Site icon Vistara News

Nightlife cities in india: ಭಾರತದ ಈ ನಗರಗಳಲ್ಲಿ ಇರುಳು ಕೂಡ ಅರಳುವುದು!

night life

ನಗರದ ಸೆಳೆತವೇ ಹಾಗೆ. ನಗರ ಜೀವನ ಕೊಡುವ ಮೋಜು ಮಸ್ತಿ ಒಂದೆರಡಲ್ಲ. ಇದು ಬದುಕಿಗೆ ನೀಡುವ ಭದ್ರತೆ, ಕೆಲಸ, ಗೆಳೆಯರು, ಯಾರ ಹಂಗೂ ಇಲ್ಲದೆ ಇರಲೊಂದು ಮನೆ, ಬೇಕಾಬಿಟ್ಟಿ ಶಾಪಿಂಗ್‌, ಪಾರ್ಕು, ಪಾರ್ಟಿ… ಹೀಗೆ ಇಲ್ಲಿ ಬೋರಾದರೆ ಎದ್ದು ಹೊರಟು ಮಾಡಲು ನೂರಾರು ಅವಕಾಶಗಳು. ಅದಕ್ಕಾಗಿಯೇ ಹೆಚ್ಚಿನ ಮಂದಿ ಉದ್ಯೋಗ ನಿಮಿತ್ತವೆಂಬ ನೆಪವಾದರೂ ಇರಬಯಸುವುದು ನಗರದಲ್ಲೇ ಎಂಬುದು ವಾಸ್ತವ.

ಇಂಥ ನಗರಗಳು ರಾತ್ರಿಯಾದರೆ ಮಿರಮಿರ ಮಿನುಗಿ ಮಧ್ಯರಾತ್ರಿಯಾದರೂ ಕಣ್ಣು ಕೋರೈಸುವ ಬೆಳಕಿನಲ್ಲಿ ಮಿಂಚುತ್ತಲೇ ಇರುತ್ತವೆ. ಕೆಲಸ ಮಾಡಿ ಸುಸ್ತಾಗಿ ಮನೆಗೆ ಹೋಗಿ ಬಿದ್ದು ನಿದ್ದೆ ಮಾಡುವುದು ಇದ್ದೇ ಇರುತ್ತವಾದರೂ ವಾರಾಂತ್ಯ ಬಂದೊಡನೆ, ಮೋಜು ಮಾಡಲು ಬಯಸುವ ಜೀವಗಳು ಹುಡುಕಿಕೊಂಡು ಹೋಗುವುದು ಒಂದಿಷ್ಟು ಕಿವಿಗಪ್ಪಳಿಸುವ ಮ್ಯೂಸಿಕ್‌, ಒಳ್ಳೆಯ ಫುಡ್‌, ಡ್ರಿಂಕ್‌, ಒಂದಿಷ್ಟು ಸಮಾನ ಮನಸ್ಕ ಗೆಳೆಯರ ಜೊತೆ ಮುಗಿಯದ ರಾತ್ರಿಗಳು! ನಗರದ ರಾತ್ರಿಗಳೇ ಹಾಗೆ. ಇಂಥ ಅವಕಾಶಗಳನ್ನೇ ಹುಡುಕಿಕೊಂಡು, ಇದನ್ನೇ ಕೇಂದ್ರೀಕರಿಸಿ ನೋಡುವುದಾದರೆ, ಇಂಥದ್ದಕ್ಕೆ ಹೆಚ್ಚು ಯೋಗ್ಯವಾಗಿರುವ, ಭರ್ಜರಿಯೆನಿಸುವ ನೈಟ್‌ಲೈಫ್ ಇರುವ ಭಾರತದ ನಗರಗಳಾವುವು ಎಂದು ನೋಡೋಣ

೧. ಮುಂಬೈ: ʻನಿದ್ದೆಯೇ ಮಾಡದ ಶಹರʼ ಎಂಬ ಅನ್ವರ್ಥವನ್ನೇ ಅಂಟಿಸಿಕೊಂಡಿರುವ ನಗರ. ನಗರವೊಂದರಲ್ಲಿ ಏನೆಲ್ಲ ಇರಬೇಕೋ ಅದೆಲ್ಲ ಇರುವ ನಗರ. ಪಬ್ಬುಗಳು, ರೆಸ್ಟೋರೆಂಟುಗಳು, ಸಮುದ್ರ ತೀರದ ಡ್ರೈವ್‌, ನಾರಿಮನ್‌ ಪಾಯಿಂಟ್…‌ ಹೀಗೆ ಸೂರ್ಯ ಮುಳುಗಿದ ಮೇಲೆ ಖುಷಿಪಡುವ ಜೀವಗಳಿಗೆ ಹೇಳಿ ಮಾಡಿಸಿದ ನಗರವಿದು. ನೀವು ಒಬ್ಬರೇ ಹೋಗುವುದಾದರೂ, ಗೆಳೆಯರೊಡನೆ ಹೋಗುವುದಾದರೂ ಮುಂಬೈ ಬೇಕಾದಷ್ಟು ಅನುಭವಗಳನ್ನು ಧಾರಾಳವಾಗಿ ಕೊಡುತ್ತದೆ.

೨. ದೆಹಲಿ: ನೈಟ್‌ಲೈಫ್‌ಗಾಗಿಯಾದರೂ ದೆಹಲಿಯನ್ನು ನೋಡಬೇಕು. ಮುಖ್ಯವಾಗಿ ಚಳಿಗಾಲದ ಮಬ್ಬು ರಾತ್ರಿಗಳಲ್ಲಿ ದಾರಿ ಬದಿ ಸಿಗುವ ಮಟ್ಕಾ ಚಹಾ, ಇಂಡಿಯಾ ಗೇಟ್‌ನ ತಡರಾತ್ರಿಗಳ ವಾಕಿಂಗ್‌, ರಸ್ತೆಬದಿಯ ಚಾಟ್‌ಗಳು, ನಗರದೊಳಗಿನ ಲಾಂಗ್‌ಡ್ರೈವ್‌ಗಳು ಹೀಗೆ ಪಟ್ಟಿ ಉದ್ದವಾಗುತ್ತಾ ಸಾಗುತ್ತದೆ. ಸದ್ಯ ದೆಹಲಿ ಸರ್ಕಾರ ಬಾರ್‌ಗಳನ್ನೂ ರಾತ್ರಿ ಮೂರು ಗಂಟೆಯವರೆಗೂ ವಿಸ್ತರಿಸಿರುವುದರಿಂದ, ಅದಕ್ಕೂ ಬೇಕಾದಷ್ಟು ಸಮಯವಿದೆ. ಗೆಳೆಯರಿದ್ದರೂ, ಇಲ್ಲದಿದ್ದರೂ ಮೋಜು ಮಸ್ತಿಗೆ ದೆಹಲಿಯ ರಾತ್ರಿಗಳಲ್ಲಿ ಭರಪೂರ ಅವಕಾಶಗಳಿವೆ.

೩. ಗೋವಾ: ನೀವು ಮೋಜು ಮಸ್ತಿ, ನೈಟ್‌ಲೈಫ್‌ ಪ್ರಿಯರು ಎಂದಾದಲ್ಲಿ ಖಂಡಿತವಾಗಿ ಗೋವಾಕ್ಕೆ ಹೋಗಲೇಬೇಕು. ಪ್ರಪಂಚದಲ್ಲೀ ಏನೇ ಆಗಲಿ, ಇದು ಮಾತ್ರ ಪಾರ್ಟಿ ಮೂಡಿನಿಂದ ಹೊರಬರುವುದೇ ಇಲ್ಲ. ಇರುವುದೊಂದೇ ಜೀವನ, ಚಿಲ್‌ ಮಾಡಿ ಎಂದು ಹಾಡಿಕೊಂಡು ಹಾಯಾಗಿ ಮರಳಿನಲ್ಲಿ ಬಿದ್ದುಕೊಂಡು, ತಿಂದು ಕುಡಿದು ಇರಬಹುದಾದ ನಗರ. ಈ ನಗರ ಎಂಥವರನ್ನೇ ಆಗಲಿ ಬರಸೆಳೆದು ಅವರಿಗೆ ಬೇಕಾದ್ದನ್ನು ನೀಡಿಬಿಡುತ್ತದೆ. ಅಂಥಾ ಆಕರ್ಷಣೆ ಗೋವಾಕ್ಕಿದೆ.

೪. ಬೆಂಗಳೂರು: ಬೆಂಗಳೂರಿನ ಬಗೆಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದೇಶದ ಯಾವುದೇ ಮೂಲೆಯಿಂದ ಬಂದ ವಲಸಿಗರೂ ಬೆಂಗಳೂರಿನಲ್ಲಿ ಪಟ್ಟಾಗಿ ಕುಳಿತುಬಿಡುತ್ತಾರೆ. ಅಂಥ ಆಕರ್ಷಣೆ ಈ ಉದ್ಯಾನ ನಗರಿಯದು. ಹಸಿರು ನಗರವೆಂಬ ಹೆಗ್ಗಳಿಕೆಯ ಜೊತೆಗೆ ಹಗಲಿಗೂ ಇರುಳಿಗೂ ಮೋಜು ಮಸ್ತಿಗೆ ಸಾಕಷ್ಟು ಅವಕಾಶಗಳನ್ನು ಕೊಡುವ ನಗರ.

ಇದನ್ನೂ ಓದಿ: ವಿಸ್ತಾರ Info | ವಿದೇಶದಲ್ಲಿ ಪಾಸ್‌ಪೋರ್ಟ್‌ ಕಳೆದು ಹೋದರೆ ನೀವು ಮಾಡಬೇಕಾದ್ದೇನು?

೫. ಗುರುಗ್ರಾಮ: ಇದನ್ನು ಮಿಲೇನಿಯಂ ಸಿಟಿ ಎಂದು ಸುಮ್ಮನೆ ಕರೆದಿಲ್ಲ! ಕಾರ್ಪೋರೇಟ್‌ ಹಬ್‌ ಆಗಿರುವ ಗುರುಗ್ರಾಮ ದೆಹಲಿಗೆ ಆತುಕೊಂಡಿರುವ ನಗರ. ಇಲ್ಲಿ ದಿನಬೆಳಗಾದರೆ ಜನ ಕೆಲಸ ಮಾಡುವಷ್ಟೇ ಉತ್ಸಾಹದಿಂದ ಪ್ರತಿದಿನವೂ ರಾತ್ರಿ ಪಾರ್ಟಿಯೂ ಮಾಡುತ್ತಾರೆ ಎನ್ನುವುದೇ ವಿಶೇಷ. ಬೆಳಗಿನಷ್ಟೇ ಲವಲವಿಕೆಯ ರಾತ್ರಿಯೂ ಇರುವ ಮೋಸ್ಟ್‌ ಹ್ಯಾಪನಿಂಗ್‌ ಸಿಟಿ!

೬.ಕೋಲ್ಕತ್ತಾ: ಇದು ಪಾರ್ಟಿಗಳ ನಗರಿಯಲ್ಲದಿದ್ದರೇನಂತೆ ಇಲ್ಲಿಯ ರಾತ್ರಿಗಳೂ ಸಾಕಷ್ಟು ರಂಗಾಗಿಯೇ ಇವೆ. ನೀವೊಂದು ನಗರದ ನಿಜವಾದ ಬಣ್ಣದಲ್ಲಿ ಮಿಂದೆದ್ದು, ಹಳೆಯದನ್ನೂ ಹೊಸದನ್ನೂ ಏಕೀಭಾವದಲ್ಲಿ ಅನುಭವಿಸಲು ರೆಡಿಯಿದ್ದೀರೆಂದರೆ ನೀವು ಕೋಲ್ಕತ್ತಾಕ್ಕೆ ಹೋಗಲೇ ಬೇಕು. ಇಲ್ಲಿನ ದುರ್ಗಾಪೂಜೆಯ ರಾತ್ರಿಗಳಿಂದ ಹಿಡಿದು, ಸಾಮಾನ್ಯ ಬೀದಿಬದಿಯ ಪುಚ್ಕಾ ತಿನ್ನುವವರೆಗೆ ಇಲ್ಲಿ ಮಾಡಬೇಕಾದುದು ಬಹಳಷ್ಟಿದೆ. ಕೋಲ್ಕತ್ತಾದ ಹಳೆಯ ಬೀದಿಗಳಲ್ಲಿ ಗೆಳೆಯರೊಂದಿಗೆ ನಡೆದಾಡುವುದಕ್ಕಿಂತ ದೊಡ್ಡ ಸುಖ ಎಲ್ಲಿ ದಕ್ಕಲಿಕ್ಕಿಲ್ಲ!

ಇದನ್ನೂ ಓದಿ: Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!

Exit mobile version