ಜಗತ್ತಿನಲ್ಲೇ ಅತ್ಯಂತ ಸಂತೋಷದಾಯಕ ಪ್ರವಾಸಿ ಸ್ಥಳ ಯಾವುದು ಎಂದು ಪ್ರವಾಸೀ ಪ್ರಿಯರನ್ನು ಕೇಳಿದರೆ, ಎಲ್ಲರೂ ಕಣ್ಣು ಮುಚ್ಚಿ ಇಂಡೋನೇಷ್ಯಾದ ಬಾಲಿಗೆ ಓಟ್ ಹಾಕಿದ್ದಾರಂತೆ. ಕಾರಣ ಇಷ್ಟೇ, ಕಡಿಮೆ ದುಡ್ಡಲ್ಲಿ ಬೇಕಾದಷ್ಟು ಕುಡಿಯಲು ಗುಂಡು, ಕಣ್ಣಿಗೆ ಹಬ್ಬ ನೀಡುವ ದೃಶ್ಯಗಳು, ಕಡಿಮೆ ಕ್ರೈಮ್ ಇರುವ ಸುರಕ್ಷಿತವಾಗಿರುವ ಜಾಗ ಎಂದರೆ ಬಾಲಿ ಬಿಟ್ಟು ಬೇರೊಂದು ನೋಡಿಲ್ಲ ಎಂದಿದ್ದಾರಂತೆ!
ಪ್ರವಾಸ ಮಾಡಲು ಒಬ್ಬೊಬ್ಬರ ಕಾರಣ ಒಂದೊಂದಿರಬಹುದು. ಆದರೂ ಪ್ರವಾಸದಿಂದ ಎಲ್ಲರೂ ಬಯಸುವುದು ನಿತ್ಯದ ನಾಗಾಲೋಟದ ಬದುಕಿನಲ್ಲೊಂದು ಚಂದನೆಯ ಚೇಂಜ್ ಹಾಗೂ ಸಂತೋಷದಾಯಕ ಸಮಯ ಅಷ್ಟೇ ಎಂಬುದು ಅಪ್ಪಟ ಸತ್ಯ. ಹಾಗಾಗಿ ಬಾಲಿ ಎಂಬ ಪ್ರವಾಸೀ ಸ್ಥಳವೊಂದು ಸಂತೋಷ, ನೆಮ್ಮದಿ ಹುಡುಕಿಕೊಂಡು ಬರುವ ಎಲ್ಲರನ್ನೂ ಸಂತೃಪ್ತವಾಗಿರಿಸಿದೆ.
ಇತ್ತೀಚೆಗೆ ಕ್ಲಬ್ ಮೆಡ್ ಎಂಬ ಟ್ರಾವೆಲ್ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಬಾಲಿಯನ್ನು ಬಹುವಾಗಿ ಮೆಚ್ಚಿಕೊಂಡದ್ದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ಬಾಲಿಯಲ್ಲಿ ಕಡಿಮೆ ದರದಲ್ಲಿ ಬೀರ್ ಸಿಗುತ್ತಿದ್ದು, ಮನಸೋ ಇಚ್ಛೆ ಕುಡಿದು ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಬಿದ್ದುಕೊಂಡಿರಬಹುದಾಗಿದೆ. ಅಷ್ಟೇ ಅಲ್ಲದೆ, ಇಲ್ಲಿ ಕಳ್ಳಕಾಕರ, ಕೊಲೆ ದರೋಡೆಕೋರರ, ನಡುರಾತ್ರಿಯ ಭಯವಿಲ್ಲ. ಎಲ್ಲ ಖುಲ್ಲಂಖುಲ್ಲಾ! ಮಜವಾಗಿ ಸುತ್ತಾಡಿಕೊಂಡು ಸುರಕ್ಷಿತವಾಗಿದ್ದು ಪ್ರವಾಸವನ್ನು ಅದ್ಭುತವಾಗಿ ಎಂಜಾಯ್ ಮಾಡಬಹುದಾದ ಡ್ರೀಮ್ ಡೆಸ್ಟಿನೇಶನ್ ಎಂದು ಎಲ್ಲರೂ ಕಾರಣಗಳನ್ನು ನೀಡಿದ್ದಾರೆ.
ಬಾಲಿಯಲ್ಲಿ. ೨.೪೫ ಪೌಂಡ್‌ಗೆ ಓಂದು ಬೀರ್ ಬಾಟಲಿ ಸಿಗುತ್ತದೆ. ಕುಡಿತ ಇಲ್ಲಿ ದುಬಾರಿಯಲ್ಲ. ಚಂದ ಚಂದದ ಹೊಟೇಲುಗಳು, ಸ್ಪಾಗಳು, ಮೈಮನ ತಣಿಸುವ ಬಾರ್‌ಗಳು, ಊಟೋಪಚಾರಗಳು, ಕಾಲು ಚಾಚಿ ಬಿದ್ದುಕೊಂಡಿರಬಹುದಾದ ಬೀಚ್‌ಗಳು ಅಷ್ಟೇ ಅಲ್ಲ, ಅತ್ಯಪೂರ್ವವಾದ ಪ್ರಾಕೃತಿಕ ಸೌಂದರ್ಯ ಎಲ್ಲವೂ ಒಂದು ಅದ್ಭುತ ಪ್ರವಾಸ ಹೇಗಿರಬಹುದೆಂಬುದಕ್ಕೆ ತಾಜಾ ಉದಾಹರಣೆಯನ್ನು ನೀಡುತ್ತವೆ ಎಂದು ಪ್ರವಾಸಿಗರು ವಿವರಿಸಿದ್ದಾರೆ.
ಟ್ರಿಪ್ ಅಡ್ವೈಸರ್ ಎಂಬ ಪ್ರಸಿದ್ಧ ಟ್ರಾವೆಲ್ ಏಜೆನ್ಸಿಯ ಪ್ರಕಾರ, ಬಾಲಿಯ ಅತ್ಯಂತ ಚಂದನೆಯ ಬೀಚ್ ಎಂದು ಕೇಲಿಂಗ್‌ಕಿಂಗ್ ಬೀಚ್‌ಗೆ ಜನರು ಅತೀ ಹೆಚ್ಚು ಓಟ್ ಮಾಡಿದ್ದಾರಂತೆ. ಬಹಳಷ್ಟು ಜನರು, ಈ ಬೀಚ್‌ಗೆ ಹೋಗದೆ ಇದ್ದರೆ ಬಾಲಿಗೆ ಹೋಗೋದು ವೇಸ್ಟ್. ಯಾರೊಬ್ಬರೂ ಮಿಸ್ ಮಾಡಲೇಬಾರದ ಬಾಲಿಯ ಬೀಚ್‌ಗಳಲ್ಲಿ ಇದಕ್ಕೆ ನಂಬರ್ ವನ್ ಸ್ಥಾನ ಎಂದು ಪ್ರವಾಸಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Travel story | ಪ್ರಪಂಚದ ಎಲ್ಲ ದೇಶಗಳನ್ನು ಸುತ್ತಲು ಮನೆಮಠ ಮಾರಿ ಹೊರಟ ದಂಪತಿ!
ಬಾಲಿಯನ್ನು ಹೊರತುಪಡಿಸಿದರೆ, ಲಾಸ್ ವೇಗಾಸ್‌ಗೆ ಜನರು ಎರಡನೇ ಸ್ಥಾನ ನೀಡಿದ್ದಾರೆ. ಇದು ಎಲ್‌ಜಿಬಿಟಿಕ್ಯು ವರ್ಗ ಹಾಗೂ ಎಲ್ಲ ಮಾದರಿಯ ಪ್ರವಾಸಿಗರಿಗೆ ಅತ್ಯಂತ ಹೆಚ್ಚು ಖುಷಿಯನ್ನು ನೀಡಿದೆ. ಪ್ರಕೃತಿ ಸೌಂದರ್ಯವನ್ನು ಇಷ್ಟಪಡುವ ಮಂದಿಗೆ ಲಾಸ್ ವೇಗಾಸ್ ರಸದೌತಣ ನೀಡುತ್ತದೆ ಎಂದು ಕಾರಣವನ್ನೂ ಅವರು ನೀಡಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಮಂದಿ ಈ ನಗರದ ಹತ್ತಿರದಲ್ಲೇ ಇರುವ ಮರುಳುಗಾಡಿನ ಸೌಂದರ್ಯವನ್ನೂ ಸವಿಯಬಹುದು ಎಂದು ಅವರು ಹೇಳಿದ್ದಾರೆ.
ಟಾಪ್ ೧೦ ಸಂತೋಷದಾಯಕ ಪ್ರವಾಸಿ ಸ್ಥಳಗಳ ಪಟ್ಟಿ ಇಲ್ಲಿದೆ!
೧. ಬಾಲಿ
೨. ಲಾಸ್ ವೇಗಾಸ್
೩. ನ್ಯೂ ಆರ್ಲೀನ್ಸ್
೪. ಬಾರ್ಸಿಲೋನಾ
೫. ಆಮ್‌ಸ್ಟೆರ್‌ಡ್ಯಾಂ
೬. ಬುಡಾಪೆಸ್ಟ್
೭. ವ್ಯಾನ್‌ಕೋವಾ
೮. ಸಾನ್ ಫ್ರಾನ್ಸಿಸ್ಕೋ
೯. ದುಬೈ
೧೦. ರಿಯೋ ಡಿ ಜೆನೆರೋ
ಕೋವಿಡ್ ಕಾಲಘಟ್ಟದ ನಂತರ ಎರಡು ವರ್ಷಗಳ ಕಾಲ ಪ್ರವಾಸದ ಕನಸನ್ನು ಅದುಮಿಟ್ಟ ಮಂದಿಯೆಲ್ಲ ಸಂತೋಷವನ್ನು ಹುಡುಕಿಕೊಂಡು ಈ ಹತ್ತು ಸ್ಥಳಗಳಿಗೆ ಹೋಗಿ ಬ್ಯಾಗು ತುಂಬಾ ಸಂತೋಷವನ್ನು ಇನ್ನು ಹತ್ತು ವರ್ಷಕ್ಕೆ ಸಾಕಾಗುವಷ್ಟು ಕಟ್ಟಿಕೊಂಡು ಬರಬಹುದು!
ಇದನ್ನೂ ಓದಿ | ಪ್ರವಾಸವೆಂದರೆ ಪ್ರಯಾಸ ಪಡುವ Motion sickness ಮಂದಿಗೊಂದಿಷ್ಟು ಗುಟ್ಟು!