ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟು ಎಲ್ಲಾದರೂ ತಂಪಾದ ಪ್ರದೇಶಗಳಲ್ಲಿ ಸುತ್ತಾಡಬೇಕು ಎನ್ನುವ ಆಸೆಯಿಂದ ಊಟಿ ಮತ್ತು ಕೊಡೈಕೆನಾಲ್ ಗೆ ಪ್ರವಾಸ ಹೊರಡಲು ಯೋಜನೆ ಹಾಕಿಕೊಂಡಿದ್ದೀರಾ. ಹಾಗಿದ್ದರೆ ಒಂದು ಮಹತ್ವದ ಸುದ್ದಿ ಇದೆ. ಈ ಬಾರಿ ಊಟಿ (Ooty) ಮತ್ತು ಕೊಡೈಕೆನಾಲ್ ಗೆ ( Kodaikanal) ಪ್ರವಾಸ (tour) ಹೋಗುವವರಿಗೆ ಇ-ಪಾಸ್ (E-Pass Mandatory) ಕಡ್ಡಾಯವಾಗಿದೆ.
ಬೇಸಗೆ ರಜೆ (summer vacation) ಹಿನ್ನೆಲೆಯಲ್ಲಿ ಊಟಿ ಮತ್ತು ಕೊಡೈಕೆನಾಲ್ ಪ್ರವಾಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬರುತ್ತಿರುವುದರಿಂದ ಪ್ರಸ್ತುತ ಇರುವ ವಿವಿಧ ವಾಹನಗಳು ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಈ ಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೆ ಸಂಬಂಧಿಸಿದಂತೆ ಡೇಟಾವನ್ನು ಸಂಗ್ರಹಿಸಲು ಜಿಲ್ಲಾಡಳಿತಗಳಿಗೆ ಅನುಕೂಲವಾಗುವಂತೆ ಇ-ಪಾಸ್ ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!
ಇ-ಪಾಸ್ ಕಡ್ಡಾಯ
ಮೇ 7ರಿಂದ ಜೂನ್ 30ರವರೆಗೆ ಊಟಿ ಮತ್ತು ಕೊಡೈಕೆನಾಲ್‌ಗೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಇ-ಪಾಸ್ ಪಡೆಯಬೇಕು ಎಂದು ನ್ಯಾಯಮೂರ್ತಿಗಳಾದ ಎನ್. ಸತೀಶ್ ಕುಮಾರ್ ಮತ್ತು ಡಿ. ಭರತ್ ಚಕ್ರವರ್ತಿ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ಆದೇಶ ನೀಡಿದೆ.
ವಿಶೇಷ ವಿಭಾಗೀಯ ಪೀಠವು ನೀಲಗಿರಿ ಮತ್ತು ದಿಂಡುಗಲ್ ಕಲೆಕ್ಟರೇಟ್‌ಗಳಿಂದ ಇ-ಪಾಸ್‌ಗಳ ವಿತರಣೆಗೆ ಯಾವುದೇ ಮಿತಿಯಿಲ್ಲ ಎಂದು ಹೇಳಿದೆ. ಈ ಪಾಸ್‌ಗಳನ್ನು ಪಡೆದುಕೊಳ್ಳುವುದರಿಂದ ಸ್ಥಳೀಯ ನಿವಾಸಿಗಳಿಗೆ ವಿನಾಯಿತಿ ನೀಡಲಾಗಿದೆ.
ಹಲವು ವ್ಯವಸ್ಥೆ
ಇ- ಪಾಸ್ ವ್ಯವಸ್ಥೆಯನ್ನು ವ್ಯಾಪಕವಾಗಿ ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಇಬ್ಬರು ಕಲೆಕ್ಟರ್‌ಗಳು, ಮಾಹಿತಿ ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ, ಇ-ಪಾಸ್ ವ್ಯವಸ್ಥೆಯಲ್ಲಿ ಪಾವತಿ ಗೇಟ್‌ವೇ ಅನ್ನು ಸಂಯೋಜಿಸುವ ಬಗ್ಗೆ ಅನ್ವೇಷಿಸಲು ಪ್ರಸ್ತಾಪಿಸಲಾಗಿದೆ. ಇದು ಅರ್ಜಿದಾರರಿಗೆ ಆನ್‌ಲೈನ್‌ನಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು, ಚೆಕ್‌ಪೋಸ್ಟ್‌ಗಳ ಬಳಿ ದಟ್ಟಣೆಯನ್ನು ಕಡಿಮೆ ಮಾಡಲು, ಇಂಧನವನ್ನು ಉಳಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಅನುವು ಮಾಡಿಕೊಡುತ್ತದೆ.
ಯಾಕೆ ಈ ಕ್ರಮ?
ಪ್ರವಾಸಿಗರ ಸಂಖ್ಯೆಗೆ ಕಡಿವಾಣ ಹಾಕುವ ಹೈಕೋರ್ಟ್‌ನ ಚಿಂತನೆಗೆ ಪ್ರತಿಕ್ರಿಯೆಯಾಗಿ ನೀಲಗಿರಿ ಮತ್ತು ದಿಂಡುಗಲ್ ಜಿಲ್ಲಾಧಿಕಾರಿಗಳು ವಾಹನ ಸಂಚಾರವನ್ನು ನಿರ್ಬಂಧಿಸಲು ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ರಜೆ ಸೀಸನ್‌ಗಳಲ್ಲಿ ಊಟಿ ಮತ್ತು ಕೊಡೈಕೆನಾಲ್ ಗೆ ಬರುವ ವಾಹನಗಳ ಸಂಖ್ಯೆ ದಿನಕ್ಕೆ 2,000 ರಿಂದ 20,000ಕ್ಕೆ ಏರುತ್ತದೆ. ಇದು ವಾಹನ ದಟ್ಟಣೆ ಮತ್ತು ಪರಿಸರ ಹಾನಿಗೆ ಕಾರಣವಾಗುತ್ತದೆ.
ಈ ವಿಷಯವನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳ ವಿಶೇಷ ವಿಭಾಗೀಯ ಪೀಠವು ಈ ವಿಷಯದ ಬಗ್ಗೆ ಚರ್ಚೆ ನಡೆಸಿದೆ. ಘಾಟ್ ರಸ್ತೆಗಳ ಮೇಲಿನ ಒತ್ತಡ ಮತ್ತು ಬೇಸಿಗೆಯಲ್ಲಿ ಅತಿಯಾದ ಪ್ರವಾಸಿ ಚಟುವಟಿಕೆಯಿಂದ ಉಂಟಾಗುವ ಪರಿಸರ ನಾಶವನ್ನು ವಕೀಲರು ಎತ್ತಿ ತೋರಿಸಿದರು.
ಈ ಕುರಿತು ಮಾತನಾಡಿರುವ ನೀಲಗಿರಿ ಜಿಲ್ಲಾಧಿಕಾರಿ ಎಂ. ಅರುಣಾ, ಕೇರಳ ಮತ್ತು ಕರ್ನಾಟಕ ಗಡಿಯಲ್ಲಿರುವ ಊಟಿ ಮತ್ತು ಕೊಡೈಕೆನಾಲ್ ಗೆ ಒಂಬತ್ತು ಗಡಿ ಚೆಕ್ ಪೋಸ್ಟ್ ಗಳಿವೆ. ರಜೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ವಾಹನ ದಟ್ಟಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ ವಾಹನಗಳ ಎಣಿಕೆಯು ಅಗತ್ಯ. ಕೇವಲ ಪ್ರವಾಸಿ ವಾಹನಗಳಲ್ಲದೇ ಸರಕುಗಳ ಸಾಗಣೆಯ ವಾಹನಗಳನ್ನೂ ಇದು ಒಳಗೊಂಡಿರುತ್ತದೆ ಎಂದು ಹೇಳಿದರು.