ಸಾಹಸೀ ಪ್ರಿಯ ಪ್ರವಾಸಿಗರಿಗೆ ಜೀವನದಲ್ಲೊಮ್ಮೆಯಾದರೂ ಸ್ಕೂಬಾ ಡೈವಿಂಗ್ ಮಾಡುವ ಆಸೆಯಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಭಾರತೀಯರು ಸ್ಕೂಬಾದಂತಹ ವಾಟರ್ ಸ್ಪೋರ್ಟ್ಸ್ ಕಡೆಗೆ ಹೆಚ್ಚು ಆಸಕ್ತಿಯನ್ನೂ ತೋರಿಸುತ್ತಿದ್ದಾರೆ. ಸಾಗರದಾಳದ ನೈಸರ್ಗಿಕ ವಿಸ್ಮಯವನ್ನು ಕಣ್ತುಂಬಿಕೊಳ್ಳುವ ಪ್ರಕೃತಿಪ್ರಿಯರು ಖಂಡಿತ ಮಾಡಬೇಕಾದ ಸಾಹಸವಿದು. ಹಾಗಾದರೆ ಭಾರತದಲ್ಲಿ ಎಲ್ಲೆಲ್ಲಿ ಸ್ಕೂಬಾ ಮಾಡಬಹುದು ಎಂಬುದನ್ನು ನೋಡೋಣ.
1. ಅಂಡಮಾನ್ ನಿಕೋಬಾರ್: ಸ್ಕೂಬಾದ ಅನುಭವಕ್ಕೆ ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಸಮೂಹದಷ್ಟು ಸುಂದರ, ರಮಣೀಯ, ಆಕರ್ಷಕ ತಾಣ ನಮಗೆ ಹತ್ತಿರದಲ್ಲಿ ಎಲ್ಲಿ ಸಿಕ್ಕೀತು ಹೇಳಿ. ನಮ್ಮ ದೇಶದ ಸುತ್ತಮುತ್ತಲ ಸಮುದ್ರದಾಳದ ಅದ್ಭುತ ಲೋಕವನ್ನು ಕಣ್ಣಾರೆ ಕಾಣಬೇಕೆಂದರೆ ಅಂಡಮಾನ್ ತೀರದಲ್ಲೊಮ್ಮೆ ಮುಳುಗಿ ಏಳಬೇಕು. ಕೇವಲ ಪ್ರವಾಸ ಮಾತ್ರವಲ್ಲದೆ, ಅನುಭವಗಳನ್ನು ದಕ್ಕಿಸಿಕೊಳ್ಳುವ ಆಸಕ್ತಿ ಇರುವ ಮಂದಿಗೆ ಹಾಗೂ ಸಾಹಸೀ ಪ್ರವೃತ್ತಿಯವರಿಗೆ ಸ್ಕೂಬಾ ಮಾಡಲು ಅತ್ಯಂತ ಚೆಂದನೆಯ ಸ್ಪಟಿಕ ಶುದ್ಧ ನೀಲಿ ಹಸಿರು ಸಮುದ್ರವೆಂದರೆ ಇದೇ. ಇಲ್ಲಿ ಸಾಗರದಾಳದಲ್ಲಿ ಆಮೆ, ಮಾಂಟಾ ರೇ, ಏಲ್, ಬ್ಯಾಟ್‌ಫಿಶ್ ಸೇರಿದಂತೆ ಅನೇಕ ಬಗೆಯ ಜೀವಿಗಳನ್ನೂ ಪ್ರತ್ಯಕ್ಷವಾಗಿ ಅವುಗಳ ತಾಣದಲ್ಲಿಯೇ ನೋಡಿ ಅನುಭವಿಸಬಹುದು. ಎಲ್ಲಕ್ಕಿಂತ ಹೆಚ್ಚು ಸ್ಕೂಬಾದ ಜೀವಮಾನದ ಅನುಭವಕ್ಕೆ ಇಲ್ಲಿಗೇ ಬರಬೇಕು. ನವೆಂಬರ್ ತಿಂಗಳಿಂದ ಎಪ್ರಿಲ್‌ವರೆಗೆ ಇಲ್ಲಿ ಸ್ಕೂಬಾ ಮಾಡಲು ಪ್ರಶಸ್ತ ಸಮಯ.
2. ಲಕ್ಷದ್ವೀಪಗಳು: ವಾಟರ್ ಸ್ಪೋರ್ಟ್ಸ್ ಹಾಗೂ ಸ್ಕೂಬಾ ಡೈವಿಂಗ್‌ಗೆ ಲಕ್ಷದ್ವೀಪಗಳೂ ಕೂಡಾ ಅತ್ಯುತ್ತಮ ಆಯ್ಕೆ. ಇಲ್ಲಿನ ನೀಲಿ ಹಸಿರು ಸ್ಪಟಿಕ ಶುದ್ಧ ಸಮುದ್ರದಲ್ಲಿ ಸ್ಕೂಬಾ ಮಾಡುವುದೇಒಂದು ದಿವ್ಯ ಅನುಭೂತಿ. ಸಾಗರದಾಳದ ಜಲಚರಗಳು ಹಾಗೂ ಅತ್ಯಪೂರ್ವ ಜಲಸಂಪತ್ತನ್ನು ಮನದಣಿಯೆ ನೋಡಲು ಅದ್ಭುತ ಆಯ್ಕೆಗಳಲ್ಲಿ ಲಕ್ಷದ್ವೀಪಗಳೂ ಒಂದು. ಅಕ್ಟೋಬರ್ ತಿಂಗಳಿಂದ ಮೇ ಮಧ್ಯದವರೆಗೂ ಸ್ಕೂಬಾ ಮಾಡಲು ಬೆಸ್ಟ್ ಟೈಮ್.
3. ಗೋವಾ: ಅಂಡಮಾನ್, ಲಕ್ಷದ್ವೀಪಗಳಿಗೆಲ್ಲ ಹೋಗಲು ಸಧ್ಯಕ್ಕೆ ಸಾಧ್ಯವಿಲ್ಲ ಅನಿಸಿದರೆ ಹತ್ತಿರದ ಗೋವಾದಲ್ಲಿ ಕೂಡಾ ಸ್ಕೂಬಾ ಮಾಡಬಹುದು. ನೈಟ್‌ಲೈಫ್, ಪಾರ್ಟಿ ಪ್ರಿಯರ ಪ್ರವಾಸೀ ತಾಣ ಇದಾದರೂ, ಪಾರಾಸೈಲಿಂಗ್, ಜೆಟ್‌ಸ್ಕೀ, ಸರ್ಫಿಂಗ್, ಸ್ಕೂಬಾ ಡೈವಿಂಗ್‌ನಂತಹ ಸಾಹಸೀ ಕ್ರೀಡೆಗಳಿಗೂ ಇದು ಪ್ರಸಿದ್ಧ ತಾಣ.
4. ನೇತ್ರಾಣಿ: ನಮ್ಮ ಕರ್ನಾಟಕ ಬಿಟ್ಟು ಹೊರಗೆಲ್ಲೂ ಸದ್ಯ ಹೋಗಲು ಸಾಧ್ಯವಿಲ್ಲ ಅಂತ ಹೇಳುವ ಮಂದಿಗೆ ಬೆಸ್ಟ್ ತಾಣ ನಮ್ಮದೇ ನೇತ್ರಾಣಿ. ನಮ್ಮ ಮುರುಡೇಶ್ವರ ಕರಾವಳಿಯಿಂದ ಹತ್ತು ಕಿಮೀ ದೂರದಲ್ಲಿರುವ ನೇತ್ರಾಣಿ ಎಂಬ ಪುಟ್ಟ ದ್ವೀಪ ನಮ್ಮ ರಾಜ್ಯದ ಅದ್ಭುತಗಳಲ್ಲೊಂದು. ಇಲ್ಲಿರುವ ಅದ್ಭುತ ಸಾಗರ ಸಂಪತ್ತನ್ನು ನಾವು ಕಣ್ಣಾರೆ ನೋಡಿ ಅನುಭವಿಸಬೇಕೆಂದರೆ ಒಮ್ಮೆಯಾದರೂ ನೇತ್ರಾಣಿಯಲ್ಲಿ ಸ್ಕೂಬಾ ಮಾಡಬೇಕು. ಸೆಪ್ಟೆಂಬರ್‌ನಿಂದ ಮೇವರೆಗೂ ಇಲ್ಲಿ ಸ್ಕೂಬಾ ಮಾಡಲು ಒಳ್ಳೆಯ ಸಮಯ.
ಇದನ್ನೂ ಓದಿ: Summer holidays: ಈ ಬೇಸಿಗೆ ರಜೆಯಲ್ಲಿ ಮಕ್ಕಳ ಜೊತೆ ಇಲ್ಲಿಗೂ ಹೋಗಬಹುದು!
5. ಕೋವಲಂ: ಕೇರಳದ ಕೊಚ್ಚಿಯ ಸಮೀಪ ಇರುವ ಕೋವಲಂ ಇತ್ತೀಚೆಗೆ ಪ್ರಸಿದ್ಧಿ ಪಡೆಯುತ್ತಿರುವ ತಾಣಗಳಲ್ಲೊಂದು. ಸ್ವಚ್ಛವಾದ ಬೀಚ್‌ಗಳು ಇಲ್ಲಿನ ಹೆಗ್ಗಳಿಕೆ. ಇದೂ ಕೂಡಾ ಸ್ಕೂಬಾ ಟ್ರೈ ಮಾಡಲು ಬೆಸ್ಟ್ ತಾಣಗಳಲ್ಲಿ ಒಂದು. ಸೆಪ್ಟೆಂಬರ್‌ನಿಂದ ಫೆಬ್ರವರಿ ಒಳಗೆ ಇಲ್ಲಿ ಸ್ಕೂಬಾ ಮಾಡಲು ಹೇಳಿ ಮಾಡಿಸಿದ ಸಮಯ.
6. ತರ್ಕರ್ಲಿ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ತರ್ಕರ್ಲಿ ಸಮುದ್ರ ತೀರವೂ ಕೂಡಾ ಸಾಗರದಾಳದ ಜೀವಿಗಳ ಕಲರ್‌ಫುಲ್ ಲೈಫ್ ನೋಡಲು ಸೂಕ್ತ ತಾಣ. ಮನಮೋಹಕ ಹವಳದ ದಿಣ್ಣೆಗಳು, ನಾನಾ ಬಗೆವ ಮೀನುಗಳು, ಸಮುದ್ರಜೀವಿಗಳನ್ನು ಇಲ್ಲಿ ಸ್ಕೂಬಾ ಮಾಡುವ ಮೂಲಕ ನೋಡಬಹುದು. ದಂಡಿ ಬೀಚ್‌ನಿಂದ ತರ್ಕರ್ಲಿ ಬೀಚ್‌ಗೆ ಸ್ಕೂಬಾ ಮಾಡುವ ಮಂದಿಯನ್ನು ಕರೆದೊಯ್ದು ಈ ಅನುಭವ ನೀಡಲಾಗುತ್ತದೆ. ಅಕ್ಟೋಬರ್‌ನಿಂದ ಎಪ್ರಿಲ್ ಇಲ್ಲಿ ಸ್ಕೂಬಾಗೆ ಪ್ರಶಸ್ತ ಕಾಲ.
7. ಪುದುಚೆರಿ: ಸ್ಕೂಬಾ ಡೈವಿಂಗ್ ಮತ್ತು ಸ್ನೋರ್ಕ್ಲಿಂಗ್ ಮಾಡಬಹುದಾದ ಇನ್ನೊಂದು ತಾಣ ಎಂದರೆ ಹತ್ತಿರದ ಪುದುಚೇರಿ. ಇಲ್ಲಿ ಎಲ್ಲ ಬಗೆಯ ವಾಟರ್ ಸ್ಪೋರ್ಟ್ಸ್‌ಗಳೂ ಲಭ್ಯವಿದ್ದು, ಹವಳದ ದಿಣ್ಣೆಗಳನ್ನೂ, ಸಾಗರದಾಳದ ಅದ್ಭುತವನ್ನೂ ಕಣ್ತುಂಬಬಹುದು. ಫೆಬ್ರವರಿಯಿಂದ ಎಪ್ರಿಲ್‌ವರೆಗೆ ಹಾಗೂ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಇಲ್ಲಿ ಸ್ಕೂಬಾ ಡೈವಿಂಗ್ ಸೂಕ್ತ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!