Site icon Vistara News

Best Places to visit in September in India : ಸೆಪ್ಟೆಂಬರ್‌ನಲ್ಲಿ ಪ್ರವಾಸಕ್ಕೆ ಸೂಕ್ತವಾದ ರಮಣೀಯ ಸ್ಥಳಗಳಿವು

best place to visit in september

ಸೆಪ್ಟೆಂಬರ್‌ ಎಂದರೆ ಮಳೆಗಾಲ ಕೊಂಚ ಕಡಿಮೆಯಾಗಿ ಚಳಿಗಾಲದತ್ತ ಕಾಲಿಡುವ ಕಾಲ. ಆ ಸಮಯದಲ್ಲಿ (Best Places to visit in September in India) ಪ್ರವಾಸ ಮಾಡುವುದು ಹಲವರಿಗೆ ಇಷ್ಟವಾಗುತ್ತದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಯಾವ ಊರಿಗೆ ಪ್ರವಾಸ ಹೋಗೋಣ ಎನ್ನುವ ಯೋಚನೆಯನ್ನು ನೀವು ಮಾಡುತ್ತಿರಬಹುದು. ಅದಕ್ಕೆಂದೇ ನಾವಿಲ್ಲಿ ನಿಮಗಾಗಿ ಮಾಹಿತಿಗಳನ್ನು ಸಂಗ್ರಹಿಸಿದ್ದೇವೆ. ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಪ್ರವಾಸ ಮಾಡಲು ಸೂಕ್ತವಾದ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಲಿಂಪಾಂಗ್‌


ಪಶ್ಚಿಮ ಬಂಗಾಳದಲ್ಲಿ ಕಾಲಿಂಪಾಂಗ್‌ ಹೆಸರಿನ ಸ್ಥಳವಿದೆ. ಇದು ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ಶ್ರೀಮಂತವಾದ ಹಿಮಾಲಯನ್‌ ಪಟ್ಟಣವಾಗಿದೆ. 18ನೇ ಶತಮಾನದ ಆರಂಭದಲ್ಲಿ ಭೂತಾನ್‌ ರಾಜರು ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವವರೆಗೂ ಇದು ಸಿಕ್ಕಿಂ ರಾಜನ ಆಸ್ತಿಯ ಭಾಗವಾಗಿತ್ತು. 1865 ರಲ್ಲಿ, ಆಂಗ್ಲೋ-ಭೂತಾನ್ ಯುದ್ಧದ ನಂತರ, ಕಾಲಿಂಪಾಂಗ್ ಅನ್ನು ಡಾರ್ಜಿಲಿಂಗ್‌ಗೆ ಸೇರಿಸಲಾಯಿತು. ಡಾರ್ಜಿಲಿಂಗ್‌ನಲ್ಲಿ ಚಹಾ ತೋಟಗಳು ಹೆಚ್ಚಾಗತೊಡಗಿದಂತೆ ಕಾಲಿಂಪಾಂಗ್‌ ಕೂಡ ಕಾರ್ಮಿಕರ ನೆಲೆಯಾಗತೊಡಗಿತು. ಇಲ್ಲಿ ಡಿಯೊಲೊ ಹಿಲ್‌, ಕಾಲಿಂಪಾಂಗ್‌ ವಿಜ್ಞಾನ ಕೇಂದ್ರ, ಪೈನ್‌ ವ್ಯೂವ್‌ ನರ್ಸರಿ, ಡಾ.ಗ್ರಹಂ ಮನೆ, ದುರ್ಪಿನ್‌ ದಾರಾ ಹಿಲ್‌, ಮಂಗಲ್‌ ಧಾಮ್‌ ದೇವಸ್ಥಾನವಿದ್ದು, ಈ ಎಲ್ಲ ಸ್ಥಳಗಳಿಗೆ ನೀವು ಭೇಟಿ ನೀಡಬಹುದು.

ದೂವರ್ಸ್‌


ದೂವರ್ಸ್‌ ಪಶ್ಚಿಮ ಬಂಗಾಳದ ಅದ್ಭುತ ನಗರಗಳಲ್ಲಿ ಒಂದು. ಈ ನಗರದಲ್ಲಿ ನಿಮಗೆ ಅತ್ಯದ್ಭುತವಾದ ನಿಸರ್ಗ ಸೌಂದರ್ಯವನ್ನು ಹೊಂದಿರುವಂತಹ ಸಣ್ಣ ಸಣ್ಣ ಗ್ರಾಮಗಳು ಸಿಗುತ್ತವೆ. ಇಲ್ಲಿ ಚಹಾ ತೋಟಗಳು, ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಹಾಗೆಯೇ ಮನಸೂರೆಗೊಳಿಸುವ ಹಿಮಾಲಯದ ಪರ್ವತಗಳ ಬ್ಯಾಕ್‌ಗ್ರೌಂಡ್‌ ಅನ್ನೂ ನೀವಿಲ್ಲಿ ಕಾಣಬಹುದು. ನಿಸರ್ಗ ಪ್ರೇಮಿಗಳಿಗೆ ಈ ಸ್ಥಳ ಅತಿ ಇಷ್ಟವಾಗುವ ಸ್ಥಳವಾಗಿದೆ. ಇಲ್ಲಿ ನೀವು ಏಲಕ್ಕಿ ಪ್ಲಾಂಟೇಶನ್‌ಗಳನ್ನೂ ಕಾಣಬಹುದು. ಛಪ್ರಮರಿ ವನ್ಯಜೀವಿ ಅಭಯಾರಣ್ಯ, ಗೊರುಮರ ರಾಷ್ಟ್ರೀಯ ಉದ್ಯಾನವನ, ಛಿಲಪಾತ ಅರಣ್ಯಕ್ಕೆ ಭೇಟಿ ನೀಡಲು ಮರೆಯದಿರಿ.

ದಮನ್‌ ಮತ್ತು ದಿಯು


ನೀವು ಕಡಲ ಕಿನಾರೆಯನ್ನು ಇಷ್ಟಪಡುವಂತವರಾದರೆ ದಮನ್‌ ಮತ್ತು ದಿಯು ಕಡೆ ಪ್ರವಾಸವನ್ನು ಪ್ಲ್ಯಾನ್‌ ಮಾಡಿಕೊಳ್ಳಿ. ಪೋರ್ಚುಗೀಸರ ಶ್ರೀಮಂತ ಇತಿಹಾಸವಿರುವ ದ್ವೀಪಗಳಿವು. ಗುಜರಾತ್‌ನ ಸೌರಾಷ್ಟ್ರ ಬಂದರಿಗೆ ಹತ್ತಿರದಲ್ಲೇ ಈ ದ್ವೀಪಗಳಿವೆ. ಇಲ್ಲಿ ಪೋರ್ಚುಗೀಸ್‌ ಸಂಸ್ಕೃತಿಯ ಜತೆ ಗುಜರಾತಿ ಸಂಸ್ಕೃತಿ ಮಿಶ್ರವಾಗಿರುವುದನ್ನು ನೀವು ಕಾಣಬಹುದು. ಸೆಪ್ಟೆಂಬರ್‌ ಸಮಯದಲ್ಲಂತೂ ಇಲ್ಲಿನ ಹವಾಮಾನ ಎಲ್ಲರಿಗೂ ಇಷ್ಟವಾಗುತ್ತದೆ. ಇಲ್ಲಿ ನೀವು ಗೋಮ್ತಿಮಾತಾ ಬೀಚ್‌ಗೆ ಹೋಗಬಹುದು ಹಾಗೆಯೇ ನಾಯ್ಡಾ ಗುಹೆ, ಸೀಶೆಲ್ಸ್‌ ಮ್ಯೂಸಿಯಂ ಅನ್ನು ಎಕ್ಸ್‌ಪ್ಲೋರ್‌ ಮಾಡಬಹುದು. ಇಲ್ಲಿಂದ ನೀವು ಸೇಂಟ್‌ ಪೌಲ್‌ ಚರ್ಚ್‌, ನಾಗೋವ ಬೀಚ್‌, ದಿಯು ಕೋಟೆ ಸೇರಿ ಅನೇಕ ತಾಣಗಳಿಗೆ ಭೇಟಿ ನೀಡಬಹುದು.

ತರ್ಕಾಲಿ


ಮಹಾರಾಷ್ಟ್ರದ ಇನ್ನೊಂದು ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ತರ್ಕಾಲಿ. ಇಲ್ಲಿ ಬೆಟ್ಟ ಗುಡ್ಡಗಳು, ಸ್ವಚ್ಛವಾದ ಬೀಚ್‌ಗಳು, ಧುಮ್ಮಿಕ್ಕಿ ಹರಿಯುವ ಜಲಪಾತವನ್ನು ಕಾಣಬಹುದು. ಮಳೆಗಾಲ ಮುಗಿಯುವ ಸಮಯದಲ್ಲಂತೂ ತರ್ಕಾಲಿ ಸಂಪೂರ್ಣವಾಗಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇಲ್ಲಿ ಹಲವಾರು ವಾಟರ್‌ ಗೇಮ್ಸ್‌ಗಳನ್ನೂ ಆಡುವುದಕ್ಕೆ ಅವಕಾಶವಿದೆ. ಇಲ್ಲಿಂದ ನೀವು ಸಿಂಧುದುರ್ಗ ಕೋಟೆ, ಕರ್ಲಿ ಹಿನ್ನೀರು, ಡಿಯೋಗರ್‌, ಸುನಾಮಿ ದ್ವೀಪಕ್ಕೆ ಭೇಟಿ ನೀಡಬಹುದು.

ಜಿರೊ


ಅರುಣಾಚಲ ಪ್ರದೇಶದಲ್ಲಿ ಸಿಗುವ ಸುಂದರವಾದ ಪ್ರವಾಸಿ ತಾಣಗಳಲ್ಲಿ ಒಂದು ಜಿರೊ. ಇದು ಈಶಾನ್ಯದಲ್ಲಿನ ಅತ್ಯಂತ ಹಳೆಯ ನಗರ ಎಂದೂ ಕರೆಸಿಕೊಳ್ಳುತ್ತದೆ. ಏಕಾಂತವಾಗಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳಬೇಕು ಎಂದುಕೊಳ್ಳುವವರು ಇಲ್ಲಿಗೆ ಪ್ರಯಾಣ ಮಾಡಬಹುದು. ಇಲ್ಲಿನ ಹಚ್ಚ ಹಸಿರಿನ ಕಾಡು, ತಂಗಾಳಿ ಇಲ್ಲಿನ ಆದಿವಾಸಿ ಜನರ ಜೀವನ ಎಲ್ಲವೂ ನಿಮಗೆ ಹಿತವೆನಿಸುತ್ತವೆ. ಇಲ್ಲಿ ಟ್ಯಾಲಿ ವ್ಯಾಲಿ ವನ್ಯಜೀವಿ ಅಭಯಾರಣ್ಯವಿದ್ದು, ಅಲ್ಲಿ ನೀವು ಚಿರತೆಗಳನ್ನು ಕಾಣಬಹುದು. ಇಲ್ಲಿ ನೀವು ಕಿಲೆ ಪಖೋ, ಟ್ರೈನ್‌ ಫಿಶ್‌ ಫಾರ್ಮ್‌, ಮೇಘನಾ ಕೇವ್‌ ಟೆಂಪಲ್‌, ಆರ್ಚಿಡ್‌ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಲು ಮರೆಯದಿರಿ.

ಅಮೃತಸರ


ಗೋಲ್ಡನ್‌ ಟೆಂಪಲ್‌ಗೆ ಪ್ರಸಿದ್ಧವಾಗಿರುವ ಅಮೃತಸರ ಕೂಡ ಸೆಪ್ಟೆಂಬರ್‌ ತಿಂಗಳಲ್ಲಿ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ. ಸಂಸ್ಕೃತಿ, ಧಾರ್ಮಿಕತೆ, ಆಹಾರ, ಸಂಪ್ರದಾಯ ಎಲ್ಲ ವಿಚಾರದಲ್ಲೂ ಈ ನಗರ ವಿಶೇಷವಾಗಿದೆ. ಇಲ್ಲಿಗೆ ದೇಶದ ಪ್ರವಾಸಿಗರಷ್ಟೇ ಅಲ್ಲದೆ ವಿದೇಶಿ ಪ್ರವಾಸಿಗರೂ ಬರುತ್ತಿರುತ್ತಾರೆ. ಇಲ್ಲಿಗೆ ಹೋದ ಮೇಲೆ ನೀವು ಇತಿಹಾಸ ಪ್ರಸಿದ್ಧ ಜಲಿಯನ್‌ವಾಲಾ ಬಾಗ್‌, ಶ್ರೀ ಹರ್ಮಿಂದರ್‌ ಸಾಹಿಬ್‌, ದುರ್ಗಿಯಾನಾ ದೇವಸ್ಥಾನ, ಪಾರ್ಟಿಶನ್‌ ಮ್ಯೂಸಿಯಂ, ಮಂದಿರ್‌ ಮಾತಾ ಲಾಲ್‌ ದೇವಿ, ಗೋಬಿಂದ್‌ಗರ್‌ ಕೋಟೆಯನ್ನು ನೋಡಲೇಬೇಕು.

ಶ್ರೀನಗರ


ಭೂಮಿಯ ಮೇಲಿನ ಸ್ವರ್ಗವನ್ನು ನೋಡಬೇಕೆಂದರೆ ನೀವು ಶ್ರೀನಗರಕ್ಕೆ ಹೋಗಬೇಕು. ಸೆಪ್ಟೆಂಬರ್‌ನಲ್ಲಿ ಮಳೆಗಾಲವೂ ಮುಗಿದಿರುತ್ತದಾದ್ದರಿಂದ ಶ್ರೀನಗರ ಒಂದು ರೀತಿಯಲ್ಲಿ ಮಂಜಿನ ನಗರದಂತೆ ಕಾಣಿಸಿಕೊಳ್ಳುತ್ತದೆ. ದೇಶದ ಎರಡನೇ ಅತಿ ದೊಡ್ಡ ಸರೋವರ ಎನ್ನುವ ಖ್ಯಾತಿಯ ದಾಲ್‌ ಸರೋವರವನ್ನು ನೀವಿಲ್ಲಿ ಕಾಣಬಹುದು. ಅದೊಂದೇ ಅಲ್ಲದೆ ಹಲವಾರು ಸರೋವರಗಳು, ಹಿಮಾವೃತ ಪರ್ವತಗಳನ್ನು ನೀವಿಲ್ಲಿ ಕಾಣಬಹುದು. ಶಂಕರಾಚಾರ್ಯ ಬೆಟ್ಟ, ನಿಶತ್‌ ಗಾರ್ಡನ್‌, ಸೊನಾಮರ್ಗ್‌, ಇಂದಿರಾ ಗಾಂಧಿ ತುಲಿಪ್‌ ಗಾರ್ಡನ್‌, ಛಸ್ಮೆ ಶಾಹಿ, ನಿಗೀನ್‌ ಸರೋವರ ಸೇರಿ ಇನ್ನೂ ಅನೇಕ ಪ್ರವಾಸಿ ತಾಣಗಳು ಈ ನಗರದಲ್ಲಿವೆ.

ನೀಮ್‌ರಾನ್‌


ರಾಜಸ್ಥಾನದಲ್ಲಿ ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಬೇಕಾದ ಸ್ಥಳವೆಂದರೆ ಅವರು ನೀಮ್‌ರಾನ್‌. ರಾಜಸ್ಥಾನದ ಅದ್ಧೂರಿತನವನ್ನು ಇಲ್ಲಿಯೂ ಕಾಣಬಹುದು. ಇಲ್ಲಿನ ನೀಮ್‌ರಾನ್‌ ಕೋಟೆಯಲ್ಲಿ ನೀವು ಆ ಅದ್ಧೂರಿತನವನ್ನು ಗಮನಿಸಬಹುದು. ಅದರಲ್ಲೂ ಮಳೆಗಾಲ ಮುಗಿದ ಮೇಲೆ ಸುರಿಯುವ ಸಣ್ಣ ಜರಿಮಳೆಯೇನಾದರೂ ಸುರಿಯುತ್ತಿದ್ದರೆ ಈ ಸ್ಥಳ ನೋಡುವುದಕ್ಕೆ ಅದ್ಭುತವಾಗಿ ಕಾಣುತ್ತದೆ. ಇಲ್ಲಿ ಅಲ್ಲಲ್ಲಿ ಸ್ಥಳೀಯ ಸಂಗೀತ ಕಲಾವಿದರು, ಜಾನಪದ ಕಲಾವಿದರು ಸಂಗೀತ ಕಚೇರಿಗಳನ್ನೂ ನಡೆಸುತ್ತಿರುತ್ತಾರಾದ್ದರಿಂದ ಸಂಗೀತ ಪ್ರಿಯರಿಗೆ ಇಷ್ಟವಾಗುತ್ತದೆ. ಇಲ್ಲಿ ನೀವು ಸರಿಸ್ಕಾ ರಾಷ್ಟ್ರೀಯ ಉದ್ಯಾನವನ, ಸಿಲಿಸೇರ್‌ ಸರೋವರ, ವಿನಯ್ ವಿಲಾಸ್‌ ಮಹಲ್‌, ಬಾಲ ಕಿಲಾ ಮತ್ತು ಪುರಾತನ ವೃಂದಾವನ ಅರಮನೆಯನ್ನು ನೋಡಬಹುದು.

ಗೋವಾ


ಕರ್ನಾಟಕದಲ್ಲಿರುವ ಎಲ್ಲರಿಗೂ ತಿಳಿದಿರುವ ಪ್ರಸಿದ್ಧ ಪ್ರವಾಸಿ ತಾಣ ಗೋವಾ. ಇಲ್ಲಿ ಹಲವಾರು ಬೀಚ್‌ಗಳಿದ್ದು, ಕಡಲ ಕಿನಾರೆಯಲ್ಲಿ ಮಿಂದೆದ್ದು ಎಂಜಾಯ್‌ ಮಾಡಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಸ್ಥಳ ಎನ್ನಬಹುದು. ಈ ಮಳೆಗಾಲದ ಸಮಯದಲ್ಲಿ ಬೀಚ್‌ನಲ್ಲಿ ಆಟವಾಡುವುದಕ್ಕೆ ಬಿಡುವುದಿಲ್ಲವಾದ್ದರಿಂದ ನೀವು ಸೆಪ್ಟೆಂಬರ್‌ನಲ್ಲಿ ಗೋವಾ ಟ್ರಿಪ್‌ ಪ್ಲಾನ್‌ ಮಾಡಿಕೊಳ್ಳಬಹುದು. ಇಲ್ಲಿ ನೀವು ಅಗುಂದ ಕೋಟೆ, ಚಪೋರಾ ಕೋಟೆ, ಬಾಮ್‌ ಜೀಸಸ್‌ ಬಸಿಲಿಕ, ಸಲೀಂ ಅಲಿ ಪಕ್ಷಿಗಳ ಅಭಯಾರಣ್ಯ, ಬಾಗಾ ಬೀಚ್‌, ಅಂಜುನಾ ಬೀಚ್‌ ಸೇರಿ ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು.

ನೈನಿತಾಲ್‌


ಉತ್ತರಾಖಂಡದ ಕಡೆ ಪ್ರವಾಸ ಹೋಗುವುದಾದರೆ ನೈನಿತಾಲ್‌ಗೆ ಹೋಗುವುದಕ್ಕೆ ಪ್ಲ್ಯಾನ್‌ ಮಾಡಿಕೊಳ್ಳಿ. ಇದು ಆ ರಾಜ್ಯದ ಉತ್ತಮ ಬೆಟ್ಟಗಳ ನಗರಿ. ಇಲ್ಲಿ ಸುಂದರವಾದರ ಸರೋವರಗಳು, ಹಳೆಯ ಕಾಟೇಜ್‌ಗಳು ನಿಮ್ಮನ್ನು ಸೆಳೆಯುತ್ತವೆ. ಅದರಲ್ಲೂ ಸೆಪ್ಟೆಂಬರ್‌ ಸಮಯದಲ್ಲಿನ ಹವಾಮಾನಕ್ಕೆ ಈ ಸ್ಥಳ ಹೇಳಿ ಮಾಡಿಸಿದ್ದು ಎನ್ನಬಹುದು. ಇಲ್ಲಿಂದ ನೀವು ನೈನಿ ಸರೋವರ, ನೈನಿತಾಲ್‌ ಮೃಗಾಲಯ, ನೈನಾ ದೇವಿ ದೇವಸ್ಥಾನ, ಏರಿಯಲ್‌ ರೋಪ್‌ವೇ, ದಿ ಮಾಲ್‌ ರೋಡ್‌, ಎಕೋ ಕೇವ್‌ ಗಾರ್ಡನ್ಸ್‌ ಮತ್ತು ರಾಜ್‌ ಭವನಕ್ಕೆ ಭೇಟಿ ನೀಡಬಹುದು.

ಅಂಡಮಾನ್‌


ಕಡಲ ದಡಗಳಲ್ಲಿ ಕುಳಿತು ಮನಸ್ಸಿಗೆ ನೆಮ್ಮದಿ ತಂದುಕೊಳ್ಳಬೇಕೆನ್ನುವ ಮನಸ್ಸಿದ್ದರೆ ಅಂಡಮಾನ್‌ನತ್ತ ಪ್ರಯಾಣ ಬೆಳೆಸಿ. ಇದು ಒಂದು ರೀತಿಯಲ್ಲಿ ಮನಮೋಹಕವಾದ ದ್ವೀಪವಾಗಿದೆ. ಇಲ್ಲಿ ನೀವು ಸೂರ್ಯೋದಯ, ಸೂರ್ಯಾಸ್ತಮಾನದ ವಿಹಂಗಮ ನೋಟವನ್ನು ಕಣ್ತುಂಬಿಸಿಕೊಳ್ಳುವುದಷ್ಟೇ ಅಲ್ಲದೆ ಹಲವಾರು ರೀತಿಯ ವಾಟರ್‌ ಗೇಮ್ಸ್‌ಗಳನ್ನು ಆಡಬಹುದು. ಇಲ್ಲಿ ನೀವು ಹ್ಯಾವ್ಲಾಕ್ ದ್ವೀಪ, ನೀಲ್ ದ್ವೀಪ, ರಾಸ್ ದ್ವೀಪ, ನಾರ್ತ್ ಬೇ ಐಲ್ಯಾಂಡ್, ಬಾರಾತಂಗ್ ದ್ವೀಪ, ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವನ, ಚಿಧಿಯಾ ಟಪ್ಪು, ಧನಿನಲ್ಲ ಮ್ಯಾಂಗ್ರೋವ್ ನೇಚರ್ ವಾಕ್ ವೇ, ಪಂಚವಟಿ ಜಲಪಾತಗಳು, ಕತ್ಬರ್ಟ್ ಬೇ ವನ್ಯಜೀವಿ ಅಭಯಾರಣ್ಯ, ಎಲೆಫೆಂಟ್ ಬೀಚ್‌ಗೆ ಭೇಟಿ ನೀಡಬಹುದು. ಸ್ಕೂಬಾ ಡೈವಿಂಗ್‌ನಂತಹ ಆಟವನ್ನು ನೀವಲ್ಲಿ ಆಡಬಹುದು.

ಊಟಿ


ಪ್ರಕೃತಿ ಪ್ರೇಮಿಗಳಿಗೆ ಇಷ್ಟವಾಗುವ ತಾಣ ಊಟಿ. ಕರ್ನಾಟಕದ ನೆರೆ ರಾಜ್ಯ ತಮಿಳುನಾಡಿನಲ್ಲಿರುವ ಇಲ್ಲಿ ಅನೇಕ ಬೆಟ್ಟ ಗುಡ್ಡಗಳಿದ್ದು, ಈ ಸಮಯದಲ್ಲಿ ಎಲ್ಲವೂ ಹಚ್ಚ ಹಸಿರಿನಿಂದ ಕೂಡಿರುತ್ತವೆ. ಅದಲ್ಲದೆ ಇಲ್ಲಿನ ಸರೋವರದಲ್ಲಿ ದೋಣಿ ವಿಹಾರವನ್ನೂ ಮಾಡಬಹುದು. ಇಲ್ಲಿನ ಟೀ ಮ್ಯೂಸಿಯಂಗೆ ಭೇಟಿ ನೀಡುವುದನ್ನು ಮರೆಯಬೇಡಿ. ಇಲ್ಲಿರುವ ದೊಡ್ಡಬೆಟ್ಟದಲ್ಲಿ ಸ್ಕೇಲಿಂಗ್‌ ಮಾಡಬಹುದು. ಪೈಕಾರಾ ಜಲಪಾತದಲ್ಲಿ ನೀರಿನಲ್ಲಿ ಆಟವಾಡಬಹುದು. ಪೈನ್‌ ಕಾಡಿನಲ್ಲಿ ಕುಳಿತು ಸ್ಥಳೀಯ ಖಾದ್ಯಗಳನ್ನು ತಿನ್ನಬಹುದಾಗಿದೆ. ಇಲ್ಲಿ ನೀವು ಊಟಿ ಸರೋವರ್‌, ಬೊಟಾನಿಕಲ್‌ ಗಾರ್ಡನ್ಸ್‌, ದೊಡ್ಡಬೆಟ್ಟ ಶಿಖರ, ರೋಸ್‌ ಗಾರ್ಡನ್‌, ಪೈಕರ ಸರೋವರ ಮತ್ತು ಜಲಪಾತ, ಸರ್ಕಾರಿ ವಸ್ತುಸಂಗ್ರಹಾಲಯವನ್ನು ನೋಡಬಹುದು.

ಕೂರ್ಗ್‌(ಕೊಡಗು)


ಕರ್ನಾಟಕದಲ್ಲಿ ನೀವು ಸೆಪ್ಟೆಂಬರ್‌ ತಿಂಗಳಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಲ್ಲಿ ಒಂದೆಂದರೆ ಅದು ಕೊಡಗು. ಹಸಿರೇ ತುಂಬಿರುವ ಈ ಪುಟ್ಟ ಪಟ್ಟಣದಲ್ಲಿ ನೀವು ನಿಸರ್ಗ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಪುಟ್ಟ ಪುಟ್ಟ ಬೆಟ್ಟಗಳು, ಅದನ್ನು ಆವರಿಸಿಕೊಂಡಿರುವ ಮಂಜು ಎಲ್ಲವೂ ನಿಮ್ಮನ್ನು ಆಕರ್ಷಿಸುತ್ತದೆ. ಇಲ್ಲಿ ಅತ್ಯದ್ಭುತ ರೆಸಾರ್ಟ್‌ಗಳೂ ಇದ್ದು, ನೀವು ಒಂದೆರೆಡು ದಿನಗಳ ಮಟ್ಟಿಗೆ ಆರಾಮವಾಗಿ ಇಲ್ಲಿದ್ದು ಬರಬಹುದು. ಇಲ್ಲಿ ಆನೆ ಸವಾರಿ, ರಿವರ್‌ ರಾಫ್ಟಿಂಗ್‌, ಟ್ರೆಕ್ಕಿಂಗ್‌, ಕ್ಯಾಂಪಿಂಗ್‌, ಬೋಟಿಂಗ್‌, ಜೀಪ್‌ ಸಫಾರಿಯನ್ನು ನೀವು ಮಾಡಬಹುದು. ಕೊಡಗಿಗೆ ಭೇಟಿ ಕೊಟ್ಟಾಗ ಅಬ್ಬೆ ಫಾಲ್ಸ್‌, ತಡಿಯಂಡಮೋಲ್ ಶಿಖರ, ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ಕುಮಾರ ಪರ್ವತ ಬೆಟ್ಟ, ರಾಜಾ ಸೀಟ್, ಬ್ರಹ್ಮಗಿರಿ ಬೆಟ್ಟ, ಕಾಫಿ ತೋಟ, ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ಕೊಡಲು ಮರೆಯದಿರಿ.

ಕೇರಳ


ದೇವರ ನಾಡು ಎಂದೇ ಕರೆಸಿಕೊಳ್ಳುವ ಕೇರಳಕ್ಕೆ ಈ ಸಮಯದಲ್ಲಿ ನೀವು ಭೇಟಿ ನೀಡಬೇಕು. ಇಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಮಳೆಗಾಲದ ಸಮಯದಲ್ಲಿ ಪೂರ್ತಿ ರಾಜ್ಯವೇ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಇಲ್ಲಿ ಬೋಟಿಂಗ್‌ ಮಾಡಬಹುದು. ಹಾಗೆಯೇ ಆಯುರ್ವೇದ ಸ್ಪಾಗಳು ಕೂಡ ಇರುವುದರಿಂದ ದೇಹಕ್ಕೆ ಸ್ವಲ್ಪ ವಿಶ್ರಾಂತಿಯನ್ನೂ ನೀಡಬಹುದು. ಇಲ್ಲಿನ ಆಹಾರ ಪದ್ಧತಿ ಕೂಡ ನಿಮಗೆ ಇಷ್ಟವಾಗುತ್ತದೆ. ಬ್ಯಾಕ್‌ವಾಟರ್‌ ಕ್ರೂಸ್‌, ಹೌಸ್‌ಬೋಟ್‌ ಸ್ಟೇಗೆ ಕೇರಳ ಪ್ರಸಿದ್ಧ.

ಮನಾಲಿ


ಪ್ರೇಮಿಗಳ ಪ್ರೀತಿಯ ಮನಾಲಿ ಕೂಡ ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಲು ಸೂಕ್ತ ಸ್ಥಳವಾಗಿದೆ. ಹಾಗೆಯೇ ಏಕಾಂಗಿ ಆಗಿ ಟ್ರಿಪ್‌ ಹೋಗುವವರಿಗೂ ಇದು ಇಷ್ಟವಾಗುವ ಸ್ಥಳ. ಇಲ್ಲಿನ ಹಿಮಾವೃತ ಪರ್ವತಗಳು, ಅವುಗಳ ಮಧ್ಯೆ ಬಳುಕುತ್ತ ಹರಿಯುವ ನದಿಗಳು, ವಿಶೇಷ ಸಂಸ್ಕೃತಿಯನ್ನು ಹೊಂದಿರುವ ದೇಗುಲಗಳು ಎಲ್ಲವೂ ನಿಮಗೆ ಮನಸ್ಸಿಗೆ ಹಿತವೆನಿಸುತ್ತವೆ. ಇಲ್ಲಿ ನೀವು ಹಡಿಂಬ ದೇವಿ ದೇವಸ್ಥಾನ, ದಿ ಮನಾಲಿ ಗೊಂಪಾ, ಹಮ್ಪ್ತಾ ಪಾಸ್‌, ಜೋಗಿಣಿ ಜಲಪಾತ, ಸೊಲಂಗ್‌ ವ್ಯಾಲಿ, ಭ್ರಿಗು ಸರೋವರ ಹಾಗೆಯೇ ಇನ್ನೂ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.

ರಿಷಿಕೇಶ


ಅಧ್ಯಾತ್ಮದತ್ತ ಹೆಚ್ಚು ಒಲವಿರುವವರು ರಿಷಿಕೇಶದತ್ತ ಪ್ರಯಾಣ ಬೆಳೆಸಿ. ಭಾರತದ ಪವಿತ್ರ ಸ್ಥಳಗಳಲ್ಲಿ ಇದೂ ಒಂದು. ಇಲ್ಲಿ ದೈವ ಭಕ್ತಿ ಮೆರೆಯುವುದಷ್ಟೇ ಅಲ್ಲದೆ ರಿಫರ್‌ ರ್ಯಾಫ್ಟಿಂಗ್‌, ಹೈಕಿಂಗ್‌ ಮತ್ತು ಟ್ರೆಕ್ಕಿಂಗ್‌ ಅನ್ನೂ ಮಾಡಬಹುದು. ಬಂಗೀ ಜಂಪಿಂಗ್‌ ಮಾಡುವ ಧೈರ್ಯವಿರುವವರಿಗೆ ಇಲ್ಲಿ ಅದಕ್ಕೂ ಅವಕಾಶವಿದೆ. ಅದಲ್ಲದೆ ಗಂಗಾ ನದಿ ತಟದಲ್ಲಿ ನಡೆಯುವ ಗಂಗಾ ಆರತಿಯನ್ನು ನೋಡಲು ಮರೆಯದಿರಿ. ಹಾಗೆಯೇ ಇಲ್ಲಿನ ಆಯುರ್ವೇದಿಕ್‌ ಸ್ಪಾಗಳಲ್ಲಿ ಮಸಾಜ್‌ ಮಾಡಿಸಿಕೊಳ್ಳುವುದನ್ನೂ ಮಿಸ್‌ ಮಾಡಿಕೊಳ್ಳಬೇಡಿ. ಇಲ್ಲಿ ಸಮೀಪದಲ್ಲಿ ನೀವು ಲಕ್ಷ್ಮಣ ಝುಲಾ, ರಾಮ್‌ ಝುಲಾ, ತೇರಾ ಮಂಜಿಲ್‌ ಮಂದಿರ, ತ್ರಿವೇಣಿ ಘಾಟ್‌, ಶ್ರೀ ಭಾರತ್‌ ಮಂದಿರ, ಶಿವಪುರಿ ತಾಣಗಳಿವೆ.

ಲಡಾಖ್‌


ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಲೇ ಲಡಾಕ್‌ನ್ನು ಭೇಟಿ ನೀಡುವುದಕ್ಕೆ ಇದು ಸೂಕ್ತ ಸಮಯ. ಟಿಬೆಟಿಯನ್‌ ಬೌದ್ಧ ಮಠಗಳಿಂದ ತುಂಬಿರುವ ಲಡಾಕ್‌ನಲ್ಲಿ ಪಾಂಗಾಂಗ್‌ ಸರೋವರ, ಪರ್ವತ ಶ್ರೇಣಿ ಎಲ್ಲವೂ ನಿಮ್ಮನ್ನು ಸೆಳೆಯುತ್ತದೆ. ಅದರ ಜತೆಗೆ ನುಬ್ರಾ ಕಣಿವೆಗ ಕೂಡ ಲೇ ಲಡಾಕ್‌ ಸನಿಹದಲ್ಲೇ ಇದ್ದು, ಅದಕ್ಕೂ ಕೂಡ ನೀವು ಭೇಟಿ ನೀಡಬಹುದು. ಟ್ರೆಕ್ಕಿಂಗ್‌, ಮೌಂಟೇನ್‌ ಬೈಕಿಂಗ್‌, ಜೀಪ್‌ ಸಫಾರಿ, ಮೋಟಾರ್‌ ಸೈಕಲ್‌ ರೋಡ್‌ ಟ್ರಿಪ್‌ ಸೇರಿ ಇನ್ನಷ್ಟು ರೀತಿಯ ಸಾಹಸಮಯ ಕೆಲಸಗಳನ್ನು ನೀವಿಲ್ಲಿ ಮಾಡಬಹುದು. ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅದು ಜೂನ್‌ನಿಂದ ಸೆಪ್ಟೆಂಬರ್‌.

ಕೊಡೈಕೆನಾಲ್‌


ತಮಿಳುನಾಡಿನ ಪ್ರಸಿದ್ಧ ಕೊಡೈಕೆನಾಲ್‌ ಭಾರತದಲ್ಲಿ ಅತ್ಯಂತ ಪ್ರಸಿದ್ಧ ಹನಿಮೂನ್‌ ತಾಣಗಳಲ್ಲಿ ಒಂದಾಗಿದೆ. ಲೇಕ್‌ಸೈಡ್‌ ರೆಸಾರ್ಟ್‌ಗಳಿಂದಲೇ ತುಂಬಿಕೊಂಡಿರುವ ಈ ಪಟ್ಟಣದಲ್ಲಿ ನೀವು ಮಂಜು ತುಂಬಿದ ಬೆಟ್ಟಗಳನ್ನು, ಜಲಪಾತಗಳನ್ನು ಕಾಣಬಹುದು. ಪಳನಿ ಬೆಟ್ಟಗಳ ಇಳಿಜಾರಿನಲ್ಲಿರುವ ಈ ಪಟ್ಟಣ ಸಮುದ್ರ ಮಟ್ಟದಿಂದ 7200 ಅಡಿ ಎತ್ತರದಲ್ಲಿದೆ. ಇಲ್ಲಿ ನೀವು ಬೆಟ್ಟಗಳನ್ನು ಹತ್ತುವುದರೊಂದಿಗೆ ಸೈಕ್ಲಿಂಗ್‌, ಹೈಕಿಂಗ್‌, ಟ್ರೆಕ್ಕಿಂಗ್‌ ಮಾಡಬಹುದಾಗಿದೆ. ಇಲ್ಲಿಂದ ನೀವು ಮನ್ನವನೂರ್‌ ಹೊಳೆ, ಬೆರಿಜಮ್‌ ಹೊಳೆ, ಪೈನ್‌ ಫಾರೆಸ್ಟ್‌, ಡಾಲ್ಫಿನ್ಸ್‌ ನೋಸ್‌, ಪಿಲ್ಲರ್‌ ರಾಕ್ಸ್‌, ಬ್ರ್ಯಾಂಟ್‌ ಪಾರ್ಕ್‌, ಗ್ರೀನ್‌ ವ್ಯಾಲಿ ವ್ಯೂ, ಚೆಟ್ಟಿಯಾರ್‌ ಪಾರ್ಕ್‌ಗೆ ಭೇಟಿ ನೀಡಬಹುದು.

ಉದಯ್‌ಪುರ


ರಾಜಸ್ಥಾನ ದೇಶದಲ್ಲೇ ಅತ್ಯಂತ ಕಡಿಮೆ ಮಳೆ ಕಾಣುವ ರಾಜ್ಯಗಳಲ್ಲಿ ಒಂದು. ಮಳೆಗಾಲದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಸರೋವರಗಳ ನಗರವಾರ ಉದಯಪುರದ ರೊಮ್ಯಾಂಟಿಕ್‌ ನಗರ ಎಂದು ಕರೆಸಿಕೊಂಡಿದೆ. ಸಮುದ್ರ ಮಟ್ಟದಿಂದ 3100 ಅಡಿ ಎತ್ತರದಲ್ಲಿರುವ ಸಜ್ಜನ್‌ಗಢ ಅರಮನೆಯನ್ನು ನೀವಿಲ್ಲಿ ಕಾಣಬಹುದು. ಈ ಅರಮನೆಯನ್ನು ಮಾನ್ಸೂನ್‌ ಪ್ಯಾಲೇಸ್‌ ಎಂದೂ ಕರೆಯಲಾಗುತ್ತದೆ. ಅಲ್ಲಿಂದ ನಗರ ಮತ್ತು ಸರೋವರಗಳ ವಿಹಂಗಮ ನೋಟವನ್ನೂ ಕಾಣಬಹುದು. ಇಲ್ಲೊ ಬೋಟಿಂಗ್‌, ಕೇಬಲ್‌ ಕಾರ್‌ ರೋಪ್‌ವೇ ಕೂಡ ಇವೆ. ಇಲ್ಲಿ ನೀವು ಕರಕುಶಲ ವಸ್ತುಗಳನ್ನು ಶಾಪಿಂಗ್‌ ಮಾಡಬಹುದು.

ಲೊನಾವಾಲಾ


ವಾಣಿಜ್ಯ ನಗರಿ ಮುಂಬೈನಲ್ಲಿರುವವರಿಗೆ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ಲೋನಾವಾಲಾ. ಜಲಪಾತಗಳು, ಸರೋವರಗಳು ಮತ್ತು ಬೆಟ್ಟಗಳಿರುವ ಸ್ಥಳವಿದು. ಇಲ್ಲಿ ನೀವು ಕ್ಯಾಂಪಿಂಗ್‌, ಟ್ರೆಕ್ಕಿಂಗ್‌ ಜತೆ ಹಲವು ಸಾಹಸ ಕ್ರೀಡೆಗಳನ್ನು ಆಡಬಹುದಾಗಿದೆ. ಭಾಜಾ ಗುಹೆಗಳು, ಬುಶಿ ಅಣೆಕಟ್ಟು, ಕಾರ್ಲಾ ಗುಹೆಗಳು, ರಾಜ್ಮಾಚಿ ಕೋಟೆ, ರೈವುಡ್ ಸರೋವರ ಇತ್ಯಾದಿಗಳು ಲೋನಾವಾಲಾದ ಜನಪ್ರಿಯ ಪ್ರವಾಸಿ ಆಕರ್ಷಣೆಗಳಾಗಿವೆ. ಇಲ್ಲಿನ ಅಮ್ಯೂಸ್‌ಮೆಂಟ್‌ ಪಾರ್ಕ್‌ ಮತ್ತು ವ್ಯಾಕ್ಸ್‌ ಮ್ಯೂಸಿಯಂ ಅನ್ನು ನೀವು ವೀಕ್ಷಿಸಲೇಬೇಕು. ವರ್ಷ ಪೂರ್ತಿ ಈ ಸ್ಥಳಕ್ಕೆ ನೀವು ಭೇಟಿ ನೀಡಬಹುದಾಗಿದೆ.

Exit mobile version