Site icon Vistara News

Honeymoon Special:‌ ಬೇಸಿಗೆಯಲ್ಲೂ ಚಳಿ ಚಳಿ ತಾಳೆನು ಎನ್ನಲು ಈ ಜಾಗಗಳಿಗೆ ಹೋಗಿ!

honeymoon

ಈಗಷ್ಟೇ ಮದುವೆಯಾದ ಜೋಡಿಗಳಿಗೆ ಬೇಸಿಗೆ ಎಂಬುದು ಖಂಡಿತ ವರವಲ್ಲ. ದಕ್ಷಿಣ ಭಾರತದ ಬಹುತೇಕ ಮನೋಹರ ಜಾಗಗಳು ಬೇಸಿಗೆಯಲ್ಲಿ ಕೊತಕೊತ ಕುದಿಯುವ ಅಗ್ಗಿಷ್ಟಿಕೆಯಾಗುತ್ತವೆ. ತಣ್ಣಗಿನ ಗಿರಿಶೀಖರಗಳಲ್ಲಿರುವ ಗಿರಿಧಾಮಗಳೆಲ್ಲ ಜನರಿಂದ ಕಿಕ್ಕಿರಿದು ತುಂಬಿ ಜಾತ್ರೆಯಾಗುತ್ತದೆ. ಮಕ್ಕಳು ಮರಿಗಳಿಗೆ ಶಾಲೆಗೆ ರಜೆ ಎಂದು ಕುಟುಂಬ ಸಮೇತರಾಗಿ ತಿರುಗಾಡಲು ಬರುವ ಕುಟುಂಬಗಳು, ಪ್ರವಾಸ ಪ್ರಿಯರು, ಕಾಲೇಜು ಮಕ್ಕಳು, ಹಿರಿಯರು ಹೀಗೆ ಬಗೆಬಗೆಯ ವಯಸ್ಸಿನವರು ಬೇಸಿಗೆಯಲ್ಲಿ ಸುತ್ತಾಡಲು ತೆರಳುವುದು (Travel tips) ಸಾಮಾನ್ಯ. ಇಂತಹ ಸಂದರ್ಭದಲ್ಲಿ ಏಕಾಂತ ಬಯಸುವ ಜೋಡಿಗಳಿಗೆ ಸೂಕ್ತವೆನಿಸುವ ಜಾಗಗಳು ಸಿಗುವುದು ಕಷ್ಟ. ತಣ್ಣಗಿನ, ಬೆಚ್ಚಗೆ ಅಪ್ಪುಗೆಯಲ್ಲಿ ಇರಬಹುದಾದ ಮುದ್ದಾದ ಜಾಗಗಳನ್ನು ಹುಡುಕಲು ಖಂಡಿತವಾಗಿ ಪ್ರಯತ್ನ ಮಾಡಲೇಬೇಕಾಗುತ್ತದೆ. ಅದೇ, ಶಿಮ್ಲಾ, ಮನಾಲಿಗಳ್ನು ಬಿಟ್ಟು ಬೇರೆ ಯಾವ ಜಾಗಗಳಿಗೆ ಹೋಗಬಹುದು ಎಂಬ ಯೋಚನೆಯಾ? ಹಾಗಾದರೆ, ಬನ್ನಿ, ಈಗಷ್ಟೇ ಬೇಸಿಗೆಯಲ್ಲಿ ಮದುವೆಯಾಗಿ ಮಧುಚಂದ್ರ (Honeymoon) ಕ್ಕೆಂದು ʻಚಳಿ ಚಳಿ ತಾಳೆನು ಈ ಚಳಿಯಾʼದಂತಹ ಜಾಗಗಳಿಗೆ ಹುಡುಕಾಡುತ್ತಿದ್ದರೆ ಅವರಿಗೆ ಈ ಕೆಳಗಿನ ಜಾಗಗಳು ಹೇಳಿ ಮಾಡಿಸಿದ್ದು.

1. ಶ್ರೀನಗರ, ಕಾಶ್ಮೀರ: ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ತಪ್ಪದೇ ಬರುವ ದೃಶ್ಯಗಳಲ್ಲಿ ಖಂಡಿತಾ ಶ್ರೀನಗರ ಇದ್ದೇ ಇರುತ್ತದೆ. ಹನಿಮೂನ್‌ಗೆ ಇಂತಹ ಜಾಗಕ್ಕೆ ಹೋಗಬೇಕು ಎಂದು ಎಷ್ಟೋ ಯುವಕ ಯುವತಿಯರು ಸಿನಿಮಾ ನೋಡಿಯೇ ಆಸೆ ಪಟ್ಟಿದ್ದರಲ್ಲಿ ಅವರ ತಪ್ಪಿಲ್ಲ. ಯಾಕೆಂದರೆ, ಕಾಶ್ಮೀರ ನಿಜಾರ್ಥದಲ್ಲಿ ಸ್ವರ್ಗ. ಇಲ್ಲಿ ವರ್ಷಪೂರ್ತಿ ತಂಪು ಹವೆಯಿರುತ್ತದೆ. ರೊಮ್ಯಾಂಟಿಕ್‌ ಆಗಿ ಏಕಾಂತ ಬಯಸಿ ಸುತ್ತಾಡಲು ಸರೋವರವಿದೆ. ಅಲ್ಲಿ ತಿರುಗಾಡಲು ಶಿಖಾರವೆಂಬ ದೋಣಿಗಳಿವೆ. ಯಾರ ಉಪದ್ರವವೂ ಇಲ್ಲದೆ ಏಕಾಂತ ಅನುಭವಿಸಲು ಹೌಸ್‌ ಬೋಟ್‌ಗಳಿವೆ. ಹನಿಮೂಣ್‌ಗೆ ಶ್ರೀನಗರದಷ್ಟು ರೊಮ್ಯಾಂಟಿಕ್‌ ಫೀಲ್‌ ಕೊಡಬಲ್ಲ ಜಾಗ ಇನ್ನೊಂದಿಲ್ಲ.

2. ಸಿಕ್ಕಿಂ: ಸಿಕ್ಕಿಂ ಕೂಡಾ ನಿಸ್ಸಂಶಯವಾಗಿ ಪ್ರೇಮಿಗಳಿಗೆ, ಮದುವೆಯಾದ ಹೊಸ ಜೋಡಿಗಳ ಹನಿಮೂನ್‌ಗೆ ಪ್ರಶಸ್ತ ಜಾಗ. ಕಣಿವೆಗಳು, ಹಿಮಚ್ಛಾದಿತ ಹಿರಿಶಿಖರಗಳು, ಸರೋವರಗಳು, ಕಡಿದಾದ ರಸ್ತೆ ಎಲ್ಲವೂ ಹೊಸ ಜೋಡಿಗಳ ಹನಿಮೂನ್‌ ಅನ್ನು ಸಾಹಸಮಯವನ್ನಾಗಿಯೂ ರೊಮ್ಯಾಂಟಿಕ್‌ ಆಗಿಯೂ ಪರಿವರ್ತಿಸಬಲ್ಲುದು. ಬೆಳಗ್ಗೆ ಬೇಗ ಎಚ್ಚರವಾದಲ್ಲಿ ಖಂಡಿತವಾಗಿ ಕಾಂಚಜುಂಗದ ಸೂರ್ಯೋದಯವನ್ನು ಕಣ್ತುಂಬಿಕೊಳ್ಳುವುದನ್ನು ಮರೆಯಬೇಡಿ.

3. ಮೌಂಟ್‌ ಅಬು, ರಾಜಸ್ಥಾನ: ರಾಜಸ್ಥಾನದಂತಹ ರಾಜಸ್ಥಾನದಲ್ಲೂ, ಥಾರ್‌ ಎಂಬ ಮರುಭೂಮಿಯನ್ನು ಹೊಂದಿದ ರಾಜ್ಯದಲ್ಲೂ ಹನಿಮೂನ್‌ಗೆ ಜಾಗಗಳಿವೆ ಎಂದರೆ ನಂಬಲೇಬೇಕು. ಮರುಭೂಮಿಯ ನಾಡಿನಲ್ಲಿ ಮೌಂಟ್‌ ಅಬು ಎಂಬ ಸುಂದರ ಗಿರಿಧಾಮವಿದೆ. ಅಲ್ಲಿ ಸದಾ ತಂಪು ಹವಾಮಾನವಿರುವುದರಿಂದ ಜೋಡಿಗಳಿಗೆ ಇದೂ ಒಂದು ಅದ್ಭುತ ಅನುಭವ ನೀಡಬಲ್ಲದು. ರಾಜಸ್ಥಾನದ ಶ್ರೀಮಂತ ಕಲೆ ಸಂಸ್ಕೃತಿಯನ್ನು ಅರಿಯುವ ಜೊತೆಗೆ ಗಿರಿಧಾಮದ ಸುಖವನ್ನೂ ಅನುಭವಿಸಬಹುದು.

4. ಔಲಿ, ಉತ್ತರಾಖಂಡ: ಉತ್ತರಾಖಂಡದ ಔಲಿ ಕೂಡಾ ಸುಂದರ ಜಾಗ. ಸುತ್ತಲೂ ಹಿಮಚ್ಛಾದಿತ ಗಿರಿಶಿಖರಗಳಿರುವ ಈ ಊರಿನಲ್ಲಿ ರೆಸಾರ್ಟಿನೊಳಗೋ, ಹೋಂಸ್ಟೇಯೊಳಗೋ ಬೆಚ್ಚಗೆ ಹೊದ್ದು ಮಲಗಿ, ಅಪ್ಪುಗೆಯ ಸುಖ ಅನುಭವಿಸುತ್ತಾ, ಕಿಟಕಿಯಿಂದ ಆಗಸ ಚುಂಬಿಸುವ ಎತ್ತರದ ನಂದಾದೇವಿ ಹಿಮಶಿಖರವನ್ನು ನೋಡಿ ರೋಮಾಂಚನ ಹೊಂದಬಹುದು. ಕೇಬಲ್‌ ಕಾರಿನಲ್ಲಿ ಕುಳಿತು, ಹಿಮಾಲಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಇದನ್ನೂ ಓದಿ: ತನ್ನನ್ನೇ ತಾನು ಮದುವೆ ಆಗಲಿರುವ ಯುವತಿ; ಹನಿಮೂನ್‌ಗೆ ಒಬ್ಬಳೇ ಗೋವಾಕ್ಕೆ ಹೋಗೋ ಪ್ಲ್ಯಾನ್‌ !

೫. ಡಾರ್ಜಿಲಿಂಗ್‌, ಪಶ್ಚಿಮ ಬಂಗಾಳ: ಚಂದನೆಯ ಬ್ರಿಟೀಶ್‌ ಕಾಲದ ವಾಸ್ತುಶಿಲ್ಪಗಳ, ಕಣ್ಣು ಹಾಯಿಸಿದಲ್ಲೆಲ್ಲ ಚಹಾ ತೋಟವಿರುವ ಹಸಿರು ಹಸಿರು ನೆಲದ, ಕಣ್ಣೆತ್ತಿದರೆ, ಸುತ್ತಲೂ ಬೆಳ್ಳನೆಯ ಹಿಮಚ್ಛಾದಿತ ಬೆಟ್ಟಗಳಿರುವ ಮನೋಹರ ತಾಣ ಡಾರ್ಜಿಲಿಂಗ್‌. ಇಲ್ಲಿಂದಲೂ ಕಾಂಚನಜುಂಗದ ಸೌಂದರ್ಯವನ್ನು ಸೂರ್ಯೋದಯದ ಸಮಯದಲ್ಲಿ ಅದ್ಭುತವಾಗಿ ಸವಿಯಬಹುದು. ಹೊಸತಾಗಿ ಮದುವೆಯಾದ ಜೋಡಿಗಳಿಗೆ ಇದು ರೊಮ್ಯಾಂಟಿಕ್‌ ಭಾವ ಉತ್ತೇಜಿಸಲು ಹೇಳಿ ಮಾಡಿಸಿದ ಜಾಗ. ಸ್ವರ್ಗವೇ ಸರಿ!

Exit mobile version