ಕಾಡು, ನಿಸರ್ಗದ ಬಗ್ಗೆ ಪ್ರೀತಿಯಿರುವ ಎಲ್ಲರಿಗೂ ಹಿರಿಯರಾದಿಯಾಗಿ ಮಕ್ಕಳವರೆಗೆ ಸಫಾರಿ ಎಂದರೆ, ಅದೇನೋ ಕುತೂಹಲ, ಆಸಕ್ತಿ, ಮೈನವಿರೇಳಿಸುವ, ಮೈಯೆಲ್ಲಾ ಕಣ್ಣಾಗಿ ನೋಡುವ ಅದ್ಭುತ ಸಮಯ. ಪ್ರಾಣಿಗಳದ್ದೇ ಭೌಗೋಳಿಕ ಪರಿಸರದಲ್ಲಿ ಮಾಡುವ ಅಂಥ ಸಫಾರಿಯಲ್ಲಿ, ಯಾವುದೇ ಬಂಧನವಿಲ್ಲದೆ ಓಡಾಡಿಕೊಂಡಿರುವ ಒಂದು ಪುಟ್ಟ ಮುಂಗುಸಿಯೂ ಕೂಡಾ ರೋಮಾಂಚನ ಹುಟ್ಟಿಸಬಲ್ಲದು. ನಮ್ಮ ಇರುವನ್ನು ಗಮನಿಸಿ ದೂರದಿಂದಲೇ ಮರಗಳೆಡೆಯಲ್ಲಿ ಮರೆಯಾಗುವ ಜಿಂಕೆ ಹಿಂಡು ನಮ್ಮ ದಿನವನ್ನು ಅದ್ಭುತವಾಗಿಸಬಲ್ಲದು. ಇನ್ನು ಅದೃಷ್ಟವೆಂಬಂತೆ ದರ್ಶನ ಕೊಡುವ ಹುಲಿ, ಚಿರತೆ, ಆನೆಗಳು ಸಿಕ್ಕರೆ!
ಕಾಡು ಹುಟ್ಟಿಸುವ ಕೌತುಕವೇ ಹಾಗೆ. ಇಲ್ಲಿನ ಮೌನದಲ್ಲಿ ಕೇಳದೆ ಇರುವ ದನಿಯಿದೆ. ಆದರೆ ಸಫಾರಿಯೆಂದು ಸರಿಯಾಗಿ ತಯಾರಾಗದೆ, ಕಾಡಿನ ಭಾಷೆಯನ್ನು ಅರ್ಥ ಮಾಡಿಕೊಳ್ಳದೆ ಬರುವ ಮಂದಿಯೆಷ್ಟೋ ಬಾರಿ ಕಾಡಿನೊಳಗಿನ ಜೀವವಾಗುವಲ್ಲಿ ಸೋಲುತ್ತಾರೆ. ಅದಕ್ಕಾಗಿ. ಸಫಾರಿಗೆ ಹೊರಟ ಕುತೂಹಲದ ಮನಸುಗಳಿಗಾಗಿ ಕೆಲವು ಕಿವಿಮಾತುಗಳು ಇಲ್ಲಿವೆ.
೧. ಸಫಾರಿಗೆ ಹೊರಡುವ ಮೊದಲು, ಅಲ್ಲೇ ಉಳಿದುಕೊಳ್ಳುವ ಪ್ಯಾಕೇಜುಗಳನ್ನು ಕಾದಿರಿಸುವ ಮೊದಲು ಒಂದಿಷ್ಟು ಮಾಹಿತಿಗಳನ್ನು ಮೊದಲೇ ಕಲೆ ಹಾಕಿಕೊಳ್ಳುವುದು ಉತ್ತಮ. ಯಾವ ಬಗೆಯ ರೂಂಗಳನ್ನು ಬುಕ್ ಮಾಡಬೇಕು ಎಂಬಲ್ಲಿಂದ ಹಿಡಿದು ಎಷ್ಟು ಗಂಟೆಗಳ ಸಫಾರಿ ಪ್ಯಾಕೇಜಿನಲ್ಲಿ ಸೇರಿಕೊಂಡಿದೆ ಎಂಬವರೆಗೆ ಎಲ್ಲ ವಿವರಗಳು ಮೊದಲೇ ತಿಳಿದುಕೊಳ್ಳುವುದು ಅತ್ಯಗತ್ಯ. ಅಲ್ಲಿರುವ ಪ್ರಾಣಿಗಳು, ಸಾಮಾನ್ಯವಾಗಿ ದರ್ಶನ ನೀಡುವ ಪ್ರಾಣಿಗಳು, ಅಪರೂಪಕ್ಕೆ ಕಣ್ಣಿಗೆ ಬೀಳುವ ಪ್ರಾಣಿಗಳು, ಯಾವ ಕಾಲದಲ್ಲಿ, ಯಾವ ಹೊತ್ತಿನಲ್ಲಿ ಹೋದರೆ ಪ್ರಾಣಿಗಳ ಸೈಟಿಂಗ್ ಹೆಚ್ಚು ಇತ್ಯಾದಿ ಎಲ್ಲ ತಿಳುವಳಿಕೆಗಳು ಸಫಾರಿಗೆ ಹೊರಡುವ ಮುನ್ನ ಗೊತ್ತಿದ್ದರೆ ಒಳ್ಳೆಯದು.
೨. ಸಫಾರಿಗೆ ಹೊರಡುವ ಮುನ್ನ ಎಲ್ಲರೂ ಮುಖ್ಯವಾಗಿ ಗಮನ ಕೊಡಬೇಕಾದುದು ತಾವು ಧರಿಸುವ ಬಟ್ಟೆಯ ಬಣ್ಣ. ಸಾಮಾನ್ಯವಾಗಿ ಖಾಕಿ, ಕಾರ್ಗೋಗಳು ಸಫಾರಿಗೆ ಹೇಳಿ ಮಾಡಿಸಿದ ಬಟ್ಟೆಗಳು ಎಂಬುದು ಜನಜನಿತ. ಇವಲ್ಲದಿದ್ದರೆ, ಆದಷ್ಟು ನ್ಯೂಟ್ರಲ್ ಕಲರ್ ಡ್ರೆಸ್ ಧರಿಸಿದರೆ ಉತ್ತಮ. ಹಸಿರು, ಪಾಚಿ ಹಸಿರು, ಆಲಿವ್ ಹಸಿರು, ಬೀಜ್ ಮತ್ತಿತರ ಬಣ್ಣಗಳು ಒಳ್ಳೆಯದು. ಗಾಢ ಬಣ್ಣಗಳು ಮುಖ್ಯವಾಗಿ ಕಪ್ಪು, ಬಿಳಿ, ಕೆಂಪು, ನೀಲಿ ಬಣ್ಣಗಳ ಶೆಡ್‌ಗಳನ್ನು ಖಂಡಿತ ಧರಿಸಬೇಡಿ. ಕಪ್ಪು, ನೀಲಿ ಬಣ್ಣಗಳತ್ತ ಕೀಟಗಳು ಆಕರ್ಷಿತರಾಗುವುದೂ ಹೆಚ್ಚೇ.
೩. ಆದಷ್ಟೂ ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ. ತೀರಾ ಆಫೀಸಿಗೆ ಹೊರಡುವ ಹಾಗೆ ಹೊರಡುವ ಅಗತ್ಯವಿಲ್ಲ. ಹಾಗಂತ ನೀವು ಹೋರಟದ್ದು ಬೀಚಿಗೆ ಅಲ್ಲ ಎಂಬುದು ನೆನಪಿರಲಿ. ಹವಾಮಾನಕ್ಕೆ ಅನುಗುಣವಾಗಿ ಆರಾಮವೆನಿಸುವ ಪ್ರಕೃತಿಸ್ನೇಹಿ ಬಟ್ಟೆಗಳು ಒಳ್ಳೆಯದು.
೪. ಗೈಡ್‌ಗಳ ಮಾತು ಕೇಳಿ. ಆ ಅರಣ್ಯ ಪ್ರದೇಶದಲ್ಲಿ ಎಷ್ಟೋ ಬಾರಿ ಓಡಾಡಿಕೊಂಡಿರುವ ಅವರಿಗೆ ಕಾಡಿನ ಬಗ್ಗೆ ಖಂಡಿತವಾಗಿಯೂ ನಿಮಗಿಂತ ಹೆಚ್ಚು ತಿಳುವಳಿಕೆ, ಪ್ರೀತಿ ಇದ್ದೇ ಇರುತ್ತದೆ. ಹಾಗಾಗಿ, ನಿಮ್ಮದೇ ಲೋಕದಲ್ಲಿ ಕಳೆದುಹೋಗುವ ಮೊದಲು ಅವರಿಗೆ ಕಿವಿಯಾಗಿ. ಯಾರಿಗ್ಗೊತ್ತು, ಆತ ನಿಮಗೆ ಯಾರಿಗೂ ಹೇಳದ ಹಲವು ಕುತೂಹಲಕರ ಕಥೆಗಳನ್ನು ಹೇಳಬಹುದು!
ಇದನ್ನೂ ಓದಿ | Rain tourism | ಮಹಾರಾಷ್ಟ್ರದ ಈ ಕೋಟೆಗಳನ್ನು ನೀವು ಮಳೆಗಾಲದಲ್ಲೇ ನೋಡಬೇಕು!
೫. ಸಫಾರಿ ಎಂದ ಮಾತ್ರಕ್ಕೆ ಇನ್ನೇನು ಜೀಪು ಹತ್ತಿ ಹತ್ತು ನಿಮಿಷವಾಗುವ ಮೊದಲೇ ಹುಲಿ ಎಲ್ಲಿ, ಚಿರತೆ ಎಲ್ಲಿ ಎಂದು ಗೈಡುಗಳ ಬೆನ್ನು ಬೀಳಬೇಡಿ. ತಾಳ್ಮೆ ಇರಲಿ. ಪ್ರತಿ ತಿರುವುಗಳಲ್ಲೂ, ಆನೆ, ಹುಲಿಗಳೇನೋ ನಿಮಗೆ ದರ್ಶನ ಕೊಡುತ್ತವೆ ಎಂದುಕೊಳ್ಳಬೇಡಿ. ಯಾಕೆಂದರೆ ಇದು ಅವರ ಮನೆ. ನೀವೀಗ ಅವರ ಪ್ರದೇಶದೊಳಗೆ ಸುತ್ತಾಡುತ್ತಿದ್ದೀರಿ ಎಂಬುದನ್ನು ಮರೆಯಬೇಡಿ. ಕೆಲವೊಮ್ಮೆ ಸಣ್ಣ ಹಾವು ಹರಿದು ಹೋಗಿದ್ದು ಬಿಟ್ಟರೆ, ದಿನವಿಡೀ ಸುತ್ತಾಡಿದರೂ ಒಂದೇ ಒಂದು ಪ್ರಾಣಿಯೂ ಕಣ್ಣಿಗೆ ಬೀಳದು. ಅದಕ್ಕೇ ಕಾಡಿನಲ್ಲಿ ಪ್ರಾಣಿ ಸಿಗಬೇಕೆಂದರೆ ಅದೃಷ್ಟ ಮಾಡಿರಬೇಕು!
೬. ಸ್ಥಳೀಯರಿಗೆ, ಸ್ಥಳೀಯ ಸಂಸ್ಕೃತಿಗೆ ಬೆಲೆ ಕೊಡಿ. ಅವರ ಆಚರಣೆ, ಊಟ, ಸಂಸ್ಕೃತಿ ಎಲ್ಲವೂ ನಿಮ್ಮನ್ನು ಬೇರೆಯೇ ಪ್ರಪಂಚಕ್ಕೆ ಒಯ್ಯಬಹುದು. ಹೊಸತೊಂದು ಜಾಗದಲ್ಲಿ ಮೈಯೆಲ್ಲ ಕಣ್ಣಾಗಿ ಕಿವಿಯಾಗಿ ಆ ಜಾಗದ ಭಾಗವಾಗಿ.
೭. ಹೊಸ ಫೋನು, ಹೊಸ ಕ್ಯಾಮರಾ/ಡಿಎಸ್‌ಎಲ್‌ಆರ್ ಹಿಡಿದು ಪ್ರಯೋಗ ಮಾಡಲು ನೇರ ಸಫಾರಿಗೆ ಹೊರಡಬೇಡಿ. ಒಂದಿಷ್ಟು ಜಾಗಗಳಲ್ಲಿ ಟ್ರಯಲ್ ಮಾಡಿ. ಆಗ ಅದರ ತಲೆಬುಡ ಸರಿಯಾಗಿ ಅರ್ಥವಾಗಿರುತ್ತದೆ. ಇಲ್ಲದಿದ್ದರೆ, ಸಫಾರಿಯಲ್ಲಿ ಹೊರಗಿನ ವಿಷಯಗಳು ನಿಮ್ಮ ತಲೆಯೊಳಗೆ ಹೋಗದೆ, ಬರೀ ಇವುಗಳ ಸರ್ಕಸ್ ಲೋಕದಲ್ಲೇ ಸಫಾರಿಯ ಅತ್ಯಮೂಲ್ಯ ಆನಂದ ಕಳೆದುಹೋಗುತ್ತದೆ.
೮. ಮನೆಯ ಕಂಫರ್ಟ್ ಅಲ್ಲಿ ಸಿಗಬೇಕೆಂದು ಆಸೆಪಡಬೇಡಿ. ಹೋದ ಸ್ಥಳದ ವಿಶೇಷತೆಯನ್ನು ಗಮನಿಸಿ. ಅಲ್ಲಿನ ಭಾಗವಾಗಲು ಪ್ರಯತ್ನಪಡಿ. ಹೊಸ ಪರಿಸರ ಜಾಗಕ್ಕೆ ಹೊಂದಿಕೊಳ್ಳುವುದನ್ನು ಕಲಿಯಿರಿ.
ಇದನ್ನೂ ಓದಿ | Life tour | ಆನ್‌ಲೈನ್ ಕ್ಲಾಸ್ ಬಿಡಿಸಿ ಪ್ರವಾಸದ ಮೂಲಕ ಬದುಕಿನ ಪಾಠ ಹೇಳಿದ ಅಮ್ಮ!
೯. ಕೀಟಗಳಿಂದ ಅಲರ್ಜಿ ಇತ್ಯಾದಿ ತೊಂದರೆಗಳು ಇದ್ದರೂ ಇಲ್ಲದಿದ್ದರೂ ಬಗ್ ರಿಪಲೆಂಟ್ ಒಂದನ್ನು ಬ್ಯಾಗಿನಲ್ಲಿಟ್ಟುಕೊಳ್ಳಿ. ಬಿಸಿಲಲ್ಲಿ ಗಂಟೆಗಟ್ಟಲೆ ತಿರುಗಾಡಬೇಕಾಗಿರುವುದರಿಂದ ನಿಮ್ಮ ಚರ್ಮದ ಸುರಕ್ಷತೆ ನಿಮಗೆ ಮುಖ್ಯವೆನಿಸಿದರೆ ಸನ್‌ಸ್ಕ್ರೀನ್ ಲೋಷನ್ ಕೂಡಾ ಮರೆಯಬೇಡಿ.
೧೦. ಆದಷ್ಟೂ, ಕ್ಯಾಮರಾದ ಹಿಂದೆ ಕೆಲಸ ಮಾಡಿ. ಕಂಡಕಂಡಲ್ಲಿ ಸೆಲ್ಫಿ, ಗ್ರೂಪ್ ಫೋಟೋ ತೆಗೆದುಕೊಳ್ಳುವಂತ ಸನ್ನಿವೇಶ ಖಂಡಿತ ಇದಲ್ಲ. ಹಾಗಾಗಿ ಕಾಡಿನಲ್ಲಿ ಮೌನವನ್ನು ಕಾಯ್ದುಕೊಂಡು ಕ್ಯಾಮರಾದ ಹಿಂದೆ ಕೆಲಸ ಮಾಡುವ ಸಮಯಕ್ಕೆ ಕಾಯುವುದು ಒಳ್ಳೆಯದು.