ದ್ವಾರಕಾ ಹೆಸರು ಕೇಳಿದಾಕ್ಷಣವೇ ಮನಸ್ಸು ಪ್ರಫುಲ್ಲವಾಗುತ್ತದೆ. ಹಿಂದೂಗಳಿಗೆ ಅಯೋಧ್ಯೆ (ayodhya) ರಾಮ ಮಂದಿರದಷ್ಟೇ (ram mandir) ಪವಿತ್ರವಾದ ಮತ್ತೊಂದು ಕ್ಷೇತ್ರ ದ್ವಾರಕಾ (Dwarka Tour). ಭಾರತದ ಪಶ್ಚಿಮ ಕರಾವಳಿಯ ಗುಜರಾತ್ (gujarat) ರಾಜ್ಯದಲ್ಲಿರುವ ದ್ವಾರಕಾ ಆಳವಾದ ಆಧ್ಯಾತ್ಮಿಕ, ಐತಿಹಾಸಿಕ ಮತ್ತು ನೈಸರ್ಗಿಕ ಸೌಂದರ್ಯಗಳನ್ನು ಹೊಂದಿರುವ ಪಟ್ಟಣವಾಗಿದೆ. ಬಜೆಟ್ ಸ್ನೇಹಿ (Budget Friendly) ಪ್ರವಾಸ ಮಾಡುವ ಯೋಚನೆ ಇದ್ದರೆ ದ್ವಾರಕವನ್ನು ಅನ್ವೇಷಿಸಬಹುದು.
ದ್ವಾರಕಾದ ಪ್ರಾಚೀನ ದೇವಾಲಯಗಳು, ಸುಂದರ ಕಡಲತೀರಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ. ಇದು ದೂರದೂರುಗಳಿಂದ ಪ್ರವಾಸಿಗರನ್ನು ಹಾಗೂ ಯಾತ್ರಿಕರನ್ನು ತನ್ನತ್ತ ಚುಂಬಕದಂತೆ ಸೆಳೆಯುತ್ತದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕೃಷ್ಣನ ನಗರಿಯಲ್ಲಿ ಪ್ರವಾಸಿಗರು ಬಜೆಟ್ ಸ್ನೇಹಿಯಾಗಿ ಸುತ್ತಾಡ ಬಹುದಾದ ಹಲವಾರು ಪ್ರದೇಶಗಳಿವೆ.
ಪ್ರಾಚೀನ ದೇವಾಲಯಗಳು
ದ್ವಾರಕಾವು ಚಾರ್ ಧಾಮ್ ತೀರ್ಥಯಾತ್ರಾ ಸ್ಥಳಗಳಲ್ಲಿ ಮತ್ತು ಶ್ರೀಕೃಷ್ಣನ ಪ್ರಾಚೀನ ಸಾಮ್ರಾಜ್ಯದಲ್ಲಿ ಸ್ಥಾನ ಪಡೆದಿರುವುದರಿಂದ ಅದು ಆಧ್ಯಾತ್ಮಿಕ ನೆಲೆಯಾಗಿದೆ. ಬಜೆಟ್ ಸ್ನೇಹಿ ಪ್ರಯಾಣ ಮಾಡಲು ಶ್ರೀಕೃಷ್ಣ ಸಮರ್ಪಿತ ದ್ವಾರಕಾಧೀಶ ದೇವಾಲಯ ಅಥವಾ ನಾಗೇಶ್ವರ ಜ್ಯೋತಿರ್ಲಿಂಗ ದೇವಾಲಯದಂತಹ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಬಹುದು. ಇದು ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು, ಭಕ್ತರು ಮತ್ತು ಸಂದರ್ಶಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸುತ್ತದೆ. ಯಾವುದೇ ವೆಚ್ಚವಿಲ್ಲದೆ ಇಲ್ಲಿ ದೈವಿಕ ವಾತಾವರಣವನ್ನು ಅನುಭವಿಸಬಹುದು. ಇದಲ್ಲದೇ ಪವಿತ್ರ ಸ್ಥಳಗಳಾದ ರುಕ್ಮಿಣಿ ದೇವಿ ದೇವಸ್ಥಾನ, ಗೋಮತಿ ಘಾಟ್ ಮತ್ತು ಹಿಂದೂ ಪುರಾಣಗಳಲ್ಲಿ ಗಮನಾರ್ಹವಾದ ಬೆಟ್ ದ್ವಾರಕಾ ದ್ವೀಪಕ್ಕೆ ಭೇಟಿ ನೀಡಬಹುದು. ಇದು ಎಲ್ಲರಿಗೂ ಮುಕ್ತವಾಗಿದೆ.
ರಮಣೀಯ ಕಡಲತೀರಗಳು
ದ್ವಾರಕಾವು ಪ್ರಾಚೀನ ಕಡಲತೀರಗಳು ಮತ್ತು ಕರಾವಳಿ ಪ್ರದೇಶಗಳನ್ನು ಹೊಂದಿದೆ. ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು, ವಿಶ್ರಾಂತಿ ಪಡೆಯಲು ಜೊತೆಗೆ ಅರೇಬಿಯನ್ ಸಮುದ್ರದ ಸ್ಪಷ್ಟ ನೋಟವನ್ನು ಕಾಣಲು, ವಿಹಂಗಮ ಸೂರ್ಯಾಸ್ತ, ಒಂಟೆ ಸವಾರಿ, ಬೀಚ್ ಪಿಕ್ನಿಕ್‌ಗಳನ್ನು ಇಲ್ಲಿ ಆನಂದಿಸಬಹುದು. ಇದರೊಂದಿಗೆ ಬೀಟ್ ದ್ವಾರಕಾ ಬೀಚ್, ಗೋಪಿ ತಲವ್ ಮತ್ತು ಓಖಾ-ಮಧಿ ಬೀಚ್ ನಲ್ಲಿ ಶಾಂತಿಯುತ ಪರಿಸರದಲ್ಲಿ ಈಜು, ಸೂರ್ಯನ ಸ್ನಾನ ಮತ್ತು ಪಕ್ಷಿ ವೀಕ್ಷಣೆಯನ್ನು ನಡೆಸಬಹುದು.
ಸ್ಥಳೀಯ ಸಂಸ್ಕೃತಿ
ವರ್ಷದುದ್ದಕ್ಕೂ ದ್ವಾರಕಾದಲ್ಲಿ ವಿವಿಧ ಸಾಂಸ್ಕೃತಿಕ ಹಬ್ಬಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ. ಇದು ಪ್ರಯಾಣಿಕರಿಗೆ ಸ್ಥಳೀಯ ಸಂಪ್ರದಾಯಗಳು ಮತ್ತು ಪದ್ಧತಿಗಳ ಒಳನೋಟವನ್ನು ತೋರಿಸುತ್ತದೆ. ಪಟ್ಟಣದಲ್ಲಿ ವರ್ಣರಂಜಿತ ಮೆರವಣಿಗೆ, ಸಾಂಸ್ಕೃತಿಕ ಪ್ರದರ್ಶನ ಮತ್ತು ಧಾರ್ಮಿಕ ಆಚರಣೆಗಳನ್ನು ಆನಂದಿಸಬಹುದು. ಜನ್ಮಾಷ್ಟಮಿ, ದೀಪಾವಳಿ ಮತ್ತು ಹೋಳಿ ಹಬ್ಬಗಳು ಇಲ್ಲಿ ಅತ್ಯಂತ ವೈಭವದಿಂದ ನಡೆಯುತ್ತದೆ. ಅಲ್ಲದೆ, ಗರ್ಬಾ ಮತ್ತು ದಾಂಡಿಯಾ ರಾಸ್ ನೃತ್ಯಗಳು, ಸಾಂಪ್ರದಾಯಿಕ ಸಂಗೀತ ಕಛೇರಿಗಳು ಮತ್ತು ಪಟ್ಟಣದ ವಿವಿಧ ಸ್ಥಳಗಳಲ್ಲಿ ನಡೆಯುವ ಜಾನಪದ ಕಲಾ ಪ್ರದರ್ಶನಗಳನ್ನು ವೀಕ್ಷಿಸಲು ತಪ್ಪಿಸಿಕೊಳ್ಳಬೇಡಿ. ಇದು ದ್ವಾರಕೆಯ ಸಂಸ್ಕೃತಿಯ ರೋಮಾಂಚಕ ಅನುಭವವನ್ನು ಕೊಡುತ್ತದೆ.
ಗುಜರಾತಿ ಖಾದ್ಯ
ದ್ವಾರಕಾ ಪ್ರವಾಸವು ಅಲ್ಲಿನ ಗುಜರಾತಿ ಖಾದ್ಯಗಳನ್ನು ಸವಿಯದೇ ಪೂರ್ಣಗೊಳ್ಳುವುದಿಲ್ಲ. ಸ್ಥಳೀಯ ತಿನಿಸುಗಳು ಅಥವಾ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿ ಧೋಕ್ಲಾ, ಖಾಂಡ್ವಿ ಅಥವಾ ಥೇಪ್ಲಾ ಮೊದಲಾದ ಭಕ್ಷ್ಯಗಳನ್ನು ಸವಿಯಬಹುದು. ಇದರೊಂದಿಗೆ ಪಟ್ಟಣದಲ್ಲಿ ಖಿಚು, ಫಫ್ಡಾ, ಜಲೇಬಿ-ಫಫ್ಡಾ ಸೇರಿದಂತೆ ಕೆಲವು ಪ್ರಸಿದ್ಧ ಭಕ್ಷ್ಯಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತದೆ.
ಇದನ್ನೂ ಓದಿ: Summer Tour: ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!
ಕೈಗೆಟುಕುವ ದರದಲ್ಲಿ ವಸತಿ
ದ್ವಾರಕಾದಲ್ಲಿ ಬಜೆಟ್‌ಗೆ ಅನುಗುಣವಾದ ಅತಿಥಿ ಗೃಹಗಳು, ವಸತಿಗೃಹಗಳು ಮತ್ತು ಹೊಟೇಲ್ ಗಳು ಲಭ್ಯವಿದೆ. ಸಮಂಜಸವಾದ ದರದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಸ್ವಚ್ಛ ಕೊಠಡಿಗಳನ್ನು ಒದಗಿಸುವ ಬಜೆಟ್ ಸ್ನೇಹಿ ಹೊಟೇಲ್‌ಗಳಲ್ಲಿ ಉಳಿಯಬಹುದು.
ಇದರೊಂದಿಗೆ ದ್ವಾರಕಾದಲ್ಲಿನ ಹಲವಾರು ಅತಿಥಿಗೃಹಗಳು ಮತ್ತು ಬಜೆಟ್ ಸ್ನೇಹಿ ಹೊಟೇಲ್ ಗಳು ರಿಯಾಯಿತಿ ದರದಲ್ಲಿ ಹತ್ತಿರದ ಆಕರ್ಷಣೆಗಳಿಗೆ ವಸತಿ, ಊಟ ಮತ್ತು ಸಾರಿಗೆಯನ್ನು ಒಳಗೊಂಡಿರುವ ಪ್ಯಾಕೇಜ್ ಡೀಲ್‌ಗಳನ್ನು ಒದಗಿಸುತ್ತದೆ. ಹೆಚ್ಚು ಖರ್ಚು ಮಾಡದೇ ಇದರ ಪ್ರಯೋಜನವನ್ನು ಪಡೆಯಬಹುದು.