Site icon Vistara News

Rain tourism | ಮಹಾರಾಷ್ಟ್ರದ ಈ ಕೋಟೆಗಳನ್ನು ನೀವು ಮಳೆಗಾಲದಲ್ಲೇ ನೋಡಬೇಕು!

ratnagarh

ಗಿರಿಶಿಖರಗಳ ಮೇಲಿನ ಕೋಟೆ ಕೊತ್ತಲಗಳ ಸೌಂದರ್ಯವೇ ಬೇರೆ! ಇದನ್ನು ವರ್ಷದ ಯಾವ ಕಾಲದಲ್ಲೂ ಭೇಟಿ ಕೊಟ್ಟು ನೋಡಬಹುದಾದರೂ, ಮಳೆಗಾಲದಲ್ಲಿ ಇವುಗಳಲ್ಲಿ ತುಳುಕುವ ಸೌಂದರ್ಯವೇ ಬೇರೆ. (Rain tourism) ಹಾಗೆ ನೋಡಿದರೆ, ಬೆಟ್ಟಗುಡ್ಡಗಳ ಮೇಲಿನ ಕೋಟೆಕೊತ್ತಲಗಳ ನಿಜವಾದ ಸೌಂದರ್ಯ ಬಯಲಾಗುವುದು ಮಳೆಗಾಲದಲ್ಲೇ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಉದ್ಭವವಾಗುವ ಜಲಪಾತಗಳು, ಹಾದಿಯುದ್ದಕ್ಕೂ ಕಾಲಿಗೆ ತೊಡರುವ ಪುಟ್ಟ ಪುಟ್ಟ ತೊರೆಗಳು, ನೀರ ಝರಿಗಳು, ಮಳೆಯಲ್ಲಿ ಮಿಂದೇಳುವ ಪ್ರಕೃತಿ ಧರಿಸುವ ಹಚ್ಚ ಹಸಿರ ಸೀರೆ, ಆಗಾಗ ನಮ್ಮನ್ನು ಬಿಟ್ಟರೆ ಬೇರಾರು ಇಲ್ಲವೇ ಇಲ್ಲ ಎಂಬಂತೆ ಮಾಡಿ ಬಿಡುವ ಮಂಜು, ಇದ್ದಕ್ಕಿದ್ದಂತೆ ತೋರಿಸುವ ಅಪರೂಪದ ದೃಶ್ಯವೈಭವ, ಪಾಚಿ ಹೊದ್ದು ಒದ್ದೆಯಾದ ಹಸಿರುಗಪ್ಪಿನ ಕೋಟೆಕೊತ್ತಲಗಳನ್ನು ನೋಡಿ ಅನುಭವಿಸಲು, ಅನುಭವಿಸಿದ್ದನ್ನು ಪದಗಳಲ್ಲಿ ವಿವರಿಸಲು ಎಂಥ ಕವಿಗೂ ಸಾಧ್ಯವಿಲ್ಲ!

ಮಹಾರಾಷ್ಟ್ರದ ಮರಾಠಾ ರಾಜರುಗಳು ಗಿರಿಶಿಖರಗಳಿಂದ ಹಿಡಿದು ಸಮುದ್ರ ತೀರದವರೆಗೂ ತಮ್ಮ ರಾಜ್ಯದುದ್ದಕ್ಕೂ ಸಾಕಷ್ಟು ಕೋಟೆಗಳನ್ನು ನಿರ್ಮಿಸಿದ್ದರು. ಮಹಾರಾಷ್ಟ್ರಕ್ಕೆ ಹೋಗಲು ಆಸೆಯಿದ್ದವರು ಮಳೆಗಾಲದಲ್ಲೇ ಈ ಕೋಟೆಗಳನ್ನು ನೋಡಬೇಕು. ಚಾರಣದಲ್ಲಿ ಆಸಕ್ತಿಯಿರುವ, ಕೊಂಚ ಸಾಹಸ ಪ್ರವೃತ್ತಿಯ ಮಂದಿಗೆ ಹೇಳಿ ಮಾಡಿಸಿದ ಈ ಸ್ಥಳಗಳು, ಜೀವನದ ಎಂದೂ ಮರೆಯದ ಅವಿಸ್ಮರಣೀಯ ಪ್ರವಾಸವನ್ನಾಗಿಸುವುದರಲ್ಲಿ ಆಶ್ಚರ್ಯವಿಲ್ಲ.

ಲೋಹಗಢ ಕೋಟೆ

ಲೋಹಘಡ: ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿರುವ ಲೋಹಘಡ ಅತ್ಯಂತ ರಮಣೀಯ ತಾಣ. ಸುಮಾರು ಒಂದು ಸಾವಿರ ಮೀಟರ್‌ ಎತ್ತರದಲ್ಲಿರುವ ಈ ಸ್ಥಳಕ್ಕೆ ಹೋಗಲು ಕೊಂಚ ನಡೆದು ಏರಬೇಕು. ಅಂತಹ ಕಷ್ಟವೇನಲ್ಲದಿದ್ದರೂ, ಸುಮಾರು ಮೂರ್ನಾಲ್ಕು ಗಂಟೆಯ ನಡಿಗೆ ಇದಾಗಿದ್ದು, ಮಳೆಗಾಲದಲ್ಲಿ ಜಾರುವ ಜಾಗವಾದ್ದರಿಂದ ಜಾಗರೂಕತೆ ಮಾಡಿಕೊಳ್ಳುವುದು ಉತ್ತಮ. ಒಂದು ದಿನದಲ್ಲಿ ಹತ್ತಿಳಿದು ಬರಬಹುದಾದ ಜಾಗವಿದು. ಮೇಲೆ ಉಕ್ಕಿನಂಥ ಭವ್ಯ ಕೋಟೆ ಕಣ್ಣಿಗೆ ಭರಪೂರ ಹಬ್ಬ. ಮೇಲೆ ನಿಂತರೆ, ವಿಶಾಲವಾದ ಹಸಿರು ಬೆಟ್ಟಗಳ ಸಾಲನ್ನು ಕಣ್ತುಂಬಿಕೊಳ್ಳಬಹುದು.

ಪ್ರತಾಪಗಢ ಕೋಟೆ

ಪ್ರತಾಪಘಡ: ಪ್ರತಾಪಘಡ ಕೋಟೆಯೂ ಮಹಾರಾಷ್ಟ್ರದ ಪ್ರಸಿದ್ಧ ಸ್ಥಳಗಳಲ್ಲೊಂದು. ಇದಕ್ಕೆ ವೇಲರ್‌ ಫೋರ್ಟ್‌ ಎಂಬ ಹೆಸರೂ ಇದೆ. ಸುಮಾರು ಎರಡು ಗಂಟೆಗಳ ಹಾದಿಯ ಈ ಕೋಟೆಯಲ್ಲಿ ಮಹಾದೇವ ಹಾಗೂ ಮಾತೆ ಭವಾನಿ ಮಂದಿರಗಳೂ ಇವೆ. ಜೊತೆಗೆ ಕೋಟೆಯಲ್ಲೇ ದರ್ಗಾವೂ ಇದೆ. ಕಗ್ಗತ್ತಲ ಕೋಟೆಯ ಹಾದಿಗಳು ರೋಮಾಂಚನ ಹುಟ್ಟಿಸುವ ಜೊತೆಗೆ ಸಾಹಸಮಯ ಪ್ರವೃತ್ತಿಯವರಿಗೆ ಹೇಳಿ ಮಾಡಿಸಿದಂತ ಅನಿರೀಕ್ಷಿತ ತಿರುವುಗಳೂ ಇವೆ. ಕೋಟೆಯ ಮೇಲಿನಿಂದ ಕಾಣುವ ಪಶ್ಚಿಮ ಘಟ್ಟಗಳ ದೃಶ್ಯ ಅವಿಸ್ಮರಣೀಯ, ಮನಮೋಹಕ.

ಇದನ್ನೂ ಓದಿ | Travel tips | ಈ 10 ಮಂದಿ ಜೊತೆಗೆ ಪ್ರವಾಸ ಮಾಡಲೇಬಾರದು!

ರತ್ನಘಡ: ಅಹ್ಮದ್‌ನಗರ ಹಾಗೂ ಥಾಣೆಗಳ ನಡುವಿರುವ ಈ ಕೋಟೆ, ಎಲ್ಲವುಗಳಿಗಿಂತ ಭಿನ್ನ ಹಾಗೂ ಸುಂದರ. ಸುಮಾರು ೪೦೦ ವರ್ಷಗಳಷ್ಟು ಹಳೆಯ ಈ ಕೋಟೆಯಲ್ಲಿ ಅಮೃತೇಶ್ವರ ದೇವಸ್ಥಾನವೂ ಇದೆ. ಈ ದೇವಾಲಯದೊಳಗೆ ೮ನೇ ಶತಮಾನದ ಕಾಲದ ಕೆತ್ತನೆಗಳೂ ಇವೆ. ಕೋಟೆಗೆ ಹತ್ತಿ ನಿಂತರೆ ಕಾಣುವ ದೃಶ್ಯ ಮೈನವಿರೇಳಿಸುವಂಥದ್ದು. ಹಲವು ಜಲಪಾತಗಳೂ, ಪ್ರವರ ನದೀತೀರದ ಬಳಸಿ ನಡೆಯುವ ಹಾದಿಯೂ ಮಳೆಗಾಲದಲ್ಲಿ ವಿಶೇಷ ಮುದ ನೀಡುತ್ತವೆ. ಆದರೆ, ಕೋಟೆಯೇರಲು ಇರುವ ಕಬ್ಬಿಣದ ಪಟ್ಟಿಯ ಏಣಿಯಂತಹ ಮೆಟ್ಟಿಲುಗಳಲ್ಲಿ ಮಳೆಗಾಲದಲ್ಲಿ ಕೊಂಚ ಜಾಗ್ರತೆ ವಹಿಸಬೇಕಾಗುತ್ತದೆ.

ರಾಯಗಢ ಕೋಟೆ

ರಾಯಘಡ: ರಾಯಘಡ ಇತಿಹಾಸದ ಪುಟಗಳಲ್ಲಿ ರಾರಾಜಿಸಿದ ಹೆಸರು. ಮರಾಠರ ಸಾಮ್ರಾಜ್ಯದಲ್ಲಿ ಛತ್ರಪತಿ ಶಿವಾಜಿಯ ಕಾಲದಲ್ಲಿ ರಾಜಧಾನಿಯೂ ಆಗಿ ಹೆಸರು ಮಾಡಿರುವ ರಾಯಘಡದ ಕೋಟೆಯ ಚಾರಣ ಸವಾಲಿನ ಚಾರಣಗಳಲ್ಲಿ ಒಂದು. ಇಲ್ಲಿನ ಸೌಂದರ್ಯ ಸವಿಯಲು ನಡೆದೇ ಹೋಗಬೇಕೆಂದೇನೂ ಇಲ್ಲ. ರೋಪ್‌ವೇ ಕೂಡಾ ಕೋಟೆ ನೋಡಲು, ಪಕ್ಷಿನೋಟದಲ್ಲಿ ಪಶ್ಚಿಮಘಟ್ಟ ಸವಿಯಲು ಇರುವ ಅತ್ಯಂತ ಸುಲಭದ ಅಂದರೆ೧೦ ನಿಮಿಷದಲ್ಲಿ ಕೋಟೆಯ ಮೇಲೇ ತಲುಪಬಹುದಾದ ಆಯ್ಕೆ. ನಡೆದು ಸಾಗುವ ಆಸೆಯಿದ್ದವರು, ಮಳೆಗಾಲದಲ್ಲಿ ಹಾದಿಯ ಸೊಬಗನ್ನು ಸವಿಯಲು ಆಸಕ್ತಿಯಿರುವವರು ಮೂರು ಗಂಟೆಗಳ ಚಾರಣದ ಹಾದಿಯನ್ನು ಆಯ್ಕೆ ಮಾಡಬಹುದು. ಮೇಲೆ ಹೋದ ಮೇಲೆ ಜಗದೀಶ್ವರ ದೇವಸ್ಥಾನ, ಶಿವಾಜಿಯ ಸಮಾಧಿ ಹಾಗೂ ತಕ್ಮಕ್‌ ಟೋಕ್‌ ನೋಡಲೇಬೇಕಾದ ಜಾಗಗಳು.

ಇದನ್ನೂ ಓದಿ | ಪ್ರವಾಸವೆಂದರೆ ಪ್ರಯಾಸ ಪಡುವ Motion sickness ಮಂದಿಗೊಂದಿಷ್ಟು ಗುಟ್ಟು!

Exit mobile version