ವರದಿ: ಅಂಬರೀಷ್, ಆನೇಕಲ್
ಆನೇಕಲ್(ಬೆಂಗಳೂರು): ಹಚ್ಚ ಹಸುರಿನ ಗಿಡ ಮರಗಳ ನಡುವೆ ಧುಮ್ಮಿಕ್ಕುತ್ತಿರುವ ಬೆಂಗಳೂರು (bengaluru) ಹೊರವಲಯದಲ್ಲಿರುವ ಆನೇಕಲ್ (anekal) ತಾಲೂಕಿನ ಮುತ್ಯಾಲಮಡುವು ಜಲಪಾತ (Muthyala Maduvu Waterfalls) ಈಗ ಪ್ರವಾಸಿಗರನ್ನು ಸೆಳೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ನಿರಂತರ ಮಳೆಯಾಗುತ್ತಿರುವ ಜಲರಾಶಿಯಿಂದ ಮೈತುಂಬಿಕೊಂಡಿರುವ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಧುಮ್ಮಿಕ್ಕಿ ಹರಿಯುತ್ತಿರೋ ಮುತ್ಯಾಲಮಡುವು ಜಲಪಾತ ಕಾಣಲು ಬೆಂಗಳೂರು ನಗರವಾಸಿಗಳು ಸೇರಿದಂತೆ ದೂರದೂರದಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಿಂದ ಈ ಪ್ರವಾಸಿತಾಣದ ಸೊಬಗು ಮತ್ತಷ್ಟು ಹೆಚ್ಚಾಗಿದೆ.
ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮುತ್ಯಾಲಮಡುವು ಫಾಲ್ಸ್ ಸುಮಾರು 300 ಅಡಿ ಎತ್ತರದಿಂದ ಕಣಿವೆಯತ್ತ ಹರಿದು ಬರುತ್ತದೆ. ಹಾಲ್ನೊರೆಯಂತೆ ಕಾಣುವ ಜಲಪಾತದ ಸೌಂದರ್ಯ ರಾಶಿ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಜಲಪಾತದ ಸೌಂದರ್ಯ ಕಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದು, ಅನೇಕರು ಸುರಿಯುವ ಮಳೆಯ ನಡುವೆಯೂ ನೀರಿನಲ್ಲಿ ಮಿಂದೇಳುತ್ತಿದ್ದಾರೆ. ಜಲಪಾತದ ರಮಣೀಯ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಆನೇಕಲ್ ನಿಂದ ಸುಮಾರು 5 ಕಿ.ಮೀ ಮತ್ತು ಬೆಂಗಳೂರಿನಿಂದ 40 ಕಿ.ಮೀ. ದೂರದಲ್ಲಿರುವ ಮುತ್ಯಾಲಮಡು ಇರುವ ಸ್ಥಳವನ್ನು ಪರ್ಲ್ ವ್ಯಾಲಿ ಎಂದೂ ಕರೆಯುತ್ತಾರೆ.
ಮುತ್ತಿನ ಕಣಿವೆ
ಈ ಸ್ಥಳವು ಜಲಪಾತ ಮತ್ತು ಪರ್ವತ ಶ್ರೇಣಿಗಳಿಗೆ ಹೆಸರುವಾಸಿಯಾಗಿದೆ. ಜಲಪಾತದ ನೀರು ಸಸ್ಯಗಳ ನಡುವೆ ಕೆಳಗೆ ಇಳಿಯುವಾಗ ಮುತ್ತುಗಳ ಸರಮಾಲೆಯಂತೆ ಕಾಣುವುದರಿಂದ ಇದನ್ನು ಪರ್ಲ್ ವ್ಯಾಲಿ ಅಥವಾ ಮುತ್ತಿನ ಕಣಿವೆ ಎನ್ನಲಾಗುತ್ತದೆ.
ಪ್ರವಾಸಿಗರ ಆಕರ್ಷಣೆ
ಜಲಪಾತದ ಸಮೀಪದಲ್ಲಿ ಒಂದು ಶಿವನ ದೇವಾಲಯವಿದೆ. ಇಲ್ಲಿ ಪ್ರತಿದಿನ ಬೆಳಗ್ಗೆ ಪೂಜೆ ನಡೆಯುತ್ತದೆ. ಜಲಪಾತದಿಂದಾಗಿ ಈ ಸ್ಥಳವು ವಿವಿಧ ಜಾತಿಯ ಪಕ್ಷಿಗಳ ಆಶ್ರಯತಾಣವಾಗಿದೆ.
ಸಾಕಷ್ಟು ಪರ್ವತ ರೋಹಿಗಳು, ಟ್ರೆಕ್ಕಿಂಗ್ ಉತ್ಸಾಹಿಗಳೂ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸಮೀಪದ ಮತ್ತೊಂದು ಪ್ರವಾಸಿ ಆಕರ್ಷಣೆ ತಟ್ಟೆಕೆರೆ ಸರೋವರ.
ತೆರೆದ ಅರಣ್ಯ ಪ್ರದೇಶ ಮತ್ತು ನಗರಕ್ಕೆ ಸಮೀಪವಾಗಿರುವುದರಿಂದ ಎಲ್ಲರಿಗೂ ಇಲ್ಲಿ ಪ್ರವೇಶವಿದೆ. ಚಾರಣ ಪ್ರಿಯರಿಗೆ ಸೂಕ್ತ ಅವಕಾಶವೂ ಇಲ್ಲಿದೆ.
ಭೇಟಿಗೆ ಯಾವ ಸಮಯ ಸೂಕ್ತ ?
ಮುತ್ಯಾಲಮಡುವು ಜಲಪಾತಕ್ಕೆ ಭೇಟಿ ನೀಡಲು ಸೂಕ್ತ ಸಮಯ ಬೆಳಗ್ಗೆ 6ರಿಂದ ಸಂಜೆ 7ರವರೆಗೆ. ನವೆಂಬರ್ ವರೆಗೆ ಇಲ್ಲಿ ಜಲಧಾರೆ ತುಂಬಿ ಹರಿಯುವುದರಿಂದ ಈ ಸಂದರ್ಭದಲ್ಲಿ ಭೇಟಿ ನೀಡಬಹುದು.
ಇದನ್ನೂ ಓದಿ: Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ
ಬೆಂಗಳೂರಿನಿಂದ ಎಷ್ಟು ದೂರ?
ಮುತ್ಯಾಲಮಡುವು ಜಲಪಾತ ಪ್ರದೇಶಕ್ಕೆ ಪ್ರವೇಶ ಶುಲ್ಕ ಕನಿಷ್ಠ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಮುತ್ಯಾಲಮಡು ಜಲಪಾತಕ್ಕೆ ಹೊಸೂರು ರಸ್ತೆ ಮೂಲಕ 1.16 ಗಂಟೆ ಪ್ರಯಾಣವಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಮುತ್ಯಾಲಮಡುವು ಜಲಪಾತಕ್ಕೆ ಬನ್ನೇರುಘಟ್ಟ ಮುಖ್ಯ ರಸ್ತೆ/ ಜಿಗಣಿ – ಆನೇಕಲ್ ರಸ್ತೆ ಮೂಲಕ 45 ನಿಮಿಷದ ಪ್ರಯಾಣವಿದೆ.