Site icon Vistara News

Budget Travel: ನಿಮ್ಮ ಬಜೆಟ್‌ ಮಿತಿಯೊಳಗೆ ಭರ್ಜರಿ ಪ್ರವಾಸ ಮಾಡಲು ಇಲ್ಲಿದೆ ಟಿಪ್ಸ್!

budget travel

ಅಂದುಕೊಂಡಂತೆ ದೇಶ ಸುತ್ತಬೇಕು ಅನ್ನುವುದು ಬಹಳಷ್ಟು ಮಂದಿಗೆ ಕನಸು. ಆ ಕನಸು ಬಹಳ ಸಾರಿ ಕನಸಾಗಿಯೇ ಉಳಿಯುತ್ತದೆ. ಅಂದುಕೊಂಡ ಜಾಗಕ್ಕೆಲ್ಲ ಹೋಗೋದಕ್ಕೆ ಹಲವರಿಗೆ ಬಜೆಟ್‌ (Budget Travel) ಸಮಸ್ಯೆ. ಬದುಕಿನ ಇತರ ಜವಾಬ್ದಾರಿಗಳನ್ನು ಪೂರೈಸುವುದರಲ್ಲಿ ಸೇವಿಂಗ್ಸ್‌ ಖಾಲಿಯಾಗುತ್ತದೆ. ಇನ್ನು ಪ್ರವಾಸಕ್ಕೆಲ್ಲಿದೆ ದುಡ್ಡು ಎಂದು ಕೈಚೆಲ್ಲಿ ಕುಳಿತುಬಿಡುತ್ತಾರೆ. ಇನ್ನೂ ಕೆಲವರು, ʻನಿಮಗೇನು ಬಿಡಿ, ಬೇಕಾದಷ್ಟು ದುಡ್ಡಿದೆ, ಸುತ್ತಾಡುತ್ತೀರಿ, ನಮ್ಮ ಕಷ್ಟಗಳು ನಮಗೇ ಗೊತ್ತುʼ ಎಂಬ ಕುಹಕದ ಮಾತಾಡಿ ತಮ್ಮ ಹೊಟ್ಟೆ ತಣಿಸಿಕೊಳ್ಳುತ್ತಾರೆ. ಕೆಲವೇ ಕೆಲವು ಮಂದಿ ಮಾತ್ರ ನಮ್ಮಂತೆಯೇ ಇರುವ ಅವರಿಗೆ ಸಾಧ್ಯವಾಗಿದೆ ಎಂದರೆ, ನಮಗೂ ಸಾಧ್ಯವಾಗಲೇ ಬೇಕಲ್ಲ ಎಂದು ಸ್ಪೂರ್ತಿ ಪಡೆದು ಹಿತಮಿತವಾದ ಖರ್ಚಿನಲ್ಲಿ ತಿರುಗಾಡುತ್ತಾರೆ. ಇನ್ನು ಬೆರಳೆಣಿಕೆಯ ಮಂದಿ ಬದುಕಿನ ನಿಜವಾದ ಖುಷಿಯನ್ನು ತಿರುಗಾಟದಲ್ಲೇ ಕಂಡುಕೊಂಡು ಅದನ್ನೇ ಬದುಕಾಗಿಸಿಕೊಳ್ಳುತ್ತಾರೆ.

ನಿಜವಾಗಿ ನೋಡಿದರೆ ದುಡ್ಡಿದ್ದವರು ಮಾತ್ರ ಪ್ರವಾಸ ಮಾಡೋದಾ? ದುಡ್ಡಿಲ್ಲದವರಿಗೆ ಇದು ಎಟುಗದ ನಕ್ಷತ್ರವಾ? ಅಂತ ಪ್ರಶ್ನೆ ಮೂಡುವುದು ಸಹಜ. ಆದರೆ ಇದೊಂದು ತಪ್ಪು ತಿಳುವಳಿಕೆ. ಸಾಮಾನ್ಯರಲ್ಲಿ ಸಾಮಾನ್ಯರೂ ಮನಸಿದ್ದರೆ ತಿರುಗಾಟಕ್ಕೆ ನೂರು ದಾರಿ ಹುಡುಕಿಕೊಳ್ಳಬಹುದು. ಚಹಾ ಮಾರಿಯೋ, ಕೇವಲ ಸೈಕಲ್‌ ಹಿಡಿದೋ ದೇಶದೆಲ್ಲೆಡೆ ಸುತ್ತಿದ ಹಲವಾರು ಮಂದಿ ಇಂಥದ್ದನ್ನು ಮಾಡಿಯೂ ತೋರಿಸಿದ್ದಾರೆ. ತೀರಾ ಇಷ್ಟಲ್ಲದಿದ್ದರೂ, ಕಡಿಮೆ ಖರ್ಚಿನಲ್ಲೂ ದೇಶವಿದೇಶ ಸುತ್ತಬಹುದು. ಖರ್ಚನ್ನು ಯಾವುದಕ್ಕೆ, ಎಲ್ಲಿ ಹೇಗೆ ಮಾಡಬೇಕು ಎಂಬ ಅರಿವಿರಬೇಕು ಅಷ್ಟೆ. ಬದುಕಿನ ಬೇಕುಬೇಡಗಳನ್ನು ನಿರ್ಧರಿಸಿ, ತನಗೆ ನಿಜವಾದ ಖುಷಿ ದಕ್ಕುವುದು ಯಾವುದರಿಂದ ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಬಿಚ್ಚು ಮನಸ್ಸು ಇರಬೇಕು.

1.. ಆರಂಭದಲ್ಲಿ ಹತ್ತಿರದ ಜಾಗವೊಂದನ್ನು ಆರಿಸಿ. ಒಂದು ರಾತ್ರಿಯ ಪ್ರಯಾಣವಿರುವಂಥ ಜಾಗ. ಆ ಪ್ರಯಾಣಕ್ಕೆ ಇಷ್ಟು ಹಣವನ್ನು ಖರ್ಚು ಮಾಡಬಲ್ಲೆ ಎಂದು ಒಂದು ಬಜೆಟ್‌ ನಿಗದಿ ಮಾಡಿ. ಅದಕ್ಕೆ ಅನುಗುಣವಾಗಿ ಪ್ರಯಾಣ ಮಾಡಿ.

2. ಹೆಚ್ಚು ಇಷ್ಟಪಡುವ ವಿಷಯಕ್ಕಾಗಿ ಅಗತ್ಯವಿಲ್ಲದಕ್ಕೆ ಕತ್ತರಿ ಹಾಕುವ ಗುಣವನ್ನು ಅಭ್ಯಾಸ ಮಾಡಿ. ಉದಾರಹರಣೆಗೆ, ನಿಮಗೆ ಈ ತಿಂಗಳ ಕೊನೆಗೊಂದು ಪ್ರವಾಸ ಮಾಡಲೇಬೇಕೆಂದು ಅನಿಸಿದ್ದರೆ, ವಾರಾಂತ್ಯದ ಮಾಲ್‌ ಭೇಟಿ, ಅನವಶ್ಯಕ ಡಿನ್ನರ್‌ಗಳಿಗೆ ಖರ್ಚು, ವೃಥಾ ಶಾಪಿಂಗ್‌ಗಳನ್ನೆಲ್ಲ ಮರೆತುಬಿಡಿ. ಆ ಮೂಲಕ, ಅವೆಲ್ಲ ತಾತ್ಕಾಲಿಕ ಖುಷಿಗಳಿಗಿಂತ ಜೀವನದಲ್ಲಿ ಸದಾ ನೆನಪಿಡಬಲ್ಲ ಪ್ರವಾಸವೊಂದಕ್ಕೆ ಖರ್ಚು ಮಾಡಿ.

3. ಯಾವುದೇ ಸಂದರ್ಭದಲ್ಲೂ ಹೊಂದಿಕೊಳ್ಳುವ ಗುಣ ಬೆಳೆಸಿಕೊಳ್ಳಿ. ಸಾರ್ವಜನಿಕ ಸಾರಿಗೆಯನ್ನು ಪ್ರವಾಸಕ್ಕೆ ಬಳಸಿ. ಬಸ್ಸು ಶೇರಿಂಗ್‌ ಟ್ಯಾಕ್ಸಿಗಳಿಂದ ಒಂದಷ್ಟು ಹಣ ಉಳಿಸಬಹುದು.

4. ಹೊಟೇಲುಗಳ ಆಯ್ಕೆಯಲ್ಲಿ ಸ್ಪಷ್ಟತೆಯಿರಲಿ. ಈ ಪ್ರವಾಸದಲ್ಲಿ ಇಷ್ಟೇ ಹಣ ಖರ್ಚು ಮಾಡುವವನಿ/ಳಿದ್ದೇನೆ ಎಂಬ ಬಗ್ಗೆ ಸ್ಪಷ್ಟತೆಯಿದ್ದರೆ, ಸಾದಾರಣ, ಸರಳ ಹೊಟೇಲುಗಳಲ್ಲೂ ತೃಪ್ತಿ ಸಿಗುತ್ತದೆ. ಪ್ರವಾಸವೆಂದರೆ, ಹೊಸ ಜಾಗಕ್ಕೆ ಹೋಗಿ ಅದ್ದೂರಿ ರೂಂ ಬುಕ್‌ ಮಾಡಿ ಟೈಂ ಪಾಸ್‌ ಮಾಡುವುದಷ್ಟೇ ಅಲ್ಲ. ಹೊಸ ಜಾಗದ ನಿಜವಾದ ಘಮವನ್ನು ಒಳಗೆಳೆದುಕೊಳ್ಳುವುದು ಎಂಬುದರ ಅರಿವಿರಲಿ.

5. ನೀವು ನಿಮ್ಮದೇ ಸ್ವಂತ ಬೈಕು, ಕಾರು ಚಲಾಯಿಸಿಕೊಂಡು ಹೋಗಿದ್ದೀರೆಂದಾದಲ್ಲಿ, ಊರ ಹೊರಗೆ ಎಲ್ಲಾದರೂ ಸಣ್ಣ ಹೋಂಸ್ಟೇಯಲ್ಲೂ ಉಳಿದುಕೊಳ್ಳಬಹುದು. ಅಲ್ಲಿನ ಪ್ರಶಾಂತ ವಾತಾವರಣ ನಿಮ್ಮ ಪ್ರವಾಸಕ್ಕೆ ಇನ್ನೂ ಹೆಚ್ಚಿನ ಅರ್ಥ ನೀಡುತ್ತದೆ. ಕಡಿಮೆ ಖರ್ಚಿನ ಹಾಸ್ಟೆಲ್‌ಗಳು, ಡಾರ್ಮೆಟರಿಗಳೂ ಕೂಡಾ ಖರ್ಚು ಉಳಿಸುವ ದಾರಿಗಳು.

ಇದನ್ನೂ ಓದಿ: Travel Tips: ಬಿರಿಯಾನಿ ಪ್ರಿಯರು ತಿನ್ನಲೇಬೇಕಾದ ವಿವಿಧ ಸ್ಥಳಗಳ ಬಿರಿಯಾನಿಗಳಿವು!

6. ಪ್ರತಿದಿನಕ್ಕೂ ಇಂತಿಷ್ಟು ಬಜೆಟ್‌ ಎಂಬುದಾಗಿ ನಿಗದಿ ಮಾಡಿಕೊಂಡರೆ ಒಳ್ಳೆಯದು. ಅದು ಊಟಕ್ಕಿರಬಹುದು, ಉಳಿದ ಖರೀದಿಯ ವಿಚಾರದಲ್ಲಿರಬಹುದು. ಆದಷ್ಟು ಆಯಾ ಊರುಗಳಲ್ಲಿ ಸ್ಥಳೀಯ ಆಹಾರವನ್ನೇ ಅವಲಂಬಿಸಿ. ಆಗ ಖರ್ಚು ಕಡಿಮೆಯಾಗುತ್ತದೆ.

7. ವಿಪರೀತ ಪ್ರವಾಸಿಗಳಿರುವ ಜಾಗದಲ್ಲಿ ಪ್ರತಿಯೊಂದರ ಬೆಲೆಯೂ ಗಗನಕ್ಕೇರಿರುತ್ತದೆ. ಅದಕ್ಕಾಗಿ ಯಾವಾಗಲೂ ಆಫ್‌ಬೀಟ್‌ ಜಾಗಗಳನ್ನೇ ಹುಡುಕಿ. ಅಷ್ಟಾಗಿ ಯಾರಿಗೂ ತಿಳಿಯದ, ಪ್ರವಾಸೀ ಕೇಂದ್ರವಾಗಿ ಸಾಕಷ್ಟು ಜನಪ್ರಿಯತೆ ಪಡೆಯದ ಜಾಗಗಳು ಅದ್ಭುತವೂ ನೆಮ್ಮದಿಯ ತಾಣವೂ ಆಗಿರುತ್ತವೆ.

8. ರಜಾದಿನಗಳು, ವೀಕೆಂಡ್‌ಗಳು, ಟೂರಿಸ್ಟ್‌ ಸೀಸನ್‌ಗಳನ್ನು ಹೊರತು ಪಡಿಸಿ ಬೇರೆ ದಿನಗಳನ್ನು ಪ್ರಯಾಣಕ್ಕೆ ಬಳಸುವುದೂ ಹಣ ಉಳಿತಾಯಕ್ಕೆ ಒಳ್ಳೆಯದೇ. ಆಗ, ಒಳ್ಳೆಯ ಹೊಟೇಲುಗಳು ಕಡಿಮೆ ದರದಲ್ಲಿ ಲಭ್ಯವಿರುತ್ತದೆ.

ಆಸಕ್ತಿಯೇ ಎಲ್ಲದರ ಮೂಲ ಬಂಡವಾಳ. ಅದೊಂದಿದ್ದರೆ ದುಡ್ಡು ನಗಣ್ಯ.

ಇದನ್ನೂ ಓದಿ: Travel Tips: ರಾತ್ರಿಗಳಲ್ಲಿ ಹೊಳೆವ ಅಲೆಗಳ ಬೀಚ್‌ಗಳಿಗೆ ಪ್ರವಾಸ ಮಾಡಿ!

Exit mobile version