Site icon Vistara News

Summer Tour: ಬಿರು ಬಿಸಿಲಿನಲ್ಲೂ ತಂಪಾದ ಅನುಭವ ನೀಡುವ ಕೊಡಗಿನಲ್ಲಿ ಸುತ್ತೋಣ ಬನ್ನಿ…

Kodagu tour

ಬೆಂಗಳೂರು: ಎಲ್ಲಿ ಕಣ್ಣು ಹಾಯಿಸಿದರೂ ದಟ್ಟವಾದ ಹಚ್ಚ ಹಸಿರು, ಸುವಾಸನೆ ಬೀರುವ ಕಾಫಿ ತೋಟಗಳು, ಮನ ಸೆಳೆಯುವ ವಿಭಿನ್ನ ಸಂಸ್ಕೃತಿ, ಪ್ರವಾಸಿಗರಿಗೆ ಹಲವು ವಿಶೇಷ ಅನುಭವವನ್ನು ಕಟ್ಟಿಕೊಡುವ ಇದು ಭಾರತದ ಸ್ಕಾಟ್ಲೆಂಡ್ (Scotland of India). ಕರ್ನಾಟಕದ (Karnataka) ಪಶ್ಚಿಮ ಘಟ್ಟದ (Western Ghat) ಪರ್ವತಗಳ ನಡುವೆ ನೆಲೆಯಾಗಿರುವ ಕೊಡಗು (Kodagu) ಭವ್ಯವಾದ ಅನುಭವಗಳನ್ನು ನೀಡುತ್ತದೆ (Summer Tour).

ಎಲ್ಲರನ್ನೂ ಮೋಡಿ ಮಾಡುವ ಕೂರ್ಗ್‌ಗೆ (Coorg) ಭೇಟಿ ನೀಡುವುದಿದ್ದರೆ ಈ ಏಳು ನಂಬಲಾಗದ ಆಕರ್ಷಣೆ, ಸರ್ವೋತ್ಕೃಷ್ಟ ಅನುಭವಗಳನ್ನು ನಿಮ್ಮ ನೆನಪಿನ ಬುಟ್ಟಿಯಲ್ಲಿ ಸೇರಿಸಲು ಮರೆಯದಿರಿ.

ಕಾಡುಗಳ ಮಧ್ಯೆ ಒಂದು ರಾತ್ರಿ

ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ಅಡಿಯಲ್ಲಿ ರಾತ್ರಿಯಿಡೀ ಕುಳಿತುಕೊಳ್ಳಲು ಹಲವು ಅವಕಾಶ ಕೊಡಗಿನಲ್ಲಿದೆ. ಪ್ರಕೃತಿಯ ಮಡಿಲಲ್ಲಿ ಸಾಹಸವನ್ನು ಇಷ್ಟಪಡುವವರಿಗೆ ಕೂರ್ಗ್‌ನ ರಾತ್ರಿಯ ಕ್ಯಾಂಪಿಂಗ್‌ನಲ್ಲಿ ಕಾಲ ಕಳೆಯಬಹುದು. ಜಿಲ್ಲೆಯಾದ್ಯಂತ ವಿವಿಧ ಶಿಬಿರಗಳು ರಾತ್ರಿಯಿಡೀ ನಡೆಸಲಾಗುತ್ತದೆ. ಹಗಲಿನಲ್ಲಿ ದಟ್ಟವಾದ ಕಾಡಿನ ಅನ್ವೇಷಣೆಗೆ ಅನುಕೂಲವಾಗುವಂತೆ ಉಪಕರಣಗಳು ಮತ್ತು ಮಾರ್ಗದರ್ಶಿ ಸೇವೆಗಳನ್ನು ನೀಡುತ್ತದೆ.

ಇದನ್ನೂ ಓದಿ: Panaji tour: ಮೋಡಿ ಮಾಡುವ ಪಣಜಿ; ಗೋವಾ ಸುಂದರ ಲೋಕದ ಗೇಟ್‌ವೇ!

ಕಾವೇರಿ ನದಿಯಲ್ಲಿ ಮೀನು ಹಿಡಿಯಿರಿ

ಜಿಲ್ಲೆಗೆ ಪ್ರವೇಶ ಪಡೆಯುವ ಮೊದಲು ಸಣ್ಣ ಬುಗ್ಗೆಯಾಗಿ ತಲಕಾವೇರಿ ಬೆಟ್ಟಗಳಲ್ಲಿ ಕಾವೇರಿ ಹುಟ್ಟುತ್ತದೆ. ಏಕಾಂತವನ್ನು ಬಯಸುವ ಪ್ರವಾಸಿಗರಿಗೆ ಇದರಲ್ಲಿ ಮೀನು ಹಿಡಿಯಲು ಸಾಕಷ್ಟು ಅವಕಾಶವಿದೆ. ಸಿಹಿ ನೀರಿನಲ್ಲಿ ಮೀನುಗಳನ್ನು ಇಲ್ಲಿ ಕಾಣಬಹುದು. ಮಂಜು ಮುಸುಕಿದ ಪರಿಸರದಲ್ಲಿ ಮೀನುಗಳು ಹೆಚ್ಚು ಸಕ್ರಿಯವಾಗಿರುತ್ತವೆ. ವಿವಿಧ ತೊರೆಗಳು, ವರ್ಣರಂಜಿತ ಪಕ್ಷಿಗಳು, ವಿವಿಧ ಜಾತಿಯ ಮರಗಳು ಮನಃಶಾಂತಿಯನ್ನು ನೀಡುತ್ತದೆ.

ಕೂರ್ಗ್ ಸಂಸ್ಕೃತಿ ನೋಡ ಬನ್ನಿ

ಕೊಡಗಿನ ಹೋಂಸ್ಟೇಗಳಲ್ಲಿ ಅಧಿಕೃತ ಕೂರ್ಗಿ ಸಂಸ್ಕೃತಿಯನ್ನು ಕಾಣಬಹದು. ಸಾಂಪ್ರದಾಯಿಕ ಕೊಡವ ನೃತ್ಯಗಳು, ಬಾಯಲ್ಲಿ ನೀರೂರಿಸುವ ಸ್ಥಳೀಯ ಭಕ್ಷ್ಯಗಳು, ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಲು ಮತ್ತು ಮೋಜಿನ ಚಿತ್ರಗಳನ್ನು ಕ್ಲಿಕ್ ಮಾಡಲು ಇದು ಅವಕಾಶ ಕೊಡುತ್ತದೆ. ಪ್ರವಾಸಿಗರಿಗೆ ಇಲ್ಲಿ ಒಂದು ಹೊಸ ಅನುಭವವನ್ನು ಕೊಡಲಿದೆ. ಕೆಲವೊಂದು ಹೋಂ ಸ್ಟೇಗಳನ್ನು ಪೂರ್ವಜರ ಮನೆಗಳಲ್ಲಿ ಮಾಡಲಾಗಿದೆ. ಇದರ ಸುತ್ತಲೂ ಪ್ರದರ್ಶಿಸಲಾದ ಕಲಾಕೃತಿಗಳನ್ನು ಪುರಾತನ ಹಳ್ಳಿಯ ದಿನಗಳನ್ನು ನೆನಪಿಸುತ್ತದೆ.

ರಾಫ್ಟಿಂಗ್ ಅನುಭವ

ಕೊಡಗಿಗೆ ಭೇಟಿ ನೀಡಿದ ಮೇಲೆ ರಾಫ್ಟಿಂಗ್ ಅನುಭವವನ್ನು ಪಡೆಯಲು ಮರೆಯದಿರಿ. ಬಾರಾಪೋಲ್ ನದಿಯ ಘರ್ಜನೆಯ ನಡುವೆ ರಾಪಿಡ್‌ಗಳು ಗ್ರೇಡ್ 3 ಮತ್ತು 4 ವೈಟ್ ವಾಟರ್ ನಲ್ಲಿ 9 ಕಿಲೋ ಮೀಟರ್ ದೂರದವರೆಗೆ ಸಂಚರಿಸುತ್ತದೆ. ಅನುಭವಿ ರಾಫ್ಟರ್‌ಗಳಿಗೆ ರೋಮಾಂಚನವನ್ನು ಒದಗಿಸುತ್ತದೆ. ಕೂರ್ಗ್ ಪಟ್ಟಣದಿಂದ ಕೇವಲ 90 ನಿಮಿಷಗಳ ದೂರದಲ್ಲಿರುವ ಇಲ್ಲಿಗೆ ಜೀಪ್‌ಗಳ ಮೂಲಕ ಶೀಘ್ರದಲ್ಲೇ ತಲುಪಬಹುದು. ಅರಣ್ಯ ಪ್ರದೇಶದ ಮೂಲಕ ದೊಡ್ಡ ಬಂಡೆಗಳ ಸುತ್ತಲೂ ಹರಿಯುವ ನೀರು ಮನಸ್ಸಿಗೆ ಉಲ್ಲಾಸವನ್ನು ಒದಗಿಸುತ್ತದೆ.

ಸಾಂಪ್ರದಾಯಿಕ ಕಾಫಿ ರುಚಿ ನೋಡಿ

ಭಾರತದ ಅತ್ಯುತ್ತಮ ಕಾಫಿ ಬೀಜಗಳನ್ನು ಉತ್ಪಾದಿಸುವ 150ಕ್ಕೂ ಹೆಚ್ಚು ಕಾಫಿ ತೋಟಗಳು ಕೊಡಗಿನಲ್ಲಿದೆ. ಧುಮ್ಮಿಕ್ಕುವ ಹೊಳೆಗಳ ಪಕ್ಕದಲ್ಲಿ ಹರಡಿಕೊಂಡಿರುವ ಕಾಫಿ ತೋಟಗಳಲ್ಲಿ ಸುತ್ತಾಡುವುದು ಒಂದು ರೋಚಕ ಅನುಭವ. ಇಲ್ಲಿನ ಹೆರಿಟೇಜ್ ಫ್ಯಾಕ್ಟರಿಗಳಲ್ಲಿ ಕಾಫಿ ಪುಡಿ ಸಿದ್ಧವಾಗುವುದನ್ನು ನೋಡಬಹುದು. ಇಲ್ಲಿನ ಸ್ಥಳೀಯರು ವಿವಿಧ ಪ್ರಭೇದಗಳ ಕಾಫಿಗಳ ಬಗ್ಗೆ ಹುರಿಯುವ, ಕುದಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.

ಮಡಿಕೇರಿ ಕೋಟೆ

17ನೇ ಶತಮಾನದಲ್ಲಿ ಹಲೇರಿ ರಾಜವಂಶದ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾಗಿರುವ ಮಡಿಕೇರಿ ಕೋಟೆ ಕೂರ್ಗ್ಸ್ ಇತಿಹಾಸವನ್ನು ವರ್ಣಿಸುತ್ತದೆ. ವಿಜಯನಗರದಿಂದ ಬ್ರಿಟಿಷರ ಕಾಲದವರೆಗಿನ ಹಿಂದಿನ ಶಿಲ್ಪಗಳು, ವೀರರ ಚಿತ್ರಣಗಳು ಮತ್ತು ಕಲ್ಲಿನ ಶಾಸನಗಳನ್ನು ಇಲ್ಲಿ ಕಾಣಬಹುದು. ಕೋಟೆಯ ಬೆಟ್ಟದ ಮೇಲಿನ ತಾಣವು ಸಂಪೂರ್ಣ ಮಡಿಕೇರಿ ಪಟ್ಟಣದ ಚಿತ್ರವನ್ನು ತೋರಿಸುತ್ತದೆ.


ಅಬ್ಬೆ ಫಾಲ್ಸ್‌

ಮಡಿಕೇರಿಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಅಬ್ಬೆ ಜಲಪಾತಕ್ಕೆ ಭೇಟಿ ನೀಡದೆ ಕೂರ್ಗ್ ನೆನಪುಗಳು ಪೂರ್ಣಗೊಳ್ಳುವುದಿಲ್ಲ. ತೂಗು ಸೇತುವೆ ಮೂಲಕ ಇದನ್ನು ಹತ್ತಿರದಿಂದ ವೀಕ್ಷಿಸಬಹುದಾಗಿದೆ.
ದಾರಿಯಲ್ಲಿ ಅಪರೂಪದ ಪ್ರಾಣಿಗಳು, ಹಸಿರು ಕಾಡು ಮನಸ್ಸಿಗೆ ತಂಪಿನ ಅನುಭವ ನೀಡುತ್ತದೆ. 70 ಅಡಿ ಎತ್ತರದಿಂದ ಅವಳಿ ಜಲಪಾತಗಳು ಕಾಡು ದಾರಿಯಲ್ಲಿ ಹರಿಯುತ್ತವೆ. ಇದಕ್ಕೆ ಹತ್ತಿರವಾಗಿ ಮಸಾಲೆ ತಯಾರಿ ಘಟಕಗಳು, ಉದ್ಯಾನಗಳು ಇವೆ.

Exit mobile version