ಬೆಂಗಳೂರು: ಮಳೆಗಾಲ ಆರಂಭವಾಗಿದೆ. ನಿಸರ್ಗ ದೇವತೆ ಹಸಿರಿನಿಂದ ಕಂಗೊಳಿಸುವ ಕಾಲವಿದು. ಜಲಪಾತಗಳು (Karnataka Falls) ಧುಮ್ಮಿಕ್ಕಿ ಹರಿಯುವ ಸವಿಗಾಲ. ಅದನ್ನು ನೋಡಲೆಂದೇ ಸಾವಿರಾರು ಮಂದಿ ಪ್ರವಾಸಕ್ಕೆ ಹೋಗುವವರಿದ್ದಾರೆ. ಒಂದು ವೇಳೆ ನೀವು ಕೂಡ ಈ ಮಳೆಗಾಲದಲ್ಲಿ ಜಲಪಾತಗಳತ್ತ ಪ್ರವಾಸ ಮಾಡಬೇಕೆಂದು ಯೋಜನೆ ಹಾಕಿಕೊಂಡಿದ್ದರೆ ನಿಮಗೆಂದೇ ಇಲ್ಲಿದೆ ಮಾಹಿತಿ.
ವಿಶ್ವ ವಿಖ್ಯಾತ ಜೋಗ ಜಲಪಾತ
ಜೋಗ ಜಲಪಾತವು ಕರ್ನಾಟಕದ ಅತ್ಯಂತ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ. ಇದು ರಾಜ್ಯದ ಅತಿ ಎತ್ತರದ ಮತ್ತು ದೇಶದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಇಲ್ಲಿ 253 ಮೀಟರ್ ಎತ್ತರದಿಂದ ನೀರು ಕೆಳಗೆ ಧುಮುಕುತ್ತದೆ. ಶಿವಮೊಗ್ಗದ ಗಡಿಯಲ್ಲಿರುವ ಈ ಜಲಪಾತವು ಶರಾವತಿ ನದಿಯಿಂದ ರೂಪುಗೊಂಡಿದೆ. ಇಲ್ಲಿ ಒಂದೇ ಸ್ಥಳದಲ್ಲಿ ನಾಲ್ಕು ಜಲಪಾತಗಳಿದ್ದು, ಅವುಗಳ ಹೆಸರು ರಾಜಾ, ರಾಣಿ, ರಾಕೆಟ್ ಮತ್ತು ರೋರರ್. ಈ ಜಲಪಾತವನ್ನು ನೀವು ಆಗಸ್ಟ್‌ನಿಂದ ಜನವರಿ ತಿಂಗಳವರೆಗೆ ನೋಡುವುದಕ್ಕೆ ಸುಂದರವಾಗಿರುತ್ತದೆ.
ಇದನ್ನೂ ಓದಿ: World’s Greatest Places: ಟೈಮ್ಸ್ನ ವಿಶ್ವ ಶ್ರೇಷ್ಠ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 2 ಪ್ರದೇಶಗಳು; ಯಾವವು? ಯಾಕೆ?
ಹೆಬ್ಬೆ ಜಲಪಾತ
ಹೆಬ್ಬೆ ಜಲಪಾತವು ಕರ್ನಾಟಕದಲ್ಲಿ ನೋಡಲೇಬೇಕಾದ ಜಲಪಾತಗಳಲ್ಲಿ ಒಂದಾಗಿದೆ. ಚಿಕ್ಕಮಗಳೂರಿನ ಸಮೀಪದಲ್ಲಿರುವ ಹೆಬ್ಬೆ ಜಲಪಾತವು ಹಸಿರಿನಿಂದ ಆವೃತವಾಗಿದೆ. ಇಲ್ಲಿನ ನೀರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗುತ್ತದೆ. ಈ ಜಲಪಾತವನ್ನು ನೋಡುವುದಕ್ಕೆ ನೀವು ಎರಡು ಕಿ.ಮೀ.ನಷ್ಟು ದೂರ ಟ್ರೆಕ್ಕಿಂಗ್ ಮಾಡಬೇಕಾಗುತ್ತದೆ. ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಇಲ್ಲಿ ಹೆಚ್ಚಿನ ನೀರು ಹರಿಯುತ್ತಿರುತ್ತದೆ.
ಚುಂಚಿ ಜಲಪಾತ
ಬೆಂಗಳೂರಿನವರಿಗೆ ಹತ್ತಿರದಲ್ಲಿ ಸಿಗುವ ಜಲಪಾತವೆಂದರೆ ಅದು ಚುಂಚಿ ಜಲಪಾತ. ಅರ್ಕಾವತಿ ನದಿಯಿಂದಾಗಿ ಈ ಜಲಪಾತ ಸೃಷ್ಟಿಯಾಗಿದೆ. ಇಲ್ಲಿ ಟ್ರೆಕ್ಕಿಂಗ್ ಮಾಡುವುದಕ್ಕೂ ಅವಕಾಶವಿದೆ. ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಈ ಜಲಪಾತವನ್ನು ನೋಡುವುದಕ್ಕೆ ಸೂಕ್ತ ಸಮಯವಾಗಿದೆ.
ಶಿವನಸಮುದ್ರ ಜಲಪಾತ
ಬೆಂಗಳೂರಿಗೆ ಹತ್ತಿರದಲ್ಲಿರುವ ಇನ್ನೊಂದು ಜಲಪಾತವೆಂದರೆ ಅದು ಶಿವನಸಮುದ್ರ ಜಲಪಾತ. ನೀರು ಬೀಳುವ ಸ್ಥಳ ಅತ್ಯಂತ ಆಳವಾಗಿರುವುದರಿಂದ ಜಲಪಾತದ ಅಡಿಗೆ ಹೋಗಲು ಯತ್ನಿಸಬೇಡಿ. ಬೆಂಗಳೂರಿನಿಂದ ಒಂದು ದಿನದ ಪ್ರವಾಸದ ಯೋಜನೆ ಹಾಕಿಕೊಳ್ಳುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಜುಲೈನಿಂದ ಜನವರಿವರೆಗೆ ಇಲ್ಲಿ ಹೆಚ್ಚು ನೀರನ್ನು ಕಾಣಬಹುದು.
ಇದನ್ನೂ ಓದಿ: Sakshi Agarwal: ನೆಟ್ಟಿಗನಿಗೆ ಮುಟ್ಟಿ ನೋಡಿಕೊಳ್ಳುವಂಥ ಉತ್ತರ ಕೊಟ್ಟ ‘ಸಾಫ್ಟ್‌ವೇರ್ ಗಂಡ’ ಕನ್ನಡ ಸಿನ್ಮಾ ನಟಿ!
ಅಬ್ಬೆ ಜಲಪಾತ
ಕರ್ನಾಟಕದ ಕೂರ್ಗ್‌ನಲ್ಲಿರುವ ಈ ಜಲಪಾತವನ್ನು ಜೆಸ್ಸಿ ಜಲಪಾತವೆಂದೂ ಕರೆಯುತ್ತಾರೆ. ಅನೇಕ ಸಣ್ಣ ಸಣ್ಣ ತೊರೆಗಳು ಸೇರಿಕೊಂಡು ಈ ಅಬ್ಬೆ ಜಲಪಾತವನ್ನು ಮಾಡುತ್ತವೆ. ಜಲಪಾತ ಹರಿಯುವಲ್ಲಿ ಹಸಿರು ಕಾಫಿ ತೋಟ ಇರುವುದರಿಂದ ನೋಡುವುದಕ್ಕೆ ಮತ್ತಷ್ಟು ಅಂದವಾಗಿ ಕಾಣುತ್ತದೆ. ಈ ಜಲಪಾತ ನೋಡಲು ಸ್ವಲ್ಪ ದೂರ ನಡೆಯಬೇಕಾಗುತ್ತದ. ಸೆಪ್ಟೆಂಬರ್‌ನಿಂದ ಜನವರಿವರೆಗೆ ನೀವು ಇಲ್ಲಿಗೆ ಭೇಟಿ ಕೊಡಬಹುದು.
ಕಲ್ಹಟ್ಟಿ ಜಲಪಾತ
ಕಲ್ಹಟ್ಟಿ (ಕಲ್ಲತ್ತಗಿರಿ) ಜಲಪಾತವು ಜನಪ್ರಿಯ ಜಲಪಾತಗಳಲ್ಲಿ ಒಂದಾಗಿದೆ. ಇದು ಚಿಕ್ಕಮಗಳೂರಿನಿಂದ 82 ಕಿ.ಮೀ ದೂರದಲ್ಲಿದೆ. ಚಂದ್ರ ದ್ರೋಣ ಬೆಟ್ಟಗಳ ಮೂಲಕ 400 ಅಡಿಗಳಿಗಿಂತ ಹೆಚ್ಚು ಎತ್ತರದಿಂದ ಈ ಜಲಪಾತದ ನೀರು ಬೀಳುತ್ತದೆ. ಈ ಜಲಪಾತಕ್ಕೆ ಹೊಂದಿಕೊಂಡಂತೆ ದೊಡ್ಡ ಪರ್ವತಗಳ ಶ್ರೇಣಿಯೇ ಇದೆ. ಜಲಪಾತಗಳ ಜತೆ ಹಸಿರನ್ನು ಪ್ರೀತಿಸುವವರಿಗೆ ಇಲ್ಲಿಗೆ ಹೋಗಬಹುದಾಗಿದೆ. ಜೂನ್‌ನಿಂದ ನವೆಂಬರ್ ಈ ಜಲಪಾತಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.
ಸಾತೊಡ್ಡಿ ಜಲಪಾತ
ಇದು ಅನೇಕ ತೊರೆಗಳಿಂದ ಉಂಟಾಗಿರುವ ಜಲಪಾತವಾಗಿದೆ. ಇಲ್ಲಿ 50 ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಪ್ರಸಿದ್ಧ ಪ್ರವಾಸಿ ತಾಣವಾದ ದಾಂಡೇಲಿಯ ಸಮೀಪದಲ್ಲೇ ಈ ಜಲಪಾತವಿದೆ. ಈದನ್ನು ಸ್ಥಳೀಯರು ಮಿನಿ ನಯಾಗರಾ ಎಂದೂ ಕರೆಯುತ್ತಾರೆ. ಇಲ್ಲಿ ನಿಮಗೆ ಈಜಾಡುವುದಕ್ಕೂ ಅವಕಾಶವಿದೆ. ನವೆಂಬರ್‌ನಿಂದ ಏಪ್ರಿಲ್ ಇಲ್ಲಿನ ಭೇಟಿಗೆ ಸೂಕ್ತ ಸಮಯವಾಗಿದೆ.
ಅರಸಿನಮಕ್ಕಿ ಜಲಪಾತ
ಅರಸಿನ ಮಕ್ಕಿ ಜಲಪಾತವನ್ನು ಅರಿಸಿನ ಗುಂಡಿ ಜಲಪಾತ ಎಂದೂ ಕರೆಯಲಾಗುತ್ತದೆ. ಇದು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಜಲಪಾತವನ್ನು ತಲುಪುವುದಕ್ಕೆ ನೀವು ಕೊಡಚಾದ್ರಿ ಬೆಟ್ಟಗಳ ಕಾಡಿನಲ್ಲಿ ಕನಿಷ್ಠ 1-2 ಕಿಮೀ ನಡೆಯಬೇಕು. ನವೆಂಬರ್‌ನಿಂದ ಫೆಬ್ರವರಿಗೆ ಇಲ್ಲಿಗೆ ಭೇಟಿ ನೀಡಬಹುದು.
ಇದನ್ನೂ ಓದಿ: ನೋಡಲೇಬೇಕಾದ ಸಿನಿಮಾ: Where The Crawdads Sing; ಸ್ವತಂತ್ರ ಹೆಣ್ಣಿನ ಸಂಪೂರ್ಣ ಬದುಕಿನ ಚಿತ್ರಣ
ದೊಡ್ಮನೆ ಜಲಪಾತ
ಉತ್ತರ ಕನ್ನಡದ ಕ್ಯಾದಗಿ ಸನಿಹದಲ್ಲಿರುವ ಈ ಜಲಪಾತವನ್ನು ದೊಡ್ಮನೆ ಜಲಪಾತ ಎಂದೂ ಕರೆಯಲಾಗುತ್ತದೆ. ಇದು ಐದು ಹಂತಗಳಿಂದ ಕೂಡಿರುವ ಜಲಪಾತವಾಗಿದೆ. ಈ ಜಲಪಾತವನ್ನು ನೀವು ನವೆಂಬರ್‌ನಿಂದ ಫೆಬ್ರವರಿವರೆಗೆ ನೋಡಬಹುದು.
ಕೂಡ್ಲು ತೀರ್ಥ ಜಲಪಾತ
ಆಗುಂಬೆಯ ಸಮೀಪದಲ್ಲಿರುವ ಕೂಡ್ಲು ತೀರ್ಥ ಜಲಪಾತವು ನೀವು ನೋಡಲೇಬೇಕಾದ ಜಲಪಾತಗಳಲ್ಲಿ ಒಂದು. ಇಲ್ಲಿ 300 ಅಡಿ ಎತ್ತರದಿಂದ ನೀರು ಕೆಳಗೆ ಬೀಳುತ್ತದೆ. ಹಲವಾರು ವರ್ಷಗಳ ಹಿಂದೆ ಋಷಿಗಳು ಈ ಜಲಪಾತದ ಬಳಿ ಧ್ಯಾನ ಮಾಡುತ್ತಿದ್ದರು ಎಂದು ನಂಬಲಾಗಿದೆ. ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಇಲ್ಲಿಗೆ ಭೇಟಿ ನೀಡಬಹುದು.