ವಿರೋಧಗಳ ನಡುವೆಯೂ ಪಠಾಣ್ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ. ಶಾರುಖ್- ದೀಪಿಕಾ ಪಡುಕೋಣೆ ಅಭಿನಯದ ಈ ಚಿತ್ರ ಆಕ್ಷನ್ ಪ್ಯಾಕ್ ಆದ ಶುದ್ಧ ಮಸಾಲೆ ಮನರಂಜನೆಯ ಚಿತ್ರ ಎಂದು ಚಿತ್ರ ರಸಿಕರು ಮೆಚ್ಚಿದ್ದಾರೆ. ಈ ನಡುವೆ, ಎಲ್ಲರ ಮನಗೆದ್ದಿರುವ ಈ ಚಿತ್ರದ ಅತ್ಯಂತ ಪ್ರಸಿದ್ಧ ದೃಶ್ಯ ಶಾರುಖ್ ಖಾನ್ ಹಾಗೂ ಜಾನ್ ಅಬ್ರಹಾಂ ನಡುವಿನ ಬೈಕ್ ಚೇಸಿಂಗ್ ಎಲ್ಲಿ ಚಿತ್ರೀಕರಣ ನಡೆದಿರಬಹುದು, ಇದರ ಲೊಕೇಶನ್ ಯಾವುದು ಎಂಬುದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ ಅದೊಂದು ಫ್ರೋಜನ್ ಲೇಕ್ ಮೇಲೆ ಬೈಕ್ ಓಡಿಸುವ ಚೀಟಿನ ತುದಿಯಲ್ಲಿ ಕೂರಿಸುವ ರೋಮಾಂಚಕಾರೀ ದೃಶ್ಯ!
ಪ್ರವಾಸೀ ಪ್ರಿಯರಿಗಿದು ಮುಂದಿನ ಪ್ರವಾಸದ ಆಯ್ಕೆಯಾಗಿ ಕಂಡರೆ, ಚಿತ್ರ ರಸಿಕರಿಗೆ ಇದು ಅದ್ಭುತ ಚೇಸಿಂಗ್ ದೃಶ್ಯ. ಇಷ್ಟರವರೆಗೆ ಭಾರತೀಯ ಚಿತ್ರದಲ್ಲಿ ಕಾಣಲು ಸಿಕ್ಕಿಲ್ಲದಂತಹ ಹಿನ್ನೆಲೆ ಇಲ್ಲಿ ಕಂಡಾಗ ಕುತೂಹಲ ಸಹಜವೇ.
ಪಠಾಣ್ ಚಿತ್ರ ಭಾರತ, ಅಫ್ಘಾನಿಸ್ತಾನ, ಸ್ಪೈನ್, ಯುಎಇ, ಟರ್ಕಿ, ಇಟಲಿ, ಫ್ರಾನ್ಸ್‌ಗಳಲ್ಲಿ ಚಿತ್ರೀಕರಣ ಮಾಡಿದರೂ ಮೈಯಲ್ಲಿ ಮಿಂಚಿನ ಸಂಚಾರ ಉಂಟುಮಾಡುವ ಬೈಕ್ ಚೇಸಿಂಗ್ ದೃಶ್ಯಾವಳಿ ಮಾತ್ರ ಸೈಬೀರಿಯಾದ್ದು. ತ್ರಿ ಈಡಿಯಟ್ಸ್ ಚಿತ್ರದ ಮೂಲಕ ಪ್ರವಾಸಿಗರನ್ನು ಭಾರೀ ಆಕರ್ಷಿಸಿದ ಲಡಾಖ್‌ನಂತೆ, ಚಳಿಯ ಸೈಬೀರಿಯಾದ ಲೇಕ್ ಬೈಕಲ್ ಇದೀಗ ಪ್ರವಾಸಿಗರ ಕಣ್ಣಿಗೆ ಬಿದ್ದ ಹೊಸ ಜಾಗ.
ಇದು ದಕ್ಷಿಣ ಸೈಬೀರಿಯಾದ ಲೇಕ್ ಬೈಕಲ್. ಪರ್ಲ್ ಆಫ್ ಸೈಬೀರಿಯಾ ಎಂದೇ ಜಗತ್ಪ್ರಸಿದ್ಧ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ತಾಣ ಕೂಡಾ. ಭಾರತೀಯ ಚಿತ್ರರಂಗದಲ್ಲಿ ಈ ಜಾಗದಲ್ಲಿ ಇಷ್ಟರವರೆಗೆ ಯಾವುದೇ ಚಿತ್ರದ ಚಿತ್ರೀಕರಣ ನಡೆದಿಲ್ಲ. ಪಠಾನ್ ಮೊದಲನೆಯದು.
ಬಹಳ ಸಾರಿ ಈ ಸರೋವರವನ್ನು ಸಮುದ್ರವೆಂದೇ ಭಾವಿಸಲಾಗುತ್ತದೆಯಂತೆ, ಯಾಕೆಂದರೆ ಅಷ್ಟು ವಿಶಾಲವಾದ ಸೈಬೀರಿಯಾದ ಈ ಸರೋವರ ಜಗತ್ತಿನ ಅತ್ಯಂತ ಆಳವಾದ ಸರೋವರ ಕೂಡಾ. ಇದರ ಆಳ ೧೬೪೨ ಮೀಟರ್‌ಗಿಂತಲೂ ಹೆಚ್ಚಂತೆ! ಇದು ಭೂಭಾಗದ ಎಂಥ ಜಾಗದಲ್ಲಿದೆಯೆಂದರೆ, ನಿಧಾನವಾಗಿ ದೂರ ಸರಿವ ಭೂಖಂಡಗಳ ನಡುವಿನ ಬಿರುಕಿನಂತಹ ಜಾಗದಲ್ಲಿರುವುದರಿಂದ ಪ್ರತಿ ವರ್ಷವೂ ದೂರ ಸರಿಯುತ್ತಿರುವುದರಿಂದಾಗಿ, ಈ ಸರೋವರದ ಆಳ ವರ್ಷವರ್ಷ ಮತ್ತಷ್ಟು ಹೆಚ್ಚುತ್ತಲೇ ಇರುತ್ತದಂತೆ.
ಭೂಗರ್ಭಶಾಸ್ತ್ರಜ್ಞರ ಪ್ರಕಾರ ಬೈಕಲ್ ಲೇಕ್ ಪ್ರಪಂಚದ ಅತ್ಯಂತ ಹಳೆಯ ಸರೋವರ. ಸುಮಾರು ೨೫-೩೦ ಮಿಲಿಯನ್ ವರ್ಷಗಳ ಹಿಂದೆ ಈ ಸರೋವರ ಸೃಷ್ಟಿಯಾಗಿರಬಹುದು ಎಂಬ ಅಂದಾಜಿದೆ. ಇತಿಹಾಸಪೂರ್ವ ಇತಿಹಾಸ ಇದಕ್ಕಿದೆ. ಅಷ್ಟೇ ಅಲ್ಲ, ಈ ಸರೋವರ ಜಗತ್ತಿನ ಅತ್ಯಂತ ಸ್ಪಟಿಕ ಶುದ್ಧ ನೀರಿರುವ ಸರೋವರ ಕೂಡಾ. ಮೈಲಿಗಟ್ಟಲೆ ಆಳದ ಭೂಭಾಗವನ್ನು ಕನ್ನಡಿಯಲ್ಲಿ ಕಂಡಷ್ಟು ಸ್ಪಷ್ಟವಾಗಿ ಕಾಣಬಹುದು. ಅಷ್ಟು ಸ್ಪಟಿಕ ಶುದ್ಧ ನೀರಿದು. ವರ್ಷದಲ್ಲಿ ಐದಾರು ತಿಂಗಳುಗಳಷ್ಟು ಕಾಲ ಸಂಪೂರ್ಣವಾಗಿ ಮಂಜುಗಡ್ಡೆಯಾಗಿ ಪರಿವರ್ತನೆಯೂ ಆಗುವ ಉಳಿದ ಸಮಯದಲ್ಲಿ ತಿಳಿನೀರ ಸುಂದರ ಸರೋವರವಿದು.
ಇದನ್ನೂ ಓದಿ: Thailand tour: ಕಡಿಮೆ ವೆಚ್ಚದ ಪ್ರವಾಸಕ್ಕೆ ಹೇಳಿ ಮಾಡಿಸಿದ ವಿದೇಶ ಥಾಯ್ಲೆಂಡ್!
ಚಳಿಗಾಲ ಸಮೀಪಿಸುತ್ತಿದ್ದಂತೆ ಇದರ ನೀರು ಮಂಜುಗಡ್ಡೆಯಾಗುವ ವಿಧಾನವೂ ಬಹಳ ವಿಶೇಷವಾದುದು. ಪದರ ಪದರಾಗಿ ಒಂದೊಂದೇ ಪದರಗಳು ಮಂಜುಗಡ್ಡೆಯಾಗುತ್ತಾ ಬರುವುದರಿಂದ ಈ ಸರೋವರ ಪೂರ್ತಿ ಮಂಜುಗಡ್ಡೆಯಾಗಿ ಫ್ರೀಜ್ ಆದ ಮೇಲೆ ನೋಡಿದರೆ ಇದರ ಮೇಲ್ಮೈಯಿಂದ ಸರೋವರದ ಒಳಗೆ ವಿವಿಧ ಬಗೆಯ ಆಕೃತಿಗಳು ಜನ್ಮತಳೆದಿರುತ್ತದೆ. ಈ ಸರೋವರದ ತಳದಲ್ಲಿರುವ ಆಲ್ಗೆಗಳು ಮಿಥೇನ್ ಗ್ಯಾಸ್ ಉತ್ಪಾದನೆ ಮಾಡುವುದರಿಂದ ಇದು ಬಿಡುವ ಅನಿಲಗಳಿಂದಾಗಿ ಗುಳ್ಳೆಗಳಾಗಿ ಪರಿವರ್ತನೆಯಾಗುವ ನೀರು ಅತ್ಯದ್ಭುತ ಚಿತ್ತಾರವಾಗಿ ಕಾಣುತ್ತದೆ.
ಸೈಬೀರಿಯಾದಂತಹ ಶೀತವಲಯದಲ್ಲಿದ್ದರೂ ಇದು ೨೦೦೦ ಬಗೆಯ ಸಸ್ಯಗಳೂ, ಜಲಚರಗಳನ್ನೂ ಹೊಂದಿದೆ. ಎಲ್ಲವೂ ಇಲ್ಲಿ ಮಾತ್ರ ಕಂಡು ಬರುವ ವಿಶೇಷ ಬಗೆಯವು ಹಾಗೂ ಪ್ರಪಂಚದಲ್ಲೆಲ್ಲೂ ಕಾಣಸಿಗದಂತಹ ಅಪರೂಪದ ಬಗೆಯವು.
ಪ್ರವಾಸಿಗರಿಗೂ ಬೈಕಲ್ ಸರೋವರದ ಆಕರ್ಷಣೆ ದೊಡ್ಡದು. ಚಾರಣಪ್ರಿಯರು ಈ ಸರೋವರದ ಸುತ್ತಮುತ್ತ ನಡೆದಾಡಲು ದಿ ಗ್ರೇಟ್ ಬೈಕಲ್ ಟ್ರೈಲ್ ಎಂಬ ಚಾರಣವನ್ನೂ ಮಾಡಬಹುದು. ಆ ಮೂಲಕ ಇಲ್ಲಿನ ವಿಶೇಷತೆಗಳನ್ನು ನಡೆದಾಡಿ ನೋಡಬಹುದಾಗಿದೆ. ನೇರ್ಪಾ ಜಾತಿಯ ಸೀಲ್ ಕೇವಲ ಇಲ್ಲಿ ಮಾತ್ರ ಕಾಣಲು ಲಭ್ಯವಿದೆ. ಚಳಿಗಾಲದಲ್ಲಿ ಮಂಜುಗಡ್ಡೆಯಾಗಿಬಿಡುವ ಈ ಸರೋವರದ ಮೇಲ್ಮೈಯ ಮೇಲೆ ಐಸ್ ಸ್ಕೇಟಿಂಗ್, ಡಾಗ್ ಸ್ಲೆಡ್ಜಿಂಗ್ ಮತ್ತಿತರ ಸಾಹಸಕ್ರೀಡೆಗಳಿಗೂ ಅವಕಾಶಗಳಿವೆ. ಉಳಿದಂತೆ, ಸರೋವರದ ತೀರದಲ್ಲಿ ಕ್ಯಾಂಪಿಂಗ್, ಬೈಕಿಂಗ್ ಮತ್ತಿತರ ಚಟುವಟಿಕೆಗಳಿಗೂ ಪ್ರವಾಸಿಗರಿಗೆ ಅವಕಾಶವಿದೆ.
ಇದನ್ನೂ ಓದಿ: Japan Travel: ಜಗತ್ತಿನ ಅತ್ಯಂತ ಹಳೆಯ ಹೊಟೇಲಲ್ಲಿರಬೇಕಾ? ಜಪಾನ್‌ಗೆ ಪ್ರವಾಸ ಮಾಡಿ!