರಿನಲ್ಲಿ ಈ ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದಲೂ ಬೇಗನೆ ಜೀರ್ಣವಾಗದೆ ಜೀರ್ಣಕ್ರಿಯೆ ಸಮಸ್ಯೆಗಳು ತಲೆದೋರಬಹುದು.
3. ಫಾಸ್ಟ್ ಫುಡ್: ಏರ್‌ಪೋರ್ಟ್ ಬಂದಾಗ ಹಸಿವಾಗಿ, ವಿಮಾನ ಹತ್ತುವ ಮೊದಲು ಏನಾದರೊಂದು ಹೊಟ್ಟೆಗೆ ಹಾಕಿಕೊಳ್ಳೋಣ ಎಂದುಕೊಂಡು ಫಾಸ್ಟ್‌ಫುಡ್ ಮೊರೆ ಹೋಗುವುದು ಅನೇಕರು ಮಾಡುವ ತಪ್ಪು. ಫಾಸ್ಟ್ ಫುಡ್‌ಗಳಾದ ಪಿಜ್ಜಾ, ಬರ್ಗರ್ ಮತ್ತಿತರ ತಿನಿಸುಗಳಲ್ಲಿ ಹೆಚ್ಚು ಉಪ್ಪಿನಂಶ ಇರುವುದರಿಂದ ವಿಮಾನದಲ್ಲಿ ಹಾರುವ ಸಂದರ್ಭ ಜೀರ್ಣಕ್ರಿಯೆಯ ಸಮಸ್ಯೆಗಳು ತಲೆದೋರಬಹುದು.
ಇದನ್ನೂ ಓದಿ: Travel Tips: ಬೇಸಿಗೆ ರಜೆ ಮುಗಿವ ಮೊದಲು ಮಕ್ಕಳೊಂದಿಗೆ ಇಲ್ಲಿಗಾದರೂ ಹೋಗದಿದ್ದರೆ ಹೇಗೆ!
4. ಕೆಫೀನ್: ವಿಮಾನ ಹತುವ ಮೊದಲು ನಿದ್ದ್ ತೂಗಿದಂತಾಗಬಾರದು ಎಂದೋ, ಎನರ್ಜಿಯ ಅಗತ್ಯ ಇದೆ ಎಂದೋ, ಅಥವಾ ಸಮಯ ಇನ್ನೂ ಇದೆ ಹಾಗಾಗಿ ಏನಾದರೊಂದು ಕುಡಿಯಬೇಕು ಎಂಬ ಕಾರಣಕ್ಕೋ ಸುಮ್ಮನೆ ಕಾಫಿಯೋ ಚಹಾವೋ ಕುಡಿಯುವುದು ರೂಢಿ. ಇದರಲ್ಲಿರುವ ಕೆಫೀನ್‌ನಿಂದ ಅಜೀರ್ಣದ ಸಮಸ್ಯೆಯೂ ತಲೆದೋರಬಹುದು.
5. ಬೀಜಗಳು: ಬೇಳೆಕಾಳುಗಳ ಸೇವನೆಯೂ ಹೆಚ್ಚಿನ ಗ್ಯಾಸ್ ಉತ್ಪತ್ತಿ ಮಾಡುವುದರಿಂದ ಹೊಟ್ಟೆಯ ಸಮಸ್ಯೆ ಎದುರಿಸುವ ಮಂದಿ ರಾಜ್‌ಮಾ, ಅಲಸಂಡೆ ಬೀಜ, ಅವರೆ ಬೀಜ, ಕಡಲೆಕಾಳು ಇತ್ಯಾದಿಗಳಿಂದ ದೂರವಿರುವುದು ಒಳ್ಳೆಯದು.
ಪ್ರತಿಯೊಬ್ಬರ ದೇಹವೂ ಭಿನ್ನವಾಗಿರುವುದರಿಂದ, ಈ ಸಮಸ್ಯೆ ಎಲ್ಲರಿಗೂ ಆಗಬೇಕೆಂದೇನೂ ಇಲ್ಲ. ಆದರೆ, ಜೀರ್ಣಕ್ರಿಯೆ ಸಮಸ್ಯೆ ಇರುವ ಮಂದಿ, ಮೋಷನ್ ಸಿಕ್‌ನೆಸ್ ಇರುವವರು ಅಥವಾ ವಿಮಾನ ಪ್ರಯಾಣ ಕಷ್ಟವೆನಿಸುವ ಮಂದಿ ಪ್ರಯಾಣದ ಮುನ್ನ ಆಹಾರದ ವಿಚಾರದಲ್ಲಿ ಕೊಂಚ ಜಾಗರೂಕತೆ ವಹಿಸುವುದು ಉತ್ತಮ.
ಇದನ್ನೂ ಓದಿ: Air Travel Tips: ವಿಮಾನದೊಳಗೆ ಏನೆಲ್ಲ ಮಾಡಬಾರದು ಎಂದು ಗೊತ್ತಿರಲಿ!