ಚಳಿಗಾಲ ಅಂತ್ಯವಾಗುತ್ತಿದ್ದಂತೆ ವಸಂತ ಕಾಲ ಕಾಲಿಡುತ್ತಿದ್ದರೆ, ಲೋಕವೆಲ್ಲ ಸುಂದರ. ಚಿಗುರುವ ಗಿಡಮರಗಳು, ಒಣಭೂಮಿಯೆಲ್ಲ ಮತ್ತೆ ತಿಳಿ ಹಸಿರಿನಿಂದ ಕಂಗೊಳಿಸಿ ಹೂವಿನ ರಾಶಿಯಿಂದ ಕಂಗೊಳಿಸುವ ಕಾಲ. ಭೂಮಿಯ ಮೇಲಿನ ಸ್ವರ್ಗದಂತಹ ಸುಂದರ ಜಾಗಗಳೆಲ್ಲ ಅಕ್ಷರಶಃ ಸ್ವರ್ಗವಾಗಿ ಬಿಡುವ ಸಮಯವಿದು. ವಸಂತಕಾಲವೆಂದರೆ, ಎಲ್ಲರಲ್ಲೂ ಲವಲವಿಕೆ, ಚಿಗುರುವ ಉತ್ಸಾಹ, ಚಳಿಗಾಲದ ಸೋಮಾರಿತನ ಬಿಟ್ಟೆದ್ದು ಹಿತವಾದ ಬಿಸಿಲಿಗೆ ಮೈಯೊಡ್ಡಿ ಚುರುಕಾಗುವ ಸಮಯ. ಇಂಥ ಸಮಯ ಮಾರ್ಚ್ ತಿಂಗಳು. ಈ ಮಾರ್ಚ್ ತಿಂಗಳಲ್ಲಿ ಪ್ರವಾಸ ಪ್ರಿಯರಿಗೆ ಅದರಲ್ಲೂ, ವನ್ಯಜೀವಿ ಪ್ರಿಯರಿಗೆ ಸುಗ್ಗಿ. ಕಾರಣ, ವನ್ಯಧಾಮಗಳಿಗೆ (wildlife tourism) ಹೋಗಲು ಮಾರ್ಚ್ ತಿಂಗಳು ಸಕಾಲ. ಹೌದು. ಮಾರ್ಚ್ ತಿಂಗಳಲ್ಲಿ ಎಲ್ಲಾದರೂ ಪ್ರವಾಸ ಹೋಗಬೇಕು ಎಂಬ ಯೋಚನೆ ನಿಮಗಿದ್ದರೆ, ನೀವು ಪ್ರಕೃತಿ ಪ್ರಿಯರೂ ಮೇಲಾಗಿ ವನ್ಯಜೀವಿ ಪ್ರಿಯರೂ ಆಗಿದ್ದಲ್ಲಿ ಖಂಡಿತ ಭಾರತದ ವನ್ಯಜೀವಿಧಾಮಗಳಿಗೆ ಬೇಟಿ ಕೊಡಬಹುದು. ಬನ್ನಿ, ವನ್ಯಜೀವಿಗಳನ್ನು ನೋಡಲು ಮಾರ್ಚ್ ಯಾಕೆ ಸಕಾಲ ಎಂಬುದನ್ನು ನೋಡೋಣ.
ಪ್ರಾಣಿ ಪಕ್ಷಿಗಳ ಪ್ರಿಯವಾದ ಕಾಲ
ವಸಂತ ಕಾಲವೆಂಬುದು ಪ್ರಾಣಿ ಪಕ್ಷಿಗಳ ಪ್ರಿಯವಾದ ಕಾಲ. ಇದು ಪ್ರಾಣಿ ಪಕ್ಷಿಗಳ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನು ತರುವ ಕಾಲ. ಹಾಗಾಗಿ, ವನ್ಯಜೀವಿಗಳ ದರ್ಶನ ಮಾಡಬಯಸುವವರಿಗೆ ಲವಲವಿಕೆ ಪ್ರಾಣಿ ಪಕ್ಷಿಗಳು ಕಾಣ ಸಿಗಬಹುದು. ಅವುಗಳ ನಡವಳಿಕೆಯನ್ನು ಅಭ್ಯಾಸ ಮಾಡಬಯಸುವವರಿಗೆ ಇದು ಸುಗ್ಗಿಕಾಲ. ಈ ಸಮಯದಲ್ಲಿ ಸಾಕಷ್ಟು ವಲಸೆ ಹಕ್ಕಿಗಳೂ, ಸಂತಾನೋತ್ಪತ್ತಿ ಮಾಡುವ ಪಕ್ಷಿ ಸಂಕುಲಗಳೂ, ಮರಿಗಳೊಂದಿಗಿರುವ ಪ್ರಾಣಿಗಳೂ ಕಾಣಸಿಗುವುದು ಹೆಚ್ಚು. ಹೀಗಾಗಿ ಇದೊಂದು ಅದ್ಭುತ ಅನುಭವ ನೀಡಬಲ್ಲ ಸಮಯ.
ಮಿಲನದ ಸಂದರ್ಭ
ಮಾರ್ಚ್ ತಿಂಗಳು ಚಳಿಗಾಲವನ್ನು ಈಗಷ್ಟೇ ಮುಗಿಸಿಕೊಂಡು ಬೇಸಿಗೆ ಕಾಲಕ್ಕೆ ಕಾಲಿಡುವ ಕಾಲ. ಈ ಸಮಯದಲ್ಲಿ ಉಷ್ಣತೆ ನಿಧಾನವಾಗಿ ಏರತೊಡಗುತ್ತದೆ. ಈ ಸಂದರ್ಭ ಪ್ರಾಣಿ ಪಕ್ಷಿಗಳು ಹೆಚ್ಚು ಚುರುಕಾಗುತ್ತವೆ. ಅವುಗಳ ಚಟುವಟಿಕೆ, ಓಡಾಟ ಹೆಚ್ಚುತ್ತವೆ. ಮುಖ್ಯವಾಗಿ ಅವು ಸಂತಾನೋತ್ಪತ್ತಿಯಲ್ಲಿ ತೊಡಗುವ ಕಾಲವೂ ಇದಾದ್ದರಿಂದ ಅವುಗಳ ಮಿಲನದ ಅಪರೂಪದ ಸಂದರ್ಭಗಳಿಗೂ ನೀವು ಸಾಕ್ಷಿಯಾಗಬಹುದು.
ಹಕ್ಕಿ ಛಾಯಾಗ್ರಾಹಕರಿಗೆ ಸುಗ್ಗಿ
ಮಾರ್ಚ್ ಹೇಳಿ ಕೇಳಿ ವಲಸಿಗ ಹಕ್ಕಿಗಳ ಕಾಲ. ಸಾವಿರಾರು ಕಿ.ಮೀಗಟ್ಟಲೆ ದೂರ ಹಾರಿಕೊಂಡು ಬಂದ ವಲಸಿಗ ಹಕ್ಕಿಗಳು ತಮ್ಮ ಸಂತಾನೋತ್ಪತ್ತಿಯನ್ನು ಮಾಡಿಕೊಂಡಿರುವುದನ್ನು ನೋಡಬಹುದಾದ ಕಾಲ ಇದು. ಹಾಗಾಗಿ ಪಕ್ಷಿಪ್ರಿಯರಿಗೆ, ಹಕ್ಕಿ ಛಾಯಾಗ್ರಾಹಕರಿಗೆ ಇದು ಸಕಾಲ.
ಕಣ್ಮನ ತಣಿಸುವ ತಿಳಿಹಸಿರು
ಮಾರ್ಚ್ ತಿಂಗಳು ಗಿಡಮರಗಳೆಲ್ಲ ಚಿಗಿತುಕೊಂಡು ಹೂಬಿಡುವ ಕಾಲ. ಹಾಗಾಗಿ ಕಾಡೊಳಗೊಂದು ಪಾಸಿಟಿವಿಡಿ, ಉತ್ಸಾಹ, ಉಲ್ಲಾಸ ತುಂಬಿರುತ್ತದೆ. ಕಣ್ಮನ ತಣಿಸುವ ತಿಳಿಹಸಿರು, ಬಣ್ಣಬಣ್ಣದ ಹೂವುಗಳು, ದುಂಬಿ, ಚಿಟ್ಟೆಗಳು, ಹೀಗೆ ಎಲ್ಲೆಡೆ ಪ್ರಕೃತಿಯ ಸಂಭ್ರಮದ ವಾತಾವರಣವನ್ನು ಮೈಮನಸ್ಸು ತುಂಬಿಕೊಳ್ಳಬಹುದು. ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಇದು ಅತ್ಯುತ್ತಮ ಕಾಲ.
ಗದ್ದಲ ಕಡಿಮೆ ಇರುವ ಸಮಯ
ಪ್ರವಾಸಿಗರ ವಿಚಾರಕ್ಕೆ ಬಂದಾಗ ಮಾರ್ಚ್ ತಿಂಗಳು ಕಡಿಮೆ ಪ್ರವಾಸಿಗರಿರುವ, ಗದ್ದಲ ಕಡಿಮೆ ಇರುವ ಸಮಯ. ಮಕ್ಕಳ ಪರೀಕ್ಷೆಗಳ ಕಾಲ. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುವ ಕಾಲವಾದ್ದರಿಂದ ಕಡಿಮೆ ಮಂದಿ ಪ್ರವಾಸಕ್ಕೆ ಹೋಗುತ್ತಾರೆ. ಹೀಗಾಗಿ, ಜನರ ಗದ್ದಲವಿಲ್ಲವಾದ್ದರಿಂದ ಪ್ರಾಣಿ ಪಕ್ಷಿಗಳು ತಮ್ಮದೇ ಏಕಾಂತದಲ್ಲಿ ಚಟುವಟಿಕೆಯಿಂದಿರುತ್ತವೆ. ಮೌನವಾಗಿದ್ದುಕೊಂಡು, ಪ್ರಕೃತಿಯೊಳಗೆ ಒಂದಾಗಿ ಪ್ರಾಣಿಪಕ್ಷಿಗಳ ಏಕಾಂತವನ್ನು ಸದ್ದುಗದ್ದಲವಿಲ್ಲದೆ ನೋಡಲು ಇದು ಹೇಳಿ ಮಾಡಿಸಿದಂತಹ ಕಾಲ. ಅಪರೂಪದ ದೃಶ್ಯಗಳಿಗೆ ಸಾಕ್ಷಿಯಾಗುವ ಸಂದರ್ಭವೂ ನಿಮಗೆ ದಕ್ಕೀತು!
ಹಿತಕರ ವಾತಾವರಣ
ಈ ತಿಂಗಳು ತೀರಾ ಸೆಖೆಯಿಲ್ಲದ, ಹೆಚ್ಚು ತಾಳಲಾರದ ಬಿಸಿಲಿಲ್ಲದೆ ಇರುವುದರಿಂದ ಈ ಸಂದರ್ಭ ಪ್ರವಾಸ ಸುಲಭ. ಅದರಲ್ಲೂ ಕಾಡಿನೊಳಗೆ ಹೆಚ್ಚು ಚಳಿಯೂ ಅಲ್ಲದ, ಹೆಚ್ಚು ಸೆಖೆಯೂ ಇಲ್ಲದ ತಣ್ಣನೆಯ ಹವಾಮಾನ ತಿರುಗಾಡಲು ಸೂಕ್ತವೂ ಆಗಿರುತ್ತದೆ.