ಎಲ್ಲರಂತೆ ಬೆಳಗ್ಗೆ ಎದ್ದು ಒಂಬತ್ತಕ್ಕೆ ಕಚೇರಿಗೆ ಹೋಗಿ ರಾತ್ರಿ ಮನೆಗೆ ಬರುವ ಏಕತಾನತೆಯ (Travel Time) ವೃತ್ತಿಯಿಂದ ಬೇಸತ್ತು ಇತ್ತೀಚೆಗೆ ಯುವಜನತೆ, ಬೇರೆಯೇ ಮಾದರಿಯ ವೃತ್ತಿಗಳತ್ತ ಹೊರಳುವುದನ್ನು ನೀವು ಕೇಳಿರಬಹುದು. ತಮ್ಮ ಇಷ್ಟ, ಆಸಕ್ತಿಗಳನ್ನೇ ವೃತ್ತಿಯನ್ನಾಗಿ, ಅಥವಾ ಆಸಕ್ತಿಯ ಜೊತೆಜೊತೆಗೇ ವೃತ್ತಿಯನ್ನು ಕೊಂಡೊಯ್ಯಬಲ್ಲ ಆಯ್ಕೆಗಳನ್ನು ಇತ್ತೀಚೆಗೆ ಅನೇಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಊರೂರು ಸುತ್ತುತ್ತಾ, ಜೊತೆಗೆ ಕೆಲಸ ಮಾಡುತ್ತಾ, ಒಂದು ನಿರ್ದಿಷ್ಟ ಸ್ಥಳಕ್ಕೆ ಅಂಟಿಕೊಳ್ಳದೇ, ಅಲೆಮಾರಿತನವನ್ನೇ ಜೀವನವನ್ನಾಗಿ ಆಯ್ಕೆ ಮಾಡಿ ಖುಷಿಯಿಂದ ಇರುವ ಕತೆಗಳು ಇಂದು ಸಾಮಾನ್ಯ. ಆದರೆ, ಇಲ್ಲೊಂದು ಇನ್ನೂ ಆಸಕ್ತಿಕರ ಕತೆ ಇದೆ. ಈ ಜೋಡಿ, ಸಮುದ್ರದಲ್ಲೇ ಜೀವಿಸುವ ಹೊಸ ಅಪರೂಪದ ಆಯ್ಕೆಯನ್ನೇ ತನ್ನ ಜೀವನವನ್ನಾಗಿ ಮಾಡಿಕೊಂಡು, ಪ್ರವಾಸದ ಸಾಧ್ಯತೆಗಳನ್ನು ಇನ್ನೂ ವಿಸ್ತರಿಸಿದೆ.
ಹೊಸ ಜೀವನಶೈಲಿ
ಅಮೆರಿಕದ ಮೋನಿಕಾ ಬ್ರೋಸ್ಕಾ ಹಾಗೂ ಆಕೆಯ ಪತಿ ಜೋರೆಲ್ ಕೋನ್‌ಲೇ ಎಂಬ ಜೋಡಿ, ಈ ಬಗೆಯ ಹೊಸ ಜೀವನಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಇವರು ತಮ್ಮ ಏಕತಾನತೆಯ ಉದ್ಯೋಗವನ್ನು ಬಿಟ್ಟು ಸಮುದ್ರವನ್ನೇ ಮನೆಯನ್ನಾಗಿಸಿದ್ದಾರೆ. ಕ್ರೂಸ್ ಹಡಗಿನಲ್ಲೇ ತಮ್ಮ ಜೀವನ ನಿರ್ವಹಿಸುತ್ತಿದ್ದು ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಐಷಾರಾಮಿ ಜೀವನ
ಇವರಿಬ್ಬರ ಜೀವನಶೈಲಿ ಬಹಳ ಐಷಾರಾಮಿ. ಪ್ರತಿದಿನವೂ ಹಡಗಿನಲ್ಲೇ ಈಜುಕೊಳದ ಬಳಿ ಆರಾಮವಾಗಿ ಕೂತು, ಈಜುತ್ತಾ, ಸ್ಪಾ ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಾರೆ! ಅಷ್ಟೇ ಅಲ್ಲ, ಹಲವು ತಿಂಗಳುಗಳಿಂದ ಈಕೆ ಕಿಚನ್‌ಗೆ ಹೋಗಿಲ್ಲವಂತೆ. ದಿನವೂ ಎದ್ದು ತನ್ನ ಮನೆಯಂತೆ ಇಲ್ಲಿ ಕಿಚನ್‌ಗೆ ಹೋಗಿ ಅಡುಗೆ ಮಾಡುವ ಕೆಲಸವಿಲ್ಲ. ಕ್ರೂಸ್‌ನ ಶೇಫ್‌ಗಳು ಅಡುಗೆ ಮಾಡಿ ಬಡಿಸುವಾಗ ಆ ಚಿಂತೆ ಯಾಕೆ ಎನ್ನುತ್ತಾರೆ ಮೋನಿಕಾ. ಬಟ್ಟೆ ತೊಳೆಯುವುದು, ಪಾತ್ರೆ ತೊಳೆಯುವುದು ಸೇರಿದಂತೆ, ಯಾವೊಂದು ಕೆಲಸವೂ ಇಲ್ಲದೆ, ದಿನ ಕಳೆಯುತ್ತಿದ್ದಾರೆ.
ಅಡುಗೆ ಕಾರ್ಯ
ಪ್ರತಿದಿನ ಅಡುಗೆ ಮಾಡಿ ಬಡಿಸುತ್ತಾರೆ, ಹಡಗಿನ ಕೆಲಸದ ಮಂದಿ ನನ್ನ ಬೆಡ್‌ನ ಬಟ್ಟೆಗಳನ್ನು ನಿತ್ಯವೂ ಬದಲಿಸಿಕೊಡುತ್ತಾರೆ. ಕ್ಯಾಬಿನ್ ಸ್ವಚ್ಛಗೊಳಿಸುತ್ತಾರೆ. ಅಡುಗೆಯೂ ಅವರೇ ಮಾಡಿ ಬಡಿಸುತ್ತಾರೆ, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಇತ್ಯಾದಿ ಕೆಲಸಗಳೂ ಇಲ್ಲ ಎಂದು ಹೇಳುವ ಈಕೆ, ಇದೊಂದು ಬಗೆಯ ವಿಚಿತ್ರ ಸ್ವಾತಂತ್ರ್ಯ ನೀಡುತ್ತಿದೆ. ಆದರೆ, ಹೊರ ಜಗತ್ತಿಗೆ ಐಷಾರಾಮಿಯಾಗಿ ಕಾಣುವ ಈ ಬಗೆಯ ಬದುಕಿನಲ್ಲೂ ಸಮಸ್ಯೆಗಳು, ಸವಾಲುಗಳು ಸಾಕಷ್ಟಿವೆ ಎನ್ನುತ್ತಾರೆ. ಕುಟುಂಬದಿಂದ ದೂರ ಇರುವಾಗ, ಆಗಾಗ ಕುಟುಂಬದ ನೆನಪು ಕಾಡುತ್ತದೆ. ಇವೆಲ್ಲ ಇದ್ದಾಗ್ಯೂ ಈ ಜೀವನದಲ್ಲಿ ಒಂದು ಬಗೆಯ ಖುಷಿಯಿದೆ ಎನ್ನುತ್ತಾರೆ ಅವರು.
ಹೇಗೆ ಸಾಧ್ಯ?
ಹಾಗಾದರೆ, ಇವೆಲ್ಲ ಸಾಧ್ಯವಾಗುವುದು ಹೇಗೆ? ಇಂತಹ ಜೀವನಕ್ಕೆ ದುಡ್ಡು ಹೇಗೆ ಎಂದರೆ, ಈ ಮೊದಲು ಟೀಚರ್ ಆಗಿ ಕೆಲಸ ಮಾಡಿ ಅದಕ್ಕೆ ವಿದಾಯ ಹೇಳಿ ಬಂದಿರುವ ಮೋನಿಕಾ ಹೇಳುತ್ತಾರೆ, ವಾರ್ಷಿಕವಾಗಿ ಹೀಗೆ ಕ್ರೂಸ್‌ನಲ್ಲಿರುವ ನಮ್ಮ ಜೀವನಶೈಲಿಗೆ ನಮಗೆ ಸುಮಾರು 10,000 ಡಾಲರ್‌ಗಳು ಖರ್ಚಾಗುತ್ತವೆ. ಕ್ರೂಸ್‌ನಿಂದ ಸಾಕಷ್ಟು ಡಿಸ್ಕೌಂಟ್ ಕೂಡ ಸಿಕ್ಕಿರುವುದರಿಂದ ವರ್ಕೌಟ್ ಆಗುತ್ತಿದೆ ಎನ್ನುತ್ತಾರೆ.
ಕೋವಿಡ್ ವೇಳೆ ಉಳಿತಾಯ
ಕೋವಿಡ್ ಸಮಯದಲ್ಲಿ ಕೆಲಸ ಮಾಡಿ ಉಳಿತಾಯ ಮಾಡಿದ ಹಣದಲ್ಲಿ ನಾವಿಬ್ಬರೂ ಎಂಟು ತಿಂಗಳ ಕ್ರೂಸ್ ಅನ್ನು ಬುಕ್ ಮಾಡಿದೆವು. ಇದ್ದುದರಲ್ಲಿ ಅತ್ಯಂತ ಕಡಿಮೆ ದರದ ಕ್ರೂಸ್ ಕ್ಯಾಬಿನ್ ಅನ್ನು ನಾವು ಆಯ್ಕೆ ಮಾಡಿಕೊಂಡೆವು. ಇದಕ್ಕೆ 9,989 ಡಾಲರ್ ನೀಡಿದ್ದೆವು ಎನ್ನುತ್ತಾರೆ.
ಅಷ್ಟೇ ಅಲ್ಲ, ಇವರ ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟು ಬಂದಿರುವ ಇವರು, ಹಡಗಿನಲ್ಲಿ ದಿನ ಕಳೆಯುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ನಿತ್ಯವೂ ಅದ್ಭುತ ಜಾಗಗಳಿಗೆ ಪಯಣಿಸುತ್ತಾ, ಪ್ರವಾಸದ ಸುಖ, ಸಾಹಸ, ಇತ್ಯಾದಿಗಳೆಲ್ಲವನ್ನೂ ಅನುಭವಿಸುತ್ತಿದ್ದು, ಜೀವನದಲ್ಲಿ ಇಂತಹ ಅನುಭವಗಳು ಬೇಕು ಎನ್ನುತ್ತಾರೆ.