ಕವ್ರಟ್ಟಿ: ಲಕ್ಷದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿದ ಬಳಿಕ ಇಲ್ಲಿನ ಪ್ರವಾಸೋದ್ಯಮದಲ್ಲಿ (Lakshadweep Tourism) ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಪ್ರವಾಸೋದ್ಯಮ ಅಧಿಕಾರಿ ಇಮ್ಥಿಯಾಸ್ ಮೊಹಮ್ಮದ್ ಟಿ.ಬಿ. ತಿಳಿಸಿದ್ದಾರೆ. ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪದ ದ್ವೀಪಗಳಿಗೆ ಭೇಟಿ ನೀಡಿದ್ದರು. ಇದರ ಪರಿಣಾಮ ದ್ವೀಪ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಪ್ರವಾಸೋದ್ಯಮದ ಮೈಲುಗಲ್ಲು
ಇದೊಂದು ಮೈಲುಗಲ್ಲು. ಪ್ರವಾಸೋದ್ಯಮದಲ್ಲಿ ದೊಡ್ಡ ಪರಿಣಾಮವಾಗಿದೆ. ಮೋದಿಯವರು ಇಲ್ಲಿಗೆ ಬಂದು ಹೋದ ಬಳಿಕ ಸಾಕಷ್ಟು ಮಂದಿ ದೇಶ, ವಿದೇಶಗಳಿಂದ ಕರೆ ಮಾಹಿತಿಗಳನ್ನು ಕೇಳುತ್ತಿದ್ದಾರೆ ಎಂದು ಅವರು ತಿಳಿಸಿದರು. ಲಕ್ಷದ್ವೀಪವು ರಾಷ್ಟ್ರೀಯ ಪ್ರವಾಸೋದ್ಯಮ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮಾರುಕಟ್ಟೆಯಿಂದಲೂ ಸಾಕಷ್ಟು ವಿಚಾರಣೆಗಳನ್ನು ಸ್ವೀಕರಿಸುತ್ತಿದೆ ಎಂದ ಅವರು, ಇದಕ್ಕಾಗಿ ಮುಂದಿನ ದಿನಗಳಲ್ಲಿ ಲಕ್ಷದ್ವೀಪವು ಹೆಚ್ಚಿನ ಕ್ರೂಸ್ ಹಡಗು ಕಂಪನಿಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ ಎಂದರು.
ಲಕ್ಷದ್ವೀಪದಲ್ಲಿ ಕೆಲವು ವಿಮಾನಯಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಇದು ಭಾರತದ ಮುಖ್ಯ ಭೂಭಾಗದೊಂದಿಗಿನ ಸಂಪರ್ಕ ಹೊಂದಿದ್ದರೆ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಕ್ಷದೀಪಕ್ಕೆ ಭೇಟಿ ನೀಡಿದ ಮುಂಬೈನ ಪ್ರವಾಸಿ ಅಮನ್ ಸಿಂಗ್ ಅವರು ಪ್ರತಿಕ್ರಿಯಿಸಿ, ನಾವು ಲಕ್ಷದ್ವೀಪಕ್ಕೆ ಹೋಗಬೇಕೆಂದು ಸಾಕಷ್ಟು ಸಮಯದಿಂದ ಪ್ರಯತ್ನಿಸಿದ್ದೆವು. ಆದರೆ ಸಾಧ್ಯವಾಗಿರಲಿಲ್ಲ. ಪ್ರಧಾನಿ ಮೋದಿಯವರ ಭೇಟಿಯ ಬಳಿಕ ಲಕ್ಷದೀಪಕ್ಕೆ ಭೇಟಿ ನೀಡುವುದು ಸಾಧ್ಯವಾಯಿತು ಎಂದರು.
ಮತ್ತೊಬ್ಬ ಪ್ರಯಾಣಿಕ ಸುಮಿತ್ ಆನಂದ್ ಅವರು, ಲಕ್ಷದ್ವೀಪ ದ್ವೀಪಕ್ಕೆ ಬರಬೇಕೆಂಬ ಆಸೆ ಯಾವಾಗಲೂ ಇತ್ತು. ಪ್ರಧಾನಿ ಮೋದಿಯವರ ಫೋಟೊಗಳು ಮತ್ತು ವಿಡಿಯೊಗಳನ್ನು ನೋಡಿದ ಬಳಿಕ ದ್ವೀಪಸಮೂಹಕ್ಕೆ ಭೇಟಿ ನನ್ನ ಮುಂದಿನ ಗುರಿಯಾಗಿದೆ ಎಂದರು.
ವಿಶ್ವದ ಗಮನ ಲಕ್ಷದ್ವೀಪದತ್ತ
ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ ಅವರು ಪ್ರತಿಕ್ರಿಯಿಸಿ ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯು ದ್ವೀಪಸಮೂಹ ಮತ್ತು ಅದರ ಅಪಾರ ಪ್ರವಾಸೋದ್ಯಮ ಸಾಮರ್ಥ್ಯದ ಬಗ್ಗೆ ಜಾಗತಿಕ ಗಮನವನ್ನು ಸೆಳೆದಿದೆ ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಲಕ್ಷದ್ವೀಪ ಕ್ಷೇತ್ರಕ್ಕೆ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಇಲ್ಲಿನ 543 ಲೋಕಸಭಾ ಸ್ಥಾನಗಳ ಮತಗಳ ಎಣಿಕೆಯನ್ನು ಜೂನ್ 4 ರಂದು ನಡೆಯಲಿದೆ.
ಇದನ್ನೂ ಓದಿ: Lakshadweep: ಲಕ್ಷದ್ವೀಪ ಅಭಿವೃದ್ಧಿಗೆ 4,500 ಕೋಟಿ ರೂ. ಮಂಜೂರು; ಮಾಲ್ಡೀವ್ಸ್‌ಗೆ ಪೆಟ್ಟು
ಮಾಲ್ಡೀವ್ಸ್‌ಗೆ ಸಂಕಷ್ಟ ತಂದೊಡ್ಡಿದ ಲಕ್ಷದ್ವೀಪ
ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ಗೆ ಭಾರತವು ಭಾರಿ ಪೆಟ್ಟು ನೀಡಿತ್ತು. ಲಕ್ಷದ್ವೀಪವನ್ನು ಮಾಲ್ಡೀವ್ಸ್‌ಗೆ ಪರ್ಯಾಯ ಪ್ರವಾಸೋದ್ಯಮ ತಾಣವನ್ನಾಗಿ ಬದಲಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿ ಲಕ್ಷದ್ವೀಪದ ಅಭಿವೃದ್ಧಿಗೆ 4,500 ಕೋಟಿ ರೂ. ಮಂಜೂರು ಮಾಡಿತ್ತು.
ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಫೆಬ್ರವರಿ 1ರಂದು ಮಂಡಿಸಿದ ಬಜೆಟ್‌ನಲ್ಲೂ ಘೋಷಿಸಲಾಗಿತ್ತು. ಭಾರತದ ಆಂತರಿಕ ವಿಚಾರದಲ್ಲಿ ಸುಖಾಸುಮ್ಮನೆ ಮೂಗು ತೂರಿಸಿದ್ದ ಮಾಲ್ಡೀವ್ಸ್‌ಗೆ ಇದರಿಂದ ಭಾರಿ ಹಿನ್ನಡೆಯಾಗಿದೆ.
ಭಾರತದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಆರಂಭವಾದ ಬಳಿಕ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವ ಅಗ್ರ ರಾಷ್ಟ್ರಗಳಲ್ಲಿ ಭಾರತವು ಅಗ್ರ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ.