ವಯಸ್ಸಾದಾಗ ನೀವು ಹೇಗೆ ಜೀವಿಸಲು ಇಷ್ಟ ಪಡುತ್ತೀರಿ ಎಂದು ಯಾರನ್ನಾದರೂ ಪ್ರಶ್ನಿಸಿದಾಗ ದಕ್ಕುವ ಉತ್ತರ ನೀರಸವೇ ಆಗಿರುತ್ತದೇನೋ. ಎಲ್ಲದರಿಂದ ನಿವೃತ್ತಿ ಹೊಂದಿ ಬೇಕಾದಷ್ಟು ಸಮಯ ಸಿಕ್ಕಾಗ, ನಾವಾದರೆ ಏನೆಲ್ಲ ಮಾಡುತ್ತಿದ್ದೆವು ಎಂದು ಕಲ್ಪನೆ ಮಾಡಿಕೊಳ್ಳುವುದು ಸುಲಭವೇನೋ. ಆದರೆ, ಆ ವಯಸ್ಸಿಗೆ ಬಂದಾಗ ದೇಹದಲ್ಲಿ ಯೌವನದ ಕಸುವು ಕಡಿಮೆಯಾದಾಗ ಅಂದುಕೊಂಡದ್ದನ್ನು ಮಾಡುವುದು ಕಷ್ಟವೇ. ಇನ್ನು ಯಾವುದೂ ಬೇಡ ಎಂಬ ನಿರಾಸಕ್ತಿ, ವೈರಾಗ್ಯ ಆ ಹಿರಿ ವಯಸ್ಸಿನಲ್ಲಿ ಸಾಮಾನ್ಯವೇ. ಆದರೆ, ಅಪರೂಪಕ್ಕೊಮ್ಮೆ ಉತ್ಸಾಹದ ಚಿಲುಮೆಯಂತಹ ಹಿರಿ ಜೀವಗಳು ಕಾಣಸಿಕ್ಕಾಗ, ತಮ್ಮ ವಯಸ್ಸಿಗೆ ಮೀರಿದ ಸಾಧನೆ ಮಾಡಿದಾಗ, ಅಥವಾ ಆ ವಯಸ್ಸಿನಲ್ಲೂ ಯುವಜನರನ್ನೂ ನಾಚಿಸುವಂತೆ ಬದುಕನ್ನು ಅನುಭವಿಸುವವರು ಕಂಡಾಗ ಎಂಥವರ ಜೀವದಲ್ಲೂ ಮಿಂಚಿನ ಸಂಚಾರವಾಗುತ್ತದೆ. ಈ ಅಜ್ಜಿಯೂ ಅಂಥದ್ದೇ ಒಂದು ಜೀವ!
೨೦೧೫ಕ್ಕೂ ಮೊದಲು ಅಜ್ಜಿ ಜಾಯ್ ಜೀವನ ಅಂಥ ಆಸಕ್ತಿಕರವಾಗಿರಲಿಲ್ಲ. ಎಲ್ಲರಂತೆ, ಅಮ್ಮನಾಗಿ ಅಜ್ಜಿಯಾಗಿ ೨೦ ರ್ಷದ ಹಿಂದೆ ವಿಧವೆಯಾಗಿ ಲೋಕ ಒಪ್ಪುವಂತೆ ತಕ್ಕಮಟ್ಟಿನ ನೆಮ್ಮದಿಯ ಜೀವನ ಸಾಗಿಸುತ್ತಿದ್ದಳು. ಆದರೆ, ತನ್ನ ಮೊಮ್ಮಗ ರ‍್ಯಾನ್ ಹೇಳುತ್ತಿದ್ದ ಪ್ರವಾಸದ, ಚಾರಣದ ಕಥೆಗಳನ್ನು ಕೇಳುತ್ತಲೇ, ತಾನು ಅಂಥದ್ದನ್ನೆಲ್ಲ ನೋಡಿಯೇ ಇಲ್ಲ ಎಂಬ ಕೊರಗನ್ನು ಆಜ್ಜಿ ಹೇಳಿಕೊಂಡಿದ್ದಳು. ಇದರ ಫಲವೇ ಅಜ್ಜಿ ಮೊಮ್ಮಗನ ಬೊಂಬಾಟ್ ಪ್ರವಾಸ.
ಎಲ್ಲಿಗೂ ಪ್ರವಾಸ ಮಾಡಿರದ, ಹತ್ತಿರದಿಂದ ಬೆಟ್ಟಗುಡ್ಡಗಳನ್ನೂ ನೋಡಿರದ ಅಜ್ಜಿಯನ್ನು ತಾನು ಪ್ರವಾಸ ಕರೆದುಕೊಂಡು ಹೋದರೆ ಹೇಗೆ ಎಂದು ಒಹಾಯೋ ಸ್ಟೇಟ್ ಯುನಿವರ್ಸಿಟಿ ಕಾಲೇಜ್ ಆಫ್ ವೆಟರ್ನರಿಯಲ್ಲಿ ಓದುತ್ತಿದ್ದ ಆ ಮೊಮ್ಮಗ ರ‍್ಯಾನ್‌ಗೆ ಅನಿಸಿದ್ದೇ ತಡ ೨೦೧೭ಕ್ಕೆ ಈ ಕನಸಿಗೆ ಜಾಲನೆಯನ್ನೂ ಕೊಟ್ಟ. ಇದೀಗ ಈ ಅಜ್ಜಿ ಮೊಮ್ಮಗ ಜೋಡಿ ಯುಎಸ್‌ನ ೬೨ ನ್ಯಾಷನಲ್ ಪಾರ್ಕುಗಳನ್ನೂ ನೋಡಿ ಬಂದಿದೆ. ಇನ್ನು ಒಂದೇ ಒಂದು ನ್ಯಾಷನಲ್ ಪಾರ್ಕು ನೋಡಿದರೆ ಯುಎಸ್‌ನ ಎಲ್ಲ ನ್ಯಾಷನಲ್ ಪಾರ್ಕನ್ನೂ ನೋಡಿದ ಹೆಮ್ಮೆ ಈ ಜೋಡಿಯದ್ದು.
ಕಳೆದ ಏಳು ವರ್ಷಗಳಲ್ಲಿ ಸುಮಾರು ೫೦,೦೦೦ ಮೈಲಿಗಳಷ್ಟು ದೂರ ಜೊತೆಗೆ ಪ್ರಯಾಣ ಮಾಡಿರುವ ಈ ಜೋಡಿ, ೨೦೧೭ರಲ್ಲಿ ʻಗೋ ಫಂಡ್ ಮಿʼ ಎಂಬ ಪೇಜ್ ಮೂಲಕ ತಮ್ಮ ರೋಡ್ ಟ್ರಿಪ್‌ಗೆ ಸಹಾಯವನ್ನು ಪಡೆಯುತ್ತಾರೆ. ೨೦೨೧ರಲ್ಲಿ ಈ ಜೋಡಿ, ಅಲಾಸ್ಕಾದ ರಾಷ್ಟ್ರೀಯ ಉದ್ಯಾನಕ್ಕೆ ಹೋಗಿದ್ದಾಗ ಅಲ್ಲಿ ಸಾಹಸಮಯ ವೈಟ್ ವಾಟರ್ ರ‍್ಯಾಫ್ಟಿಂಗ್ ಕೂಡಾ ಮಾಡಿದೆ. ಹಲವಾರು ಪ್ರಾಣಿಗಳನ್ನು ನೋಡಿದ್ದೂ, ಅಲ್ಲದೆ ನೀರ್ಗಲ್ಲುಗಳವರೆಗೆ ಚಾರಣವನ್ನೂ ಮಾಡಿದ್ದಾರೆ!
ಇದನ್ನೂ ಓದಿ | Life tour | ಆನ್‌ಲೈನ್ ಕ್ಲಾಸ್ ಬಿಡಿಸಿ ಪ್ರವಾಸದ ಮೂಲಕ ಬದುಕಿನ ಪಾಠ ಹೇಳಿದ ಅಮ್ಮ!
ರ‍್ಯಾನ್ ತನ್ನ ಈ ವಿಶೇಷ ಪ್ರವಾಸದ ಕುರಿತು ಹೇಳುತ್ತಾ, ʻನಮ್ಮದೇ ಕುಟುಂಬಸ್ಥರ ಜೊತೆಗೆ ಪ್ರವಾಸ ಮಾಡುವುದು ಕೊಡುವ ಸಂತೋಷ ಅಷ್ಟಿಷ್ಟಲ್ಲ. ಆದರೆ ಇಂಥ ಪ್ರವಾಸದಲ್ಲಿ ಹಲವು ಚಾಲೆಂಜುಗಳೂ ಇವೆ. ನಾವಿಬ್ಬರೂ ಯಾವತ್ತೂ ಮಾತಾಡದಷ್ಟು ಪ್ರಯಾಣದುದ್ದಕ್ಕೂ ಮಾತಾಡಿದ್ದೇವೆ. ನಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೇವೆ. ಇದರಲ್ಲಿ ಕೇವಲ ಸಂತೋಷದ ಸಂಗತಿಗಳು ಮಾತ್ರವಲ್ಲ, ದುಃಖದ ಸನ್ನಿವೇಶಗಳೂ ಸೇರಿವೆ ಎಂದಿದ್ದಾರೆ. ಸದ್ಯ ರ‍್ಯಾನ್ ವಾಷಿಂಗ್ಟನ್ ಡಿಸಿಯಲ್ಲಿದ್ದಾರೆ. ಅಜ್ಜಿ ಜಾಯ್ ಹೇಳುವಂತೆ, ʻಚಂದನೆಯ ದೃಶ್ಯಗಳನ್ನು ನೋಡುತ್ತಾ ಪ್ರಯಾಣ ಮಾಡುವುದೇ ಒಂದು ಅನುಭವ. ಪ್ರಕೃತಿ ನನ್ನನ್ನು ಹಿಪ್ನೊಟೈಸ್ ಮಾಡಿದೆ. ಇದೊಂದು ಶಾಂತಿ, ನೆಮ್ಮದಿಯ ಕಡೆಗಿನ ಪಯಣʼ ಎನ್ನುತ್ತಾರೆ.
ಈ ಇಬ್ಬರ ಸ್ಪೂರ್ತಿದಾಯಕ ಪ್ರವಾಸದ ವಿವರಗಳು ಅವರದೇ ಆದ ಫೇಸ್‌ಬುಕ್ ಹಾಗೂ ಇನ್ಸ್‌ಟಾ ಅಕೌಂಟುಗಳಲ್ಲೂ ಸಿಗುತ್ತವೆ. ಇವರಿಗೆ ಸದ್ಯ ೬೦ ಸಾವಿರಕ್ಕೂ ಮಿಕ್ಕಿ ಫಾಲೋವರ್‌ಗಳಿದ್ದಾರೆ.
ಸದ್ಯ ಈ ಅಜ್ಜಿಗೆ ೯೨ ಹಾಗೂ ರ್ಯಾನ್‌ಗೆ ೪೧ ವರ್ಷ ವಯಸ್ಸು. ಮೊದಲು ಮೊಮ್ಮಗನೇ ಅಜ್ಜಿಗೆ ಸ್ಪೂರ್ತಿಯಾದರೆ, ಈಗ ಅಜ್ಜಿಯೇ ಮೊಮ್ಮಗನಿಗೆ ಸ್ಪೂರ್ತಿಯಂತೆ. ʻಈಕೆಯಂತೆ ಬಹುಕಾಲ ಉತ್ಸಾಹದ ಚಿಲುಮೆಯಾಗಿ ಬಾಳಬೇಕು ಎಂಬುದಷ್ಟೇ ಆಸೆ. ೯೧ರ ಹರೆಯದ ಅಜ್ಜಿಯ ಜೊತೆಗೆ ಸಾಹಸಮಯ ವೈಟ್ ವಾಟರ್ ರ‍್ಯಾಫ್ಟಿಂಗ್ ಮಾಡಿದ್ದೇ ಒಂದು ಅದ್ಭುತ ಜೀವನಾನುಭ ನನಗೆ. ಹಾಗಾಗಿ ಯಾವುದಕ್ಕೂ ಯಾವಾಗಲೂ ಯಾವುದೇ ಅಡೆತಡೆಗಳಿಲ್ಲ, ಎಲ್ಲವೂ ಸಾಧ್ಯತೆಗಳೇʼ ಎನ್ನುತ್ತಾರೆ ರ್ಯಾನ್. ಮೊಮ್ಮಗನ ಜೊತೆ ಪ್ರವಾಸ ಮಾಡುತ್ತಾ ಮಾಡುತ್ತಾ, ʻಯಾವುದೇ ಕನಸೂ ಸಾಧ್ಯವಿಲ್ಲ ಎಂಬ ಮಾತಿಲ್ಲʼ ಎಂದು ಅರಿತುಕೊಂಡಿದ್ದಾರೆ.
ಇನ್ನೂ ಹೆಚ್ಚು ಹೆಚ್ಚು ಪ್ರವಾಸದ ಯೋಜನೆಗಳನ್ನು ಹಾಕಿಕೊಂಡಿರುವ ಈ ಇಬ್ಬರೂ ಇನ್ನೂ ಅನೇಕ ಟ್ರಾವೆಲ್ ಪ್ಲಾನ್ ಮಾಡಿಕೊಂಡಿದ್ದಾರೆ. ಅಜ್ಜಿಗೆ ಐರ್ಲೆಂಡ್‌ಗೆ ಹೋಗುವ ಕನಸಿದ್ದರೆ, ಮೊಮ್ಮಗನಿಗೆ ಅಜ್ಜಿಯ ಜೊತೆ ಆಫ್ರಿಕಾಕ್ಕೆ ಹೋಗುವ ಆಸೆಯಿದೆಯಂತೆ.
ಇದನ್ನೂ ಓದಿ | Jungle safari tips | ಕಾಡಿನ ಸಫಾರಿಗೆ ಹೊರಡುವ ಮುನ್ನ ಇವಿಷ್ಟು ಗೊತ್ತಿರಲಿ!