Site icon Vistara News

Valentine Day: ಪ್ರೀತಿಸುವ ಜೋಡಿಗಳಿಗೆ ಸೂಕ್ತ ರೊಮ್ಯಾಂಟಿಕ್ ಪ್ರವಾಸೀ ತಾಣಗಳಿವು!

Valentine Day destination

ಫೆಬ್ರವರಿ ತಿಂಗಳು ಬಂದ ತಕ್ಷಣ ಪ್ರವಾಸ ಎಂದರೆ ನೆನಪಾಗುವುದು ರೊಮ್ಯಾಂಟಿಕ್‌ ಜಾಗಗಳು! ಕಾರಣ ವ್ಯಾಲೆಂಟೈನ್ಸ್‌ ಡೇ (Valentine Day) ಅರ್ಥಾತ್‌ ಪ್ರೇಮಿಗಳ ದಿನ. ಪ್ರೇಮಿಗಳ ದಿನ ಪ್ರೇಮಿಗಳ ಪಾಲಿನ ಹಬ್ಬ. ಪ್ರೀತಿಸುವವರಿಗೆ, ಪ್ರೀತಿಸಿ ಮದುವೆಯಾದ ಹೊಸ ಜೋಡಿಗಳಿಗೆ ಈ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ನೆನಪಿನಲ್ಲಿಡುವಂತೆ ಆಚರಿಸಬೇಕು ಎಂದು ಮನಸ್ಸಾಗುವುದು ಸಹಜವೇ. ಪ್ರೇಮಿಯ ಜೊತೆಗೆ ಊಟಕ್ಕೋ, ಪಾರ್ಕಿಗೋ ಅಥವಾ ಸಿನಿಮಾಕ್ಕೋ ಹೋಗುವುದು ಸಾಮಾನ್ಯವೇ ಆದರೂ, ಹಲವು ಜೋಡಿಗಳು ಪ್ರವಾಸದ ಯೋಜನೆಯನ್ನೂ ರೂಪಿಸುತ್ತಾರೆ. ಬನ್ನಿ, ಪ್ರೇಮಿಗಳು ಹೋಗಬಹುದಾದ, ಪ್ರೇಮಿಗಳ ಸ್ವರ್ಗವೇ ಆಗಿರುವ ಭಾರತದ ಕೆಲವು ಪ್ರವಾಸಿ ತಾಣಗಳನ್ನು ನೋಡೋಣ.

ಊಟಿ, ತಮಿಳುನಾಡು

ಹನಿಮೂನ್‌ ಅಥವಾ ಪ್ರೀತಿ ಮಾಡುವವರ ಕಣ್ಣಿಗೆ ಸ್ವರ್ಗವಾಗಿ ಕಾಣುವ ಊರು ಎಂದರೆ ಅದು ಊಟಿ. ಹತ್ತಿರದಲ್ಲೇ ಇರುವುದರಿಂದಲೋ ಅಥವಾ, ಅದಕ್ಕಿರುವ ಈ ಪರಿಭಾಷೆಯಿಂದಲೋ, ಜೋಡಿಗಳಿಗೆ ಒಮ್ಮೆಯಾದರೂ ಊಟಿಗೆ ಹೋಗಿ ಬರಬೇಕು ಅನಿಸದೆ ಇರದು. ಊಟಿಯ ಬೊಟಾನಿಕಲ್‌ ಗಾರ್ಡನ್‌ನಿಂದ ಮೊದಲ್ಗೊಂಡು ಪುಟಾಣಿ ರೈಲಿನಲ್ಲಿ ಕೂರುವವರೆಗೆ ಜೋಡಿಗಳು ಕಾಲ ಜೊತೆಯಾಗಿ ಕಾಲ ಕಳೆಯಲು ಇಲ್ಲಿ ಬೇಕಾದಷ್ಟು ಜಾಗಗಳಿವೆ. ಜೊತೆಗೆ ಚುಮುಚುಮು ಚಳಿಯ ಊಟಿ ಎಂದರೆ ಪ್ರೇಮಿಗಳಿಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎನ್ನಲು ಅಡ್ಡಿಯಿಲ್ಲ.

ಗ್ಯಾಂಗ್‌ಟಕ್‌, ಸಿಕ್ಕಿಂ

ಹಿಮಾಲಯದ ತಪ್ಪಲ ಗ್ಯಾಂಗ್‌ಟಕ್‌ ನಗರವು ಅತ್ತ ಸುಂದರ ಅಷ್ಟೇ ರೊಮ್ಯಾಂಟಿಕ್‌ ಆದ ನಗರಗಳಲ್ಲಿ ಒಂದು. ಇಲ್ಲಿಂದ ವಿಶ್ವದ ಮೂರನೇ ಅತ್ಯಂತ ಎತ್ತರದ ಪರ್ವತವಾದ ಕಾಂಚನಜುಂಗಾವನ್ನು ಕಾಣಬಹುದು. ಬೆಳ್ಳಂಬೆಳಗ್ಗೆ ಎದ್ದು ಹಿಮಪರ್ವತಗಳಿಗೆ ಸೂರ್ಯ ರಶ್ಮಿ ಚುಂಬಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಹಿಮಪರ್ವತಗಳು, ಸರೋವರ, ಜಲಪಾತ, ಕಡಿದಾದ ರಸ್ತೆಗಳು ಹೀಗೆ ಪ್ರಕೃತಿ ಪ್ರೇಮಿಗಳಿಗೆ ಖಂಡಿತಾ ಇಷ್ಟವಾಗುವ ಜಾಗವಿದು.

ಜೈಸಲ್ಮೇರ್‌, ರಾಜಸ್ಥಾನ

ರಾಜಸ್ಥಾನದಲ್ಲೇನಿದೆ, ಮರುಳುಗಾಡು, ಅದ್ಹೇಗೆ ರೊಮ್ಯಾಂಟಿಕ್‌ ಆದೀತು ಎಂದು ನೀವಂದುಕೊಂಡರೆ ಅದು ನಿಮ್ಮ ಮೂರ್ಖತನ. ಚಳಿಗಾಲದಲ್ಲಿ ಅದ್ಭುತ ಚಳಿಯನ್ನು ಹೊಂದಿರುವ ಜೈಸಲ್ಮೇರ್‌ ಪ್ರವಾಸ ಯುವ ಜೋಡಿಗಳಿಗೆ ಸಹಾಸಮಯ ಪ್ರವಾಸವಾಗಬಲ್ಲದು. ಇಲ್ಲಿನ ಮರಳುಗಾಡಿನಲ್ಲಿ ಒಂಟೆಯ ಮೇಲೆ ಕೂತು ಸಫಾರಿ ಮಾಡಬಹುದು, ಅಷ್ಟೇ ಯಾಕೆ, ಮೈನವಿರೇಳಿಸುವ ಜೀಪ್‌ ಸಫಾರಿಯೂ ಇಲ್ಲಿ ಲಭ್ಯ. ಜೊತೆಗೆ ಕೂತು ಬೇಕಾದಷ್ಟು ಫೋಟೋ ತೆಗೆದುಕೊಳ್ಳಲು ಅರಮನೆಗಳೂ, ಕೋಟೆ ಕೊತ್ತಲಗಳೂ ಇವೆ. ಪ್ರೇಮಿಗಳ ದಿನವನ್ನು ರಸಮಯವನ್ನಾಗಿಸಲು, ಈ ಗೋಲ್ಡನ್‌ ಸಿಟಿಗಿಂತ ಅದ್ಭುತ ತಾಣ ಇನ್ನೆಲ್ಲಿದೆ ಹೇಳಿ!

ಅಂಡಮಾನ್‌ ಮತ್ತು ನಿಕೋಬಾರ್

ಈ ದ್ವೀಪಸಮೂಹ ಸಮುದ್ರ ತೀರವನ್ನು ಇಷ್ಟಪಡುವ ಮಂದಿಗೆ ಹೇಳಿ ಮಾಡಿಸಿದ್ದು. ಮೈಚಾಚಿ ಚಳಿಗಾಲದ ಮೆದುವಾದ ಸೂರ್ಯನ ಕಿರಣಗಳಿಗೆ ಮೈಯೊಡ್ಡುತ್ತಾ, ಸಮುದ್ರದಲ್ಲಿ ಸಾಹಸಮಯ ಕ್ರೀಡೆಗಳನ್ನಾಡುತ್ತಾ ಸ್ವಚ್ಛಂದವಾಗಿ ವಿಹರಿಸಲು ಅಂಡಮಾನ್‌ ಅದ್ಭುತ ತಾಣ.

ಶಿಲ್ಲಾಂಗ್‌, ಮೇಘಾಲಯ

ಮಳೆಯೂರು ಮೇಘಾಲಯವನ್ನು ಸುತ್ತಿ ನೋಡಲು ಚಳಿಗಾಲಕ್ಕಿಂತ ಹೊರತಾದ ಇನ್ನೊಂದು ಕಾಲವಿಲ್ಲ. ಕಾರಣ ಮಳೆ ಬರದೇ ಇರುವ ಪ್ರಶಾಂತವಾದ ಕಾಲವಿದು. ಪ್ರೇಮಿಗಳಿಗೆ ಹೇಳಿ ಮಾಡಿಸಿದ ಚಳಿ, ಹಸಿರು ಪ್ರಕೃತಿ, ಕಾಡುಮೇಡು, ನದಿ, ಝರಿ, ಬೆಟ್ಟಗುಡ್ಡ ಎಲ್ಲವೂ ಇಲ್ಲಿದೆ.

ಅಲೆಪ್ಪಿ, ಕೇರಳ

ಕೇರಳವೆಂಬ ದೇವರನಾಡು ಯಾವ ಪ್ರೇಮಿಗಳಿಗೆ ತಾನೇ ಇಷ್ಟವಾಗಲಿಕ್ಕಿಲ್ಲ! ಪ್ರೇಮ ಇದ್ದಾಗ ಜಗತ್ತೇ ಚಂದ ಕಾಣುತ್ತದಂತೆ. ಇನ್ನು ಕೇರಳವೆಂಬ ಸುಂದರ ಊರು ಪ್ರೇಮಿಗಳ ಕಣ್ಣಿಗೆ ಸ್ವರ್ಗವಾಗಿಯೇ ಕಂಡರೆ ಆಶ್ಚರ್ಯವಿಲ್ಲ. ಅದರಲ್ಲೂ, ಅಲೆಪ್ಪಿಯಂತಹ ಊರಿನಲ್ಲಿ ಹೌಸ್‌ಬೋಟ್‌ನಲ್ಲಿ ವಿಹರಿಸುತ್ತಾ, ಏಕಾಂತ ಅನುಭವಿಸಲು ಪ್ರೇಮಿಗಳಿಗೆ ಪರ್ಫೆಕ್ಟ್‌ ತಾಣ.

ಗೋವಾ

ಹೇಳಿ ಕೇಳಿ ಗೋವಾವನ್ನು ಬಿಟ್ಟರೆ ಹೇಗೆ? ಎಡವಿಬಿದ್ದರೆ ಸಾಕು, ಒಂದೊಂದು ಬೀಚು ಸಿಗುವಷ್ಟು ಬೀಚುಗಳಿರುವ ನಗರಿ. ಯುವಜನರ ಮೋಜು ಮಸ್ತಿಗಳಿಗೆ ಬೇಕಾದ ಎಲ್ಲವನ್ನೂ ಪೂರೈಸುವ ಪ್ರವಾಸೀ ತಾಣ. ಈ ಗೌಜು ಗದ್ದಲ ಬೇಡವೆಂದರೆ, ಪ್ರಶಾಂತ ಬೀಚುಗಳು ಬೇಕಾದಷ್ಟಿವೆ. ಸಾಹಸೀ ಕ್ರೀಡೆಗಳೀಗೂ ಅಚ್ಚುಮೆಚ್ಚಿನ ತಾಣ. ಪ್ರೇಮಿಗಳಿಗೆ ಜಗವ ಮರೆಯಲು ಇದಕ್ಕಿಂತ ಇನ್ನೇನು ಬೇಕು!

ಇದನ್ನೂ ಓದಿ: Winter Travel Fashion Tips: ಆಕರ್ಷಕ ವಿಂಟರ್‌ ಟ್ರಾವೆಲ್‌ ಫ್ಯಾಷನ್‌ಗೆ 5 ಸಿಂಪಲ್‌ ಟಿಪ್ಸ್

Exit mobile version